ಎಷ್ಟು ಬದಲಾದೀತು ಕೊರೋನೋತ್ತರ ಭಾರತ?

By Kannadaprabha News  |  First Published May 17, 2020, 10:39 AM IST

ವಲಸೆ ಕಾರ್ಮಿಕರೆದೆಯಲ್ಲಿ ಆಕ್ರೋಶ-ಹತಾಶೆಗಳ ಗೀರೋಂದು ಅಳಿಸಲಾಗದಂತೆ ಮೂಡಿಬಿಟ್ಟಿದೆ. ಮಾಲೀಕರು,ಸರ್ಕಾರಗಳೆಲ್ಲ ತಮ್ಮ ಕೈಗಾರಿಕೆಗಳಿಗೆ ಬೆವರಿನ ತೈಲ ಲೇಪಿಸಿ ಮುನ್ನಡೆಸುತ್ತಿದ್ದ ಜೀವಗಳನ್ನು ಬಿಟ್ಟುಕೊಟ್ಟು ಎಂಥ ಪ್ರಮಾದ ಎಸಗಿದೆವೆಂದು ಕೊರೋನೋತ್ತರ ಭಾರತದಲ್ಲಿ ಮರುಗುವಂತಾಗುವುದು ಬಹುತೇಕ ನಿಶ್ಚಿತ.


ಕೊರೋನಾ ನಂತರದ ಜಗತ್ತು ಹೇಗೆಲ್ಲಾ ಬದಲಾವಣೆ ಕಂಡಿರುತ್ತದೆ ಎಂಬ ಪ್ರಶ್ನೆಗೆ ಸಾಮಾನ್ಯವಾಗಿ ಎರಡು ಅತಿಗಳ ಉತ್ತರ ಬರುತ್ತದೆ. ‘ಎಂಥದೂ ಬದಲಾಗೋಲ್ಲ, ಹೆಂಡಕ್ಕೆ ಮುಗಿ ಬಿದ್ದಿದ್ದು ನೋಡಿಲ್ವ. ಜನ ಬುದ್ಧಿ ಕಲಿಯೋಲ್ಲಾರಿ’ ಎಂಬ ನಿರುತ್ಸಾಹ ಒಂದೆಡೆ. ‘ಮನುಷ್ಯನನ್ನು ಈ ರೋಗ ತುಂಬ ಯೋಚಿಸುವಂತೆ ಮಾಡಿದೆ. ಆತ ನಿಸರ್ಗದ ಬಗ್ಗೆ ಇನ್ನು ಮುಂದೆ ಕಾಳಜಿ ತಾಳುತ್ತಾನೆ, ಆಸೆಗಳಿಗೆ ಲಗಾಮು ಹಾಕುತ್ತಾನೆ/ಳೆ’ ಅಂತೆಲ್ಲ ಎಣಿಸುವವರು ಇನ್ನೊಂದೆಡೆ.

ಈ ಕಠಿಣ ದಿನಗಳ ಬಿರುಸು ಇಳಿದ ನಂತರ ತುಂಬು ವೈರಾಗ್ಯವಾಗಲೀ ಅಥವಾ ಪಾಠವನ್ನೇ ಕಲಿಯದ ಹುಂಬತನವಾಗಲೀ ಜನರನ್ನು ಆವರಿಸಿಕೊಳ್ಳುತ್ತದೆನಿಸುವುದಿಲ್ಲ. ಪ್ರತಿ ಆಘಾತದ ತರುವಾಯವೂ ಮನುಕುಲ ಪಾಠ ಕಲಿಯುತ್ತದೆ, ಆದರೆ ‘ಆದರ್ಶ’ದ ನೆಲೆಯಲ್ಲಲ್ಲ, ತನಗೇನು ಲಾಭವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ. ಮಹಾನಗರಗಳಿಂದ ಕಾಯಕ ಪಡೆ ತುಸು ಚದುರುತ್ತದೆ. ಹಾಗಂತ ಅದೇನೋ ‘ಸಣ್ಣ ನಗರ/ ಹಳ್ಳಿಗಳ ಜೀವನ ಬಲು ನೆಮ್ಮದಿಯದ್ದು’ ಎಂಬ ರಮ್ಯಕಲ್ಪನೆ ಅಥವಾ ಆದರ್ಶಕ್ಕೋಸ್ಕರ ಅಲ್ಲ; ಅಲ್ಲೊಂದು ಪಕ್ಕಾ ಆರ್ಥಿಕ ಲೆಕ್ಕಾಚಾರ ಇದೀಗ ರೂಪು ತಾಳುತ್ತಿರುವುದರಿಂದ.

Latest Videos

undefined

ಗೊತ್ತಾ ನಿಮ್ಗೆ, ಈ ಐದು ವಸ್ತುಗಳ ಮೂಲಕವೂ ಕೊರೋನಾ ಬರಬಹುದು!

ಕೇರಳಕ್ಕೆ ಆಘಾತ ಕಾದಿದೆಯೇ?

ಮುಂದಿನ ಎರಡು ವರ್ಷಗಳಲ್ಲಿ ಭಾರತದ ಈವರೆಗಿನ ಚಿತ್ರಣ ಹೇಗೆ ಬದಲಾಗುವುದಕ್ಕೆ ಕಾಯ್ದುಕೊಂಡಿದೆ ಎನ್ನುವುದನ್ನು ಅಂದಾಜಿಸಲು ಈ ದೇಶದ ಎರಡು ರಾಜ್ಯಗಳ ಕತೆಗಳನ್ನು ಕೇಳಿಸಿಕೊಳ್ಳಬೇಕು. ನಮ್ಮ ಪಕ್ಕದ ಕೇರಳ ಲಾಗಾಯ್ತಿನಿಂದ ಮುಂದುವರಿದ, ಸಂಪನ್ಮೂಲಭರಿತ ರಾಜ್ಯಗಳಲ್ಲೊಂದಾಗಿ ಗುರುತಿಸಿಕೊಂಡಿದೆ. ಅದರ ಅಭಿವೃದ್ಧಿಗಾಥೆಗೆ ಪ್ರವಾಸೋದ್ಯಮ, ಶಿಕ್ಷಣ ಸೇರಿದಂತೆ ಹಲವು ಕಾರಣಗಳನ್ನು ಮುಂದೆ ಮಾಡಬಹುದಾದರೂ ಮೂಲದಲ್ಲಿ ಅದರ ಆರ್ಥಿಕ ಮಾದರಿ ತುಂಬ ಸ್ಪಷ್ಟ. ಅದೇನೆಂದರೆ, ಆ ರಾಜ್ಯದ ಅತಿದೊಡ್ಡ ಜನಸಂಖ್ಯೆ ಸೇರಿದಂ ತೆ ಬೇರೆ ದೇಶಗಳಲ್ಲಿ ಕಾಯಕ ಪಡೆಯಾಗಿ ಕೆಲಸ ನಿರ್ವಹಿಸುತ್ತಿದೆ.

ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಸುಮಾರು 20 ಲಕ್ಷ ಕೇರಳಿಗರು ತಮ್ಮ ಮೂಲ ಕುಟುಂಬಗಳಿಗೆ ಕಳುಹಿಸುವ ಹಣವು ವಿನಿಮಯದ ಲೆಕ್ಕಾಚಾರಗಳ ಲಾಭದಲ್ಲಿ ಕೇರಳವನ್ನು ಬಹುಮಟ್ಟಿಗೆ ಸಂಪದ್ಭರಿತವಾಗಿರಿಸಿದೆ. ಇದೀಗ ಕೊರೋನಾ ಕಾರಣದಿಂದ ತೈಲ ರಾಷ್ಟ್ರಗಳು ಭಾರಿ ಹೊಡೆತ ತಿಂದಿವೆ. ಲಾಕ್‌ಡೌನ್‌ ನಂತರ ಜಗತ್ತಿನಾದ್ಯಂತ ಸಾರಿಗೆ ಸೇವೆಗಳು ತೆರೆದುಕೊಂಡು ತೈಲ ಬಿಕರಿಯಾಗುವುದಕ್ಕೆ ಶುರುವಾದೀತಾದರೂ, ಎಲ್ಲವೂ ಮೊದಲಿನ ಓಘದಲ್ಲೇ ಇರುವುದು ಅನುಮಾನ.

ನಾನೆಷ್ಟು ಹಣ ವ್ಯರ್ಥ ಮಾಡುತ್ತಿದ್ದೇನೆಂದು ತಿಳಿಯಲು ಲಾಕ್‌ಡೌನ್ ಹೇರಬೇಕಾಯ್ತು!

ಹೀಗಾಗಿ ಗಲ್ಪ್ ರಾಷ್ಟ್ರಗಳಲ್ಲಿರುವ ಕಾರ್ಮಿಕ ಪಡೆ ಒಂದುಹಂತಕ್ಕೆ ಕೆಲಸ ಕಳೆದುಕೊಂಡು ತಾಯ್ನಾಡಿಗೆ ಮರಳುವ ಸೂಚನೆಗಳು ದಟ್ಟವಾಗುತ್ತಿವೆ. ಇದರ ದೊಡ್ಡ ಆಘಾತ ಬೀಳಲಿರುವುದು ಕೇರಳಕ್ಕೆ. ವಿದೇಶಿ ಹಣದ ಹರಿವು ನಿಲ್ಲುವುದು ಒಂದೆಡೆಯಾದರೆ, ಹಿಂತಿರುಗಿ ಬರಲಿರುವ ಬಹುದೊಡ್ಡ ದುಡಿಯುವ ವರ್ಗಕ್ಕೆ ಉದ್ಯೋಗ ಕಲ್ಪಿಸುವುದು ಹೇಗೆ ಎಂಬುದು ಇನ್ನೊಂದು ತಲೆಬಿಸಿ.

ಕಾರ್ಮಿಕರೆದೆಯಲ್ಲಿ ಹತಾಶೆ

ಈಗ, ವಿಸ್ತಾರ ಮತ್ತು ಜನಸಂಖ್ಯೆ ದೃಷ್ಟಿಯಿಂದ ದೇಶದ ಅತಿದೊಡ್ಡ ರಾಜ್ಯ ಎನಿಸಿಕೊಂಡಿರುವ ಉತ್ತರ ಪ್ರದೇಶದತ್ತ ದೃಷ್ಟಿಹಾಯಿಸೋಣ. ಹೇಗೆ ಕೇರಳ ಅಭಿವೃದ್ಧಿ ಹೊಂದಿದ ಸುಶಿಕ್ಷಿತರ ರಾಜ್ಯ ಎಂಬ ವರ್ಚಸ್ಸನ್ನು ಪಡೆದಿದೆಯೋ ಅದಕ್ಕೆ ತದ್ವಿರುದ್ಧ ಚಹರೆಯನ್ನು ತನ್ನದಾಗಿಸಿಕೊಂಡಿರುವ ರಾಜ್ಯವಿದು. ಅದನ್ನು ಸಾಮಾನ್ಯೀಕರಣ ಅಂತನ್ನಿ, ಸೀಮಿತ ದೃಷ್ಟಿಕೋನ ಅಂತಾದರೂ ಕರೆಯಿರಿ. ಒಟ್ಟಿನಲ್ಲಿ ಆ ರಾಜ್ಯದ ಇಮೇಜ್‌ ಬಹು ವರ್ಷಗಳಲ್ಲಿ ಹಾಗೇ ರೂಪುಗೊಂಡಿದೆ ಎಂಬುದನ್ನು ಅಲ್ಲಗಳೆಯಲಾರಿರಿ.

ಆದರೆ ಈಗೇನಾಗುತ್ತಿದೆ ನೋಡಿ. ದೆಹಲಿ, ಮಹಾರಾಷ್ಟ್ರ ಮುಂತಾದ ರಾಜ್ಯಗಳಿಂದ ವಲಸೆ ಬಂದು ಕಾರ್ಮಿಕರಾಗಿ ದುಡಿಯುತ್ತಿದ್ದ ಲಕ್ಷಾಂತರ ಮಂದಿ, ಕೊರೋನಾ ಲಾಕ್‌ಡೌನ್‌ ಸಂದರ್ಭದಲ್ಲಿ ಉತ್ತರ ಪ್ರದೇಶಕ್ಕೆ ಮರಳುತ್ತಿದ್ದಾರೆ. ಅವರೆಲ್ಲರ ಎದೆಯಲ್ಲಿ ಆಕ್ರೋಶ-ಹತಾಶೆಗಳ ಗೀರೋಂದು ಅಳಿಸಲಾಗದಂತೆ ಮೂಡಿಬಿಟ್ಟಿದೆ. ಈ ಕಷ್ಟದ ಹೊತ್ತಿನಲ್ಲಿ ಈ ನಗರಗಳು ನೀವು ನಮ್ಮವರಲ್ಲ ಎಂಬಂತೆ ಕ್ರೂರವಾಗಿ ಕೈಬಿಟ್ಟವು.

ಲಾಕ್‌ಡೌನಲ್ಲಿ ಆನ್‌ಲೈನಲ್ಲಿ ಹೆಚ್ಚು ಹುಡುಕಾಡಿದ ರೆಸಿಪಿಗಳಿವು

‘ನಮ್ಮ ಹಳ್ಳಿಗಳಲ್ಲಿ ಸಿಕ್ಕ ಕೆಲಸ ಮಾಡಿಕೊಂಡು ಅರೆಹೊಟ್ಟೆಯಲ್ಲಿದ್ದರೂ ಸರಿ. ಇನ್ನು ತಿರುಗಿ ಇಲ್ಲಿಗೆ ಬರುವುದಿಲ್ಲ’ ಎಂಬ ಅವರ ಮಾತುಗಳು ಅಚಲ ಸಂಕಲ್ಪವೊಂದನ್ನು ಸಾರಿಬಿಟ್ಟಿವೆ. ಕೆಲಸವಿಲ್ಲದ ಸಮಯದಲ್ಲಿ ಇವರ ಹೊಟ್ಟೆಹೊರೆವ ಜವಾಬ್ದಾರಿಯಿಂದ ತಪ್ಪಿಸಿಕೊಂಡು ಬಿಟ್ಟೆವು ಅಂತ ಒಳಗೊಳಗೆ ಸಮಾಧಾನಗೊಂಡಿದ್ದ ಕಾರ್ಖಾನೆ ಮಾಲೀಕರು, ಸ್ಥಳೀಯ ಸರ್ಕಾರಗಳೆಲ್ಲ ತಮ್ಮ ಕೈಗಾರಿಕೆಗಳಿಗೆ ಬೆವರಿನ ತೈಲ ಲೇಪಿಸಿ ಮುನ್ನಡೆಸುತ್ತಿದ್ದ ಜೀವಗಳನ್ನು ಬಿಟ್ಟುಕೊಟ್ಟು ಎಂಥ ಪ್ರಮಾದ ಎಸಗಿದೆವೆಂದು ಕೊರೋನೋತ್ತರ ಭಾರತದಲ್ಲಿ ಮರುಗುವಂತಾಗುವುದು ಬಹುತೇಕ ನಿಶ್ಚಿತ. ಉತ್ತರ ಪ್ರದೇಶದಲ್ಲಿ ಮೊದಲಿನಂತೆ ಜಾತಿ ರಾಜಕಾರಣ ಮಾಡಿಕೊಂಡಿರುವವರೇ ಅಧಿಕಾರದಲ್ಲಿದ್ದಿದ್ದರೆ ಈ ಕಾರ್ಮಿಕರಿಗೂ ಮತ್ತೊಂದು ದಿನ ಹಿಂತಿರುಗುವುದು ಅನಿವಾರ್ಯವಾಗುತ್ತಿತ್ತು.

ಉ.ಪ್ರದೇಶಕ್ಕೆ ಭರವಸೆಯ ಬೆಳಕು

ಆದರೆ, ಉತ್ತರ ಪ್ರದೇಶವನ್ನು ನಾಜೂಕಿನ ಈ ಸಮಯದಲ್ಲಿ ಮುನ್ನಡೆಸುತ್ತಿರುವ ಯೋಗಿ ಆದಿತ್ಯನಾಥ, ಸವಾಲನ್ನು ಅವಕಾಶವಾಗಿ ಪರಿವರ್ತಿಸುವ ಛಾತಿ ಉಳ್ಳವರು. ಸುಮಾರು ಏಳು ಲಕ್ಷ ಕಾರ್ಮಿಕರು ಉತ್ತರ ಪ್ರದೇಶಕ್ಕೆ ಮರಳಿದ್ದಾರೆ. ಈ ಸಂಖ್ಯೆ 15 ಲಕ್ಷದವರೆಗೆ ಹೋಗಬಹುದು. ಆದರೆ ಹಿಂತಿರುಗಿದವರ ಪಾಳೆಯದಲ್ಲಿ ಹಾಹಾಕಾರವಿಲ್ಲ. ಉತ್ತರ ಪ್ರದೇಶದ ಗಡಿ ತಲುಪಿದ ಪ್ರತಿ ಕಾರ್ಮಿಕನಿಗೂ ಆತನ ಹಳ್ಳಿ ತಲುಪಿಸುವ, ವೈದ್ಯಕೀಯ ಹಾಗೂ ಪಡಿತರ ನೆರವನ್ನು ನೀಡುವ ಕೆಲಸವನ್ನು ಯೋಗಿ ಸರ್ಕಾರ ಮಾಡಿದೆ. ಈ ಎಲ್ಲ ಕಾರ್ಮಿಕರಿಗೆ ಸ್ವಂತ ರಾಜ್ಯದಲ್ಲೇ ಕೆಲಸ ಸಿಗುವಂತೆ ಮಾಡುವ ಸಂಕಲ್ಪ ಯೋಗಿ ಆದಿತ್ಯನಾಥರದ್ದು. ಆ ನಿಟ್ಟಿನಲ್ಲಿ ಅದಾಗಲೇ ನಿಶ್ಚಿತ ಸೂಚನೆಗಳು ಸಿಗುತ್ತಿರುವುದರಿಂದ ಇದನ್ನು ಬರಿಯ ಆಶ್ವಾಸನೆ ಎಂದು ಪರಿಗಣಿಸುವಂತಿಲ್ಲ.

2100ರ ವೇಳೆಗೆ 1.2 ಶತಕೋಟಿ ಜನರನ್ನು ಕಾಡುತ್ತದಂತೆ #HeatStress

ಉತ್ತರ ಪ್ರದೇಶದಲ್ಲಿ ಉದ್ಯಮಗಳನ್ನು ಸ್ಥಾಪಿಸುವವರಿಗೆ ಅನುಕೂಲವಾಗುವಂತೆ ಮುಂದಿನ ಮೂರು ವರ್ಷಗಳ ಅವಧಿಗೆ ಹಲವಾರು ಕಾರ್ಮಿಕ ಕಾಯ್ದೆಗಳನ್ನು ರದ್ದುಗೊಳಿಸಲಾಗಿದೆ. ಕಾರ್ಮಿಕರಿಗೆ ನ್ಯಾಯ ಒದಗಿಸುತ್ತೇವೆಂಬ ನೆಪದಲ್ಲಿ ಹಲವಾರು ಉದ್ಯಮಗಳನ್ನು ಬಾಗಿಲು ಮುಚ್ಚುವಂತೆ ಮಾಡಿದ ಯೂನಿಯನ್‌ ಆಟಾಟೋಪಗಳಿಗೆ ಇನ್ನು ಜಾಗವಿಲ್ಲ. ಚೀನಾದಿಂದ ತಮ್ಮ ಸ್ಥಾನ ಬದಲಿಸುವ ಇಚ್ಛೆಯುಳ್ಳ ನೂರಕ್ಕೂ ಹೆಚ್ಚು ಕಂಪನಿಗಳ ಜತೆ ಮಾತುಕತೆ ಭರದಿಂದ ಸಾಗಿದೆ. ಈ ವರ್ಷ ಆರಂಭಗೊಂಡಿರುವ ಬುಂದೇಲ್ಖಂಡ ಎಕ್ಸ್‌ಪ್ರೆಸ್‌ ವೇ, ಕೊರೋನಾ ನಿಯಂತ್ರಣಕ್ಕೆ ಶುರು ಮಾಡಿರುವ ಮನೆಬಾಗಿಲಿನ ಪೂರೈಕೆ ವ್ಯವಸ್ಥೆ ಇವೆಲ್ಲವೂ ಹಲವು ಕೆಲಸಗಾರರಿಗೆ ಜಾಗ ನೀಡುವುದಕ್ಕೆ ಶಕ್ತವಾಗಿವೆ.

ಎರಡು ರಾಜ್ಯಗಳಲ್ಲಿ ಈ ಪರಿಯಲ್ಲಿ ಬದಲಾಗುತ್ತಿರುವ ಚಿತ್ರಣ ಕೊರೋನೋತ್ತರ ಭಾರತದ ಭವಿಷ್ಯದ ಜಲಕನ್ನು ಸಂಕ್ಷಿಪ್ತವಾಗಿ ಅರುಹುತ್ತಿದೆ.

ಬಿಳಿ ಕಾಲರಿನವರ ಕತೆ ಏನು?

ಕೊರೋನಾ ನಂತರದ ದಿನಗಳಲ್ಲಿ ಐಟಿ ಇತ್ಯಾದಿ ಕ್ಷೇತ್ರಗಳಿಂದ ಬಹಳಷ್ಟುಮಂದಿ ಹಳ್ಳಿಗಳಿಗೆ ಬಂದು ಕೃಷಿ ಮಾಡಲು ತೊಡಗುತ್ತಾರೆ ಅನ್ನುವುದೆಲ್ಲ ಅತಿ ರಮ್ಯ ಕಲ್ಪನೆಯಾದೀತಷ್ಟೆ. ಆದರೆ ಉದ್ಯಮ ಪ್ರಮುಖರಿಂದಲೇ ವ್ಯಕ್ತವಾಗಿರುವ ಕೆಲವು ಪ್ರಾಯೋಗಿಕ ಸಲಹೆಗಳು ಹೊಸ ಸಾಧ್ಯತೆಗಳ ಸ್ಪಷ್ಟಪರಿಕಲ್ಪನೆ ನೀಡುತ್ತಿವೆ.

ತಂತ್ರಜ್ಞಾನ ಕಂಪನಿ ಜೊಹೊದ ಸಿಇಒ ಶ್ರೀಧರ ವೆಂಬು ತಮ್ಮ ಸಾಮಾಜಿಕ ಜಾಲತಾಣದ ವೇದಿಕೆಯಲ್ಲಿ ಹಂಚಿಕೊಂಡಿರುವ ಕಾರ್ಯತಂತ್ರವೊಂದು ಬಹುವಾಗಿ ಗಮನಸೆಳೆಯುವಂತಿದೆ. ಅವರು ಬರೆಯುತ್ತಾರೆ, ಉನ್ನತ ಕೌಶಲವಿರುವ, ಹೆಚ್ಚಿನ ಸಂಬಳ ಪಡೆಯುವ ಹತ್ತು ಎಂಜಿನಿಯರ್‌ಗಳನ್ನು ನಾನು ಸಾವಿರ ಜನರಿರುವ ಒಂದು ಹಳ್ಳಿಯಿಂದ ಕೆಲಸ ಮಾಡುವಂತೆ ಮಾಡಲು ಶಕ್ತನಾದರೆ, ಅವರು ತಮ್ಮ ಸಂಬಳವನ್ನು ಅದೇ ಪರಿಸರದಲ್ಲಿ ಖರ್ಚು ಮಾಡುತ್ತಾರೆ.

ಅಷ್ಟೇ ಅಲ್ಲ, ಅವರ ಅವಶ್ಯಕ್ಕೆ ಬೇಕಾಗುವ ಹಲಬಗೆಯ ಹೊಸಕೌಶಲಗಳ ಸಣ್ಣಮಟ್ಟದ ಉದ್ಯೋಗಗಳು ಅದೇ ಹಳ್ಳಿಯಲ್ಲಿ ಹುಟ್ಟಿಕೊಳ್ಳುತ್ತವೆ. ನಮ್ಮ ಕಂಪನಿಯ ಶೇ.1 ರಷ್ಟು ಉದ್ಯೋಗಗಳನ್ನು ಆಯ್ದ ಹಳ್ಳಿಗಳಲ್ಲಿ ಕೇಂದ್ರೀಕರಿಸುವುದು ಮುಂಬರುವ ವರ್ಷಗಳಲ್ಲಿ ನಮ್ಮ ಆದ್ಯತೆ. ಇದನ್ನು ಬೇರೆ ಕಂಪನಿಗಳೂ ಅನುಸರಿಸಬೇಕು; ಹಾಗೆ ಮಾಡುವುದಾದಲ್ಲಿ ಯಾವುದೇ ಒಂದೆರಡು ಹಳ್ಳಿಗಳಲ್ಲಿ ಎಲ್ಲ ಯೋಜನೆ ಕೇಂದ್ರೀಕರಿಸದೇ ವಿಸ್ತಾರವಾಗಿ ಅಲ್ಲಲ್ಲಿ ಹರಡಿಸಬೇಕು.

ಒಬ್ಬ ಸಿಇಒ ಆಡಿರುವ ಮಾತು ದೇಶದ ಕಾರ್ಯತಂತ್ರದ ದೃಷ್ಟಿಯಿಂದಲೂ ಎಂಥ ಸೂಕ್ಷ್ಮ ಪಾತ್ರ ವಹಿಸುತ್ತದೆ ಯೋಚಿಸಿ ನೋಡಿ. ಅದು ರೋಗವಿರಬಹುದು, ಯುದ್ಧವಿದ್ದಿರಬಹುದು, ರಾಷ್ಟ್ರೀಯ ವಿಪತ್ತಿನ ಮಾದರಿ ಹೇಗಿರುತ್ತದೆ ಎಂಬುದನ್ನು ಕೊರೋನಾ ಭಾರತಕ್ಕೆ, ಅಷ್ಟೇಕೆ ಜಗತ್ತಿಗೆ ಪರಿಚಯಿಸಿದೆ. ಇವತ್ತಿಗೆ ದೆಹಲಿ, ಮುಂಬೈ, ಅಹಮದಾಬಾದ್‌, ಬೆಂಗಳೂರು, ಚೆನ್ನೈ ಹೀಗೆ ಆರ್ಥಿಕತೆಯ ನರಮಂಡಲಗಳೆಲ್ಲ ಸೋಂಕಿಗೆ ಅಲುಗಾಡಿ ಕಳೆಗುಂದಿವೆ.

ಇವೆಲ್ಲ ಭಾವಾವೇಶದ ಕತೆಗಳಷ್ಟೆ?

ಇದನ್ನೇ ನೀವು ಯುದ್ಧದ ಸಂದರ್ಭಕ್ಕೆ ಅನ್ವಯಿಸಿಕೊಂಡು ಯೋಚಿಸಿನೋಡಿ. ಇಡೀ ಭಾರತವನ್ನು ಯಾವುದೇ ವೈರಿ ಆಕ್ರಮಿಸಬೇಕಿಲ್ಲ. ಮುಂಬೈ ಮೇಲೆ ಅಣುದಾಳಿ ಮಾಡಿದರೆ ಅರ್ಧದಷ್ಟುಆರ್ಥಿಕತೆ ಆವಿಯಾಗಿಹೋಗುತ್ತದೆ. ಬೆಂಗಳೂರಿಗೆ ಬಾಂಬು ಬಿದ್ದರೆ ತಂತ್ರಜ್ಞಾನದ ಮಿದುಳುಗಳೆಲ್ಲ ಇನ್ನು ತಲೆಮಾರುಗಳಿಗೆ ಸಿಗದ ರೀತಿಯಲ್ಲಿ ಕೊನೆಯಾಗಿಹೋಗುತ್ತವೆ. ದೆಹಲಿಗೆ ಬಾಂಬು ಬಿದ್ದರೆ ಆಡಳಿತದ ಸೂಕ್ಷ್ಮಗಳನ್ನು ಹೊತ್ತ ಶತಮಾನಗಳ ಬುದ್ಧಿಮತ್ತೆಯೊಂದು ನಷ್ಟವಾಗಿಹೋಗುತ್ತದೆ.

ಅರ್ಥಾತ್‌, ನಮ್ಮಲ್ಲಿ ಮಿಲಿಟರಿ, ವಿಜ್ಞಾನ, ವೈದ್ಯ, ತಂತ್ರಜ್ಞಾನ, ತರ್ಕ, ರಾಜನೀತಿ ಹೀಗೆ ಹಲವು ನಿರ್ಣಾಯಕ ವಲಯಗಳಲ್ಲಿ ಇವತ್ತಿಗೂ ನೇಪಥ್ಯದಲ್ಲಿದ್ದು ದುಡಿಯುತ್ತಿರುವ ಅಸಮಾನ್ಯ ಮಿದುಳುಗಳನ್ನು ದೆಹಲಿ, ಬೆಂಗಳೂರು, ಮುಂಬೈನಂಥ ನಗರಗಳ ಮಹಲುಗಳಲ್ಲೇ ಸಾಂದ್ರವಾಗಿರಿಸಿಕೊಳ್ಳುವುದು ಅಷ್ಟೇನೂ ಬುದ್ಧಿವಂತಿಕೆ ಅಲ್ಲ ಅಂತ ಕೊರೋನಾ ಗುಟ್ಟು ಮಾಡುತ್ತಿದೆ!

ಕೊರೋನಾ ಹುಟ್ಟಿಸಿರುವ ಇಂಥ ಹೊಸ ವಾಸ್ತವದ ಹೊಳಹುಗಳು ಭಾರತವನ್ನೂ ಜಗತ್ತನ್ನೂ ನಿಧಾನಕ್ಕೆ ಬದಲಿಸಲಿವೆ. ಉಳಿದಂತೆ, ಈ ಸೋಂಕಿನ ಭೀತಿಯಿಂದ ಹೊರಬರುತ್ತಲೇ ಜಗತ್ತು ಧರ್ಮಭೀರುವಾಗಿಬಿಡುತ್ತದೆ, ಮನುಷ್ಯ ಪ್ರಕೃತಿಯಲ್ಲಿ ತನ್ನ ಖುಷಿ ಹುಡುಕಿಕೊಳ್ಳುತ್ತಾನೆ, ಪೇಟೆಯಲ್ಲಿ ಕಂಪ್ಯೂಟರ್‌ ಮುಂದೆ ಕೀಲಿ ಕುಟ್ಟುತ್ತಿರುವವರೆಲ್ಲ ಹಳ್ಳಿಗೆ ಬಂದು ಉಳುಮೆಯಲ್ಲಿ ತೊಡಗುತ್ತಾರೆ ಎಂಬುದೆಲ್ಲ ಈ ಕ್ಷಣದ ಭಾವಾವೇಶಕ್ಕೆ ಸಿಕ್ಕು ನಮ್ಮ ಮನಸ್ಸು ಕಟ್ಟುತ್ತಿರುವ ಅಡಿಪಾಯವಿಲ್ಲದ ಕತೆಗಳಷ್ಟೆ.

- ಚೈತನ್ಯ ಹೆಗಡೆ

"

click me!