ಕೇಂದ್ರ ಸರ್ಕಾರವು ವಕ್ಫ್ ತಿದ್ದುಪಡಿ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಿದ್ದು, ಇದು ಯಾವುದೇ ಧರ್ಮದ ವಿರೋಧಿಯಲ್ಲ ಎಂದು ಸಚಿವ ಕಿರಣ್ ರಿಜಿಜು ಸ್ಪಷ್ಟಪಡಿಸಿದ್ದಾರೆ. ಪ್ರತಿಪಕ್ಷಗಳು ಈ ತಿದ್ದುಪಡಿಯನ್ನು ಮುಸ್ಲಿಂ ವಿರೋಧಿ ಎಂದು ಟೀಕಿಸಿದ್ದು, ಈ ಕುರಿತು ಸದನದಲ್ಲಿ ತೀವ್ರ ಚರ್ಚೆ ನಡೆದಿದೆ.
ನವದೆಹಲಿ (ಏ.3): ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ವಕ್ಫ್ ತಿದ್ದುಪಡಿ ವಿಧೇಯಕವನ್ನು ಬುಧವಾರ ಲೋಕಸಭೆಯಲ್ಲಿ ಮಂಡಿಸಿದ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಕಿರಣ್ ರಿಜಿಜು ಅವರು, ಇದು ಯಾವುದೇ ಧರ್ಮದ ವಿರೋಧಿಯೂ ಅಲ್ಲ, ಯಾರ ಆಸ್ತಿಯನ್ನು ಕಿತ್ತುಕೊಳ್ಳುವುದೂ ಇಲ್ಲ. ಒಂದು ವೇಳೆ ಈ ಕಾಯ್ದೆಗೆ ತಿದ್ದುಪಡಿ ಮಾಡದೆ ಹೋದರೆ ಮುಂದೆ ಸಂಸತ್ ಕಟ್ಟಡವನ್ನೂ ವಕ್ಫ್ ತನ್ನದೆಂದು ಹೇಳಿಕೊಳ್ಳಬಹುದು ಎಂದು ಹೇಳಿದರು.
ವಕ್ಫ್ ಕಾಯ್ದೆ ತಿದ್ದುಪಡಿ ಮುಸ್ಲಿಂ ವಿರೋಧಿ ಎಂದು ಆರೋಪಿಸುತ್ತಿರುವ ಪ್ರತಿಪಕ್ಷಗಳ ವಿರುದ್ಧ ಇದೇ ವೇಳೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ಹಿಂದೆ 2019ರಲ್ಲಿ ನಾಗರಿಕತ್ವ ಕಾಯ್ದೆ (ಸಿಎಎ) ವಿಚಾರದಲ್ಲೂ ಪ್ರತಿಪಕ್ಷಗಳು ಜನರ ದಾರಿತಪ್ಪಿಸಿದವು. ಮುಸ್ಲಿಮರ ಹಕ್ಕು, ನಾಗರಿಕತ್ವ ಕಿತ್ತುಕೊಳ್ಳಲಾಗುತ್ತದೆ ಎಂದು ಹುಯಿಲೆಬ್ಬಿಸಿದವು. ಈಗ ಎಷ್ಟು ಮಂದಿ ನಾಗರಿಕತ್ವ ಕಿತ್ತುಕೊಳ್ಳಲಾಗಿದೆ ಎಂದು ಪ್ರಶ್ನಿಸಿದರು. ಸಿಎಎ ವಿಚಾರದಲ್ಲಿ ಜನರ ದಾರಿ ತಪ್ಪಿಸಿದಕ್ಕಾಗಿ ನೀವು ಜನರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಕರ್ನಾಟಕ ವಕ್ಫ್ ಗದ್ದಲ ಪ್ರಸ್ತಾಪಿಸಿ ಕಾಂಗ್ರೆಸ್‌ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿರುಗೇಟು!
ವಕ್ಫ್ ವಿಧೇಯಕವನ್ನು ಯೂನಿಫೈಡ್ ವಕ್ಫ್ ಮ್ಯಾನೇಜ್‌ಮೆಂಟ್ ಎಂಪವರ್‌ಮೆಂಟ್, ಎಫೀಶಿಯೆನ್ಸಿ ಆ್ಯಂಡ್ ಡೆವಲಪ್‌ಮೆಂಟ್(ಉಮ್ಮೀದ್) ವಿಧೇಯಕ ಆಗಿ ಮರುನಾಮಕರಣ ಮಾಡಲಾಗುವುದು. ಒಂದು ವರ್ಷದಲ್ಲೇ ಈ ತಿದ್ದುಪಡಿಯಿಂದಾಗುವ ಬದಲಾವಣೆಯನ್ನು ಎಲ್ಲರೂ ಗಮನಿಸಲಿದ್ದೀರಿ ಎಂದರು.
ಈ ಕಾಯ್ದೆಗೆ ಸಂಬಂಧಿಸಿ ಜಂಟಿ ಸಂಸದೀಯ ಸಮಿತಿಯು ದೇಶದ ಪ್ರಜಾಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತಿದೊಡ್ಡ ಸಮಾಲೋಚನಾ ಪ್ರಕ್ರಿಯೆ ನಡೆಸಿದೆ. 97.27 ಲಕ್ಷ ಅರ್ಜಿಗಳು, ಮನವಿಗಳನ್ನು ನೇರವಾಗಿ ಮತ್ತು ಆನ್‌ಲೈನ್ ಮೂಲಕ ಸ್ವೀಕರಿಸಿದೆ. 25 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ವಕ್ಫ್ ಬೋರ್ಡ್‌ಗಳ ಜತೆಗೆ 284 ನಿಯೋಗಗಳು ತಮ್ಮ ಅಭಿಪ್ರಾಯ ತಿಳಿಸಿವೆ. ಕಾನೂನು ಸಂಘಟನೆಗಳು, ಚಾರಿಟಿ ಸಂಸ್ಥೆಗಳು, ಶಿಕ್ಷಣ ತಜ್ಞರು, ಧಾರ್ಮಿಕ ನಾಯಕರೂ ಸೇರಿ ಸಮಾಜದ ವಿವಿಧ ಸ್ತರದ ಜನ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂದರು.
ರೈಲ್ವೆ ಮತ್ತು ರಕ್ಷಣಾ ಇಲಾಖೆ ಬಳಿಕ ದೇಶದಲ್ಲೇ ಅತಿದೊಡ್ಡ ಆಸ್ತಿಯನ್ನು ವಕ್ಫ್ ಬೋರ್ಡ್ ನಿಯಂತ್ರಿಸುತ್ತಿದೆ. ರೈಲ್ವೆ ಮತ್ತು ರಕ್ಷಣಾ ಇಲಾಖೆ ಆಸ್ತಿ ದೇಶಕ್ಕೆ ಸೇರುತ್ತದೆ. ಆದರೆ ವಕ್ಫ್ ಬೋರ್ಡ್ ಆಸ್ತಿಯ ಸ್ವರೂಪ ಖಾಸಗಿ ಆಗಿರುತ್ತದೆ. ಸಾಮಾನ್ಯ ಮುಸ್ಲಿಮನೊಬ್ಬನಿಗೆ ಇಷ್ಟೊಂದು ದೊಡ್ಡ ಭೂಮಿಯಿಂದ ಯಾವುದೇ ಅನುಕೂಲ ಆಗುತ್ತಿಲ್ಲ ಎಂದರು.
ವಕ್ಫ್ ಕಾಯ್ದೆ ಎಲ್ಲರು ಒಪ್ಪೋದು ಕಡ್ಡಾಯ: ಶಾ
ನವದೆಹಲಿ: ‘ಮತ ಬ್ಯಾಂಕ್ ರಾಜಕೀಯಕ್ಕಾಗಿ, ವಕ್ಫ್ ಮಸೂದೆಯು ಧಾರ್ಮಿಕ ವಿಷಯ ಹಾಗೂ ಆಸ್ತಿಗಳಲ್ಲಿ ಹಸ್ತಕ್ಷೇಪ ಮಾಡುತ್ತದೆ ಎಂಬ ಭಯವನ್ನು ಹಬ್ಬಿಸಲಾಗುತ್ತಿದೆ. ಈ ಮೂಲಕ ಮುಸ್ಲಿಂ ಸಮುದಾಯದ ದಾರಿ ತಪ್ಪಿಸಲಾಗುತ್ತಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.
ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ‘ಅಲ್ಪಸಂಖ್ಯಾತರನ್ನು ಬೆದರಿಸುವ ಮೂಲಕ ಮತ ಬ್ಯಾಂಕ್ ಸೃಷ್ಟಿಸಲಾಗುತ್ತಿದೆ. ಅವರಲ್ಲಿ ಭಯದ ವಾತಾವರಣ ಸೃಷ್ಟಿಸಿ ದೇಶದಲ್ಲಿ ಗೊಂದಲ ಹರಡಲಾಗುತ್ತಿದೆ. 2013ರ ಲೋಕಸಭಾ ಚುನಾವಣೆಗೂ ಮುನ್ನ ಓಲೈಕೆ ರಾಜಕಾರಣಕ್ಕಾಗಿ ವಕ್ಫ್ ಕಾನೂನನ್ನು ಬಳಸಿಕೊಳ್ಳದೆ ಇದ್ದಿದ್ದರೆ, ಈಗಿನ ತಿದ್ದುಪಡಿ ಬೇಕಾಗಿರಲಿಲ್ಲ’ ಎಂದು ಕಾಂಗ್ರೆಸ್ ನಾಯಕರನ್ನು ಶಾ ತರಾಟೆಗೆ ತೆಗೆದುಕೊಂಡರು.
ಎಲ್ಲರೂ ಒಪ್ಪಲೇಬೇಕು:
ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಮುಸ್ಲಿಮರು ಒಪ್ಪುವುದಿಲ್ಲ ಎಂಬ ವಿಪಕ್ಷ ಸದಸ್ಯರೊಬ್ಬರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅಮಿತ್ ಶಾ, ‘ಇದು ಭಾರತದ ಮತ್ತು ಸಂಸತ್ತಿನ ಕಾನೂನು. ಇದನ್ನು ಎಲ್ಲರೂ ಒಪ್ಪಲೇಬೇಕು’ ಎಂದು ತಿರುಗೇಟು ನೀಡಿದರು.
ಆತಂಕ ಬೇಡ:
ವಕ್ಫ್ ಮಂಡಳಿಗೆ 12 ಮುಸ್ಲಿಮೇತರ ಸದಸ್ಯರ ಸೇರ್ಪಡೆ ಕುರಿತಾದ ಆತಂಕಗಳ ಸ್ಪಷ್ಟನೆ ನೀಡಿದ ಶಾ, ‘ಅವರ ಕೆಲಸ ಕೇವಲ ಆಡಳಿತ ಕಾರ್ಯಗಳಿಗೆ ಸೀಮಿತವಾಗಿರುತ್ತದೆ. ಅವರು ದಾನವಾಗಿ ಬಂದ ವಕ್ಫ್ ಆಸ್ತಿಗಳು ಕಾನೂನಿನ ಪ್ರಕಾರ ಸರಿಯಾಗಿವೆಯೇ ಎಂಬುದನ್ನು ನೋಡಿಕೊಳ್ಳುತ್ತಾ ಅದರ ನಿರ್ವಹಣೆ ಮೇಲ್ವಿಚಾರಣೆ ಮಾಡುತ್ತಾರೆ. ಧಾರ್ಮಿಕ ಸಂಸ್ಥೆಗಳನ್ನು ನೋಡಿಕೊಳ್ಳುವವರ ಪೈಕಿ ಮುಸ್ಲಿಮೇತರರು ಇರುವುದಿಲ್ಲ ಹಾಗೂ ಅವರು ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ’ ಎಂದು ಭರವಸೆ ನೀಡಿದರು.ಪೂರ್ವಾನ್ವಯ ಆಗದು:
ವಕ್ಫ್ ಕಾನೂನು ಪೂರ್ವಾನ್ವಯ ಮಾಡಬಾರದು ಎಂಬ ಮಿತ್ರ ಪಕ್ಷ ಜೆಡಿಯು ಮನವಿಗೆ ಪ್ರತಿಕ್ರಿಯಿಸಿದ ಶಾ, ‘ಇದು ಮತ್ತೊಂದು ತಪ್ಪು ಕಲ್ಪನೆಯಾಗಿದೆ. ಮಸೂದೆ ಅಂಗೀಕಾರವಾದ ಬಳಿಕ ಸರ್ಕಾರ ಅಧಿಸೂಚನೆ ಹೊರಡಿಸಿದ ನಂತರವೇ ಕಾನೂನು ಜಾರಿಗೆ ಬರುತ್ತದೆ ಎಂದು ಮಸೂದೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ’ ಎಂದು ಹೇಳಿದರು.
ನಿಮ್ಮ ಆಸ್ತಿ ದಾನ ಮಾಡಿ:
ವಕ್ಫ್ ಎಂದರೆ ನಿಮ್ಮ ಭೂಮಿ, ಆಸ್ತಿಯನ್ನು ಇಸ್ಲಾಂಗೆ ದಾನ ಮಾಡುವುದು. ಇದರಲ್ಲಿ ಮಹತ್ವದ ವಿಷಯವೆಂದರೆ ನೀವು ನಿಮ್ಮದಲ್ಲದ, ಸರ್ಕಾರದಕ್ಕೆ ಸೇರಿದ ಭೂಮಿ, ಆಸ್ತಿಯನ್ನು ದಾನ ಮಾಡುವಂತಿಲ್ಲ ಎಂದು ಶಾ ಹೇಳಿದರು.
ಲಾಲು ಭರವಸೆ ಈಡೇರಿಕೆ:
2013ರಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡಿಸಿದಾಗ ಕಠಿಣ ಕಾನೂನು ಜಾರಿ ಮಾಡುವಂತೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಮನವಿ ಮಾಡಿದ್ದರು. ಅವರ ಆಸೆಯನ್ನು ಇದೀಗ ಮೋದಿ ಈಡೇರಿಸಿದ್ದಾರೆ ಎಂದು ಅಮಿತ್ ಶಾ ಹೇಳಿದರು.
ಇದನ್ನೂ ಓದಿ: ಮುಸ್ಲಿಮ್ ವಕ್ಫ್ ಬೋರ್ಡ್‌ನಲ್ಲಿ ಮುಸ್ಲಿಮೇತರರಿಗೆ ಅವಕಾಶ,ತಿದ್ದುಪಡಿ ಬಿಲ್
ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಮುಸ್ಲಿಂ ಮಂಡಳಿ ಕೋರ್ಟ್‌ಗೆ
ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆಯು ಮುಸ್ಲಿಂ ಸಮುದಾಯದ ಹಕ್ಕುಗಳಿಗೆ ಬೆದರಿಕೆ ಒಡ್ಡುತ್ತಿದೆ ಎಂದು ಆರೋಪಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಇದರ ವಿರುದ್ಧ ಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಡಳಿಯ ಸದಸ್ಯ ಮೊಹಮ್ಮದ್ ಅದೀಬ್, ‘ಇದು ಸರ್ಕಾರದಿಂದ ಮುಸ್ಲಿಂ ಸಮುದಾಯದಿಂದ ಆಸ್ತಿಯನ್ನು ಕದಿಯುವ ಯತ್ನವಾಗಿದೆ. ಪ್ರಸ್ತಾವಿತ ಕಾನೂನು ಭಾರತದ ರಚನೆಗೆ ಅಪಾಯವನ್ನು ಉಂಟುಮಾಡುವುದರಿಂದ ದೇಶವನ್ನು ಉಳಿಸುವ ಹೋರಾಡುತ್ತಿದ್ದೇವೆ. ಈ ಮಸೂದೆಯನ್ನು ಹಿಂಪಡೆಯುವ ವರೆಗೆ ನಾವು ಸುಮ್ಮನಾಗುವುದಿಲ್ಲ. ಕೋರ್ಟ್‌ನಲ್ಲಿ ಇದನ್ನು ಪ್ರಶ್ನಿಸುತ್ತೇವೆ’ ಎಂದರು.
ಎಐಎಂಪಿಎಲ್‌ಬಿಯ ಉಪಾಧ್ಯಕ್ಷ ಮೊಹಮ್ಮದ್ ಅಲಿ ಮೋಶಿನ್ ಈ ಮಸೂದೆಯನ್ನು ತಾರತಮ್ಯಭರಿತ, ಕೋಮು ಪ್ರೇರಿತ ಮತ್ತು ಮುಸ್ಲಿಂಮರ ಸಾಂವಿಧಾನಿಕ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದು ಕರೆದಿದ್ದಾರೆ. ಅಗತ್ಯಬಿದ್ದಲ್ಲಿ ರಸ್ತೆಗಳನ್ನು ತಡೆದು ಶಾಂತಿಯುತವಾಗಿ ಮಸೂದೆಯನ್ನು ವಿರೋಧಿಸುತ್ತೇವೆ ಎಂದು ಮಂಡಳಿಯ ವಕ್ತಾರರು ತಿಳಿಸಿದ್ದಾರೆ.