Global Hunger Index 2022: ಪಾಕ್‌, ಶ್ರೀಲಂಕಾಕ್ಕಿಂತ ಕಳಪೆ, 107ನೇ ಸ್ಥಾನಕ್ಕೆ ಕುಸಿದ ಭಾರತ!

By Santosh NaikFirst Published Oct 15, 2022, 12:39 PM IST
Highlights

121 ರಾಷ್ಟ್ರಗಳ ಜಾಗತಿಕ ಹಸಿವು ಸೂಚ್ಯಂಕದ 2022ರ ಪಟ್ಟಿಯಲ್ಲಿ ಭಾರತ ಆರು ಸ್ಥಾನ ಕುಸಿತ ಕಂಡಿದ್ದು, ನೆರೆಯ ರಾಷ್ಟ್ರಗಳಾದ ನೇಪಾಳ, ಪಾಕಿಸ್ತಾನ, ಶ್ರೀಲಂಕಾ ಹಾಗೂ ಬಾಂಗ್ಲಾದೇಶಕ್ಕಿಂತ ಕಳಪೆ ಸಾಧನೆ ಮಾಡಿದೆ. ಇದರೊಂದಿಗೆ ವಿರೋಧ ಪಕ್ಷಗಳಿಗೆ ಸರ್ಕಾರವನ್ನು ಟೀಕಿಸಲು ಮತ್ತೊಂದು ದೊಡ್ಡ ಅಸ್ತ್ರ ಸಿಕ್ಕಂತಾಗಿದೆ.
 

ನವದೆಹಲಿ (ಅ.15): 2022ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ ಕಳಪೆ ಸಾಧನೆ ಮಾಡಿದೆ. 121 ರಾಷ್ಟ್ರಗಳ ಪಟ್ಟಿಯಲ್ಲಿ 2021ರಲ್ಲಿ 101ನೇ ಸ್ಥಾನದಲ್ಲಿದ್ದ ಭಾರತ, ಈ ಬಾರಿ 6 ಸ್ಥಾನ ಕುಸಿತ ಕಂಡಿದ್ದು 107ನೇ ಸ್ಥಾನ ತಲುಪಿದೆ. ಇದರ ಬೆನ್ನಲ್ಲಿಯೇ ವಿರೋಧ ಪಕ್ಷಗಳು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕೆ ಮಾಡಲು ಆರಂಭಿಸಿದೆ. ಜಿಎಚ್‌ಐ,  ಕನ್ಸರ್ನ್ ವರ್ಲ್ಡ್‌ವೈಡ್ ಮತ್ತು ವೆಲ್ತುಂಗರ್‌ಹೈಲ್ಫ್ ಜಂಟಿಯಾಗಿ ಈ ಸೂಚ್ಯಂಕವನ್ನು ಪ್ರತಿ ವರ್ಷ ಪ್ರಕಟಿಸುತ್ತದೆ. ಇವುಗಳು ಜಾಗತಿಕ, ಪ್ರಾದೇಶಿಕ ಹಾಗೂ ದೇಶಿಯ ಮಟ್ಟದಲ್ಲಿ ಹಸಿವಿನ ಸೂಚ್ಯಂಕವನ್ನು ನೀಡುತ್ತದೆ. 121 ರಾಷ್ಟ್ರಗಳ ಜಿಎಚ್‌ಐ ಪಟ್ಟಿಯಲ್ಲಿ ಭಾರತವು, ನೇಪಾಳ (81), ಪಾಕಿಸ್ತಾನ (99), ಶ್ರೀಲಂಕಾ (64) ಹಾಗೂ ಬಾಂಗ್ಲಾದೇಶ (84) ರಾಷ್ಟ್ರಗಳಿಂತ ಕಳಪೆ ಸಾಧನೆ ಮಾಡಿದೆ. ದೇಶಗಳನ್ನು 'ತೀವ್ರತೆ'ಯಿಂದ ಪಟ್ಟಿ ಮಾಡುವ ಜಿಎಚ್‌ಐ, ಭಾರತಕ್ಕೆ 29.1 ಅಂಕವನ್ನು ನೀಡಿದೆ, ಇದು ಹಸಿವಿನ ಮಟ್ಟದಲ್ಲಿ 'ಗಂಭೀರ' ವಿಭಾಗದಲ್ಲಿ ಬರುತ್ತದೆ. 121 ರಾಷ್ಟ್ರಗಳ ಪಟ್ಟಿಯಲ್ಲಿ ಯೆಮೆನ್‌ ದೇಶ ಅತ್ಯಂತ ಕೆಳ ಸ್ಥಾನದಲ್ಲಿದ್ದರೆ, 17 ದೇಶಗಳು ಜಂಟಿಯಾಗಿ ಅಗ್ರಸ್ಥಾನದಲ್ಲಿವೆ. ಯಾಕೆಂದರೆ, ಈ ದೇಶಗಳ ಗಂಭೀರತೆಯ ಸ್ಕೋರಿಂಗ್‌ನ ವ್ಯತ್ಯಾಸ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ.

ಚೀನಾ ಹಾಗೂ ಕುವೈತ್‌ ಏಷ್ಯನ್‌ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಯುರೋಪಿಯನ್‌ ರಾಷ್ಟ್ರಗಳ ಪಟ್ಟಿಯಲ್ಲಿ ಕ್ರೊವೇಷಿಯಾ, ಈಸ್ಟೋನಿಯಾ ಹಾಗೂ ಮಾಂಟೆನೆಗ್ರೋ ದೇಶಗಳು ಅಗ್ರಸ್ಥಾನದಲ್ಲಿವೆ. ಜಿಎಚ್‌ಐ (GHI) ಸ್ಕೋರ್ ಅನ್ನು ನಾಲ್ಕು ಸೂಚಕಗಳ ಮೇಲೆ ಲೆಕ್ಕಹಾಕಲಾಗುತ್ತದೆ. ಅಪೌಷ್ಟಿಕತೆ (undernourishment), ಮಗುವಿನ ಕುಬ್ಜತೆ (ತಮ್ಮ ಎತ್ತರಕ್ಕೆ ಕಡಿಮೆ ತೂಕ ಹೊಂದಿರುವ ಐದು ವರ್ಷದೊಳಗಿನ ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆಯನ್ನು ಪ್ರತಿಬಿಂಬಿಸುತ್ತದೆ); ಮಕ್ಕಳ ಕುಂಠಿತ (5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ತಮ್ಮ ವಯಸ್ಸಿಗೆ ಕಡಿಮೆ ಎತ್ತರವನ್ನು ಹೊಂದಿರುವ, ದೀರ್ಘಕಾಲದ ಅಪೌಷ್ಟಿಕತೆಯನ್ನು ಪ್ರತಿಬಿಂಬಿಸುತ್ತದೆ); ಮತ್ತು ಮಕ್ಕಳ ಮರಣ (ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ) ಆಧಾರದಲ್ಲಿ ಲೆಕ್ಕ ಮಾಡಲಾಗುತ್ತದೆ. ವಿಧಾನದ ಪ್ರಕಾರ, 9.9 ಕ್ಕಿಂತ ಕಡಿಮೆ ಅಂಕವನ್ನು 'ಕಡಿಮೆ' ಎಂದು ಪರಿಗಣಿಸಲಾಗುತ್ತದೆ, 10-19.9 'ಮಧ್ಯಮ', 20-34.9 'ಗಂಭೀರ', 35-49.9 'ಆತಂಕಕಾರಿ' ಮತ್ತು 50 ಕ್ಕಿಂತ ಹೆಚ್ಚು 'ಅತ್ಯಂತ ಆತಂಕಕಾರಿ' ಎಂದು ಪರಿಗಣಿಸಲಾಗುತ್ತದೆ.

ಭಾರತವು (India) ಇತ್ತೀಚಿನ ವರ್ಷಗಳಲ್ಲಿ ಜಿಎಚ್‌ಐನಲ್ಲಿ ಕಡಿಮೆ ಸ್ಕೋರ್‌ ಮಾಡುತ್ತಿದೆ. 2000 ಇಸವಿಯಲ್ಲಿ ಈ ಸೂಚ್ಯಂಕದಲ್ಲಿ ಭಾರತ 38.8ರ ಆತಂಕಕಾರಿ ಸ್ಕೋರ್‌ ಅನ್ನು ದಾಖಲಿಸಿತ್ತು.  2014ರ ವೇಳೆಗೆ 28.2ಕ್ಕೆ ಕಡಿಮೆಯಾಗಿತ್ತು. ಆದರೆ, ಆ ಬಳಿಕ ದೇಶ ಜಿಎಚ್‌ಐನಲ್ಲಿ ಪ್ರಮಾಣವನ್ನು ಇಳಿಸುವಲ್ಲಿ ವಿಫಲವಾಗಿದೆ.

ಜಾಗತಿಕ ಹಸಿವಿನ ಸೂಚ್ಯಂಕ್ಯ ವರದಿ ಅವೈಜ್ಞಾನಿಕ, ಸಂಶೋಧನೆ ಆಘಾತಕಾರಿ ಎಂದ ಭಾರತ!

ಭಾರತವು ನಾಲ್ಕು ಸೂಚಕಗಳಿಗೆ (2000, 2007, 2014 ಹಾಗೂ 2022)ಸ್ಥಿರವಾಗಿ ಕಡಿಮೆ ಮೌಲ್ಯಗಳನ್ನು ದಾಖಲಿಸುತ್ತಿತ್ತು. ಆ ಪ್ರಮಾಣಕ್ಕೆ ಹೋಲಿಸಿದರೆ, 2014 ರಿಂದ ಅಪೌಷ್ಟಿಕತೆ ಮತ್ತು ಮಕ್ಕಳಲ್ಲಿ ಕ್ಷೀಣಿಸುವಿಕೆಯ ಪ್ರಮಾಣ  ಏರಲು ಪ್ರಾರಂಭವಾಗಿದೆ. ಜನಸಂಖ್ಯೆಯಲ್ಲಿನ ಅಪೌಷ್ಟಿಕತೆಯ ಪ್ರಮಾಣವು 2014 ರಲ್ಲಿ 14.8 ರಿಂದ 2022 ರಲ್ಲಿ 16.3 ಕ್ಕೆ ಏರಿದೆ ಮತ್ತು ಐದು ವರ್ಷದೊಳಗಿನ ಮಕ್ಕಳಲ್ಲಿ ಕ್ಷೀಣಿಸುವಿಕೆಯ ಪ್ರಮಾಣವು 2014 ರಲ್ಲಿ 15.1 ರಿಂದ 2022 ರಲ್ಲಿ 19.3 ಕ್ಕೆ ಏರಿದೆ. ಭಾರತವು ಇತರ ಎರಡು ಸೂಚಕಗಳಲ್ಲಿ ಸುಧಾರಣೆಯನ್ನು ಕಂಡಿದೆ. ಐದು ವರ್ಷದೊಳಗಿನ ಮಕ್ಕಳಲ್ಲಿ ಕುಬ್ಜತನ 2014 ರಲ್ಲಿ 38.7 ರಿಂದ 2022 ರಲ್ಲಿ 35.5 ಕ್ಕೆ ಮತ್ತು ಐದು ವರ್ಷದೊಳಗಿನ ಮರಣವು 2014 ರಲ್ಲಿ 4.6 ರಿಂದ 2022 ರಲ್ಲಿ 3.3 ಕ್ಕೆ ಕಡಿಮೆಯಾಗಿದೆ.

ಹಸಿವಿನ ಸೂಚ್ಯಂಕ: ಭಾರತದಲ್ಲಿ ಪಾಕ್‌ಗಿಂತಲೂ ಕೆಟ್ಟ ಸ್ಥಿತಿ..! ಕಂಗ್ರಾಟ್ಸ್ ಮೋದಿ ಜೀ ಎಂದ ಸಿಬಲ್

ವಿರೋಧ ಪಕ್ಷಗಳ ಟೀಕೆ: 2022ರ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ(Global Hunger Index)  ಸೂಡಾನ್‌, ರವಾಂಡ, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ, ಪಾಕಿಸ್ತಾನ ದೇಶಗಳು ಭಾರತಕ್ಕಿಂತ ಉತ್ತಮ ಸ್ಥಾನದಲ್ಲಿದೆ. ಭಾರತ 121 ರಾಷ್ಟ್ರಗಳ ಪಟ್ಟಿಯಲ್ಲಿ 107ನೇ ಸ್ಥಾನದಲ್ಲಿದೆ. ನಾಚಿಕೆಗೇಡು..! ಈ ಬಿಜೆಪಿಯವರು ಉಳಿದ ದೇಶ ಮತ್ತು ಆಸ್ತಿಯನ್ನು ತಮ್ಮ ಬಂಡವಾಳಶಾಹಿ ಸ್ನೇಹಿತರಿಗೆ ಮಾರುತ್ತಾರೆ ಎಂದು ಲಾಲೂ ಪ್ರಸಾದ್‌ ಯಾದವ್‌ ಟ್ವೀಟ್‌ ಮಾಡಿದ್ದಾರೆ. ಅಪೌಷ್ಟಿಕತೆ, ಹಸಿವು ಮತ್ತು ಮಕ್ಕಳಲ್ಲಿ ಬೆಳವಣಿಗೆ ಕುಂಠಿತ ಮತ್ತು ಕುಬ್ಜತನದಂಥ ನೈಜ ಸಮಸ್ಯೆಗಳನ್ನು ಮಾನ್ಯ ಪ್ರಧಾನ ಮಂತ್ರಿಗಳು ಯಾವಾಗ ಪರಿಹರಿಸುತ್ತಾರೆ? ಭಾರತದಲ್ಲಿ 22.4 ಕೋಟಿ ಜನರನ್ನು ಅಪೌಷ್ಟಿಕತೆ ಎಂದು ಪರಿಗಣಿಸಲಾಗಿದೆ. ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು 121 ರಾಷ್ಟ್ರಗಳಲ್ಲಿ 107 ಸ್ಥಾನದಲ್ಲಿದೆ ಎಂದು ಪಿ.ಚಿದಂಬರಂ ಟ್ವೀಟ್‌ ಮಾಡಿದ್ದಾರೆ.

ಸಿಸೋಡಿಯಾ ಆಕ್ರೋಶ: ಹಸಿವು ಸೂಚ್ಯಂಕದ ವರದಿ ಬೆನ್ನಲ್ಲಿಯೇ ದೆಹಲಿಯ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ (Delhi's Deputy Chief Minister Manish Sisodia ) ಕೇಂದ್ರವನ್ನು ಕಟು ಶಬ್ದಗಳಲ್ಲಿ ಟೀಕಿಸಿದ್ದಾರೆ. ಬಿಜೆಪಿ ಭಾರತವನ್ನು ಐದು ಟ್ರಿಲಿಯನ್‌ ಆರ್ಥಿಕತೆಯನ್ನಾಗಿ ಮಾಡುವ ಭಾಷಣ ಬಿಗಿಯುತ್ತದೆ. ಆದರೆ, ದಿನಕ್ಕೆ ಎರಡು ಹೊತ್ತು ಊಟ ನೀಡುವ ವಿಚಾರದಲ್ಲಿ ನಮಗಿಂತ ವಿಶ್ವದ 106 ರಾಷ್ಟ್ರಗಳು ಉತ್ತಮವಾಗಿದೆ. ಭಾರತದ ಪ್ರತಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡದ ಹೊರತಾಗಿ ಭಾರತ ನಂ.1 ಆಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

click me!