ಪ್ರಧಾನಿ ಮೋದಿಯವರು 116ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಯುವಜನರಿಗೆ ಎನ್‌ಸಿಸಿ ಸೇರಲು ಕರೆ ನೀಡಿದರು. ಸ್ವಾಮಿ ವಿವೇಕಾನಂದರ ಜಯಂತಿಯಂದು ಯುವ ನಾಯಕರ ವಿಕಾಸ ಭಾರತ್ ಸಂವಾದ ಆಯೋಜಿಸುವುದಾಗಿ ಘೋಷಿಸಿದರು.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು 116ನೇ ಸಂಚಿಕೆಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದರು. ಈ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಯುವ ಸಮುದಾಯಕ್ಕೆ ಎನ್‌ಸಿಸಿ ಸೇರ್ಪಡೆಯಾಗುವಂತೆ ಮನವಿ ಮಾಡಿಕೊಂಡರು. ಇಂದು ಎನ್‌ಸಿಸಿ ದಿನವಾಗಿದೆ. ನಾನು ಸಹ ಎನ್‌ಸಿಸಿ ಕೆಡೆಟ್ ಆಗಿದ್ದು, ಅದರ ಅನುಭವಗಳು ತುಂಬಾ ಅಮೂಲ್ಯವಾದದ್ದು. ಎನ್‌ಸಿಸಿ ಯುವಕರಲ್ಲಿ ಶಿಸ್ತು, ನಾಯಕತ್ವ ಮತ್ತು ಸೇವಾ ಮನೋಭಾವವನ್ನು ಮೂಡಿಸುತ್ತದೆ. ದೇಶದಲ್ಲಿ ಎಲ್ಲಿಯಾದ್ರೂ ಅನಾಹುತ ಸಂಭವಿಸಿದಾಗ ಎನ್‌ಸಿಸಿ ಕೆಡೆಟ್‌ಗಳು ಮುಂದೆ ಬರುತ್ತಾರೆ ಎಂದು ಪ್ರಧಾನಿ ಮೋದಿ ತಮ್ಮ ಮಾತುಗಳಲ್ಲಿ ಉಲ್ಲೇಖಿಸಿದರು.
ಪ್ರತಿ ವರ್ಷ ಜನವರಿ 12ರಂದು ಸ್ವಾಮಿ ವಿವೇಕಾನಂದರ ಜಯಂತಿಯನ್ನು ಯುವ ದಿನ ಎಂದು ಆಚರಿಸುತ್ತೇವೆ. ಮುಂದಿನ ವರ್ಷ 162ನೇ ಸ್ವಾಮಿ ವಿವೇಕಾನಂದ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಗುವುದು. ಜನವರಿ 11-12ರಂದು ದೆಹಲಿಯ ಭಾರತ್ ಮಂಟಪದಲ್ಲಿ ಯುವ ನಾಯಕರ ವಿಕಾಸ್ ಭಾರತ್ ಸಂವಾದ ಆಯೋಜನೆ ಮಾಡಲಾಗುತ್ತದೆ. ರಾಜಕೀಯದಲ್ಲಿಲ್ಲದ ಕುಟುಂಬದ ಜನರು ಸಹ ರಾಜಕಾರಣಕ್ಕೆ ಬರಬೇಕು. ಮುಂದೆಯೂ ಯುವಕರಿಗಾಗಿ ವಿಶೇಷ ಅಭಿಯಾನಗಳನ್ನು ಆಯೋಜನೆ ಮಾಡಲಾಗುವುದು ಎಂದು ಪ್ರಧಾನಿಗಳು ಹೇಳಿದರು.
ಇನ್ನು ಹಿರಿಯ ನಾಗರಿಕರಿಗೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ನೀಡಲು ಸಹಾಯ ಮಾಡುತ್ತಿರುವ ಲಕ್ನೋ ನಿವಾಸಿ ವೀರೇಂದ್ರ ಅವರ ಕಾರ್ಯವನ್ನು ಪ್ರಧಾನಿಗಳು ಶ್ಲಾಘಿಸಿದರು. ಡಿಜಿಟಲ್ ಲೈಫ್ ಸರ್ಟಿಫಿಕೇಟ್‌ನಿಂದ ವಯೋವೃದ್ಧರಿಗೆ ಪಿಂಚಣಿ ಪಡೆಯಲು ಸಹಾಯ ಆಗುತ್ತದೆ. ಮಧ್ಯಪ್ರದೇಶದ ಭೋಪಾಲ್ ನಿವಾಸಿ ಮಹೇಶ್ ಎಂಬವರು ಹಿರಿಯ ನಾಗರಿಕರಿಗೆ ಮೊಬೈಲ್ ಮೂಲಕ ಹಣ ಪಾವತಿ ಮಾಡೋದನ್ನು ಕಲಿಸುತ್ತಿದ್ದಾರೆ ಎಂದು ತಿಳಿಸಿದರು. ಮಕ್ಕಳಲ್ಲಿ ಓದುವ ಮತ್ತು ಕಲಿಯುವ ಹವ್ಯಾಸವನ್ನು ಬೆಳೆಸುತ್ತಿರುವ ಚೆನ್ನೈನ ಪ್ರಕೃತಿ ಅರಿವಾಗಮ್ ಮತ್ತು ಬಿಹಾರದ ಗೋಪಾಲ್‌ಗಂಜ್‌ನ ಪ್ರಯೋಗ್ ಗೃಂಥಾಲಯದ ಕುರಿತಾಗಿಯೂ ಪ್ರಧಾನಿಗಳು ಮಾತನಾಡಿದರು.
ಇದೇ ವೇಳೆ ಗಯಾನಾ ದೇಶಕ್ಕೆ ಭೇಟಿ ನೀಡಿದ ಬಗ್ಗೆಯೂ ಪ್ರಧಾನಿಗಳು ಮಾತನಾಡಿದರು. ಕೆರಿಬಿಯನ್ ದೇಶ ಗಯಾನಾದಲ್ಲಿ ಮಿನಿ ಭಾರತವೂ ನೆಲೆಸಿದೆ. ನೂರಾರು ವರ್ಷಗಳ ಹಿಂದೆ ಭಾರತದಿಂದ ಜನರನ್ನು ಕೃಷಿ ಮತ್ತು ಕೂಲಿಗಾಗಿ ಗಯಾನಾಕ್ಕೆ ಕರೆದುಕೊಂಡು ಹೋಗಲಾಗುತ್ತಿತ್ತು. ಇಂದು ಅಲ್ಲಿ ಭಾರತೀಯ ಮೂಲದ ಜನರು ರಾಜಕೀಯ, ವ್ಯಾಪಾರ, ಶಿಕ್ಷಣ ಮತ್ತು ಸಂಸ್ಕೃತಿಯ ಪ್ರತಿಯೊಂದು ಕ್ಷೇತ್ರದಲ್ಲೂ ಮುಂದಿದ್ದಾರೆ. ಗಯಾನದಂತೆ ಭಾರತೀಯರು ಜಗತ್ತಿನ ಹಲವು ದೇಶಗಳಿಗೆ ಹೋಗಿ ತಮ್ಮ ಛಾಪು ಮೂಡಿಸಿದ್ದಾರೆ. ಓಮನ್‌ನಲ್ಲಿಯೂ ನೂರಾರು ವರ್ಷಗಳಿಂದ ಭಾರತೀಯರು ವಾಸವಾಗಿದ್ದಾರೆ. ಆ ದೇಶದ ಎಲ್ಲಾ ವಲಯಗಳಲ್ಲಿಯೂ ಭಾರತೀಯರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಮಹಾರಾಷ್ಟ್ರ ವಿಧಾನಸಭೆಗೆ ಅಧಿಕೃತ ವಿರೋಧ ಪಕ್ಷ ಇಲ್ಲದಂತೆ ಮಾಡಿದ ಎನ್‌ಡಿಎ ಭರ್ಜರಿ ಗೆಲುವು
ಏಕ್ ಪೇಡ್ ಮಾ ಕೆ ನಾಮ್ ಅಭಿಯಾನದ ಬಗ್ಗೆಯೂ ಪ್ರಸ್ತಾಪಿಸಿದ ಪ್ರಧಾನಿ, ಈ ಅಭಿಯಾನದ ಅಡಿಯಲ್ಲಿ ಕೇವಲ ಐದು ತಿಂಗಳಲ್ಲಿ 100 ಕೋಟಿ ಮರಗಳನ್ನು ನೆಡಲಾಗಿದೆ. ಗುಬ್ಬಚ್ಚಿಗಳ ಸಂಖ್ಯೆಯನ್ನು ಹೆಚ್ಚಿಸಲು ಕೆಲಸ ಮಾಡುತ್ತಿರುವ ಚೆನ್ನೈನ ಕೂಡುಗಲ್ ಟ್ರಸ್ಟ್ ಬಗ್ಗೆಯೂ ಪ್ರಧಾನಿ ಪ್ರಸ್ತಾಪಿಸಿದರು. ನಮ್ಮ ಸುತ್ತಲಿನ ಜೀವವೈವಿಧ್ಯವನ್ನು ಕಾಪಾಡುವಲ್ಲಿ ಈ ಪಕ್ಷಿ ಮುಖ್ಯವಾಗಿದೆ. ತ್ಯಾಜ್ಯ ನಿರ್ವಹಣೆಗಾಗಿ ಆರಂಭಿಸಲಾದ ಆವಿಷ್ಕಾರಗಳನ್ನು ಪ್ರಧಾನಿ ಶ್ಲಾಘಿಸಿದರು ಮತ್ತು ಮುಂಬೈನ ಇಬ್ಬರು ಹುಡುಗಿಯರು ಕ್ಲಿಪ್ಪಿಂಗ್‌ಗಳಿಂದ ಫ್ಯಾಶನ್ ಬಟ್ಟೆಗಳನ್ನು ತಯಾರಿಸುತ್ತಿದ್ದಾರೆ ಎಂದು ಪ್ರಸ್ತಾಪಿಸಿದರು. ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಇಂತಹ ಅನೇಕ ಎನ್‌ಜಿಒಗಳು ಮತ್ತು ಸಾಮಾಜಿಕ ಗುಂಪುಗಳನ್ನು ಪ್ರಧಾನಿ ಪ್ರಸ್ತಾಪಿಸಿದರು.
ಇದನ್ನೂ ಓದಿ: ತನ್ನದೇ ಒರಿಜಿನಲ್ ಶಿವಸೇನೆ ಎಂದು ಸಾಬೀತುಪಡಿಸಿದ ಏಕನಾಥ ಶಿಂಧೆ