ಇಷ್ಟು ವರ್ಷಗಳಂತೆ ಈ ವರ್ಷ ಕೂಡಾ ನನ್ನ ಹೊಸ ವರ್ಷದ ರೆಸಲ್ಯೂಶನ್‌ಗಳ ಪಟ್ಟಿಯಲ್ಲಿ ಹೆಚ್ಚು ಹಣ ಸೇವ್ ಮಾಡಬೇಕೆಂಬುದು ಇದ್ದೇ ಇತ್ತು. ಈ ಪಟ್ಟಿಯನ್ನು ಎಷ್ಟೇ ಗಂಭೀರ ಯೋಚನೆಗಳಿಂದ ಸಿದ್ಧಪಡಿಸಿದರೂ ಫೈನಾನ್ಷಿಯಲ್ ಪ್ಲ್ಯಾನ್‌ಗಳು ಮಾಡುವಷ್ಟು ಸುಲಭವಲ್ಲ ಅದನ್ನು ಜಾರಿ ಮಾಡುವುದು ಎಂಬುದನ್ನು ಅನುಭವ ಸಾರಿ ಸಾರಿ ಹೇಳುತ್ತಿತ್ತು. ಈ ಬಾರಿಯೂ ಒಂದಿಷ್ಟು ಲಕ್ಷಗಳನ್ನು ಸೇವ್ ಮಾಡಲೇಬೇಕೆಂದು ಯಾವಾಗಿನಂತೆ  ಡೈರಿಯಲ್ಲಿ ಬರೆದಿಟ್ಟಿದ್ದೆ. ಆದರೆ, ಅದನ್ನು ನಿಜವಾಗಿಯೂ ಮಾಡುವೆನೇ ಎಂಬ ಬಗ್ಗೆ ನನ್ನ ಮೇಲೆ ನನಗೇ ಅನುಮಾನವಿತ್ತು. ಆಗ ಬಂತು ನೋಡಿ ಬದುಕಿನಲ್ಲೊಂದು ಟ್ವಿಸ್ಟ್....

ಕೊರೋನಾ ವೈರಸ್ ಲಾಕ್‌ಡೌನ್

ಯಾರೂ ಎಂದಿಗೂ ಊಹಿಸದ ಘಟನೆಯಾಗಿ ಕೊರೋನಾ ವೈರಸ್ ಎಂಬ ಕಣ್ಣಿಗೆ ಕಾಣದ ಜೀವಿಯೊಂದು ಮನುಷ್ಯನ ಜಗತ್ತನ್ನೇ ಬುಡಮೇಲಾಗಿಸಿತು. ಲಾಕ್‌ಡೌನ್ ಎಂಬ ಹೊಸ ಅನುಭವಕ್ಕೆ ನಿಮ್ಮಂತೆಯೇ ನಾನೂ ತೆರೆದುಕೊಂಡೆ. ಆರಂಭದ ದಿನಗಳಲ್ಲಿ ಕೆಲಸ ಕಳೆದುಕೊಂಡರೆ, ಸಂಬಳ ಕಟ್ ಮಾಡಿದರೆ ಎಂಬ ಭಯದಿಂದ ಸೇವಿಂಗ್ಸ್ ಚೆಕ್ ಮಾಡಿಕೊಂಡೆ. ಈ ಭಯ ಪ್ರತಿನಿತ್ಯ ಕಾಡುತ್ತಿತ್ತು. ಆದರೆ, ಎರಡರಿಂದ ಮೂರು ವಾರ ಕಳೆವಾಗಾಗಲೇ ನನಗೊಂದು ವಿಷಯ ಸ್ಪಷ್ಟವಾಗಿ ಅರಿವಾಗಿತ್ತು- ಇಷ್ಟು ವರ್ಷ ನಾನೆಷ್ಟೊಂದು ಹಣವನ್ನು ವ್ಯರ್ಥವಾಗಿ ಕಳೆದಿದ್ದೇನೆಂಬುದು. ನನ್ನ ಖರ್ಚುಗಳಲ್ಲಿ ಬಹುತೇಕವು ಅನಗತ್ಯವಾದವೇ ಎಂಬುದು ತಿಳಿದಾಗ ಅವನ್ನೆಲ್ಲ ಉಳಿಸಿದ್ದರೆ ಈಗ ಎಷ್ಟೊಂದು ಸೇವ್ ಮಾಡಿರಬಹುದಿತ್ತು ಎಂಬ ಚಿತ್ರಣ ಸಿಕ್ಕಿತು. ನಾನು ಕಷ್ಟ ಪಟ್ಟು ಸಂಪಾದಿಸಿದ್ದನ್ನು ಹೇಗೆ ಸುಲಭವಾಗಿ ಕಳೆಯುತ್ತಿದ್ದೆ ಎಂಬುದು ತಿಳಿಸಲು ಲಾಕ್‌ಡೌನ್ ಹೇರಬೇಕಾಯ್ತು. 

ಸುಖದಾಂಪತ್ಯಕ್ಕೆ ಲಾಕ್‌ಡೌನ್ ಕಲಿಸಿದ ಪಾಠಗಳು

ಅಗತ್ಯ ಹಾಗೂ ಬೇಕುಗಳ ನಡುವಿನ ವ್ಯತ್ಯಾಸ

ಲಾಕ್‌ಡೌನ್ ಹಣದ ಕುರಿತು ನನಗೆ ಕಲಿಸಿದ ಮೊದಲ ಪಾಠವೆಂದರೆ, 'ಅಗತ್ಯ' ಹಾಗೂ 'ಬೇಕು'ಗಳ ನಡುವಿನ ವ್ಯತ್ಯಾಸ. ವಸ್ತುಗಳ ಅಗತ್ಯವಿದ್ದಾಗ ಮಾತ್ರ ಅದನ್ನು ಕೊಳ್ಳಬೇಕು. ಸುಮ್ಮನೆ ಬೇಕೆನಿಸಿದ್ದೆಲ್ಲ ಕೊಂಡು ನಂತರ ಅದನ್ನು ಬಳಸುವುದು ಕೂಡಾ ಇಲ್ಲ. ಈ ಐಸೋಲೇಶನ್ ಸಂದರ್ಭದಲ್ಲಿ ನಾನು ಕೇವಲ ಅತಿ ಅಗತ್ಯ ವಸ್ತುಗಳನ್ನಷ್ಟೇ ಕೊಂಡೆ. ಹಾಗೆ ಅವನ್ನು ಮಾತ್ರ ಕೊಳ್ಳಲು ಅವಕಾಶವಿದ್ದುದು ಕೂಡಾ. ಈ ಮೂಲಕ ನಾನು ಒಂದು ತಿಂಗಳಿನಲ್ಲಿ ಸುಮಾರು 20,000 ರುಪಾಯಿಗಳನ್ನು ಉಳಿಸಿದ್ದೆ. ಇದು ನನಗೇ ದೊಡ್ಡ ಆಶ್ಚರ್ಯ. ಇಷ್ಟೊಂದು ಹಣ ಒಂದು ತಿಂಗಳಿನಲ್ಲಿ ಯೋಚಿಸದೆ ಖರೀದಿಸಿ ವೃಥಾ ಪೋಲು ಮಾಡುತ್ತಿದ್ದೆನಲ್ಲ, ಈಗ ಅದು ಬ್ಯಾಂಕಿನಲ್ಲಿ ಸುಭದ್ರವಾಗಿದೆ.  

ಮನೆಯೂಟ

ಮನೆಯೊಳಗೇ ಉಳಿದಿದ್ದರಿಂದ ಆರೋಗ್ಯಕರ ಮನೆಯೂಟ ಮಾಡುವ ಜೊತೆಗೆ ಹಣವೂ ಹೆಚ್ಚು ಉಳಿತಾಯವಾಯಿತು. ಮೊದಲೆಲ್ಲ ಹೋಟೆಲ್‌ಗೆ, ಹೊರಗಿನಿಂದ ಆರ್ಡರ್ ಮಾಡಿಯೇ ಅದೆಷ್ಟು ಹಣ ಹಾಳು ಮಾಡುತ್ತಿದ್ದೆ! ಸುಮ್ಮನೆ ಬಾಯಿಚಟಕ್ಕೆ ತಿನ್ನುವುದು, ಹೊರಗೆ ಹೋಗಲು ಕಾರಣ ಬೇಕೆಂದು  ಹೋಟೆಲ್‌ಗೆ ಹೋಗುವುದು- ಹೀಗೆ ಹಣ ಕೊಟ್ಟು ಜಂಕ್ ಆಹಾರ ತಿಂದು  ದೇಹ ಬೆಳೆಸಿಕೊಂಡಿದ್ದಷ್ಟೇ. ಹಣ ಕೊಟ್ಟು ಆರೋಗ್ಯ ಕಳೆದುಕೊಳ್ಳುತ್ತಿದ್ದೆ. ಈಗ ಹಾಗಲ್ಲ, ಮನೆಯಲ್ಲೇ ಸ್ವಚ್ಛವಾಗಿ ತಯಾರಿಸಿದ ರುಚಿಕರ ಊಟ ಮಾಡುವುದಷ್ಟೇ ಅಲ್ಲ, ಬಾಯಿಚಟದ ಕಾರಣಕ್ಕೆ ನಾನೇ ಅಡುಗೆ ಮಾಡಲು ಆರಂಭಿಸಿದೆ. ಇದರಿಂದ ಅಡುಗೆಯನ್ನೂ ಕಲಿತಂತಾಯಿತು. 25 ವರ್ಷಗಳಲ್ಲಿ ಕಲಿಯಲಾಗದ ವಿದ್ಯೆಯೊಂದನ್ನು ಎರಡು ತಿಂಗಳಿನಲ್ಲಿ ಕಲಿತೆ. 

ಕಚೇರಿಗೆ ಹೋಗುವ ಖರ್ಚು

ಇದು ನನ್ನ ಕೈ ಮೀರಿದ್ದೇ ಆಗಿತ್ತು. ಆದರೆ, ಈಗ ಮನೆಯಿಂದ ಕೂಡಾ ಕಚೇರಿಯಿಂದ ಮಾಡುವಷ್ಟೇ ಕೆಲಸ ಮಾಡಲು ಸಾಧ್ಯ ಎಂದಾದಾಗ, ಹೀಗೆ ಟ್ರಾವೆಲಿಂಗ್‌ಗೆ ನಾನು ಮಾಡುತ್ತಿದ್ದ ಖರ್ಚು ವ್ಯರ್ಥವಲ್ಲವೇ? ಇದರಿಂದ ಇಂಧನ ಉಳಿತಾಯ, ನನಗೆ ಹಣ ಹಾಗೂ ಸಮಯದ ಉಳಿತಾಯ, ಕೆಟ್ಟ ಗಾಳಿ ಕುಡಿಯುವುದೂ ತಪ್ಪಿತು, ಬಗೆಹರಿಯದ ಸಮಸ್ಯೆಯಾಗಿದ್ದ ಟ್ರಾಫಿಕ್ ಜಾಮ್‌ಗೆ ಕೂಡಾ ಕಡಿವಾಣ ಬಿದ್ದಿತು. ಎಲ್ಲರೂ ಮನೆಯಲ್ಲೇ ಉಳಿದಿದ್ದರಿಂದ ಮಾಲಿನ್ಯ ಕಡಿಮೆಯಾಗಿ ನಗರಗಳ ಗಾಳಿಯ ಆರೋಗ್ಯವೂ ಸುಧಾರಿಸುತ್ತಿದೆ. ಧೀರ್ಘಕಾಲದಲ್ಲಿ ಈ ಅಭ್ಯಾಸದಿಂದ ಹೆಚ್ಚಿನ ಜನರ ಆರೋಗ್ಯ ಚೆನ್ನಾಗಿರುತ್ತದೆ, ಮೆಡಿಕಲ್ ಬಿಲ್ ಉಳಿಯುತ್ತದೆ. ಇಲ್ಲಿ ಕಚೇರಿಗೆ ಹೋಗುವ ಖರ್ಚಷ್ಟೇ ಅಲ್ಲ, ಹಲವಾರು ಲಾಭಗಳು ನನ್ನದಾಗಿವೆ. 

ಈ ಕಾರಣಗಳಿಂದ ಬ್ರೇಕ್ ಅಪ್ ಆದರೆ, ಸರಿ ಮಾಡಿಕೊಳ್ಳಿ...!

ಪಾರ್ಲರ್ ಖರ್ಚು

ಕಚೇರಿಗೆ ಹೋಗಬೇಕಾದಾಗ 15 ದಿನಗಳಿಗೊಮ್ಮೆ ಐಬ್ರೋಸ್, ವ್ಯಾಕ್ಸಿಂಗ್, ಫೇಶಿಯಲ್, ಆಗಾಗ ಹೇರ್‌ಕಟ್ ಎಂದು ತಿಂಗಳಿಗೆ ಸಾವಿರಾರು ರುಪಾಯಿ ಬ್ಯೂಟಿ ಪಾರ್ಲರ್‌ಗೆ ಹೋಗುತ್ತಿತ್ತು. ಈಗ ಹೊರ ಹೋಗುವುದೇ ಬೇಡವೆಂದಾಗ ಪಾರ್ಲರ್‌ಗಳ ಗೊಡವೆಯಾದರೂ ಏಕೆ ಬೇಕು? ಇದರಿಂದ ಹಣ ಉಳಿತಾಯವಾದದ್ದಷ್ಟೇ ಅಲ್ಲ, ಈಗ ಮನೆಯಲ್ಲೇ ಇರುವ ಹಣ್ಣು ತರಕಾರಿಗಳನ್ನೇ ಬಳಸಿ ಫೇಶಿಯಲ್ ಮಾಡಿಕೊಳ್ಳುತ್ತಿರುವೆ, ಇದು ಕೆಮಿಕಲ್‌ಮುಕ್ತ ಕೂಡಾ. ವ್ಯಾಕ್ಸಿಂಗ್ ಕೂಡಾ ಮನೆಯಲ್ಲೇ ಮಾಡಿಕೊಳ್ಳುವುದು ಕಷ್ಟವಲ್ಲ. ಇದೆಲ್ಲದರ ಜೊತೆಗೆ ಈಗ ಹೊರ ಹೋಗುವಾಗ  ಮಾಸ್ಕ್ ಕಡ್ಡಾಯವಾದ್ದರಿಂದ ಸೌಂದರ್ಯವರ್ಧಕ ಸಾಮಾಗ್ರಿಗಳನ್ನು ಕೊಳ್ಳುವ ಗೊಡವೆಯೂ ಇಲ್ಲ. ಪೌಡರ್, ಕ್ರೀಂ, ಲಿಪ್‌ಸ್ಟಿಕ್ ಎಂದು ಆಗುತ್ತಿದ್ದ ಖರ್ಚು ಕೂಡಾ ಸಾವಿರದ ಲೆಕ್ಕದಲ್ಲಿ ಉಳಿಯಿತು. ಇನ್ನು ಪ್ರತಿ ತಿಂಗಳು ಬಟ್ಟೆ, ಚಪ್ಪಲಿ ಎಂದು ಖರೀದಿಸುತ್ತಿದ್ದೆ. ಈಗ ಮನೆಯಲ್ಲೇ ಇರುವಾಗ  ಅವುಗಳನ್ನು ಕೊಂಡಾದರೂ ಏನು ಮಾಡಲಿ? ಇರುವುದನ್ನೇ ಬರುವವರೆಗೆ ಹಾಕಿದರೂ ಇನ್ನು ಕನಿಷ್ಠ ನಾಲ್ಕು ವರ್ಷಕ್ಕೆ ಶಾಪಿಂಗ್ ಮಾಡದೆ ಉಳಿಯಬಹುದು ಎಂದು ಗೊತ್ತಾಗಿದೆ.