ಕೇವಲ 2 ಲಸಿಕೆ ಉತ್ಪಾದಕ ಕಂಪನಿಗಳ ಮೇಲೆ ಸರ್ಕಾರ ಅವಲಂಬಿತವಾಗಿದ್ದೇ ತಪ್ಪಾಯಿತೇ?

By Kannadaprabha NewsFirst Published Apr 23, 2021, 9:58 AM IST
Highlights

ಸರ್ಕಾರ ಜನವರಿಯಲ್ಲಿಯೇ ಉಳ್ಳವರು ಲಸಿಕೆ ಕೊಳ್ಳಬೇಕು, ಬಡವರಿಗೆ ಉಚಿತ ಎಂಬ ನಿಯಮ ತಂದು ಮುಕ್ತ ಮಾರುಕಟ್ಟೆಗೆ ಬಿಟ್ಟಿದ್ದರೆ ಇಷ್ಟೊತ್ತಿಗೆ ಕಂಪನಿಗಳು ಲಾಭದಲ್ಲಿ ಇರುತ್ತಿದ್ದವು.

ನವದೆಹಲಿ (ಏ. 23): ಕೋಟೆ ಗೆಲ್ಲುವ ಮೊದಲೇ ಧ್ವಜ ಹಾರಿಸುವುದು, ಅತಿಯಾದ ಆತ್ಮವಿಶ್ವಾಸ, ಸುಮ್ಮಸುಮ್ಮನೆ ಎದೆ ತಟ್ಟಿಕೊಳ್ಳುವುದು ಇವೆಲ್ಲ ಭಾರತೀಯರ ವಂಶವಾಹಿನಿಯ ದೌರ್ಬಲ್ಯಗಳು. ಕಳೆದ ವರ್ಷ ಕೊರೋನಾ ಅಪ್ಪಳಿಸಿದಾಗ ಎಚ್ಚೆತ್ತು ಕುಳಿತುಕೊಂಡಿದ್ದ ಸರ್ಕಾರಗಳು ಅಚ್ಚರಿ ಅನ್ನಿಸುವಷ್ಟುಸರ್ಕಾರಿ ವ್ಯವಸ್ಥೆಯನ್ನು ಯುದ್ಧಕ್ಕೆ ತಯಾರು ಮಾಡಿದ್ದು ಹೌದು.

ಆದರೆ ಹೊಸ ವರ್ಷದಲ್ಲಿ ಲಸಿಕೆ ಕೊಡಲು ಶುರು ಮಾಡಿದಾಗ ಇನ್ನೇನು ಕೊರೋನಾ ಮೇಲೆ ವಿಜಯ ಸಾಧಿಸಿದ್ದು ಆಯಿತು, ನಾವೇ ಜಗತ್ತಿಗೆ ಲಸಿಕೆ ಕೊಡುವವರು, ವಿಶ್ವಗುರು ಆಗಿಯೇ ಬಿಟ್ಟೆವು ಎಂದು ಬೀಗಿ ಮೈಮರೆತಿದ್ದು ನಾವೆಲ್ಲ ಸೇರಿ ಮಾಡಿದ ತಪ್ಪು. ಪ್ರಭುಗಳು ಮತ್ತು ಪ್ರಭುತ್ವ ಚುನಾವಣೆ ಪ್ರಚಾರದ ರಾಜಕೀಯದಲ್ಲಿ ಮೈಮರೆತಿದ್ದರೆ, ನಾವೆಲ್ಲ ಸಾರ್ವಜನಿಕರು ಮದುವೆ, ಮುಂಜಿ, ಹುಟ್ಟುಹಬ್ಬಗಳಲ್ಲಿ ಮೈಮರೆತಿದ್ದರಿಂದ 2ನೇ ಅಲೆ ಸುನಾಮಿಯಂತೆ ಅಪ್ಪಳಿಸಿದೆ. ನಾವು 2ನೇ ಅಲೆಯನ್ನು ತಡೆಯಲು ಆಗುತ್ತಿರಲಿಲ್ಲ, ಹೌದು. ಆದರೆ ಲಸಿಕೆ ತೆಗೆದುಕೊಂಡವರ ಪ್ರಮಾಣವನ್ನು ಮತ್ತು ಆಮ್ಲಜನಕ ಮತ್ತು ರೆಮ್‌ಡೆಸಿವಿರ್‌ಗಳ ಪೂರೈಕೆಯನ್ನು ಸಮರ್ಪಕವಾಗಿ ಮಾಡಿದ್ದರೆ 2ನೇ ಅಲೆಯ ಪ್ರಕೋಪವನ್ನು ಕಡಿಮೆ ಮಾಡಬಹುದಿತ್ತು.

ಲಸಿಕೆ ಕೊರತೆಗೆ ಕಾರಣ ಏನು?

ನಮ್ಮ ದೇಶದ ಜನಸಂಖ್ಯೆ 140 ಕೋಟಿ ಇದೆ. ಕೇವಲ 2 ಕಂಪನಿಗಳ ಮೇಲೆ ನಿರ್ಭರ ಆಗೋದು ಸರಿಯಲ್ಲ ಎಂದು ಆರೋಗ್ಯ ಪರಿಣತರು ಸರ್ಕಾರಕ್ಕೆ ಎಚ್ಚರಿಸುತ್ತಲೇ ಇದ್ದರು. ಆದರೆ ಸೀರಂ ಸಂಸ್ಥೆ ಮೇಲೆ ಪೂರ್ತಿ ನಿರ್ಭರವಾಗಿದ್ದ ಸರ್ಕಾರ ಅತ್ಯಂತ ಕಡಿಮೆ ಅಂದರೆ 150 ರುಪಾಯಿಗೆ ಒಂದು ಲಸಿಕೆಯಂತೆ ಭಾರತದಲ್ಲಿ ಬಿಡುಗಡೆ ಮಾಡುವ ಎಲ್ಲವನ್ನೂ ತನಗೆ ಕೊಡಬೇಕು ಎಂದು ಒಪ್ಪಂದ ಮಾಡಿಕೊಂಡಿತ್ತು. ಆದರೆ ಇದರಿಂದ ಉತ್ಪಾದನೆಯಲ್ಲಿ ಸಾಮರ್ಥ್ಯ ಹೆಚ್ಚಿಸಲೂ ಆಗದೆ, ಬಂಡವಾಳ ಸಹ ಇಲ್ಲದೆ ಸೀರಂ ಕಂಪನಿ ಮತ್ತು ಭಾರತ್‌ ಬಯೋಟೆಕ್‌ ದೇಶಿಯ ಕಂಪನಿ ಒದ್ದಾಡುತ್ತಿವೆ.

ರಾಜಕಾರಣಿಗಳಿಗೆ ಮಾತ್ರ ಕೊರೊನಾ ನಿಯಮವಿಲ್ಲ, ಕುಂಭಮೇಳ ಈಗ ಬೇಕಿತ್ತಾ?

ಹೀಗಾಗಿ 2ನೇ ಅಲೆ ಅಪ್ಪಳಿಸಿದಾಗ 2ನೇ ಡೋಸ್‌ ಕೊಡಲು ಲಸಿಕೆಗಳು ಇಲ್ಲದೇ ಸರ್ಕಾರಿ ವ್ಯವಸ್ಥೆ ಒದ್ದಾಡುತ್ತಿದೆ. ಹೀಗಾಗಿ ಈಗ ಮಾರುಕಟ್ಟೆಗೆ ನೇರವಾಗಿ ಲಸಿಕೆ ಬಿಡುಗಡೆ ಮಾಡಲು ಅನುಮತಿ ನೀಡಿದೆ. ಸರ್ಕಾರ ಜನವರಿಯಲ್ಲಿಯೇ ಉಳ್ಳವರು ಲಸಿಕೆ ಕೊಳ್ಳಬೇಕು, ಬಡವರಿಗೆ ಉಚಿತ ಎಂಬ ನಿಯಮ ತಂದು ಮುಕ್ತ ಮಾರುಕಟ್ಟೆಗೆ ಬಿಟ್ಟಿದ್ದರೆ ಇಷ್ಟೊತ್ತಿಗೆ ಕಂಪನಿಗಳು ಲಾಭದಲ್ಲಿ ಇರುತ್ತಿದ್ದವು. ಮರು ಬಂಡವಾಳ ಹೂಡಲು ಹಣ ದೊರೆಯುತ್ತಿತ್ತು. ಜನರಿಗೆ ಲಸಿಕೆ ದೊರೆಯುತ್ತಿತ್ತು. ಈಗ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರೂ ಅಷ್ಟೊಂದು ಪ್ರಮಾಣದ ಉತ್ಪಾದನೆ ಮಾಡಲು 2 ತಿಂಗಳ ಸಮಯ ಬೇಕು.

ಪಶ್ಚಿಮದ ಲಾಭಕೋರತನ

ಕೊರೋನಾ ಶುರು ಆಗುವವರೆಗೂ ವಿಶ್ವದ 60 ಪ್ರತಿಶತ ಲಸಿಕೆಗಳು ಭಾರತದಲ್ಲಿ ತಯಾರಾಗಿ ರಫ್ತು ಆಗುತ್ತಿದ್ದವು. ಆದರೆ ಕೊರೋನಾದ 2ನೇ ಅಲೆಯ ನಂತರ ನಾವು ವಿದೇಶಿ ಕಂಪನಿಗಳಿಂದ ಲಸಿಕೆ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗಿದೆ. ಕೊರೋನಾ ಸಂದರ್ಭದಲ್ಲಿ ಲಸಿಕೆಯನ್ನು ವಿಶ್ವ ವಾಣಿಜ್ಯ ಒಪ್ಪಂದದಿಂದ ಹೊರಗಿಟ್ಟು ಕಡಿಮೆ ಬೆಲೆಯಲ್ಲಿ ಜನರಿಗೆ ಕೊಡುವ ರೀತಿ ಮಾಡಬೇಕು ಎನ್ನುವುದು ಭಾರತದ ನಿಲುವಾಗಿತ್ತು. ಆದರೆ ಅಮೆರಿಕ ಮತ್ತು ಯುರೋಪಿನ ರಾಷ್ಟ್ರಗಳು, ಸಂಶೋಧನೆ, ಉತ್ಪಾದನೆಗೆ ಬಂಡವಾಳ ಹೂಡುವ ಕಂಪನಿಗಳಿಗೆ ತೊಂದರೆ ಆಗುತ್ತದೆ ಎಂದು ಸಮರ್ಥಿಸಿಕೊಂಡಿದ್ದವು.

ಕೊನೆಗೆ ಭಾರತದಿಂದ ಸೀರಂ ಕಂಪನಿ ತಯಾರಿಸಿದ ಲಸಿಕೆಗಳು 82 ಬಡ ರಾಷ್ಟ್ರಗಳಿಗೆ ತಲುಪತೊಡಗಿದಾಗ ಲಸಿಕೆ ತಯಾರಿಸಲು ಬೇಕಾದ ಕಚ್ಚಾ ವಸ್ತುವಿನ ಅಮದಿನ ಮೇಲೇ ಅಮೆರಿಕ ನಿರ್ಬಂಧ ಹಾಕಿದೆ. ಅರ್ಥ ಸ್ಪಷ್ಟ; ಒತ್ತಡಕ್ಕೆ ಮಣಿದು ಭಾರತ ಅಮೆರಿಕದ ಕಂಪನಿಗಳ ಲಸಿಕೆಗಳಿಗೆ ಒಳಗಡೆ ಪ್ರವೇಶ ನೀಡಬೇಕು. ಈಗ ಮೇ 1ರಿಂದ ಅದೇ ಶುರು ಆಗಲಿದೆ. ಇತಿಹಾಸ ಸಾಕ್ಷಿ ಇದೆ. ಪಶ್ಚಿಮದ ದೇಶಗಳಿಗೆ ಮಾನವೀಯತೆಗಿಂತ ಲಾಭನೇ ಮುಖ್ಯ.

ಬಂಡಾಯಗಾರ ಯತ್ನಾಳ್ ಬಗ್ಗೆ ಹೈಕಮಾಂಡ್‌ಗೆ ಸಾಫ್ಟ್ ಕಾರ್ನರ್ ಯಾಕೆ.?

ಸೀರಂ ಕಂಪನಿಯ ಸಂಕಷ್ಟ

ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಸಂಶೋಧಿ​ಸಿದ ಅಸ್ಟ್ರಾಜೆನಿಕಾ ಬಂಡವಾಳ ಹೂಡಿದ ಕೋವಿಶೀಲ್ಡ್‌ ಲಸಿಕೆ ಉತ್ಪಾದಿಸುವ ಸೀರಂ ಕಂಪನಿ ತಿಂಗಳಿಗೆ 6.5 ಕೋಟಿ ಲಸಿಕೆ ತಯಾರಿಸುತ್ತಿದೆ. ಏಷ್ಯಾ ಮತ್ತು ಆಫ್ರಿಕಾದ 83 ಬಡ ರಾಷ್ಟ್ರಗಳಿಗೆ ಮತ್ತು ಬಂಡವಾಳ ಮತ್ತು ತಂತ್ರಜ್ಞಾನ ನೀಡಿದ ಅಸ್ಟ್ರಾಜೆನಿಕಾಗೆ ಅರ್ಧಕ್ಕಿಂತ ಹೆಚ್ಚು ಲಸಿಕೆ ಕೊಡುವ ಒಪ್ಪಂದ ಪುಣೆಯ ಸೀರಂ ಕಂಪನಿ ಮಾಡಿಕೊಂಡಿತ್ತು. ಭಾರತ ವಿಶ್ವದ ಬಡ ರಾಷ್ಟ್ರಗಳಿಗೆ ಮಾಚ್‌ರ್‍ ಅಂತ್ಯದ ವರೆಗೆ ಸುಮಾರು 1 ಕೋಟಿ ಲಸಿಕೆ ಉಚಿತವಾಗಿ ನೀಡಿದ್ದರೆ, 5 ಕೋಟಿ ಲಸಿಕೆಯನ್ನು ಮಾರಾಟ ಮಾಡಿದೆ.

ಆದರೆ ಈಗ ಇಲ್ಲಿಯೇ ಲಸಿಕೆ ಪೂರೈಕೆ ಕಷ್ಟಆಗುತ್ತಿರುವುದರಿಂದ ರಫ್ತು ನಿಲ್ಲಿಸಿ, ಉತ್ಪಾದನೆ ಹೆಚ್ಚಿಸುವಂತೆ ಸೀರಂಗೆ ಹೇಳುತ್ತಿದೆ. ಆದರೆ ಲಸಿಕೆ ಒಂದನ್ನು ಸರ್ಕಾರ 200 ರುಪಾಯಿಗೆ ಕೊಂಡಿದ್ದರಿಂದ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ತನ್ನ ಬಳಿ ಹಣ ಇಲ್ಲ ಎಂದು ಕಂಪನಿ ಹೇಳಿದಾಗ ಸರ್ಕಾರ ರಾತ್ರೋ ರಾತ್ರಿ ಮುಂಗಡ ಹಣವನ್ನು ಕೊಟ್ಟು ಲಸಿಕೆ ಯನ್ನು ಖಾಸಗಿ ಅವರಿಗೂ ನೇರವಾಗಿ ಕೊಡಬಹುದು ಎಂದು ನಿಯಮ ಸಡಿಲಿಸಿದೆ.

ಕೊರತೆಯಲ್ಲಿ ಕಾಳಸಂತೆ

ಕಳೆದ ಒಂದು ವರ್ಷದಿಂದ ಕೊರೋನಾ ಸಂಕಷ್ಟದಲ್ಲಿ ರೋಗಿಗಳಿಗೆ ಕೊಡಲೇಬೇಕಾದ ರೆಮ್‌ಡೆಸಿವಿರ್‌ ಚುಚ್ಚುಮದ್ದಿಗೆ ಖಾಸಗಿ ಕಂಪನಿಗಳು 5,500 ರುಪಾಯಿ ವಸೂಲಿ ಮಾಡುತ್ತಿದ್ದರೂ ಸುಮ್ಮನೆ ಕುಳಿತಿದ್ದ ಸರ್ಕಾರ, 2ನೇ ಅಲೆ ಅಪ್ಪಳಿಸಿದಾಗಲೇ ರೆಮ್‌ಡಿಸಿವಿರ್‌ನ ಬೆಲೆ ಇಳಿಸಿದ್ದು ಇವತ್ತಿನ ಕೊರತೆ ಮತ್ತು ಕಾಳಸಂತೆಕೋರತನಕ್ಕೆ ದೊಡ್ಡ ಕಾರಣ. ಇನ್ನೇನು ಕೊರೋನಾ ಕಥೆ ಮುಗಿಯಿತು ಎಂದು ರೆಮ್‌ಡೆಸಿವಿರ್‌ ಉತ್ಪಾದನೆ ಮತ್ತು ಮಾರಾಟದತ್ತ ಸರ್ಕಾರ ಗಮನವೇ ಕೊಡಲಿಲ್ಲ.

ರೆಮ್‌ಡಿಸಿವಿರ್‌ ಉತ್ಪಾದನೆ ಮಾಡಲು 5ರಿಂದ 6 ವಾರ ಬೇಕು. ಯಾವಾಗ ಸೋಂಕು ಜಾಸ್ತಿ ಆಗಿದ್ದಾಗ ಸರ್ಕಾರ ಹಿಂದೆ ಮುಂದೆ ನೋಡದೇ ಬೆಲೆ ಇಳಿಸಿತೋ ಏಕಾಏಕಿ ಕೊರತೆ ಸೃಷ್ಟಿಮಾಡಿ ಕಾಳಸಂತೆಯಲ್ಲಿ ಒಂದು ಚುಚ್ಚುಮದ್ದು 20ರಿಂದ 25 ಸಾವಿರಕ್ಕೆ ಮಾರಾಟ ಮಾಡಲಾಯಿತು. ದಿಲ್ಲಿಯಲ್ಲಂತೂ ಒಂದು ದಿನ ರೆಮ್‌ಡಿಸಿವಿರ್‌ ಸಿಗದೆ ಆಸ್ಪತ್ರೆಗಳು ವೈದ್ಯರು, ರೋಗಿಗಳ ಸಂಬಂಧಿಕರು ಒದ್ದಾಡಿ ಹೋದರು. ಅಂದಹಾಗೆ ಈ ಔಷದ ಬೆಲೆ ನಿಯಂತ್ರಣದ ಖಾತೆ ನೋಡಿಕೊಳ್ಳುವುದು ಕರ್ನಾಟಕದ ಡಿ.ವಿ.ಸದಾನಂದಗೌಡ.

ಅಮಾನವೀಯ ಘಟನೆಗಳು

ದಿಲ್ಲಿಯ ತೀಸ್‌ ಹಜಾರಿಯಲ್ಲಿರುವ ಸೇಂಟ್‌ ಸ್ಟೀಫನ್ಸ್‌ ಖಾಸಗಿ ಆಸ್ಪತ್ರೆಯಲ್ಲಿ 300 ರೋಗಿಗಳು ಅಡ್ಮಿಟ್‌ ಆಗಿದ್ದರೆ, ಅದರಲ್ಲಿ 100 ಜನ ಆಮ್ಲಜನಕ ಪೂರೈಕೆಯ ಮೇಲೆ ಉಸಿರಾಡುತ್ತಿದ್ದರು. ಆದರೆ ಪಕ್ಕದ ಹರಾರ‍ಯಣದ ಸರ್ಕಾರ ನಮ್ಮ ರಾಜ್ಯದ ಕಂಪನಿ ದಿಲ್ಲಿ ಆಸ್ಪತ್ರೆಗೆ ಆಮ್ಲಜನಕ ಪೂರೈಕೆ ಮಾಡಲು ಬಿಡುವುದಿಲ್ಲ ಎಂದು ಲಿಂಡಾ ಕಂಪನಿಯ ಪ್ಲಾಂಟ್‌ ಅನ್ನೇ ರೇಡ್‌ ಮಾಡಿತ್ತು. ಇಲ್ಲಿ ನೋಡಿದರೆ ಆಸ್ಪತ್ರೆಯ ಬಳಿ ಇದ್ದದ್ದು, ಕೇವಲ ಒಂದು ಗಂಟೆ ಆಮ್ಲ ಜನಕ ಪೂರೈಕೆಯ ದಾಸ್ತಾನು ಮಾತ್ರ. ಕೊನೆಗೆ ದಿಲ್ಲಿ ಮಾಧ್ಯಮಗಳು ದೊಡ್ಡ ಸುದ್ದಿ ಮಾಡಿದ ನಂತರ, ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿದ ನಂತರವೇ ಆಮ್ಲಜನಕದ ಟ್ಯಾಂಕರ್‌ಗಳು ಆಸ್ಪತ್ರೆಗೆ ದೌಡಾಯಿಸಿದವು. ಜನರ ಜೀವ ಉಳಿಸುವ ಆಮ್ಲಜನಕ ಪೂರೈಕೆಯಲ್ಲೂ ರಾಜಕೀಯ ಬೇಕಾ?

ಕಾರು ಬೇಕಂತೆ ಕಾರು!

ಕರ್ನಾಟಕದಲ್ಲಿ ಸರ್ಕಾರ ಹಣವಿಲ್ಲ ಎಂದು ಒದ್ದಾಡುತ್ತಿರುವಾಗ ದಿಲ್ಲಿಯ ಕರ್ನಾಟಕ ಭವನದ ಅಧಿಕಾರಿಗಳು 5 ಹೊಚ್ಚ ಹೊಸ ಕಾರು ಕೊಳ್ಳಲು ಓಡಾಡುತ್ತಿದ್ದಾರೆ. ಹೋದ ವರ್ಷ ಕೊಟ್ಟಹಣ ಖರ್ಚು ಆಗಿಲ್ಲ, ಹೀಗಾಗಿ ಸರ್ಕಾರಕ್ಕೆ ವಾಪಸ್‌ ಯಾಕೆ ಕೊಡಬೇಕು, ಓಡಾಡಲು ಹೊಸ ಕಾರು ಕೊಂಡು ಕೊಂಡರಾಯಿತು ಎಂಬುದು ಅಧಿಕಾರಿಗಳ ಯೋಚನೆ. ಮಾಚ್‌ರ್‍ 2020ರಿಂದ ಕರ್ನಾಟಕ ಭವನಕ್ಕೆ ಅಥಿತಿಗಳೇ ಬರೋಲ್ಲ. 29 ಕಾರುಗಳು ಮತ್ತು ಅದರ ಚಾಲಕರಿಗೆ ಕೆಲಸ ಇಲ್ಲ. ಅಂಥದ್ದರಲ್ಲಿ ಕಾರು ಯಾಕೆ ಬೇಕು? ಅಂದಹಾಗೆ ಕೊರೋನಾದಿಂದ ಬಿಕೋ ಎನ್ನುವ ಕರ್ನಾಟಕ ಭವನದಲ್ಲಿ 4 ಕೇಂದ್ರೀಯ ಆಡಳಿತ ಸೇವೆಯ ಮತ್ತು ಒಬ್ಬ ರಾಜ್ಯ ಆಡಳಿತ ಸೇವೆಯ ಅಧಿಕಾರಿ ಇದ್ದಾರೆ. ಆ ಐವರಿಗೆ ಹಳೆ ಕಾರು ಬೇಡ ಹೊಸ ಕಾರು ಬೇಕು, ಅಷ್ಟೇ ಕಥೆ.

 - ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

click me!