ಹಳೆಯ ಸಂಸತ್‌ ಭವನ ಇನ್ನು ಇತಿಹಾಸ ಪುಟಕ್ಕೆ? ಚಳಿಗಾಲದ ಕಲಾಪಕ್ಕೆ ಮುನ್ನ ಹೊಸ ಕಟ್ಟಡ ಸಿದ್ಧ?

By Kannadaprabha NewsFirst Published Aug 10, 2022, 4:20 AM IST
Highlights
  • ಹಳೆಯ ಸಂಸತ್‌ ಭವನ ಇನ್ನು ಇತಿಹಾಸ ಪುಟಕ್ಕೆ?
  •  ಚಳಿಗಾಲದ ಕಲಾಪಕ್ಕೆ ಮುನ್ನ ಹೊಸ ಕಟ್ಟಡ ಸಿದ್ಧ?
  •  ಹಾಗಾದ್ರೆ, ಹಳೇ ಸಂಸತ್‌ ಭವನದಲ್ಲಿ ಕಲಾಪ ಇಲ್ಲ!
  • ಬ್ರಿಟನ್‌ನ ದೊರೆ 5ನೇ ಜಾಜ್‌ರ್‍ರಿಂದ ನಿರ್ಮಾಣ
  • 1927ರಲ್ಲೇ ಉದ್ಘಾಟನೆ, 95 ವರ್ಷಗಳ ಇತಿಹಾಸ
  • ಸ್ವಾತಂತ್ರ್ಯ ಘೋಷಣೆ, ಸಂವಿಧಾನ ರಚನೆ ಇಲ್ಲೇ

ನವದೆಹಲಿ( ಆ.10): ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ತಿನ ಮುಂಗಾರು ಅಧಿವೇಶನವೇ, 1927ರಲ್ಲಿ ಉದ್ಘಾಟನೆಯಾದ, ದೇಶದ ಹೆಗ್ಗುರುತಾಗಿರುವ ಹಾಲಿ ಸಂಸತ್‌ ಕಟ್ಟಡದಲ್ಲಿ ನಡೆದ ಕೊನೆಯ ಅಧಿವೇಶನ ಆದರೂ ಆಗಬಹುದು. ಕಾರಣ, 2020ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಡಿಗಲ್ಲು ಹಾಕಿದ್ದ ನೂತನ ಸಂಸತ್‌ ಭವನ 2022ರ ಚಳಿಗಾಲದ ಅಧಿವೇಶನಕ್ಕೆ ಮೊದಲೇ ಪೂರ್ಣಗೊಳ್ಳುವ ಸಾಧ್ಯತೆ ಇದೆ.

News Hour: ಹೊಸ ಸಂಸತ್ತಿನ ನೆತ್ತಿಯಲ್ಲಿ ಸಿಂಹ ಘರ್ಜನೆ: ಮೂಲ ಲಾಂಛನ ವಿರೂಪಗೊಳಿಸಿತಾ ಮೋದಿ ಸರ್ಕಾರ?

 

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ 2022ರ ಆ.15ರ ವೇಳೆಗೆ ನೂತನ ಸಂಸತ್‌ ಭವನಕ್ಕೆ ಚಾಲನೆ ನೀಡುವ ಉದ್ದೇಶ ಇತ್ತಾದರೂ, ಕೋವಿಡ್‌ ಹಿನ್ನೆಲೆಯಲ್ಲಿ ಕಾಮಗಾರಿ ಸ್ವಲ್ಪ ವಿಳಂಬವಾಗಿದ್ದು, ಇನ್ನು ಕೆಲ ತಿಂಗಳಲ್ಲಿ ಕಾಮಗಾರಿ ಅಂತ್ಯಗೊಳ್ಳುವುದು ಬಹುತೇಕ ನಿಚ್ಚಳವಾಗಿದೆ. ಹೀಗಾದಲ್ಲಿ ಇನ್ನು ಕೆಲ ತಿಂಗಳಲ್ಲಿ ನೂತನ ಸಂಸತ್‌ ಭವನ ಉದ್ಘಾಟನೆಗೊಂಡು, ಚಳಿಗಾಲದ ಅಧಿವೇಶನದಿಂದ ಆರಂಭಗೊಂಡು ಇಡೀ ರಾಜಕೀಯ, ಶಾಸನ ಚಟುವಟಿಕೆಗಳು ಹೊಸ ಸಂಸತ್‌ ಭವನಕ್ಕೆ ವರ್ಗ ಆಗುವ ಸಾಧ್ಯತೆ ದಟ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.

ಐತಿಹಾಸಿಕ ಕಟ್ಟಡ:

ಹಾಲಿ ಇರುವ ಸಂಸತ್‌ ಭವನ ಸುಮಾರು 6 ಏಕರೆ ವಿಸ್ತಾರದ ಜಾಗದಲ್ಲಿ ಹರಡಿಕೊಂಡಿದ್ದು, ಮೊದಲ ಮಹಡಿಯಲ್ಲೇ 114 ಸ್ತಂಭಗಳ ಸಾಲನ್ನು ಹೊಂದಿರುವ ಸಂಸತ್‌ ಕಟ್ಟಡ ಜಗತ್ತಿನಲ್ಲೇ ವಿಶಿಷ್ಟವಾದದ್ದು. ಈ ಸಂಸತ್‌ ಭವನಕ್ಕೆ ಸುಮಾರು 101 ವರ್ಷಗಳ ಹಿಂದೆ ಅಡಿಪಾಯ ಹಾಕಲಾಗಿತ್ತು.

ಬ್ರಿಟನ್‌ ಸರ್ಕಾರದ ರಾಜಧಾನಿ ಕೋಲ್ಕತಾದಿಂದ ದೆಹಲಿಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿತ್ತು. 1927ರ ಫೆ.12 ರಂದು ಆಗಿನ ಭಾರತದ ಸಾಮ್ರಾಟ ಕಿಂಗ್‌ 5ನೇ ಜಾಜ್‌ರ್‍ ಅವರು ನೂತನ ರಾಜಧಾನಿಯಲ್ಲಿ ಸಂಸತ್‌ ಕಟ್ಟಡವನ್ನು ಉದ್ಘಾಟಿಸಿದ್ದರು. ಇದನ್ನು ‘ಭಾರತದ ಪುನರ್ಜನ್ಮದ ಪ್ರತೀಕ, ಉನ್ನತ ಭವಿಷ್ಯದ ಸಂಕೇತ’ ಎಂದು ಕರೆಯಲಾಗಿತ್ತು. ದೆಹಲಿಯ ರೈಸಿನಾ ಹಿಲ್‌ನಲ್ಲಿ ಸರ್‌ ಹರ್ಬಟ್‌ ಬೇಕರ್‌ ಹಾಗೂ ಸರ್‌ ಎಡ್ವಿನ್‌ ಲ್ಯೂಟನ್ಸ್‌ ಈ ಸಂಸತ್‌ ಕಟ್ಟಡವನ್ನು ವಿನ್ಯಾಸಗೊಳಿಸಿದ್ದರು.

ಐತಿಹಾಸಿಕ ಘಟನೆ:

ಭಾರತ ಸ್ವಾತಂತ್ರ್ಯ ಪಡೆದ ಬಳಿಕ ಸಂಸತ್‌ ಕಟ್ಟಡದ ಮೇಲ್ಭಾಗದಲ್ಲಿ ಹಾರಾಡುತ್ತಿರುವ ಬ್ರಿಟನ್‌ ಧ್ವಜವನ್ನು ತೆಗೆದು ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಲಾಗಿತ್ತು. ಅದರ ಸಮೀಪದಲ್ಲಿರುವ ವೈಸರಾಯ್‌ ಮನೆಯು ರಾಷ್ಟ್ರಪತಿ ಭವನವಾಗಿ ಬದಲಾವಣೆಗೊಂಡಿತ್ತು.

ಹೊಸ ಸಂಸತ್‌ ಭವನದ ಮೇಲೆ ರಾರಾಜಿಸಲಿದೆ ರಾಷ್ಟ್ರೀಯ ಲಾಂಛನ, ಪ್ರಧಾನಿಯಿಂದ ಅನಾವರಣ

ಜೊತೆಗೆ ಈ ಕಟ್ಟಡದಲ್ಲಿರುವ ಸೆಂಟ್ರಲ್‌ ಲೆಜಿಸ್ಲೇಟಿವ್‌ ಅಸೆಂಬ್ಲಿಯನ್ನು ಲೋಕಸಭೆ ಹಾಗೂ ಕೌನ್ಸಿಲ್‌ ಆಫ್‌ ಸ್ಟೇಟ್‌ ಅನ್ನು ರಾಜ್ಯಸಭೆ ಎಂದು ಮರುನಾಮಕರಣ ಮಾಡಲಾಗಿತ್ತು. ಚೇಂಬರ್‌ ಆಫ್‌ ಪ್ರಿನ್ಸ್‌ ಅನ್ನು ವಿವಿಧ ಉದ್ದೇಶಗಳಿಗಾಗಿ ಬಳಸಲಾಗುತ್ತಿದ್ದು, ಸೆಂಟ್ರಲ್‌ ಹಾಲ್‌ ಅನ್ನು ಗ್ರಂಥಾಲಯ ಹಾಗೂ ಜಂಟಿ ಅಧಿವೇಶನ ನಡೆಸಲು ಬಳಸಲಾಗುತ್ತಿತ್ತು. 1929ರಲ್ಲಿ ಇದೇ ಕಟ್ಟಡದೊಳಗೆ ಸ್ವಾತಂತ್ರ್ಯ ಯೋಧ ಭಗತ್‌ ಸಿಂಗ್‌ ಬಾಂಬ್‌ ಇರಿಸಿದ್ದರು. ಇದೇ ಸೆಂಟ್ರಲ್‌ ಹಾಲ್‌ನಲ್ಲಿ ಪ್ರಥಮ ಪ್ರಧಾನಿ ಜವಾಹರ್‌ಲಾಲ್‌ ನೆಹರು ಆ.15ರಂದು ಭಾರತ ಬ್ರಿಟಿಷರ ಆಳ್ವಿಕೆಯಿಂದ ಸ್ವತಂತ್ರವಾಗಿದೆ ಎಂದು ಘೋಷಿಸಿದ್ದರು. ಸಂವಿಧಾನವೂ ಇಲ್ಲಿ ರಚನೆಯಾಗಿತ್ತು. ಕಾಲಾಂತರದಲ್ಲಿ ಕೆಲವು ಐತಿಹಾಸಿಕ ಹಾಗೂ ವಿವಾದಾತ್ಮಕ ಮಸೂದೆಗಳು ಅಂಗೀಕಾರವಾಗಿದ್ದವು. ಹೀಗೆ ಹಲವಾರು ಐತಿಹಾಸಿಕ ಘಟನೆಗಳಿಗೆ ಸಂಸತ್‌ ಕಟ್ಟಡ ಸಾಕ್ಷಿಯಾಗಿದೆ.

click me!