ಕರ್ನಾಟಕವು ಉದ್ಯೋಗ ಸೃಷ್ಟಿ ಮತ್ತು ಪ್ರತಿಭೆಗಳನ್ನು ಉಳಿಸಿಕೊಳ್ಳುವಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಎಕ್ಸ್ಫೆನೋ ವರದಿಯ ಪ್ರಕಾರ, ರಾಜ್ಯವು 1,36,500 ಉದ್ಯೋಗಗಳನ್ನು ಸೃಷ್ಟಿಸಿದೆ ಮತ್ತು ಪ್ರತಿಭಾವಂತರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.
ಬೆಂಗಳೂರು (ನ.26): ನಮ್ಮ ಕರ್ನಾಟಕ ರಾಜ್ಯವು ಜಾಗತಿಕ ಮಟ್ಟದ ಮೂಲಸೌಕರ್ಯ, ಅತ್ಯುತ್ತಮ ಉದ್ಯೋಗಾವಕಾಶ ಮತ್ತು ಆಕರ್ಷಕ ವೇತನ ತಂದುಕೊಡುವ ಮತ್ತು ಪ್ರತಿಭೆಗಳನ್ನು ತನ್ನಲ್ಲಿಯೇ ಉಳಿಸಿಕೊಳ್ಳುವ ದೇಶದ ನಂಬರ್-1 ರಾಜ್ಯವಾಗಿ ಹೊರಹೊಮ್ಮಿದೆ. ಈ ಸಂಬಂಧ ಎಕ್ಸ್ಫೆನೋ ಸಂಸ್ಥೆ ನಡೆಸಿದ ಒಂದು ವರ್ಷದ ಸಮೀಕ್ಷಾ ವರದಿಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಬಿಡುಗಡೆ ಮಾಡಿದರು.
ಕರ್ನಾಟಕವು 'ಪಾಸಿಟಿವ್ ಟ್ಯಾಲೆಂಟ್ ಬ್ಯಾಲೆನ್ಸ್' ವಿಚಾರದಲ್ಲಿ ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಕಳೆದ ಒಂದು ವರ್ಷದಲ್ಲಿ ರಾಜ್ಯವು ಕಾರ್ಪೊರೇಟ್ ವಲಯದಲ್ಲಿ 1,36,500 ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸಿದೆ. ಈ ಅವಧಿಯಲ್ಲಿ ಇಲ್ಲಿಂದ 73 ಸಾವಿರ ಮಂದಿ ಮಾತ್ರ ಬೇರೆ ರಾಜ್ಯಗಳಿಗೆ ಹೋಗಿದ್ದಾರೆ ಎಂದು ವರದಿ ತಿಳಿಸಿದೆ. ಈ ಅಧ್ಯಯನದ ಪ್ರಕಾರ ಪ್ರತಿಭೆಯಲ್ಲಿ ಹರಿಯಾಣ ಮತ್ತು ತೆಲಂಗಾಣ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿವೆ.
undefined
ಬೆಂಗಳೂರು ಮೂಲದ ಸ್ಪೆಷಲಿಸ್ಟ್ ಸ್ಟಾಫಿಂಗ್ ಕಂಪನಿಯಾದ ಎಕ್ಸ್‌ಫೀನೋ ನಡೆಸಿದ ಅಧ್ಯಯನದ ಪ್ರಕಾರ ಕರ್ನಾಟಕವು ಅತ್ಯಧಿಕ ಧನಾತ್ಮಕ ಟ್ಯಾಲೆಂಟ್ ಬ್ಯಾಲೆನ್ಸ್ (ಪಿಟಿಬಿ) ಹೊಂದಿರುವ ಭಾರತದ ನಂ.1 ರಾಜ್ಯವಾಗಿ ಹೊರಹೊಮ್ಮಿದೆ. ರಾಜ್ಯದ ವಿವಿಧ ವಲಯಗಳಲ್ಲಿ 59.7 ಲಕ್ಷ ಮಂದಿ ವೈಟ್ ಕಾಲರ್ ಹುದ್ದೆಗಳಲ್ಲಿ ಇದ್ದಾರೆ. ಇವರಲ್ಲಿ ಶೇ.64ರಷ್ಟು ಜನರಿಗೆ ಕನಿಷ್ಠ ಒಂದು ವರ್ಷದ ವೃತ್ತಿ ಅನುಭವವಾದರೂ ಇದೆ. ಈ ಪೈಕಿ 34 ಲಕ್ಷ ಮಂದಿ ಬೆಂಗಳೂರಿನಲ್ಲೇ ಇದ್ದಾರೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರು ಕೆನರಾ ಬ್ಯಾಂಕ್ ಎಟಿಎಂ ಮಿಷನ್ ಹೊತ್ತೊಯ್ದರೂ ಹಣ ಕದಿಯೋಕಾಗ್ಲಿಲ್ಲ; ಇವರೆಂಥಾ ಕಳ್ಳರು!
ಈ ಅಧ್ಯಯನ ವರದಿಯಲ್ಲಿ ಮುಖ್ಯವಾಗಿ ಐಟಿ, ಎಐ ಮತ್ತು ಜೀವವಿಜ್ಞಾನ ಕ್ಷೇತ್ರಗಳಲ್ಲಿ ಇರುವ ಪ್ರತಿಭಾವಂತರನ್ನು ಪರಿಗಣಿಸಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ನಗರವು ಬಹುರಾಷ್ಟ್ರೀಯ ಕಂಪನಿಗಳ 'ಜಾಗತಿಕ ಸಾಮರ್ಥ್ಯ ಕೇಂದ್ರ'ಗಳ (ಜಿಸಿಸಿ) ತಾಣವಾಗಿಯೂ ಮುಂಚೂಣಿಗೆ ಬರುತ್ತಿದೆ. ದೇಶದಾದ್ಯಂತ ಒಟ್ಟು 32 ಲಕ್ಷ ಮಂದಿ ಅರ್ಹರು ಬೆಂಗಳೂರೇ ತಮ್ಮ ವೃತ್ತಿ ಜೀವನದ ಮೊದಲ ಆಯ್ಕೆ ಎಂದು ತಿಳಿಸಿರುವುದು ಕೂಡ ವರದಿಯಲ್ಲಿ ದೃಢಪಟ್ಟಿದೆ. ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹ ಸಂಸ್ಥಾಪಕ ಕಮಲ್ ಕಾರಂತ ಉಪಸ್ಥಿತರಿದ್ದರು.