ಪೌರತ್ವ ತಿದ್ದುಪಡಿ ಮಸೂದೆ ಮಾರ್ಚ್‌ನಲ್ಲಿ ಜಾರಿ, ಕೇಂದ್ರ ಸರ್ಕಾರದ ಸೂಚನೆ

By Santosh NaikFirst Published Feb 27, 2024, 6:52 PM IST
Highlights

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಮಾತಿನಂತೆ ಲೋಕಸಭೆ ಚುನಾವಣೆಗೂ ಮುನ್ನವೇ ಪೌರತ್ವ ತಿದ್ದುಪಡಿ ಮಸೂದೆ ಜಾರಿಯಾಗುವ ಲಕ್ಷಣ ಕಂಡಿದೆ. ಮೂಲಗಳ ಪ್ರಕಾರ ಮಾರ್ಚ್‌ನಲ್ಲಿ ಸಿಎಎ ಜಾರಿಯಾಗಲಿದೆ ಎಂದು ಹೇಳಲಾಗಿದೆ.

ನವದೆಹಲಿ (ಫೆ.27): ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದಲ್ಲಿ ಪೌರತ್ವ ನೀಡುವ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ಮುಂದಿನ ತಿಂಗಳಿನಿಂದ ಜಾರಿಗೆ ಬರುವ ಸಾಧ್ಯತೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಪೌರತ್ವದ ನೋಂದಣಿಗಾಗಿ ಆನ್‌ಲೈನ್‌ ಪೋರ್ಟಲ್‌ ಕೂಡ ಸಿದ್ಧವಾಗಿದ್ದು, ಕೇಂದ್ರ ಗೃಹ ಸಚಿವಾಲಯವು ಈಗಾಗಲೇ ಇದರ ಡ್ರೈ ರನ್‌ಗಳನ್ನೂ ಮಾಡಿದೆ ಎಂದು ಮೂಲಗಳು ತಿಳಿಸಿವೆ. ದಾಖಲೆಗಳನ್ನು ಹೊಂದಿರದ ಈ ನೆರೆಯ ದೇಶಗಳ ನಿರಾಶ್ರಿತರಿಗೆ ಸಿಎಎ ಸಹಾಯ ಮಾಡುತ್ತದೆ ಎಂದು ಮೂಲಗಳು ತಿಳಿಸಿವೆ. ಸಚಿವಾಲಯವು ಸ್ವೀಕರಿಸಿದ ದೀರ್ಘಾವಧಿಯ ವೀಸಾಗಳಿಗಾಗಿ ಗರಿಷ್ಠ ಸಂಖ್ಯೆಯ ಅರ್ಜಿಗಳು ಪಾಕಿಸ್ತಾನದಿಂದ ಬಂದಿವೆ. ಸಿಎಎ ಪೂರ್ವಗಾಮಿಯಾಗಿ ನೋಡಲಾಗಿರುವ ದೀರ್ಘಾವಧಿಯ ವೀಸಾಗಳನ್ನು ನೀಡುವ ಅಧಿಕಾರವನ್ನು ಈಗಾಗಲೇ ಜಿಲ್ಲಾ ಅಧಿಕಾರಿಗಳಿಗೆ ನೀಡಲಾಗಿದೆ. ಕಳೆದ ಎರಡು ವರ್ಷಗಳಲ್ಲಿ, ಪೌರತ್ವ ಕಾಯಿದೆ, 1955 ರ ಅಡಿಯಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಬರುವ ಹಿಂದೂಗಳು, ಸಿಖ್‌ಗಳು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಭಾರತೀಯ ಪೌರತ್ವವನ್ನು ನೀಡಲು ಒಂಬತ್ತು ರಾಜ್ಯಗಳ 30 ಕ್ಕೂ ಹೆಚ್ಚು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಮತ್ತು ಗೃಹ ಕಾರ್ಯದರ್ಶಿಗಳಿಗೆ ಅಧಿಕಾರವನ್ನು ನೀಡಲಾಗಿದೆ.

ಕೇಂದ್ರ ಗೃಹ ಸಚಿವಾಲಯದ ವಾರ್ಷಿಕ ವರದಿಯ ಪ್ರಕಾರ, 2021ರ ಏಪ್ರಿಲ್ 1 ರಿಂದ 2021ರ ಡಿಸೆಂಬರ್ 31ರವರೆಗೆ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಒಟ್ಟು 1,414 ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಪೌರತ್ವ ಕಾಯ್ದೆ, 1955 ರ ಅಡಿಯಲ್ಲಿ ನೋಂದಣಿ ಅಥವಾ ನ್ಯಾಚುರಲೈಜೇಷನ್‌ ಮೂಲಕ ಭಾರತೀಯ ಪೌರತ್ವವನ್ನು ನೀಡಲಾಗಿದೆ. ದೇಶದಾದ್ಯಂತ ಭಾರೀ ಪ್ರತಿಭಟನೆಗಳ ನಡುವೆ 2019 ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಂಗೀಕಾರ ಮಾಡಲಾಗಿತ್ತು. ಅದರೊಂದಿಗೆ ಭಾರತದ ಪೌರತ್ವವನ್ನು ಪಡೆಯಲು ಧರ್ಮ ಕೂಡ ಪ್ರಮುಖ ಅಂಶ ಎಂದು ಹೇಳಲಾಗಿತ್ತು. ಮೂರು ಮುಸ್ಲಿಂ ಪ್ರಾಬಲ್ಯವಿರುವ ನೆರೆಯ ದೇಶಗಳ ಮುಸ್ಲಿಮೇತರ ನಿರಾಶ್ರಿತರು ಧಾರ್ಮಿಕ ಕಿರುಕುಳದ ಕಾರಣದಿಂದ ಭಾರತಕ್ಕೆ ಆಶ್ರಯಕ್ಕಾಗಿ ಬಂದಲ್ಲಿ ಅವರಿಗೆ ಸರ್ಕಾರದ ಸಹಾಯ ಸಿಗಲಿದೆ ಎಂದು ಸರ್ಕಾರ ಹೇಳಿತ್ತು.

ಲೋಕಸಭೆ ಚುನಾವಣೆಗೂ ಮುನ್ನವೇ ಸಿಎಎ ಜಾರಿ, ಅಮಿತ್‌ ಶಾ ಹೇಳಿಕೆ

ಆದರೆ, ಪ್ರತಿಭಟನಾಕಾರರು ಕಾನೂನು ಮುಸ್ಲಿಮರ ವಿರುದ್ಧ ತಾರತಮ್ಯ ಮತ್ತು ಸಂವಿಧಾನದ ಜಾತ್ಯತೀತ ತತ್ವಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿದ್ದರು. ಒಟ್ಟಾರೆಯಾಗಿ, ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್‌,  2019 ರಲ್ಲಿ ದೇಶಾದ್ಯಂತ ಪ್ರತಿಭಟನೆಯ ಬಿರುಗಾಳಿಗೆ ಕಾರಣವಾಗಿತ್ತು. ಕೊನೆಗೆ ಕೋವಿಡ್‌ ಸಾಂಕ್ರಾಮಿಕದ ಕಾರಣದಿಂದಾಗಿ ಈ ಪ್ರತಿಭಟನೆ ತಣ್ಣಗಾಗಿತ್ತು. ಪ್ರತಿಭಟನೆಗಳು ಅಂತ್ಯಗೊಳ್ಳುವ ಮೊದಲು, ದೇಶದಾದ್ಯಂತ ಹೊರತರಬೇಕಾಗಿದ್ದ ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ಕೇಂದ್ರವು ತಡೆಹಿಡಿದಿತ್ತು.

ಸಿಎಎ ದೇಶದ ಕಾನೂನು, ಇದರ ಜಾರಿಯನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ: ಅಮಿತ್‌ ಶಾ

click me!