ಕಾಶ್ಮೀರ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಅಮಿತ್‌ ಶಾ ಮಾಸ್ಟರ್‌ ಪ್ಲಾನ್‌!

By Suvarna NewsFirst Published Oct 19, 2021, 11:05 AM IST
Highlights

* ಕಾಶ್ಮೀರಕ್ಕೆ ಸೇನೆ, ಸಿಆರ್‌ಪಿಎಫ್‌, ಎನ್‌ಐಎ ಬಾಸ್‌ಗಳು ದೌಡು

* ಸೇನೆ, ಗುಪ್ತಚರ ದಳ ಸೇರಿ 28 ಸಂಸ್ಥೆಗಳ ಜಂಟಿ ತಂಡ ರಚನೆ

* ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಅಮಿತ್‌ ಶಾ ಮಾಸ್ಟರ್‌ ಪ್ಲಾನ್‌

* ವಲಸಿಗರ ಹತ್ಯೆ ಏಕಾಗುತ್ತಿದೆ ಎಂಬುದರ ಪತ್ತೆಗೆ ಸೂಚನೆ

ನವದೆಹಲಿ(ಅ.19): ಕಾಶ್ಮೀರದಲ್ಲಿ(kashmir) ಕಳೆದ ಕೆಲ ದಿನಗಳಿಂದ ವಲಸಿಗರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು(Terrorists) ದಾಳಿ ನಡೆಸುವುದು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ(Amit Shah) ಅವರು ಅತ್ಯುನ್ನತ ತನಿಖಾ ಸಂಸ್ಥೆಗಳು ಹಾಗೂ ಭದ್ರತಾ ಪಡೆಗಳ ಮುಖ್ಯಸ್ಥರನ್ನೇ ಅಲ್ಲಿಗೆ ಕಳುಹಿಸಿದ್ದಾರೆ. ಮೂಲಗಳ ಪ್ರಕಾರ ಸಿಆರ್‌ಪಿಎಫ್‌(CRPF) ಮುಖ್ಯಸ್ಥರು, ರಾಷ್ಟ್ರೀಯ ತನಿಖಾ ದಳ (NIA)ದ ಮುಖ್ಯಸ್ಥರು, ಸೇನಾಪಡೆಯ ಹಿರಿಯ ಅಧಿಕಾರಿಗಳು ಹಾಗೂ ಗುಪ್ತಚರ ದಳದ ಹಿರಿಯ ಅಧಿಕಾರಿಗಳೂ ಸೇರಿದಂತೆ ಒಟ್ಟು 28 ಸಂಸ್ಥೆಗಳ ವಿಶೇಷ ಜಂಟಿ ತಂಡವನ್ನು ಅಮಿತ್‌ ಶಾ ರಚಿಸಿದ್ದು, ಅದನ್ನು ಕಾಶ್ಮೀರಕ್ಕೆ ಕಳುಹಿಸಿದ್ದಾರೆ.

ಇನ್ನೊಂದೆಡೆ, ಸೇನಾಪಡೆಯ ಮುಖ್ಯಸ್ಥ ಎಂ.ಎಂ. ನರ​ವಣೆ(MM Naravane) ಅವರು ಎರಡು ದಿನಗಳ ಜಮ್ಮು ಭೇಟಿ ಆರಂಭಿ​ಸಿ​ದ್ದಾ​ರೆ. ಕಣಿವೆ ರಾಜ್ಯದ ಭದ್ರತಾ ಪರಿಸ್ಥಿತಿ ಮತ್ತು ಉಗ್ರ ವಿರೋಧಿ ಕಾರ್ಯಾಚರಣೆಗೆ ಸೇನೆ ಕೈಗೊಂಡ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಇದೇ ವೇಳೆ ತಳಮಟ್ಟದ ಪರಿಸ್ಥಿತಿ ಅರಿಯಲು ಯೋಧರು ಮತ್ತು ಕಮಾಂಡರ್‌ಗಳ ಜೊತೆ ನೇರವಾಗಿ ಮಾತುಕತೆ ನಡೆಸಲಿದ್ದಾರೆ.

ಕಾಶ್ಮೀ​ರ​ದಲ್ಲೇ ಅಧಿ​ಕಾ​ರಿ​ಗಳ ಬೀಡು:

ಈ ನಡುವೆ, ಅಮಿತ್‌ ಶಾ ಸೂಚನೆ ಮೇರೆಗೆ ತನಿಖಾ ಅಧಿ​ಕಾ​ರಿ​ಗಳು ಹಾಗೂ ಭದ್ರತಾ ಪಡೆ​ಗಳ ಮುಖ್ಯ​ಸ್ಥ​ರು ಕಾಶ್ಮೀರದಲ್ಲೇ ಬೀಡುಬಿಟ್ಟು, ಅಲ್ಲಿನ ಪರಿಸ್ಥಿತಿಯ ಅಧ್ಯಯನ ನಡೆಸಲಿದ್ದಾರೆ. ಜೊತೆಗೆ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಯತ್ನಿಸಲಿದ್ದಾರೆ. ಮುಖ್ಯವಾಗಿ, ಯಾವತ್ತೂ ವಲಸೆ ಕಾರ್ಮಿಕರು, ಹೊರರಾಜ್ಯದವರು ಅಥವಾ ಪ್ರವಾಸಿಗರ ಮೇಲೆ ದಾಳಿ ನಡೆಸದಿದ್ದ ಭಯೋತ್ಪಾದಕರು ಏಕೆ ಈಗ ಇದ್ದಕ್ಕಿದ್ದಂತೆ ವಲಸಿಗರ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂಬುದನ್ನು ಪತ್ತೆಹಚ್ಚುವ ಹೊಣೆಯನ್ನು ಇವರಿಗೆ ಅಮಿತ್‌ ಶಾ ನೀಡಿದ್ದಾರೆ ಎಂದು ಹೇಳಲಾಗಿದೆ.

ಕಾಶ್ಮೀರದಲ್ಲಿ ಕಳೆದ ಕೆಲ ವಾರಗಳಲ್ಲಿ ಭಯೋತ್ಪಾದಕರು 11 ಮಂದಿ ನಾಗರಿಕರನ್ನು ಕೊಂದಿದ್ದಾರೆ. ಅದಕ್ಕೆ ಪ್ರತಿಯಾಗಿ ಸೇನಾಪಡೆ ನಡೆಸಿದ ದಾಳಿಯಲ್ಲಿ 13 ಭಯೋತ್ಪಾದಕರು ಹತ್ಯೆಯಾಗಿದ್ದಾರೆ. ವರದಿಗಳ ಪ್ರಕಾರ, ಈ ವರ್ಷದ ಜನವರಿಯಿಂದ ಇಲ್ಲಿಯವರೆಗೆ ಕಾಶ್ಮೀರದಲ್ಲಿ 132 ಉಗ್ರರನ್ನು ಸೇನಾಪಡೆಗಳು ಕೊಂದಿವೆ. 254 ಉಗ್ರರನ್ನು ಸೆರೆಹಿಡಿಯಲಾಗಿದೆ. ತಮ್ಮ ವಿರುದ್ಧ ಸೇನಾಪಡೆ ನಡೆಸುತ್ತಿರುವ ಕಾರ್ಯಾಚರಣೆಯಿಂದ ಕಂಗೆಟ್ಟು ಭಯೋತ್ಪಾದಕರು ಅಮಾಯಕ ವಲಸಿಗರನ್ನು ಕೊಲ್ಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ವಿವಿಧ ಸಂಸ್ಥೆಗಳ ಜಂಟಿ ತಂಡ:

ಕಾಶ್ಮೀರದ ಪರಿಸ್ಥಿತಿ ನಿಯಂತ್ರಿಸಲು ಅಮಿತ್‌ ಶಾ ಇತ್ತೀಚೆಗಷ್ಟೇ ಉನ್ನತ ಮಟ್ಟದ ಸಭೆ ನಡೆಸಿದ್ದು, ಅದರಲ್ಲಿ 28 ಸಂಸ್ಥೆಗಳ ದಕ್ಷ ಅಧಿಕಾರಿಗಳ ಜಂಟಿ ತಂಡವೊಂದನ್ನು ರಚಿಸಿದ್ದಾರೆ ಎಂದು ಹೇಳಲಾಗಿದೆ. ಈ ತಂಡದ ಜೊತೆಗೆ, ಶನಿವಾರವಷ್ಟೇ ಕಾಶ್ಮೀರದಿಂದ ದೆಹಲಿಗೆ ಮರಳಿದ್ದ ವಿಶೇಷ ರಹಸ್ಯ ಕಾರ್ಯಾಚರಣೆಗಳ ತಂಡವನ್ನೂ ಮತ್ತೆ ಕಾಶ್ಮೀರಕ್ಕೆ ಕಳುಹಿಸಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

click me!