
ವಾಷಿಂಗ್ಟನ್: ಪಹಲ್ಗಾಂನಲ್ಲಿ 26 ಪ್ರವಾಸಿಗರ ನರಮೇಧ ಮಾಡಿದ ಉಗ್ರರ ಬೇಟೆಯಾಡುವ ಭಾರತದ ಪ್ರಯತ್ನಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಅಮೆರಿಕ ಘೋಷಿಸಿದೆ. ಈ ಮೂಲಕ ಉಗ್ರರ ಮಟ್ಟಹಾಕಲು ಭಾರತ ಸರ್ಕಾರ ಕೈಗೊಂಡಿರುವ ವಿವಿಧ ಕ್ರಮಗಳನ್ನು ಅಮೆರಿಕಾ ಬೆಂಬಲಿಸಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಅಮೆರಿಕದ ಗುಪ್ತಚರ ಸಂಸ್ಥೆ ಮುಖ್ಯಸ್ಥ ತುಳಸಿ ಗಬ್ಬಾರ್ಡ್, ಹಿಂದೂಗಳನ್ನು ಕೊಂದ ಭಯಾನಕ ಇಸ್ಲಾಮಿಕ್ ದಾಳಿ ವಿರುದ್ಧ ಅಮೆರಿಕ ಭಾರತದೊಂದಿಗೆ ಒಗ್ಗಟ್ಟಿನಿಂದ ನಿಲ್ಲಲಿದೆ. ಈ ಘೋರ ದಾಳಿಗೆ ಕಾರಣರಾದವರನ್ನು ನೀವು ಬೇಟೆಯಾಡುವಾಗ ನಾವು ನಿಮ್ಮೊಂದಿಗೆ ಇರುತ್ತೇವೆ ಎಂದಿದ್ದಾರೆ. ಜೊತೆಗೆ ಭಯೋತ್ಪಾದಕ ದಾಳಿಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಈಗಾಗಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಫ್ರಾನ್ಸ್ ಅಧ್ಯಕ್ಷ ಎಮ್ಯಾನುವೆಲ್ ಮ್ಯಾಕ್ರನ್ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಸೇರಿದಂತೆ ಹಲವು ಜಾಗತಿಕ ನಾಯಕರು ದಾಳಿಗೆ ಕಾರಣರಾದವರನ್ನು ಶಿಕ್ಷಿಸುವ ಪ್ರಧಾನಿ ಮೋದಿಯವರ ಪ್ರಯತ್ನಗಳನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.
ಭಯೋತ್ಪಾದನಕರನ್ನು ಸಾಕಿದ್ದು ನಿಜ ಎಂದು ಒಪ್ಪಿಕೊಂಡ ಪಾಕ್
ಪಹಲ್ಗಾಮ್‌ನಲ್ಲಿ 26 ಜನರನ್ನು ಬಲಿ ಪಡೆದ ಭೀಕರ ಭಯೋತ್ಪಾದಕ ದಾಳಿ ಪಾಕಿಸ್ತಾನದ ಬಣ್ಣವನ್ನು ಜಾಗತಿಕ ಮಟ್ಟದಲ್ಲಿ ಬಯಲು ಮಾಡಿದೆ. ಕಾಶ್ಮೀರದಲ್ಲಿ ಉಗ್ರ ಚಟುಚಟಿಕೆ ನಡೆಸುವವರಿಗೆ ಸದಾ ಬೆನ್ನುಲುಬಾಗಿ ನಿಂತಿರುವ ಪಾಕಿಸ್ತಾನ ಭಾರತ ಈ ಬಗ್ಗೆ ಆರೋಪ ಮಾಡಿದಾಗಲೆಲ್ಲಾ ನಾವಲ್ಲ ನಾವಿಲ್ಲ ಎಂದು ಹೇಳುವ ಮೂಲಕ ಇಷ್ಟು ದಿನಗಳ ಕಾಲವೂ ರಂಗೋಲಿ ಕೆಳಗೆ ತೂರುವ ಕೆಲಸ ಮಾಡುತ್ತಿತ್ತು. ಆದರೆ ಈಗ ಪಾಕಿಸ್ತಾನದ ರಕ್ಷಣಾ ಸಚಿವರೇ ಭಯೋತ್ಪಾದನೆಗೆ ಹಣಕಾಸು ನೆರವು ನೀಡುತ್ತಿರುವ ವಿಚಾರದ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳ ಮುಂದೆ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ:'ಪುತ್ರ ಶೋಕಂ ನಿರಂತರಂ..' ಗಂಗಾನದಿಯಲ್ಲಿ ಮಗನ ಅಸ್ಥಿ ವಿಸರ್ಜಿಸಿ ರೋಧಿಸಿದ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅಪ್ಪ!
ಬ್ರಿಟಿಷ್ ಮಾಧ್ಯಮ ಸ್ಕೈ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಪಾಕಿಸ್ತಾನದ ಗೃಹ ಸಚಿವ ಖ್ವಾಜಾ ಎಂ ಅಸೀಫ್ ಅವರು ಯುಕೆ, ಅಮೆರಿಕಾ ಹಾಗೂ ಪಶ್ಚಿಮದ ರಾಷ್ಟ್ರಗಳಿಗಾಗಿ ಡರ್ಟಿ ಕೆಲಸ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಸರ್, ಪಾಕಿಸ್ತಾನವು ಈ ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವ, ತರಬೇತಿ ನೀಡುವ ಮತ್ತು ಹಣಕಾಸು ಸಹಾಯ ಒದಗಿಸುವ ದೀರ್ಘ ಇತಿಹಾಸವನ್ನು ಹೊಂದಿದೆ ಎಂಬುದನ್ನು ನೀವು ಒಪ್ಪಿಕೊಳ್ಳುತ್ತೀರಾ? ಎಂದು ಪಾಕಿಸ್ತಾನದ ಸಚಿವರನ್ನು ಸಂದರ್ಶಕರು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಅಲ್ಲಿನ ಸಚಿವರು ನಾವು ಕಳೆದ ಮೂರು ದಶಕಗಳಿಂದ ಪಶ್ಚಿಮ ಮತ್ತು ಯುನೈಟೆಡ್ ಕಿಂಗ್‌ಡಮ್ ಸೇರಿದಂತೆ ಅಮೆರಿಕಕ್ಕಾಗಿ ಈ ಕೊಳಕು ಕೆಲಸವನ್ನು ಮಾಡುತ್ತಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. ಕೂಡಲೇ ಅದು ತಪ್ಪು ಆ ಕೆಲಸದಿಂದ ಪಾಕಿಸ್ತಾನವೂ ಸಾಕಷ್ಟು ಅನುಭವಿಸಬೇಕಾಯ್ತು ಎಂದು ಅವರು ಹೇಳಿದ್ದಾರೆ. ಆದರೆ ಅವರು ಕಾಶ್ಮೀರದಲ್ಲಿ ಪಾಕಿಸ್ತಾನ ನಡೆಸುತ್ತಿರುವ ಕಿತಾಪತಿಯ ಬಗ್ಗೆ ಬಾಯ್ಬಿಟ್ಟಿಲ್ಲ.
ಸೋವಿಯತ್-ಅಫಘಾನ್ ಯುದ್ಧ ಮತ್ತು ಅಮೆರಿಕಾ ಮೇಲೆ ನಡೆದ 9/11 ರ ದಾಳಿಯ ನಂತರ ತಾಲಿಬಾನ್ ವಿರುದ್ಧ ಅಮೆರಿಕ ನೇತೃತ್ವದಲ್ಲಿ ನಡೆದ ಯುದ್ಧದ ಸಮಯದಲ್ಲಿ ಇಸ್ಲಾಮಾಬಾದ್ ಪಶ್ಚಿಮದೊಂದಿಗೆ ಸೇರದೇ ಇದ್ದಿದ್ದರೆ ಪಾಕಿಸ್ತಾನದ ಮೇಲೆ ಈ ದೋಷಾರೋಪಗಳು ಎದುರಾಗುತ್ತಲೇ ಇರಲಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಅವರು ಅಮೆರಿಕಾದ ಹಾಗೂ ಇತರ ಪಾಶ್ಚಿಮಾತ್ಯ ದೇಶಗಳ ಮೇಲೆ ಗೂಬೆ ಕೂರಿಸುವ ಯತ್ನ ಮಾಡಿದ್ದಾರೆ
ಇದನ್ನೂ ಓದಿ:ಆಗಸದಲ್ಲಿ ಹಾರುವಾಗ IAF ಯುದ್ಧವಿಮಾನದಿಂದ ಬಿದ್ದ ಭಾರೀ ನಿಗೂಢ ವಸ್ತು, ಮನೆ ಪುಡಿಪುಡಿ!
ಸೋವಿಯತ್-ಅಫ್ಘಾನ್ ಯುದ್ಧದ ಸಮಯದಲ್ಲಿ ಪಾಕಿಸ್ತಾನವು ಸೋವಿಯತ್ ವಿರುದ್ಧ ಹೋರಾಡಲು ಅಫ್ಘಾನ್‌ನಲ್ಲಿ ಸಶಸ್ತ್ರ ಹೊಂದಿದ್ದ ಉಗ್ರರಿಗೆ ತರಬೇತಿ ಮತ್ತು ಆಶ್ರಯ ನೀಡುವ ಮೂಲಕ ಅಮೆರಿಕವನ್ನು ಬೆಂಬಲಿಸಿತು. ಅಫ್ಘಾನಿಸ್ತಾನದೊಂದಿಗಿನ ಪಾಕಿಸ್ತಾನದ ಸೂಕ್ಷ್ಮ ಗಡಿಯಿಂದಾಗಿ ಅಮೆರಿಕ ಮತ್ತು ಸೋವಿಯತ್ ನಡುವಿನ ಈ ಮುಸುಕಿನ ಗುದ್ದಾಟವೂ ಪಾಕಿಸ್ತಾನಕ್ಕೆ ಪ್ರಮುಖ ಪಾತ್ರವನ್ನು ನೀಡಿತು. ನಂತರ ಸೋವಿಯತ್ ಅಫ್ಘಾನಿಸ್ತಾನದಿಂದ ಹಿಂದೆ ಸರಿಯುವುದರೊಂದಿಗೆ ಯುದ್ಧವು ಕೊನೆಗೊಂಡಿತು. 2001 ರಲ್ಲಿ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ ಅಮೆರಿಕಾದ ಎರಡು ಅವಳಿ ಕಟ್ಟಡಗಳಾದ ವಿಶ್ವ ವಾಣಿಜ್ಯ ಕೇಂದ್ರದ (World Trade Centre) ಮೇಲೆ ದಾಳಿ ನಡೆಯುವವರೆಗೂ ಸುಮಾರು ಒಂದು ದಶಕದ ಕಾಲ ಸೋವಿಯತ್ ತಾಲಿಬಾನ್‌ನ ಚುಕ್ಕಾಣಿ ಹಿಡಿದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ