ಗಡಿಯಿಂದ ಸೇನೆ ವಾಪಸಿಗೆ ಚೀನಾ ಸಮ್ಮತಿ, 3 ಹಂತದಲ್ಲಿ ಹಿಂತೆಗೆತಕ್ಕೆ ಉಭಯ ದೇಶಗಳ ನಿರ್ಧಾರ!

By Suvarna NewsFirst Published Nov 12, 2020, 12:53 PM IST
Highlights

ಗಡಿಯಿಂದ ಸೇನೆ ವಾಪಸಿಗೆ ಚೀನಾ ಸಮ್ಮತಿ| 3 ಹಂತದಲ್ಲಿ ಸೇನೆ ಹಿಂತೆಗೆತಕ್ಕೆ ಉಭಯ ದೇಶಗಳ ನಿರ್ಧಾರ| ಗಡಿಯಲ್ಲಿನ ತ್ವೇಷಮಯ ಪರಿಸ್ಥಿತಿ ಶಮನವಾಗುವತ್ತ

ನವದೆಹಲಿ(ನ.12): ಕಳೆದ ಮೇ ತಿಂಗಳಿನಿಂದ ಪೂರ್ವ ಲಡಾಖ್‌ ಗಡಿಯಲ್ಲಿ ಭಾರತ ಮತ್ತು ಚೀನಾ ನಡುವೆ ಸೃಷ್ಟಿಯಾಗಿರುವ ಉದ್ವಿಗ್ನ ಸ್ಥಿತಿ ಕೊನೆಗೂ ಶಮನಗೊಳ್ಳುವ ಶುಭ ಸುದ್ದಿ ಹೊರಬಿದ್ದಿದೆ. ಒಟ್ಟು 3 ಹಂತದಲ್ಲಿ ವಿವಾದಿತ ಪ್ರದೇಶಗಳಿಂದ ಸೇನೆ ಹಿಂದಕ್ಕೆ ಕರೆಸಿಕೊಳ್ಳಲು ಉಭಯ ದೇಶಗಳು ಸಮ್ಮತಿ ವ್ಯಕ್ತಪಡಿಸಿವೆ. ಮೇಲಾಗಿ ಚೀನಾ, ಕಳೆದ ಮೇ ತಿಂಗಳವರೆಗೂ ತಾನು ಪಹರೆ ಕಾಯುತ್ತಿದ್ದ ಫಿಂಗರ್‌ 8 ಬೆಟ್ಟಗಳ ಸಾಲಿಗೆ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಒಪ್ಪಿಗೆ ಸೂಚಿಸಿದೆ ಎಂದು ವರದಿಗಳು ತಿಳಿಸಿವೆ.

ನ.6ರಂದು ಚುಶುಲ್‌ನಲ್ಲಿ ನಡೆದ ಮಿಲಿಟರಿ ಕಮಾಂಡರ್‌ಗಳ ಮಟ್ಟದ ಸಭೆಯಲ್ಲಿ ಈ ಮಹತ್ವದ ನಿರ್ಧಾರಕ್ಕೆ ಉಭಯ ದೇಶಗಳು ಬಂದಿವೆ. ಗಡಿಯಲ್ಲಿ ಭಾರೀ ಸೇನೆ ನಿಯೋಜನೆ ಮೂಲಕ ಬೆದರಿಸುವ ತಂತ್ರ ಹೂಡಿದ್ದ ಚೀನಾಕ್ಕೆ ಭಾರತ ತನ್ನ ಸೇನೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ತಿರುಗೇಟು ನೀಡಿತ್ತು. ಹೀಗಾಗಿ ಚೀನಾ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿದ್ದು, ಇದು ಭಾರತಕ್ಕೆ ದೊಡ್ಡ ಜಯ ಎಂದೇ ಬಣ್ಣಿಸಲಾಗಿದೆ.

3 ಹಂತದಲ್ಲಿ ವಾಪಸ್‌:

ಮೊದಲನೆಯ ಹಂತದಲ್ಲಿ, ಮಾತುಕತೆ ಪೂರ್ಣಗೊಂಡ ಒಂದು ದಿನದೊಳಗೆ ಮುಂಚೂಣಿ ನೆಲೆಯಲ್ಲಿ ಪರಸ್ಪರ ಮುಖಾಮುಖಿ ಸ್ಥಳದಿಂದ ಸಶಸ್ತ್ರ ಯೋಧರನ್ನು ಪೂರ್ಣವಾಗಿ ಹಿಂದಕ್ಕೆ ಕರೆಸಿಕೊಳ್ಳಬೇಕು.

ಎರಡನೇ ಹಂತದಲ್ಲಿ ಪ್ಯಾಂಗಾಂಗ್‌ ಸರೋವರದ ಉತ್ತರದ ಪ್ರದೇಶದಿಂದ ಎರಡೂ ದೇಶಗಳು ಮೂರು ದಿನಗಳ ಕಾಲ ನಿತ್ಯವೂ ಒಟ್ಟು ನಿಯೋಜನೆಯ ಶೇ.30ರಷ್ಟುಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು. ಭಾರತ ತನ್ನ ಸೇನೆಯನ್ನು ಆಡಳಿತಾತ್ಮಕ ನೆಲೆ ಇರುವ ಧನ್‌ಸಿಂಗ್‌ ಥಾಪಾ ಪೋಸ್ಟ್‌ಗೆ ಕರೆಸಿಕೊಳ್ಳಬೇಕು. ಚೀನಾ ಹಾಲಿ ತಾನು ಬೀಡುಬಿಟ್ಟಿರುವ ಫಿಂಗರ್‌ 4 ಪ್ರದೇಶದಿಂದ ವಾಸ್ತವ ಗಡಿ ನಿಯಂತ್ರಣ ರೇಖೆಯ ಫಿಂಗರ್‌ 8 ಎಂದು ಗುರುತಿಸಲಾಗುವ ಪ್ರದೇಶಕ್ಕೆ ಕರೆಸಿಕೊಳ್ಳಬೇಕು. ಈ ಹಂತದಲ್ಲಿ ಯುದ್ಧ ಟ್ಯಾಂಕ್‌ ಮತ್ತು ಇತರೆ ವಾಹನಗಳನ್ನು ಹಿಂದಕ್ಕೆ ಸಾಗಿಸಬೇಕು.

ಮೂರು ಮತ್ತು ಕಡೆಯ ಹಂತದಲ್ಲಿ ಎರಡೂ ದೇಶಗಳು ಪ್ಯಾಂಗಾಂಗ್‌ ಸರೋವರದ ದಕ್ಷಿಣದ ಮುಂಚೂಣಿ ಪ್ರದೇಶದಿಂದ ಹಿಂದಕ್ಕೆ ಕರೆಸಿಕೊಳ್ಳಬೇಕು. ಇದರಲ್ಲಿ ಚುಶುಲ್‌ ಮತ್ತು ರೆಜಾಂಗ್‌ ಲಾ ಪ್ರದೇಶ ಮತ್ತು ಅದರ ಸುತ್ತಮುತ್ತಲ ಬೆಟ್ಟಗಳು ಕೂಡ ಸೇರಿರಲಿವೆ.

ಡ್ರೋನ್‌ ಮೂಲಕ ಜಂಟಿ ನಿಗಾ:

ಸೇನಾ ಹಿಂಪಡೆತದ ಮೇಲೆ ಕಣ್ಗಾವಲು ಇಡಲು ಜಂಟಿ ವ್ಯವಸ್ಥೆಯೊಂದಕ್ಕೂ ಉಭಯ ದೇಶಗಳು ಒಪ್ಪಿವೆ. ಇದರಲ್ಲಿ ಜಂಟಿ ನಿಯೋಗ ಮತ್ತು ಡ್ರೋನ್‌ಗಳ ಮೂಲಕ ಪರಿಶೀಲನೆ ಇರಲಿದೆ.

ಏನಿದು ಫಿಂಗರ್‌ 8

ಭಾರತ ಚೀನಾದೊಂದಿಗೆ ಲಡಾಖ್‌ ಭಾಗದಲ್ಲಿ ಗಡಿ ಹಂಚಿಕೊಂಡಿದೆ. ಪೂರ್ವ ಲಡಾಖ್‌ನಲ್ಲಿ ಬರುವ ಪ್ಯಾಂಗ್ಯಾಂಗ್‌ ಸರೋವರದ ನಡುವಿನಲ್ಲಿಯೇ ಭಾರತ ಮತ್ತು ಚೀನಾ ನಡುವಿನ ಗಡಿ ರೇಖೆ ಹಾದು ಹೋಗುತ್ತದೆ. ಇಲ್ಲಿನ ಪ್ರಮುಖ 8 ಬೆಟ್ಟಗಳನ್ನು ಫಿಂಗರ್‌ 1ರಿಂದ ಫಿಂಗರ್‌ 8 ಎಂದು ಗುರುತಿಸಲಾಗುತ್ತದೆ. ಫಿಂಗರ್‌ 8ರವರೆಗಿನ ಭಾಗ ತನ್ನದು ಎಂದು ಭಾರತದ ವಾದ. ಆದರೆ ಭಾರತ ಸಾಮಾನ್ಯವಾಗಿ ಫಿಂಗರ್‌4ರವರೆಗೆ ಮಾತ್ರವೇ ಪಹರೆ ಕಾಯುತ್ತದೆ. ಮತ್ತೊಂದೆಡೆ ಚೀನಾ ಫಿಂಗರ್‌ 2ವರೆಗೆ ಮಾತ್ರವೇ ಭಾರತದ ಜಾಗ. ಉಳಿದದ್ದು ತನ್ನದು ಎಂದು ವಾದಿಸುತ್ತಿದೆ. ಆದರೆ ಅದು ಫಿಂಗರ್‌ 8ರವರೆಗೆ ಮಾತ್ರವೇ ಇದುವರೆಗೂ ತನ್ನ ಪಹರೆ ಮಾಡುತ್ತಿತ್ತು. ಆದರೆ ಕಳೆದ ಮೇ ತಿಂಗಳಲ್ಲಿ ಅದು ಫಿಂಗರ್‌ 4 ಪ್ರದೇಶಕ್ಕೆ ತನ್ನ ಸೇನೆಯನ್ನು ತಂದು ಬೀಡುಬಿಟ್ಟಿತ್ತು. ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.

ಯುದ್ಧ ಭೀತಿ ನಿರ್ಮಾಣವಾಗಿತ್ತು

ಚೀನಾ ಕ್ಯಾತೆ ಬಳಿಕ ಉಭಯ ದೇಶಗಳ ಯೋಧರ ನಡುವೆ ಹೊಯ್‌ಕೈ ನಡೆದಿತ್ತು. ಬಳಿಕ ನಡೆದ ಮುಷ್ಠಿ ಕಾಳಗದಲ್ಲಿ ಭಾರತದ 20 ಮತ್ತು ಚೀನಾದ 30ಕ್ಕೂ ಹೆಚ್ಚು ಯೋಧರು ಹತರಾಗಿದ್ದರು. ತದನಂತರದಲ್ಲಿ ಚೀನಾ ಗಡಿಗೆ 50000ಕ್ಕೂ ಹೆಚ್ಚು ಯೋಧರ ನಿಯೋಜಿಸಿ, ಯುದ್ಧ ಟ್ಯಾಂಕರ್‌ಗಳು, ಯುದ್ಧ ವಿಮಾನಗಳು ಮತ್ತು ಭಾರೀ ಶಸ್ತಾ್ರಸ್ತ್ರ ನಿಯೋಜಿಸಿತ್ತು. ಭಾರತ ಕೂಡಾ ಅದಕ್ಕೆ ಸಮ ಪ್ರಮಾಣದಲ್ಲಿ ಯೋಧರು ಮತ್ತು ಶಸ್ತಾ್ರಸ್ತ್ರ ನಿಯೋಜನೆ ಮೂಲಕ ಸಡ್ಡು ಹೊಡೆದಿತ್ತು. ಹೀಗಾಗಿ ಗಡಿಯಲ್ಲಿ ಯುದ್ಧ ಭೀತಿ ಉಂಟಾಗಿತ್ತು.

ಸಭೆಯಲ್ಲಿ ಯಾರಾರ‍ಯರು ಭಾಗಿ?

ನ.6ರಂದು ನಡೆದ 8ನೇ ಕಾಫ್ಸ್‌ರ್‍ ಕಮಾಂಡರ್‌ ಮಟ್ಟದ ಸಭೆಯಲ್ಲಿ ಹಿರಿಯ ಸೇನಾಧಿಕಾರಿಗಳು, ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ನವೀನ್‌ ಶ್ರೀವಾಸ್ತವ, ಮಿಲಿಟರಿ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥರು ಭಾರತದ ಪರವಾಗಿ ಭಾಗಿಯಾಗಿದ್ದರು.

click me!