ಗಡಿಗೆ -40 ಡಿಗ್ರಿ ಚಳಿಯಲ್ಲೂ ಯುದ್ಧ ಮಾಡುವ ಟ್ಯಾಂಕ್‌!

By Kannadaprabha NewsFirst Published Sep 28, 2020, 7:24 AM IST
Highlights

ಗಡಿಗೆ -40 ಡಿಗ್ರಿ ಚಳಿಯಲ್ಲೂ ಯುದ್ಧ ಮಾಡುವ ಟ್ಯಾಂಕ್‌!| ಚೀನಾಕ್ಕೆ ಸಡ್ಡು ಹೊಡೆಯಲು ಲಡಾಖ್‌ ಗಡಿಯಲ್ಲಿ ಶಸ್ತ್ರಾಸ್ತ್ರ ಜಮೆ| 14500 ಅಡಿ ಎತ್ತರ ಪ್ರದೇಶಕ್ಕೆ ಟಿ 90, ಟಿ 72 ಟ್ಯಾಂಕರ್‌ ರವಾನೆ| ಇಷ್ಟು ಎತ್ತರದಲ್ಲಿ ಯುದ್ಧ ಟ್ಯಾಂಕ್‌ ಜಗತ್ತಿನಲ್ಲೇ ಮೊದಲು!| ಭಾರತೀಯ ಸೇನೆಯಿಂದಲೇ ಟ್ಯಾಂಕ್‌ ವೀಡಿಯೋ ಬಿಡುಗಡೆ| ಫೈರ್‌ ಆ್ಯಂಡ್‌ ಫä್ಯರಿ ಹೆಸರಿನ ತುಕಡಿ ಯುದ್ಧಕ್ಕೆ ಸಜ್ಜು| ಚಳಿ, ಬೆಟ್ಟಗುಡ್ಡ ಪ್ರದೇಶದಲ್ಲೂ ಕಾರ್ಯನಿರ್ವಹಿಸುವ ಸಾಮರ್ಥ್ಯ ಇದಕ್ಕೆ

ನವದೆಹಲಿ(ಸೆ.28): ಕಳೆದ 5 ತಿಂಗಳನಿಂದ ಲಡಾಖ್‌ ಗಡಿಯಲ್ಲಿ ನಿರಂತರ ತಂಟೆ ಮಾಡುತ್ತಿರುವ ಚೀನಾ ಈ ಸಂಘರ್ಷವನ್ನು ಮುಂದಿನ ಚಳಿಗಾಲಕ್ಕೂ ವಿಸ್ತರಿಸುವ ಸುಳಿವು ನೀಡಿರುವ ಹಿನ್ನೆಲೆಯಲ್ಲಿ, ಭಾರತೀಯ ಸೇನೆ ಅದಕ್ಕೆ ತಕ್ಕ ಸಿದ್ಧತೆಗಳನ್ನು ಮಾಡಿಕೊಂಡಿದೆ. ಪೂರ್ವ ಲಡಾಖ್‌ನಲ್ಲಿ ಅಕ್ಟೋಬರ್‌ನಿಂದ ಜನವರಿ ತಿಂಗಳವರೆಗೆ ತಾಪಮಾನ ಮೈನಸ್‌ 5ರಿಂದ ಮೈನಸ್‌ 25 ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪಲಿದ್ದು, ಆ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸುವ ಟಿ 90, ಟಿ 72 ಯುದ್ಧ ಟ್ಯಾಂಕ್‌ ಮತ್ತು ವಾಹನಗಳನ್ನು ವ್ಯೂಹಾತ್ಮಕ ಸ್ಥಳಗಳಿಗೆ ನಿಯೋಜಿಸುವ ಮೂಲಕ ಚೀನಾಕ್ಕೆ ತಿರುಗೇಟು ನೀಡಿದೆ. ಇವು ಮೈನಸ್‌ 40 ಡಿ.ಸೆ.ನಲ್ಲೂ ಯಾವುದೇ ತೊಂದರೆ ಇಲ್ಲದೆ ಕಾರ್ಯನಿರ್ವಹಿಸುವ ಕ್ಷಮತೆ ಹೊಂದಿವೆ. ಪೂರ್ವ ಲಡಾಖ್‌ನಲ್ಲಿ ವಿಶ್ವದ ಅತ್ಯಾಧುನಿಕ ಯುದ್ಧ ಟ್ಯಾಂಕ್‌ಗಳು ನಿಯೋಜನೆಗೊಂಡಿರುವ ವಿಡಿಯೋಗಳನ್ನು ಸ್ವತಃ ಭಾರತೀಯ ಸೇನೆಯೇ ಬಿಡುಗಡೆ ಮಾಡಿದೆ.

ಸಮುದ್ರ ಮಟ್ಟದಿಂದ 14500 ಅಡಿ ಮೇಲಿರುವ ಚುಮರ್‌ ಹಾಗೂ ಡೆಮ್‌ಚೋಕ್‌ ಪ್ರದೇಶದಲ್ಲಿ ಟಿ-90 ಮತ್ತು ರಷ್ಯಾ ನಿರ್ಮಿತ ಬಿಎಂಪಿ ಯುದ್ಧ ಟ್ಯಾಂಕ್‌ಗಳ ಸಾಲುಸಾಲನ್ನೇ ಭಾರತೀಯ ಸೇನೆ ನಿಯೋಜಿಸಿದೆ. ಇದು ಬಹುಶಃ ಜಗತ್ತಿನಲ್ಲೇ ಇಷ್ಟುಎತ್ತರದ ಪ್ರದೇಶದಲ್ಲಿ ಯುದ್ಧ ಟ್ಯಾಂಕ್‌ಗಳನ್ನು ನಿಯೋಜಿಸಿದ ಮೊದಲ ಘಟನೆಯಾಗಿದೆ ಎಂದು ಹೇಳಲಾಗಿದೆ.

ಅತ್ಯಂತ ತೀಕ್ಷ$್ಣ ವಾತಾವರಣದಲ್ಲಿ ಕಾರ್ಯನಿರ್ವಹಿಸುವ ಯುದ್ಧ ಟ್ಯಾಂಕ್‌ಗಳ ಜೊತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಇಂಧನ, ಆಹಾರ, ಟೆಂಟರ್‌, ಸಂಪರ್ಕ ಸಾಧನಗಳು, ಹೀಟರ್‌ ಮತ್ತು ಚಳಿಗಾಲದಲ್ಲಿ ಅತ್ಯಗತ್ಯವಾದ ಬಹುತೇಕ ಎಲ್ಲಾ ಸಾಮಗ್ರಿಗಳನ್ನು ಭಾರತೀಯ ಸೇನೆ ಈಗಾಗಲೇ ಆಯಕಟ್ಟಿನ ಸ್ಥಳಗಳಿಗೆ ರವಾನಿಸಿದೆ. ಇದಕ್ಕಾಗಿ ಹೆಲಿಕಾಪ್ಟರ್‌, ಸಿ- 130 ಜೆ ಸೂಪರ್‌ ಹಕ್ರ್ಯುಲಸ್‌, ಸಿ-17 ಗ್ಲೋಬಲ್‌ ಮಾಸ್ಟರ್‌ ಸರಕು ವಿಮಾನ ಸೇರಿದಂತೆ ವಾಯುಪಡೆಯ ಎಲ್ಲಾ ಸರಕು ಸಾಗಣೆ ವಿಮಾನಗಳನ್ನು ಬಳಸಿಕೊಳ್ಳಲಾಗಿದೆ. ಸ್ವತಃ ಸೇನಾ ಮುಖ್ಯಸ್ಥ ಎಂ.ಎಂ.ನರವಣೆ ಮತ್ತು ಹಿರಿಯ ಕಮಾಂಡರ್‌ಗಳ ಯೋಜನೆ ಮತ್ತು ಸಲಹೆ ಅನ್ವಯ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಾರ್ಯಾಚರಣೆ ಕಳೆದೊಂದು ದಶಕಗಳಲ್ಲೇ ಮೊದಲು ಎನ್ನಲಾಗಿದೆ.

ಆ.29 ಮತ್ತು 30ರ ಮಧ್ಯರಾತ್ರಿ ಇಲ್ಲಿನ ನೈಜ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿಗೆ ಚೀನಾ ತನ್ನ ಯುದ್ಧ ಟ್ಯಾಂಕ್‌ ಹಾಗೂ ಸಶಸ್ತ್ರ ಯೋಧರನ್ನು ಕಳುಹಿಸಿ ತಂಟೆ ಮಾಡಿತ್ತು. ರಾತ್ರಿ ವೇಳೆ ಮಿಲಿಟರಿ ಚಟುವಟಿಕೆಗಳನ್ನು ನಡೆಸಬಾರದು ಎಂಬ ಒಪ್ಪಂದವಿದ್ದರೂ ಚೀನಾ ಅದನ್ನು ಉಲ್ಲಂಘಿಸಿತ್ತು. ಆ.31ರಂದು ಎರಡೂ ದೇಶಗಳ ನಡುವೆ ಶಾಂತಿ ಮಾತುಕತೆ ನಡೆಯುತ್ತಿದ್ದಾಗಲೂ ಚೀನಾ ತನ್ನ ಸೇನಾ ಜಮಾವಣೆ ಮುಂದುವರೆಸಿತ್ತು. ಹೀಗಾಗಿ ಭಾರತೀಯ ಸೇನೆ ಕೂಡ ಇಡೀ ಪ್ರದೇಶದಲ್ಲಿ ತನ್ನ ಸೇನಾ ಉಪಸ್ಥಿತಿಯನ್ನು ಹೆಚ್ಚಿಸಲು ನಿರ್ಧರಿಸಿದೆ.

‘ಇಂತಹ ಕಡಿದಾದ ಪ್ರದೇಶದಲ್ಲಿ ಜಗತ್ತಿನಲ್ಲೇ ಮೊದಲ ಬಾರಿ ನಿಯೋಜನೆಯಾಗಿರುವ ಸೇನಾ ತುಕಡಿ ಫೈರ್‌ ಆ್ಯಂಡ್‌ ಫä್ಯರಿ ಕೋರ್‌ ಆಗಿದೆ. ಯುದ್ಧ ಟ್ಯಾಂಕ್‌ಗಳ ನಿರ್ವಹಣೆ, ಯೋಧರನ್ನು ಸಾಗಿಸುವ ವಾಹನಗಳ ಸಂಚಾರ ಮತ್ತು ಭಾರಿ ಗಾತ್ರದ ಗನ್‌ಗಳನ್ನು ಕೊಂಡೊಯ್ಯುವುದು ಇಲ್ಲಿ ಸವಾಲಿನ ಕೆಲಸ. ಬಿಎಂಪಿ ಟ್ಯಾಂಕ್‌ಗಳು ಮೈನಸ್‌ 40 ಡಿಗ್ರಿ ಸೆ. ಉಷ್ಣತೆಯಲ್ಲೂ ಕಾರ್ಯನಿರ್ವಹಿಸುತ್ತವೆ’ ಎಂದು 14 ಕೋರ್‌ನ ಚೀಫ್‌ ಆಫ್‌ ಸ್ಟಾಫ್‌ ಮೇಜರ್‌ ಜನರಲ್‌ ಅರವಿಂದ್‌ ಕಪೂರ್‌ ತಿಳಿಸಿದ್ದಾರೆ.

click me!