ದೆಹಲಿ ಹಿಂಸಾಚಾರ : ಮೋದಿ ಯಾಕೆ ಇನ್ನೂ ಮೌನ ವಹಿಸಿದ್ದಾರೆ..?

By Kannadaprabha NewsFirst Published Jan 29, 2021, 9:14 AM IST
Highlights

ಪಂಜಾಬ್‌ ಮತ್ತು ಸಿಖ್ಖರ ಆಕ್ರೋಶಕ್ಕೆ ಇಷ್ಟೆಲ್ಲಾ ಇತಿಹಾಸ ಮತ್ತು ಆಯಾಮ ಇರುವುದರಿಂದಲೇ ಬಹುಶಃ ನರೇಂದ್ರ ಮೋದಿ ತುಂಬಾ ಎಚ್ಚರಿಕೆಯಿಂದ ಸಂಯಮದ ಹೆಜ್ಜೆ ಇಡುತ್ತಿದ್ದಾರೆ. ಪ್ರತಿಭಟನೆ ಕೇವಲ ಕೃಷಿ ಕಾನೂನಿನ ವಿರುದ್ಧ ಇದ್ದರೂ ಒಂದು ತಪ್ಪು ಹೆಜ್ಜೆ ಕೂಡ ಗಡಿ ಭಾಗದಲ್ಲಿ ಭದ್ರತೆಯ ಸಮಸ್ಯೆ ಸೃಷ್ಟಿಸಬಹುದು.

ನವದೆಹಲಿ (ಜ. 29): 7 ವರ್ಷಗಳಲ್ಲಿ ಮೊದಲ ಬಾರಿಗೆ ನರೇಂದ್ರ ಮೋದಿ ಮತ್ತು ಬಿಜೆಪಿ ಸರ್ಕಾರ ರೈತರ ವಿಷಯದಲ್ಲಿ ಇಕ್ಕಟ್ಟಿಗೆ ಸಿಲುಕಿತ್ತು. ದೇಶದ ತುಂಬಾ ಮುಕ್ತ ಮಾರುಕಟ್ಟೆಪರ ಮತ್ತು ವಿರೋಧದ ಚರ್ಚೆ ಶುರುವಾಗಿತ್ತು. 45 ಸಂಘಟನೆಗಳು ಕೂಡಿ ನಡೆಸಿದ ಶಾಂತಿಯುತ ಪ್ರತಿಭಟನೆಯಿಂದ ಸರ್ಕಾರ ಆತಂಕದಲ್ಲಿತ್ತು. ಆದರೆ ಜನವರಿ 26ರಂದು ದಿಲ್ಲಿಯ ರಸ್ತೆಗಳ ಮೇಲೆ ನಡೆದ ದೊಂಬಿ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿದೆ. ಶಾಂತಿಯುತ ಪ್ರತಿಭಟನೆ ಮೇಲೆ ಬಲ ಪ್ರಯೋಗ ಮಾಡಲು ಹಿಂಜರಿಯುತ್ತಿದ್ದ ಸರ್ಕಾರಕ್ಕೆ ಈಗ ಒಂದು ಹೊಸ ಅಸ್ತ್ರ ಸಿಕ್ಕಂತಾಗಿದೆ.

ಈ ಪ್ರಮಾಣದ ಹಿಂಸಾಚಾರದಿಂದ ಅತಿ ಹೆಚ್ಚು ನಷ್ಟಆಗಿರುವುದು ಸ್ವಯಂ ರೈತರಿಗೆ. ಒಂದೇ ದಿನಕ್ಕೆ ರೈತರ ಪ್ರತಿಭಟನೆಗಿದ್ದ ಅನುಕಂಪ ಕರಗಿಹೋಗಿದೆ. ಜನವರಿ 26ಕ್ಕೆ ಪೂರ್ತಿ ದೇಶ ಒಂದು ಕಡೆ ಸೈನಿಕರ, ಇನ್ನೊಂದು ಕಡೆ ಅನ್ನದಾತನ ಪಥಸಂಚಲನ ನೋಡಲು ಕಾತುರದಿಂದ ಇತ್ತು. ಸೈನಿಕನ ಪರೇಡ್‌ ತನ್ನ ಶಿಸ್ತು, ಅನುಶಾಸನದಿಂದ ವಿಶ್ವದ ಗಮನ ಸೆಳೆದರೆ ರೈತರ ಪರೇಡ್‌ ಅಶಿಸ್ತು, ಗೂಂಡಾಗಿರಿ ಮತ್ತು ಅರಾಜಕತೆಯಿಂದ ಗಮನ ಸೆಳೆಯಿತು.

ಅತಿಯಾದ ಹಟಮಾರಿತನ ಮತ್ತು ಸಂಘಟಿತ ನಾಯಕತ್ವದ ಕೊರತೆ ಒಂದು ದೊಡ್ಡ ಚಳವಳಿಯನ್ನು ಎಷ್ಟು ಸುಲಭವಾಗಿ ದಾರಿ ತಪ್ಪಿಸಬಹುದು ಎಂದು ಮತ್ತೆ ಮತ್ತೆ ನೋಡಲು ಸಿಕ್ಕಿತು. ಆದರೆ ಯಾವುದೇ ತಕ್ಷಣದ ಪ್ರಚೋದನೆ ಇಲ್ಲದೆ ನಡೆದ ಹಿಂಸಾಚಾರ ನೋಡಿದರೆ ಯಾವುದೋ ರಾಜಕೀಯ ಆಟದ ವಾಸನೆ ಬಡಿಯುವುದು ಸಹಜ. ಈ ಚದುರಂಗದಲ್ಲಿ ರೈತ ಮತ್ತು ಆತ ಎತ್ತಿರುವ ನೈಜ ಪ್ರಶ್ನೆಗಳು ದಿಕ್ಕಾಪಾಲಾದವು ಎನ್ನುವುದು ದುರದೃಷ್ಟ.

ಅಮೆರಿಕಾದಲ್ಲಿ ಹೊಸಪರ್ವ, ಟ್ರಂಪ್ ಮಾಡಿದ ಭಾನಗಡಿ ಬೈಡೆನ್ ಸರಿ ಮಾಡ್ತಾರಾ?

ಹಿಂಸೆಗೂ ಮುನ್ನ ಆಗಿದ್ದೇನು?

ಜನವರಿ 25ರ ರಾತ್ರಿ ಸಿಂಘು ಗಡಿಯ ಸಂಯುಕ್ತ ಕಿಸಾನ್‌ ಮೋರ್ಚಾ ವೇದಿಕೆಯಲ್ಲಿಯೇ ಪೊಲೀಸರ ಷರತ್ತು ಒಪ್ಪಿದ್ದಕ್ಕಾಗಿ ಕೆಲ ಯುವಕ ಸಿಖ್ಖರ ತಕರಾರು ಆರಂಭವಾಗಿ ಆವತ್ತೇ ರಾತ್ರಿ ದೀಪ್‌ ಸಿಧು ಮತ್ತು ಇತರರು ವೇದಿಕೆ ಮೇಲೆ ದಿಲ್ಲಿ ಹೊರವರ್ತುಲದ ರಿಂಗ್‌ರೋಡ್‌ ಮೇಲೆ ಹೋಗುವುದಾಗಿ ಘೋಷಣೆ ಹಾಕಿದರು. ಮರುದಿನ ಬೆಳಿಗ್ಗೆ 8:30ಕ್ಕೆ ಕೆಲ ಟ್ರ್ಯಾಕ್ಟರ್‌ಗಳಲ್ಲಿ ಕುಳಿತಿದ್ದ ಯುವಕರನ್ನು ದಿಲ್ಲಿ ಒಳಕ್ಕೆ ಬಿಡಲು ಪೊಲೀಸರು ಒಪ್ಪದಿದ್ದಾಗ ಜೆಸಿಬಿ, ಕ್ರೇನ್‌ ತರಿಸಿ ಬ್ಯಾರಿಕೇಡ್‌ ಕಿತ್ತೊಗೆಯಲಾಯಿತು.

ಒಂದು ಗಂಟೆಯಲ್ಲೇ ಘಾಜಿಪುರ ಮತ್ತು ನೋಯ್ಡಾ ಗಡಿಗಳಿಂದ ಟ್ರ್ಯಾಕ್ಟರ್‌ಗಳು ದಿಲ್ಲಿ ಪೊಲೀಸರ ಆಯುಕ್ತರ ಕಚೇರಿ ಇರುವ ಐಟಿಒ ವೃತ್ತದಲ್ಲಿ ಜಮಾವಣೆ ಆಗಿ, ಕೆಂಪು ಕೋಟೆಯತ್ತ ನುಗ್ಗಲು ಶುರು ಮಾಡಿದವು. ಇದಕ್ಕೆ ಚಾಂದನಿ ಚೌಕ್‌, ಕಾಶ್ಮೀರಿ ಗೇಟ್‌ ಭಾಗದ ಸ್ಥಳೀಯ ಸಿಖ್ಖರ ಬೆಂಬಲವೂ ಇತ್ತು. ಹೀಗಾಗಿ ಸಾವಿರಾರು ಯುವಕರು ಕೆಂಪುಕೋಟೆ ಒಳಕ್ಕೆ ಪ್ರವೇಶ ಪಡೆದು ನಿಶಾನ್‌-ಎ- ಸಾಹಿಬ್‌ ಧ್ವಜಾರೋಹಣ ಮಾಡಿದರು. ಆದರೆ ಎಲ್ಲಕ್ಕೂ ಆಶ್ಚರ್ಯ ತಂದಿದ್ದು ಕೆಂಪು ಕೋಟೆಯಲ್ಲಿ ಪೊಲೀಸರ ನಡವಳಿಕೆ. ಅಲ್ಲಿ ಪಹರೆಗೆ ನಿಂತಿದ್ದ ಪೊಲೀಸರು ಪ್ರತಿಭಟನಾಕಾರರನ್ನು ಒಳಗೆ ಹೇಗೆ ಬಿಟ್ಟರು ಎನ್ನುವ ಪ್ರಶ್ನೆಗೆ ಮಾತ್ರ ಉತ್ತರ ಸಿಗುತ್ತಿಲ್ಲ. ಯಾವುದೇ ಘಟನೆಯನ್ನು ಒಂದು ಬದಿಯಿಂದ ನೋಡದೆ 360 ಡಿಗ್ರಿಯಿಂದ ನೋಡುವುದೇ ಸರಿಯಾದ ಕ್ರಮ. ಅಂದರೆ ದೊಂಬಿ ಗಲಾಟೆ ಹಿಂಸಾಚಾರದಲ್ಲಿ ಅನೇಕ ರೈತ ಸಂಘಟನೆಗಳ ಪಾತ್ರ ಇಲ್ಲದೆಯೂ ಇರಬಹುದು. ಆದರೆ ಇಷ್ಟೆಲ್ಲ ಆಗಲು ಅವರು ಕಾರಣೀಕರ್ತರು ಅಲ್ಲ ಎನ್ನಲು ಆಗುವುದಿಲ್ಲ.

ದಿಲ್ಲಿ ಪೊಲೀಸರ ವೈಫಲ್ಯ

ದೇಶದ ರಾಜಧಾನಿಯಲ್ಲಿ ಪ್ರತಿಭಟನೆಗಳು ಹಿಂಸೆ ದೊಂಬಿಗೆ ತಿರುಗುವುದು ಅಪರೂಪ. ಆದರೆ ಇದು ಒಂದು ವರ್ಷದಲ್ಲಿ ನಡೆದ 2ನೇ ದೊಂಬಿಯ ಘಟನೆ. ಮೊದಲನೆಯದು ಶಾಹೀನ್‌ ಬಾಗ್‌ ಪ್ರತಿಭಟನೆ, ಎರಡನೆಯದು ರೈತರದು. ಇಷ್ಟೆಲ್ಲ ಆಗುತ್ತಿರುವಾಗ ದಿಲ್ಲಿ ಪೊಲೀಸರನ್ನು ನಿಯಂತ್ರಿಸುವ ಕೇಂದ್ರ ಗೃಹ ಇಲಾಖೆ ಏನು ಮಾಡುತ್ತಿತ್ತು? ಪದೇ ಪದೇ ಇಂಥ ಘಟನೆಗಳು ದೇಶದ ರಾಜಧಾನಿಯಲ್ಲಿ ನಡೆಯುತ್ತಿರುವುದು ಭದ್ರತೆಯ ದೃಷ್ಟಿಯಿಂದ ಕೂಡ ಒಳ್ಳೆಯದಲ್ಲ. ಟ್ರ್ಯಾಕ್ಟರ್‌ ಪರೇಡ್‌ಗೆ ಅನುಮತಿ ಕೊಟ್ಟಿದ್ದೇ ದಿಲ್ಲಿ ಪೊಲೀಸರು ಮಾಡಿದ ಮೊದಲ ತಪ್ಪು. ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಬರಿಗೈ ಪ್ರತಿಭಟನೆ ಮಾಡುವುದು ಪ್ರಜೆಗಳ ಅಧಿಕಾರ ಹೌದು. ಆದರೆ ವಾಹನ ಅಡ್ಡಾದಿಡ್ಡಿ ಚಲಾಯಿಸುವುದು, ತಲ್ವಾರ್‌ ತೋರಿಸುವುದು ಅಲ್ಲ. ಆದರೆ ದಿಲ್ಲಿ ಪೊಲೀಸ್‌ ಅಧಿಕಾರಿಗಳು ಕೊಡುವ ಸಮರ್ಥನೆಯ ಪ್ರಕಾರ, ಆವತ್ತು ಪೊಲೀಸರು ಸಂಯಮ ತೋರದೇ ಇದ್ದರೆ ಹೆಣಗಳು ಉರುಳುತ್ತಿದ್ದವು.

ಹೇಗಿರಲಿದೆ ಮೋದಿ - ಬೈಡೆನ್ ಬಾಂಧವ್ಯ..?

ಆಗ ಕಾಂಗ್ರೆಸ್‌, ಈಗ ಬಿಜೆಪಿ

1980ರಲ್ಲಿ ಸಿಖ್ಖರ ಸಿಟ್ಟು ಏಕಾಏಕಿ ತಿರುಗಿದ್ದು ಇಂದಿರಾ ಗಾಂಧಿ ಮೇಲೆ. 1980ರಲ್ಲಿ ದಿಲ್ಲಿ ಏಷ್ಯಾಡ್‌ನಲ್ಲಿ ಶುರುವಾದ ಒಂದು ಸಣ್ಣ ಘಟನೆಯಿಂದ ಪ್ರತ್ಯೇಕತಾವಾದ ಜಾಸ್ತಿಯಾಗಿ ಉಗ್ರ ಭಿಂದ್ರನ್‌ ವಾಲೆ ರೂಪತಾಳಿ 1984ರಲ್ಲಿ ಇಂದಿರಾ ಹತ್ಯೆಯವರೆಗೆ ಹೋಗಿದ್ದು ವಿಪರ್ಯಾಸ. ಅದೆಲ್ಲದರ ಹಿಂದೆ ಬಾಂಗ್ಲಾ ವಿಮೋಚನೆಯ ಸೇಡು ತೀರಿಸಿಕೊಳ್ಳಲು ಪಾಕಿಸ್ತಾನದ ದುಡ್ಡು, ಶಸ್ತ್ರ ಮತ್ತು ಅಂತಾರಾಷ್ಟ್ರೀಯ ಸಹಾಯವಿತ್ತು. ಆಗ ಕಾಂಗ್ರೆಸ್ಸಿನವರು ಬಿಜೆಪಿ ಸಿಖ್ಖರ ಪರ ಮೃದು ಧೋರಣೆ ತಾಳುತ್ತಿದೆ ಎಂದು ಟೀಕಿಸುತ್ತಿದ್ದರು.

ಆದರೆ ಈಗ ಸಿಖ್ಖರು ಮತ್ತು ಬಿಜೆಪಿ ನಡುವೆ ನೇರ ತಾಕಲಾಟ ಶುರುವಾಗಿದ್ದು, ಇದರ ಹಿಂದೆ ಕಾಂಗ್ರೆಸ್‌ ಇದೆ ಎಂದು ಬಿಜೆಪಿ ಆರೋಪಿಸುತ್ತಿದೆ. ನೈಜತೆ ಏನೇ ಇರಲಿ, ದೇಶದ ಭದ್ರತೆ, ಅಖಂಡತೆಗೆ ತ್ಯಾಗ ಬಲಿದಾನ ನೀಡಿರುವ ಒಂದು ಅಲ್ಪಸಂಖ್ಯಾತ ಧಾರ್ಮಿಕ ಸಮುದಾಯವನ್ನು ರಾಜಕೀಯ ಕಾರಣಗಳಿಗಾಗಿ ಬೇರ್ಪಡಿಸಿ ನೋಡುವುದು ತಪ್ಪಾದ ಕ್ರಮ. ಪರಿಸ್ಥಿತಿ ಕೈಮೀರುವ ಮುನ್ನವೇ ಹೃದಯಗಳನ್ನು ಜೋಡಿಸುವುದು ಜರೂರು ಆಗಬೇಕು. ಇಲ್ಲವಾದರೆ ಇದಕ್ಕಾಗಿ ದೇಶ ಮತ್ತೊಮ್ಮೆ ಅಪಾರ ಬೆಲೆ ತೆರಬೇಕಾದೀತು.

ಆಯುಧಧಾರಿ ನಿಹಾಂಗರು

ದಿಲ್ಲಿ ಪ್ರತಿಭಟನೆಯಲ್ಲಿ ಪೊಲೀಸರ ಮೇಲೆ ಅತಿ ಹೆಚ್ಚು ಹಲ್ಲೆ ಮಾಡಿದವರು ನೀಲಿ ನಿಲುವಂಗಿ ಧರಿಸಿದ, ಕೈಯಲ್ಲಿ ಆಯುಧ ಹಿಡಿದ ನಿಹಾಂಗ್‌ ಸಿಖ್ಖರು. ಒಂದು ಕಾಲದಲ್ಲಿ ಸಿಖ್‌ ಧರ್ಮ ಉಳಿಸಲು ರಚಿಸಲಾದ ಖಾಲ್ಸಾ ಸೇನೆಯ ಸದಸ್ಯರು ಇವರು. ಗುರುವಿನ ಧ್ಯಾನದಲ್ಲಿ ಉಪಯೋಗ ಆಗಲೆಂದು ಸದಾ ಆಫೀಮಿನ ನಶೆಯಲ್ಲೇ ಓಡಾಡುವ ನಿಹಾಂಗ್‌ ಸಿಖ್ಖರು ಗುಂಪು ಗುಂಪಾಗಿ ಕಾಣಿಸಿಕೊಂಡರು ಎಂದರೆ ಅಲ್ಲಿ ದೊಂಬಿ ಗಲಾಟೆ ಸಾಮಾನ್ಯ. ದಿಲ್ಲಿ ಗಲಾಟೆಯಲ್ಲಿ ಪೊಲೀಸರ ಮೇಲೆ ಅತಿ ಹೆಚ್ಚು ಕೈ ಮಾಡಿದವರು ಈ ನಿಹಾಂಗರು. ಜೋರಾಗಿ ಅಡ್ಡಾದಿಡ್ಡಿ ಟ್ರ್ಯಾಕ್ಟರ್‌ ಚಲಾಯಿಸಿ ಪೊಲೀಸರ ಮೇಲೆ ಏರಿ ಹೋಗಲು ಕೂಡ ನಶೆಯಲ್ಲಿದ್ದ ನಿಹಾಂಗರೇ ಕಾರಣವಂತೆ.

ಮೋದಿ ಏಕೆ ಸುಮ್ಮನಿದ್ದಾರೆ ಗೊತ್ತಾ?

ದೆಹಲಿ ಹಿಂಸಾಚಾರದ ನಂತರ ಅನೇಕ ಸಂಘ ಸಮರ್ಥಕರು ಇಂದಿರಾ ಈಗ ಇರಬೇಕಿತ್ತು ಎಂದು ಸೋಷಿಯಲ… ಮೀಡಿಯಾದಲ್ಲಿ ಬರೆದುಕೊಂಡಿದ್ದರು. ತಂದೆ ನೆಹರು ಅವರ ಪೂರ್ತಿ ವಿರುದ್ಧ ಇದ್ದ ಇಂದಿರಾ ತನ್ನ ವಿರುದ್ಧ ಯಾವುದೇ ಪ್ರತಿಭಟನೆ ಮತ್ತು ವಿರೋಧ ನಡೆದರೂ ಅತಿರೇಕಕ್ಕೆ ಹೋಗುತ್ತಿದ್ದರು. ಅದೇ ಕಾರಣದಿಂದ ಅರ್ಧ ಜನ ಇಂದಿರಾರನ್ನು ಪೂಜಿಸುತ್ತಿದ್ದರು, ಅರ್ಧ ದ್ವೇಷಿಸುತ್ತಿದ್ದರು. 1975ರಲ್ಲಿ ತನ್ನ ವಿರುದ್ಧ ಜೆಪಿ ನೇತೃತ್ವದಲ್ಲಿ ವಿರೋಧಿಗಳೆಲ್ಲ ಸೇರಿ ಆಂದೋಲನ ಶುರು ಮಾಡಿ, ನ್ಯಾಯಾಲಯಗಳೂ ವ್ಯತಿರಿಕ್ತ ತೀರ್ಪು ನೀಡಿದಾಗ ಅಮೆರಿಕ ಮತ್ತು ಸಿಐಎ ಇದರ ಹಿಂದಿದೆ ಎಂದು ಇಂದಿರಾ ತುರ್ತು ಪರಿಸ್ಥಿತಿ ಹೇರಿದರು.

ವಿಪಕ್ಷಗಳು ರೈತರ ದಿಲ್ಲಿ ಘಟನೆಯಿಂದ ರಾಜಕೀಯ ಲಾಭ ತೆಗೆದುಕೊಳ್ಳುತ್ತಿವೆಯೇ?

ಮೊದಲು ಸಿಖ್ಖರ ವಿರೋಧಕ್ಕೆ ನೀರೆರೆದು ಪೋಷಿಸಿ, ಭಿಂದ್ರನ್‌ ವಾಲೆಗೆ ಎಲ್ಲ ಬೆಂಬಲ ನೀಡಿ, ನಂತರ ಆತ ಬೆಳೆದು ನಿಂತಾಗ ಆತನ ವಿರುದ್ಧ ಸ್ವರ್ಣ ಮಂದಿರಕ್ಕೆ ಸೇನೆ ಕಳುಹಿಸಿದ್ದರು. ಆಗ ಹಿಂದೂ ಮತ್ತು ಸಿಖ್ಖರ ನಡುವಿನ ಕಂದಕದಿಂದ ಪೂರ್ತಿ ಆರ್‌ಎಸ್‌ಎಸ್‌ ಇಂದಿರಾ ಜೊತೆ ನಿಂತಿತ್ತು. ಎಷ್ಟರ ಮಟ್ಟಿಗೆ ಎಂದರೆ ಇಂದಿರಾ ಹತ್ಯೆಯ ನಂತರ 1984ರ ಚುನಾವಣೆಯಲ್ಲಿ ನಾನಾಜಿ ದೇಶಮುಖ್‌ ರಾಜೀವ್‌ ಗಾಂಧಿಗೆ ಬಹಿರಂಗ ಬೆಂಬಲ ಕೊಟ್ಟಿದ್ದರು. ಪಂಜಾಬ್‌ ಮತ್ತು ಸಿಖ್ಖರ ಆಕ್ರೋಶಕ್ಕೆ ಇಷ್ಟೆಲ್ಲಾ ಇತಿಹಾಸ ಮತ್ತು ಆಯಾಮ ಇರುವುದರಿಂದಲೇ ಬಹುಶಃ ನರೇಂದ್ರ ಮೋದಿ ತುಂಬಾ ಎಚ್ಚರಿಕೆಯಿಂದ ಸಂಯಮದ ಹೆಜ್ಜೆ ಇಡುತ್ತಿದ್ದಾರೆ. ಪ್ರತಿಭಟನೆ ಕೇವಲ ಕೃಷಿ ಕಾನೂನಿನ ವಿರುದ್ಧ ಇದ್ದರೂ ಒಂದು ತಪ್ಪು ಹೆಜ್ಜೆ ಕೂಡ ಗಡಿ ಭಾಗದಲ್ಲಿ ಭದ್ರತೆಯ ಸಮಸ್ಯೆ ಸೃಷ್ಟಿಸಬಹುದು.

ರೈತರ ಹೋರಾಟ: ಮುಂದೇನು?

70 ದಿನಗಳವರೆಗೆ ರೈತರ ಬೇಡಿಕೆಗಳಿಗೆ ಪೂರ್ತಿ ಬೆಂಬಲ ಅಲ್ಲದಿದ್ದರೂ ಅನ್ನದಾತರ ಹೋರಾಟದ ಬಗ್ಗೆ ಒಂದು ಅನುಕಂಪ ನಿಶ್ಚಿತವಾಗಿ ಇತ್ತು. ಅಷ್ಟೇ ಅಲ್ಲ, ರೈತರ ಮೇಲೆ ಬಲ ಪ್ರಯೋಗದಿಂದ ದೇಶದ ತುಂಬೆಲ್ಲ ಆಕ್ರೋಶ ಎದುರಿಸಬೇಕಾಗಬಹುದು ಎಂಬ ಆತಂಕ ಸರ್ಕಾರಕ್ಕೂ ಇತ್ತು. ಹೀಗಾಗಿ ಸಾದ್ಯವಾದಷ್ಟುಮಾತುಕತೆ, ಸಂವಾದ ನಡೆಸಿತು. ಆದರೆ ಈಗ ಗಣರಾಜ್ಯೋತ್ಸವದ ದಿನ ಸಿಖ್‌ ರೈತರು ಅರಾಜಕತೆ ಸೃಷ್ಟಿಸಿರುವುದು ಅನುಕಂಪದ ಜಾಗೆಯಲ್ಲಿ ಆಕ್ರೋಶ ಬರಿಸುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರಧಾನಿ ರಾಷ್ಟ್ರಧ್ವಜ ಹಾರಿಸುವ ಕೆಂಪು ಕೋಟೆಯ ಮೇಲೆ ನಿಶಾನ್‌ ಎ ಸಾಹಿಬ್‌ನ ಧರ್ಮ ಧ್ವಜ ನೆಡುವುದನ್ನು ಯಾವ ಸಂವಿಧಾನ ಪ್ರೇಮಿ ಕೂಡ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅದು ರಾಷ್ಟ್ರಧ್ವಜದ ಜೊತೆಗೆ ಸಿಖ್‌ ಧರ್ಮದ ಅಪಮಾನವೂ ಹೌದು. ಈ ಪರಿಸ್ಥಿತಿಯಲ್ಲಿ ರೈತ ಸಂಘಟನೆಗಳಿಗೆ ಸುಪ್ರೀಂಕೋರ್ಟ್‌ ನೇಮಿಸಿದ ಸಮಿತಿ ಎದುರು ಹಾಜರಾಗುವುದು ಉಳಿದಿರುವ ಮಾರ್ಗ. ಇದರ ಹೊರತು ಹಟ ಹಿಡಿದು ಕುಳಿತರೆ ಮೊದಲಿನ ಹಾಗೆ ಹೋರಾಟಕ್ಕೆ ಜನರ ಸಮರ್ಥನೆ ಸಿಗುವುದು ಕಷ್ಟಆಗಬಹುದು.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

click me!