ಮೈಸೂರು ದಸರಾ ಕೊಂಡಾಡಿದ ಮೋದಿ, ಸಂಸ್ಕೃತಿ, ಪರಂಪರೆಯ ಉಳಿಸಿದ ಜನತೆಗೆ ಶ್ಲಾಘನೆ

By Suvarna News  |  First Published Oct 6, 2022, 11:46 PM IST

ಅದ್ಧೂರಿ ಮೈಸೂರು ದಸರಾಗೆ ತೆರೆಬಿದ್ದಿದೆ. ವಿಜಯದಶಮಿ ದಿನ ನಡೆದ ಜಂಬೂ ಸವಾರಿ, ನಾಡ ದೇವತೆ ಮರೆವಣಿಗೆ ಉತ್ಸವ ದೇಶ ವಿದೇಶದಲ್ಲಿ ಪ್ರಸಿದ್ದಿಯಾಗಿದೆ. ಇದೀಗ ಮೈಸೂರಿನ ದಸರಾವನ್ನು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದಾರೆ. ಇಷ್ಟೇ ಅಲ್ಲ ಈ ಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತಿರುವ ಜನತೆಯನ್ನು ಮೋದಿ ಶ್ಲಾಘಿಸಿದ್ದಾರೆ.


ನವದೆಹಲಿ(ಅ.06):  ಮೈಸೂರು ದಸರಾ ವಿಶ್ವವಿಖ್ಯಾತಿ ಪಡೆದಿದೆ. ಮೈಸೂರು ರಾಜರು ಆರಂಭಿಸಿದ ವಿಜೃಂಭಣೆಯ ದಸರಾ ಈಗಲೂ ಅದೇ ಸಂಪ್ರದಾಯ, ಪರಂಪರೆ ಮೂಲಕ ಆಚರಿಸಲಾಗುತ್ತಿದೆ. ಈ ಬಾರಿ ಸರ್ಕಾರ ಅದ್ಧೂರಿ ದಸರಾ ಹಬ್ಬ ಆಚರಿಸಿದೆ. ಈ ಬಾರಿಯ ದಸರಾ ಹಬ್ಬ ಹಲವು ವಿಶೇಷತೆಗಳೂ ಸಾಕ್ಷಿಯಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟನೆಯಿಂದ ಹಿಡಿದು, ಜಂಬೂ ಸವಾರಿ ವರೆಗೆ ಹಲವು ಹೊಸತನಕ್ಕೂ ಕಾರಣವಾಗಿದೆ. ಇದೀಗ ಐತಿಹಾಸಿಕ ದಸರಾ ಹಬ್ಬವನ್ನು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದಾರೆ. 

ನಾಡಹಬ್ಬ ದಸರಾ ಮಹೋತ್ಸವ ಕುರಿತು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಅವರು, ಮೈಸೂರಿನ ಜನತೆ ತಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಕಾಪಾಡಿಕೊಂಡು ಬಂದಿರುವುದಕ್ಕೆ ಮೆಚ್ಚುಗೆಯಾಗಿದೆ. ತುಂಬಾ ಸುಂದರವಾದ ಪರಂಪರೆಯನ್ನು ಅದು ಒಳಗೊಂಡಿದೆ ಎಂದಿದ್ದಾರೆ. ಅಲ್ಲದೆ, ಇತ್ತೀಚೆಗೆ ಮೈಸೂರಿನಲ್ಲಿ ನಡೆದ ವಿಶ್ವ ಯೋಗದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಗತಿಯನ್ನು ಅವರು ನೆನಪು ಮಾಡಿಕೊಂಡಿದ್ದಾರೆ.

Latest Videos

undefined

2 ವರ್ಷ ಬಳಿಕ ಮೈಸೂರಿನಲ್ಲಿ ಅದ್ಧೂರಿ ದಸರಾ, ಐತಿಹಾಸಿಕ ಜಂಬೂ ಸವಾರಿ ಉತ್ಸವ!

ಅದ್ಧೂರಿ ಜಂಬೂಸವಾರಿಗೆ ಲಕ್ಷಾಂತರ ಜನ ಸಾಕ್ಷಿ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ, ಬುಧವಾರ ಅದ್ಧೂರಿಯಾಗಿ ನೆರವೇರಿತು. ಮಧ್ಯಾಹ್ನ ಅರಮನೆ ಆವರಣದಿಂದ ಆರಂಭವಾದ ಜಂಬೂಸವಾರಿ, 5 ಕಿ.ಮೀ.ಗಳಷ್ಟುದೂರ ಸಾಗಿ, ಸಂಜೆ ಬನ್ನಿಮಂಟಪ ತಲುಪಿತು. ಗಜರಾಜ ‘ಅಭಿಮನ್ಯು’ ಸತತ ಮೂರನೇ ಬಾರಿಗೆ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದ. ರಸ್ತೆಯ ಇಕ್ಕೆಡೆಗಳಲ್ಲಿ ಸೇರಿದ್ದ ಅಪಾರ ಜನಸ್ತೋಮ ಮೆರವಣಿಗೆಯನ್ನು ಕಣ್ತುಂಬಿಕೊಂಡಿತು. ಬಳಿಕ, ಸಂಜೆ ಬನ್ನಿಮಂಟಪದಲ್ಲಿ ನಡೆದ ಆಕರ್ಷಕ ಪಂಜಿನ ಕವಾಯತಿನೊಂದಿಗೆ 10 ದಿನಗಳ ಅದ್ದೂರಿ ದಸರಾಕ್ಕೆ ತೆರೆ ಬಿತ್ತು.

ಮೈಸೂರಿನ ಬನ್ನಿಮಂಟಪದಲ್ಲಿರುವ ಪಂಜಿನ ಕವಾಯತು ಮೈದಾನದಲ್ಲಿ ನಡೆದ ಪಂಜಿನ ಕವಾಯತನ್ನು ಸಾವಿರಾರು ಜನರು ಕಣ್ಣು ತುಂಬಿಕೊಂಡರು. ಆರಂಭದಲ್ಲಿ ರಾಷ್ಟ್ರಗೀತೆ, ನಾಡಗೀತೆ ಹಾಡಲಾಯಿತು. ಬಳಿಕ ಧ್ವನಿ ಮತ್ತು ಬೆಳಕು ಪ್ರದರ್ಶನ, ನಂತರ ವಿವಿಧ ಸಾಂಸ್ಕೃತಿಕ ಕಲಾ ತಂಡಗಳಿಂದ ನೃತ್ಯ ಪ್ರದರ್ಶನ, ಅಶ್ವರೋಹಿ ದಳದ ತಂಡದವರಿಂದ ಟೆಂಟ್‌ ಪೆಗ್ಗಿಂಗ್‌ ಜರುಗಿತು.

ಜಂಬೂಸವಾರಿಯಲ್ಲಿ ಉತ್ತರ ಮತ್ತು ದಕ್ಷಿಣ ಭಾರತದ ರಾಜ್ಯಗಳ ಕಲಾತಂಡಗಳು ಭಾಗವಹಿಸಿ ಮೆರಗು ನೀಡಿದರು. ರಾಜಸ್ಥಾನದ ಚಕ್ರಿ ಮತ್ತು ಗೂಮರ್‌ ನೃತ್ಯ, ಪಶ್ಚಿಮ ಬಂಗಳಾದ ಪುರ್ಲಿಯಾ ಚಾವ ನೃತ್ಯ ಹಾಗೂ ಪಂಜಾಬ್‌ ರಾಜ್ಯದ ಕಲಾತಂಡವು ನೃತ್ಯ ಪ್ರದರ್ಶನ, ಜಮ್ಮುಕಾಶ್ಮೀರದ ಡೋಂಗ್ರಿ ನೃತ್ಯ, ತಮಿಳುನಾಡಿದ ತಪ್ಪೆಟಂ ನೃತ್ಯ ಹೆಚ್ಚು ಆಕರ್ಷಕವಾಗಿತ್ತು. ಪೂಜಾ ಕುಣಿತ: ಮೈಸೂರು ವಿವಿ ಜಾನಪದ ವಿಭಾಗದ ವತಿಯಿಂದ ಪೂಜಾ ಕುಣಿತ ಕಲಾತಂಡಗಳಲ್ಲಿ ಒಂದು ಆಕರ್ಷಿಣಿಯವಾಗಿತ್ತು. ಪೂಜಾ ಕುಣಿತದ ಕಲಾವಿದರೊಬ್ಬರು ಸುಮಾರು 12 ಅಡಿ ಎತ್ತರದ ಏಣಿ ಮೇಲೆ ಹತ್ತಿ ಬಾಯಲ್ಲಿ ಪೂಜಾ ಪಟವನ್ನು ಹಿಡಿದುಕೊಂಡು ಪ್ರದರ್ಶನ ನೀಡಿದರು.

click me!