ಲಡಾಖನ್ನು ಚೀನಾದ ಭಾಗ ಎಂದು ತೋರಿಸಿದ ಟ್ವಿಟ್ಟರ್,‌ ಅಧಿಕಾರಿಗಳಿಗೆ 7 ವರ್ಷ ಜೈಲು ಭೀತಿ!

By Kannadaprabha NewsFirst Published Oct 29, 2020, 12:04 PM IST
Highlights

ಟ್ವಿಟ್ಟರ್‌ ಅಧಿಕಾರಿಗಳಿಗೆ 7 ವರ್ಷ ಜೈಲು ಭೀತಿ!| ಲಡಾಖನ್ನು ಚೀನಾದ ಭಾಗ ಎಂದು ತೋರಿಸಿದ ಪ್ರಕರಣ| ಸಮಿತಿ ಮುಂದೆ ಅಧಿಕಾರಿಗಳ ಕ್ಷಮೆ; ತಿರಸ್ಕಾರ| ಟ್ವಿಟ್ಟರ್‌ ಇಂಡಿಯಾ ನೀಡಿದ ಸ್ಪಷ್ಟನೆ ತಿರಸ್ಕರಿಸಿದ ಸಂಸದೀಯ ಸಮಿತಿ| ಅಫಿಡವಿಟ್‌ ಸಲ್ಲಿಸುವಂತೆ ಅಮೆರಿಕದ ಮುಖ್ಯ ಕಚೇರಿಗೆ ಖಡಕ್‌ ತಾಕೀತು| ಟ್ವಿಟ್ಟರ್‌ ಮಾಡಿದ್ದು ಕ್ರಿಮಿನಲ್‌ ಅಪರಾಧ, 7 ವರ್ಷ ಜೈಲಿಗೆ ಅವಕಾಶ: ಲೇಖಿ

ನವದೆಹಲಿ(ಅ.29): ‘ಲಡಾಖ್‌ ಪ್ರದೇಶವು ಚೀನಾದ ಭಾಗ’ ಎಂದು ತೋರಿಸಿದ್ದ ಸಾಮಾಜಿಕ ಮಾಧ್ಯಮ ಟ್ವಿಟ್ಟರ್‌ ಪೇಚಿಗೆ ಸಿಲುಕಿಸಿದೆ. ಸಂಸದೀಯ ಸಮಿತಿ ಮುಂದೆ ಬುಧವಾರ ಟ್ವಿಟ್ಟರ್‌ ಇಂಡಿಯಾ ಅಧಿಕಾರಿಗಳು ಹಾಜರಾಗಿ ಕ್ಷಮೆ ಕೇಳಿದ್ದಾರೆ. ಆದರೆ ಇದಕ್ಕೆ ಒಪ್ಪದ ಸಮಿತಿ, ‘ಅಮೆರಿಕದಲ್ಲಿರುವ ಟ್ವಿಟ್ಟರ್‌ ಮುಖ್ಯ ಕಚೇರಿಯೇ ಅಫಿಡವಿಟ್‌ ಮೂಲಕ ಸ್ಪಷ್ಟನೆ ನೀಡಬೇಕು. ಕಂಪನಿಯ ಭಾರತೀಯ ಅಂಗಸಂಸ್ಥೆಯ ಅಧಿಕಾರಿಗಳು ನೀಡಿದ ಸ್ಪಷ್ಟನೆಯನ್ನು ಒಪ್ಪಲಾಗದು’ ಎಂದು ತಳ್ಳಿಹಾಕಿದೆ ಎಂದು ಮೂಲಗಳು ಹೇಳಿವೆ.

‘ಟ್ವಿಟ್ಟರ್‌ ಇಂಡಿಯಾ ನೀಡಿದ ಸ್ಪಷ್ಟನೆಗಳು ಅಸಮರ್ಪಕವಾಗಿವೆ. ಟ್ವಿಟ್ಟರ್‌ ಕೃತ್ಯವು ಕ್ರಿಮಿನಲ್‌ ಅಪರಾಧವಾಗಿದ್ದು, ಕಾಯ್ದೆಯನ್ವಯ 7 ವರ್ಷ ಜೈಲು ಶಿಕ್ಷೆ ನೀಡಲು ಅವಕಾಶವಿದೆ’ ಎಂದು ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಲೇಖಿ ಖಡಕ್ಕಾಗಿ ಹೇಳಿದ್ದಾರೆ.

ಇತ್ತೀಚೆಗೆ ಟ್ವಿಟ್ಟರ್‌ ತನ್ನ ಲೊಕೇಶನ್‌ ಸೆಟ್ಟಿಂಗ್‌ನಲ್ಲಿ ‘ಲಡಾಖ್‌ ಚೀನಾದ ಭಾಗ’ ಎಂಬ ನಕ್ಷೆ ಪ್ರದರ್ಶಿಸಿತ್ತು. ಈ ಕುರಿತಂತೆ ಟ್ವಿಟ್ಟರ್‌ ಅಧಿಕಾರಿಗಳಿಗೆ ಸಂಸತ್ತಿನ ‘ದತ್ತಾಂಶ ರಕ್ಷಣಾ ಮಸೂದೆ-2019’ ಜಂಟಿ ಸಮಿತಿ ಮುಂದೆ ಹಾಜರಾಗಲು ಸೂಚಿಸಲಾಗಿತ್ತು.

‘2 ತಾಸು ನಡೆದ ವಿಚಾರಣೆ ಸಂದರ್ಭದಲ್ಲಿ ಟ್ವಿಟ್ಟರ್‌ ಇಂಡಿಯಾ ಅಧಿಕಾರಿಗಳು, ‘ಭಾರತೀಯರ ಸೂಕ್ಷ್ಮ ಭಾವನೆಗಳಿಗೆ ನಾವು ಗೌರವ ನೀಡುತ್ತೇವೆ’ ಎಂದರು ಹಾಗೂ ಕ್ಷಮೆಯಾಚಿಸಿದರು’ ಎಂದು ಸಭೆಯಲ್ಲಿದ್ದ ಮೂಲಗಳು ಹೇಳಿವೆ.

ಆದರೆ ಇದಕ್ಕೊಪ್ಪದ ಲೇಖಿ, ‘ಇದು ಸೂಕ್ಷ್ಮ ಭಾವನೆಗಳಿಗೆ ಸಂಬಂಧಿಸಿದ ವಿಷಯವಷ್ಟೇ ಅಲ್ಲ. ಇದು ದೇಶದ ಸಾರ್ವಭೌಮತೆ ಹಾಗೂ ಏಕತೆಗೆ ಸಂಬಂಧಿಸಿದ ವಿಚಾರ. ಟ್ವಿಟ್ಟರ್‌ ಅಧಿಕಾರಿಗಳು ನೀಡಿದ ಸ್ಪಷ್ಟನೆ ತೃಪ್ತಿದಾಯಕವಾಗಿಲ್ಲ. ಲಡಾಖ್‌ ಅನ್ನು ಚೀನಾದ ಭಾಗ ಎಂದು ತೋರಿಸಿದ್ದು ಕ್ರಿಮಿನಲ್‌ ಅಪರಾಧ. ಇದಕ್ಕೆ 7 ವರ್ಷ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ’ ಎಂದಿದ್ದಾರೆ. ಇನ್ನು ಸಭೆಯ ಮಾಹಿತಿ ಇರುವ ಮೂಲಗಳು, ‘ಅಮೆರಿಕದಲ್ಲಿನ ಮುಖ್ಯ ಕಚೇರಿಯಿಂದಲೇ ಲಿಖಿತ ಅಫಿಡವಿಟ್‌ ಸಲ್ಲಿಕೆ ಆಗಬೇಕು’ ಎಂದು ತಾಕೀತು ಮಾಡಲಾಯಿತು ಎಂದು ತಿಳಿಸಿವೆ.

ಇದಲ್ಲದೇ, ಲೇಖಿ ಅವರು, ಟ್ವಿಟ್ಟರ್‌ನ ‘ನಿಷೇಧ ನೀತಿ’ಯನ್ನು ಸಭೆಯಲ್ಲಿ ಪ್ರಶ್ನಿಸಿದ್ದಾರೆ. ‘ಅಭಿಪ್ರಾಯಗಳಿಗೆ ನಿಷೇಧ ಹೇರುವ ಟ್ವಿಟ್ಟರ್‌ನ ನೀತಿಯು ವಾಕ್‌ ಸ್ವಾತಂತ್ರ್ಯದ ಉಲ್ಲಂಘನೆ’ ಎಂದು ಕಿಡಿಕಾರಿದ್ದಾರೆ.

click me!