5 ವರ್ಷ MSP ಅಡಿಯಲ್ಲಿ ಬೆಳೆ ಖರೀದಿ ಪ್ರಸ್ತಾಪ ತಿರಸ್ಕರಿಸಿದ ರೈತರು, 4ನೇ ಸುತ್ತಿನ ಮಾತುಕತೆ ವಿಫಲ!

By Suvarna NewsFirst Published Feb 19, 2024, 10:00 PM IST
Highlights

ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ನೆಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಪ್ರತಿಭಟನಾ ನಿರತ ರೈತರ ಜೊತೆ ಕೇಂದ್ರ ಸರ್ಕಾರದ ನಡೆಸಿದ 4ನೇ ಸುತ್ತಿನ ಮಾತುಕತೆ ವಿಫಲವಾಗಿದೆ. ಕೇಂದ್ರ ಸರ್ಕಾರ ಮುಂದಿಟ್ಟ 5 ವರ್ಷ ಖರೀದಿ ಒಪ್ಪಂದವನ್ನು ರೈತರು ತಿರಸ್ಕರಿಸಿದ್ದಾರೆ.

ದೆಹಲಿ(ಫೆ.19) ವಿವಿಧ ಬೇಡಿಕೆಗಳ ಆಗ್ರಹಿಸಿ ರೈತರು ನಡೆಸುತ್ತಿರುವ ಅತೀ ದೊಡ್ಡ ಪ್ರತಿಭಟನೆ ಸದ್ಯಕ್ಕೆ ಅಂತ್ಯಗೊಳ್ಳುವ ಲಕ್ಷಣಗಳು ಗೋಚರಿಸುತ್ತಿಲ್ಲ. ದಿನದಿಂದ ದಿನಕ್ಕೆ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇತ್ತ ಕೇಂದ್ರ ಸರ್ಕಾರ ರೈತರ ಜೊತೆ ನಡೆಸುತ್ತಿರುವ ಮಾತುಕತೆ ಫಲಪ್ರದವಾಗುತ್ತಿಲ್ಲ. ಇದೀಗ 4ನೇ ಸುತ್ತಿನ ಮಾತುಕತೆಯಲ್ಲಿ ಕೇಂದ್ರ ಸರ್ಕಾರ ಕೆಲ ಪ್ರಮುಖ ವಿಚಾರಗಳನ್ನು ಪ್ರಸ್ತಾಪ ಮಾಡಿತ್ತು. ಈ ಪೈಕಿ 5 ವರ್ಷಗಳ ಕಾಲ ರೈತರಿಂದ ಯಾವುದೇ ಮೀತಿ ಇಲ್ಲದೆ ಬೆಳೆಗಳನ್ನು ಖರೀದಿಸುವ ಒಪ್ಪಂದ ಸೂತ್ರವನ್ನು ಮುಂದಿಟ್ಟಿತ್ತು. ಆದರೆ ಕೇಂದ್ರ ಸರ್ಕಾರದ ಈ ಒಪ್ಪಂದವನ್ನು ಪ್ರತಿಭಟನಾ ನಿರತರ ರೈತರು ತಿರಸ್ಕರಿಸಿದ್ದಾರೆ.

ಸಂಯುಕ್ತ ಕಿಸಾನ್ ಮೋರ್ಚಾ ಸೇರಿದಂತೆ ಇತರ ಸಂಘಟನೆಗಳು ಕೇಂದ್ರ ಸರ್ಕಾರದ ಪ್ರತಿನಿಧಿಗಳ ಜೊತೆ ಮಾತುಕತೆ ನಡೆಸಿತ್ತು. ಕೇಂದ್ರ ಸಚಿವ ಪಿಯೂಷ್ ಗೊಯೆಲ್, ಕೃಷಿ ಸಚಿವ ಅರ್ಜುನ್ ಮುಂಡಾ, ರಾಜ್ಯ ಖಾತೆ ಸಚಿವ ನಿತ್ಯಾನಂದ ರೈ ಸೇರಿದ ಕೇಂದ್ರ ತಂಡದ ಮಾತುಕತೆ ವೇಳೆ ರೈತರಿಂದ 5 ವರ್ಷ ಕನಿಷ್ಠ ಬೆಂಬಲ ಬೆಲೆ ಅಡಿ ಬೆಳೆ ಖರೀದಿಗೆ ಒಪ್ಪಂದ ಪ್ರಸ್ತಾಪ ಮಂದಿಟ್ಟಿತು. ಆದರೆ ಈ ಒಪ್ಪಂದವನ್ನು ರೈತರು ತಿರಸ್ಕರಿಸಿದ್ದಾರೆ.

Farmers Protest in Delhi: ಡ್ರೋನ್ ಮೇಲೆ ಟೆನಿಸ್ ಬಾಲ್ ದಾಳಿ: ಪೊಲೀಸರ ತಂತ್ರಗಳಿಗೆ ಅನ್ನದಾತರ ಪ್ರತಿತಂತ್ರ..!

ಬಿಜೆಪಿ 2014ರ ಪ್ರಣಾಳಿಕೆಯಲ್ಲಿ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಕುರಿತು ಘೋಷಿಸಿತ್ತು. ಆದರೆ ಅಧಿಕಾರಕ್ಕೆ ಬಂದ ಬಳಿಕ ತನ್ನ ಭರವಸೆಯನ್ನು ಮರೆತಿದೆ. ಇದೀಗ 5 ವರ್ಷಗಳ ಒಪ್ಪಂದ ರೈತರ ಮೂಲ ಉದ್ದೇಶವನ್ನೇ ಮರೆಮಾಚುವಂತಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿದೆ. ರೈತರ ಬೇಡಿಕೆ ಇರುವುದು ಸ್ವಾಮಿನಾಥನ್ ಆಯೋಗ ಮುಂದಿಟ್ಟಿರುವ C2+50% MSP ಸೂತ್ರದ ಆಧಾರದಲ್ಲಿದೆ. ಆದರೆ ಸದ್ಯA2+FL+50% ವಿಧಾನ ಅಸ್ತಿತ್ವದಲ್ಲಿದೆ. ಇಷ್ಟೇ ಅಲ್ಲ ನಾಲ್ಕು ಸುತ್ತಿನ ಮಾತುಕತೆಯಲ್ಲಿ ಕೇಂದ್ರ ಸರ್ಕಾರದ ಪಾರದರ್ಶಕತೆ ಕೊರತೆ ಕಾಣುತ್ತಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಆರೋಪಿಸಿದೆ. 

ಬೇಳೆಕಾಳುಗಳು, ಜೋಳ ಹಾಗೂ ಹತ್ತಿ ಬೆಳೆಯುವ ರೈತರಿಂದ ಯಾವುದೇ ಮಿತಿ ಇಲ್ಲದೆ ಮುಂದಿನ ಐದು ವರ್ಷಗಳ ಕಾಲ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಯಡಿ ಖರೀದಿಸುವುದಕ್ಕೆ ಗ್ಯಾರಂಟಿ ಕೊಡುವ ಪ್ರಸ್ತಾಪಕ್ಕೆ ಪಂಜಾಬ್ ಹಾಗೂ ಹರ್ಯಾಣ ಭಾಗದ ರೈತರಿಂದಲೂ ಅಸಮಾಧಾನ ವ್ಯಕ್ತವಾಗಿದೆ. ಕಾರಣ, ಪಂಜಾಬ್‌- ಹರ್ಯಾಣದಲ್ಲಿ ಬೇಳೆಕಾಳು, ಜೋಳ ಬೆಳೆಯುವ ರೈತರ ಪ್ರಮಾಣ ಕಡಿಮೆ ಇದೆ. ಐದು ವರ್ಷಗಳ ಕಾಲ ಕನಿಷ್ಠ ಬೆಂಬಲ ಬೆಲೆ ಖಾತ್ರಿ ನೀಡಿದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ ಎಂಬುದು ರೈತರ ಅಭಿಮತ.

ದೇಶದಲ್ಲಿ 23 ಬೆಳೆಗಳನ್ನು ಕೇಂದ್ರ ಸರ್ಕಾರ ಬೆಂಬಲ ಬೆಲೆಯಡಿ ಖರೀದಿ ಮಾಡುತ್ತದೆ. ಆದರೆ ಈಗ ಐದಾರು ಬೆಳೆಗಳನ್ನು ಮಾತ್ರ ಐದು ವರ್ಷ ಕನಿಷ್ಠ ಬೆಂಬಲ ಬೆಲೆಯಡಿ ಖರೀದಿಸುವ ಸಂಬಂಧ ರೈತರ ಜತೆ ಒಪ್ಪಂದ ಮಾಡಿಕೊಳ್ಳುವ ಪ್ರಸ್ತಾವವನ್ನು ಇಟ್ಟಿದೆ. ಇದರ ಹಿಂದೆ ಬೇರೆಯದೇ ಕಾರಣ ಇದೆ ಎಂದು ಹೇಳಲಾಗುತ್ತಿದೆ.

ರಾಮಮಂದಿರದಿಂದ ಏರಿದ ಮೋದಿ ಗ್ರಾಫ್ ಕೆಳಕ್ಕಿಳಿಸಲು ಪ್ರತಿಭಟನೆ, ರೈತ ನಾಯಕನ ವೈರಲ್ ವಿಡಿಯೋ!

ಪಂಜಾಬ್‌ನಲ್ಲಿ ಹೆಚ್ಚಾಗಿ ಭತ್ತ ಬೆಳೆಯಲಾಗುತ್ತದೆ. ಇದಕ್ಕಾಗಿ ಮಿತಿಮೀರಿದ ಪ್ರಮಾಣದಲ್ಲಿ ಅಂತರ್ಜಲ ಬಳಕೆಯಾಗಿ, ಅದರ ಮಟ್ಟ ಕುಸಿಯುತ್ತಿದೆ. ಅಂತರ್ಜಲ ಕುಸಿದ ಜಮೀನುಗಳು ಬರಡಾಗಿವೆ. ಭತ್ತದ ಫಸಲು ಕಟಾವು ಮುಗಿದ ಬಳಿಕ ಕೂಳೆಗೆ ಬೆಂಕಿ ಹಚ್ಚುವುದರಿಂದ ದೆಹಲಿಯಲ್ಲಿ ಪ್ರತಿ ವರ್ಷ ವಾಯುಮಾಲಿನ್ಯ ಉಂಟಾಗುತ್ತಿದೆ. ಹೀಗಾಗಿ ಪಂಜಾಬ್‌- ಹರ್ಯಾಣ ರೈತರು ಭತ್ತ, ಗೋಧಿ ಬದಲು ಬೇಳೆಕಾಳುಗಳನ್ನು ಬೆಳೆಯುವುದಕ್ಕೆ ಪ್ರೋತ್ಸಾಹ ನೀಡಲು ಸರ್ಕಾರ ಹೊರಟಿದೆ.

ಈ ಬೆಳೆ ವೈವಿಧ್ಯತೆಯಿಂದ ದೇಶದಲ್ಲಿ ಬೇಳೆಕಾಳುಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗಲಿವೆ. ಜೋಳದ ಉತ್ಪಾದನೆಯೂ ಹೆಚ್ಚಾದರೆ ಎಥನಾಲ್‌ ಬಳಕೆಗೆ ಅನುಕೂಲವಾಗುವುದು ಕೇಂದ್ರ ಸರ್ಕಾರದ ಚಿಂತನೆಯಾಗಿದೆ. ಇದಕ್ಕೆ ರೈತರು ಒಪ್ಪುತ್ತಾರಾ ಎಂಬುದು ಮಂಗಳವಾರ ತಿಳಿಯಲಿದೆ.
 

click me!