146 ಜಿಲ್ಲೆಗಳಲ್ಲಿ 7 ದಿನಗಳಿಂದ ಒಂದೂ ಶೂನ್ಯ ಕೊರೋನಾ ಪ್ರಕರಣ

By Kannadaprabha NewsFirst Published Jan 29, 2021, 8:57 AM IST
Highlights

ಭಾರತದಲ್ಲಿ ಕೊರೋನಾ ವೈರಸ್ ಪಾಸಿಟಿವ್ ಪ್ರಕರಣಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿವೆ. ಪಾಸಿಟಿವ್ ದರ ಭಾರಿ ಇಳಿಮುಖವಾಗಿದೆ.  ಹಲವೆಡೆ ಶೂನ್ಯವಾಗುತ್ತಿದೆ. 

ನವದೆಹಲಿ (ಜ.29): ಕಳೆದ 1 ವರ್ಷದಿಂದ ಪೀಡಿಸುತ್ತಿರುವ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುತ್ತಿರುವ ಮಹತ್ವದ ಅಂಕಿ ಅಂಶಗಳನ್ನು ಕೇಂದ್ರ ಸರ್ಕಾರ ಗುರುವಾರ ಪ್ರಕಟಿಸಿದೆ. ‘ಹೊಸ ಕೊರೋನಾ ಪ್ರಕರಣಗಳ ಏರಿಕೆಯ ಗತಿಯ ಮೇಲೆ ನಿಯಂತ್ರಣ ಹೇರುವಲ್ಲಿ ಭಾರತ ಯಶಸ್ವಿಯಾಗಿದೆ. ದೇಶದ 146 ಜಿಲ್ಲೆಗಳಲ್ಲಿ ಕಳೆದ 7 ದಿನಗಳಿಂದ ಒಂದೇ ಒಂದು ಹೊಸ ಪ್ರಕರಣ ದಾಖಲಾಗಿಲ್ಲ. ಇದು ಸೋಂಕಿನ ವಿರುದ್ಧದ ಹೋರಾಟದಲ್ಲಿ ದೇಶ ಮಹತ್ವದ ಮುನ್ನಡೆ ಸಾಧಿಸಿರುವ ಸ್ಪಷ್ಟಸೂಚನೆ’ ಎಂದು ಸರ್ಕಾರ ಹೇಳಿದೆ.

ಅದೇ ರೀತಿ, 18 ಜಿಲ್ಲೆಗಳಲ್ಲಿ ಕಳೆದ 14 ದಿನಗಳಿಂದ, 6 ಜಿಲ್ಲೆಗಳಲ್ಲಿ ಕಳೆದ 21 ದಿನಗಳಿಂದ ಮತ್ತು 21 ಜಿಲ್ಲೆಯಲ್ಲಿ ಕಳೆದ 28 ದಿನಗಳಿಂದ ಒಂದೂ ಹೊಸ ಕೊರೋನಾ ಸೋಂಕು ದೃಢಪಟ್ಟಿಲ್ಲ. ಸಾವಿನ ಪ್ರಮಾಣವೂ ಶೇ.3.4ರಿಂದ 1.4ಕ್ಕೆ ಇಳಿದಿದೆ ಎಂಬ ಮಾಹಿತಿ ನೀಡಿದೆ.

ಬೆಂಗಳೂರು: 10 ದಿನದಲ್ಲಿ 46000 ಮಂದಿಗೆ ಕೊರೋನಾ ಲಸಿಕೆ ..

ಕೋವಿಡ್‌ ಕುರಿತು ಉನ್ನತ ಮಟ್ಟದ ಸಚಿವರ ಸಮೂಹದ 23ನೇ ಸಭೆ ಉದ್ದೇಶಿಸಿ ಆನ್‌ಲೈನ್‌ನಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಈ ಮಾಹಿತಿ ಪ್ರಕಟಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಸರ್ಕಾರಗಳ ಪೂರ್ಣ ಭಾಗೀದಾರಿಕೆ ಮತ್ತು ಸಮಾಜದ ಪೂರ್ಣ ಭಾಗೀದಾರಿಕೆಯಿಂದಾಗಿ ನಾವು ಈ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದೇವೆ. ದೇಶದಲ್ಲಿ ಕಳೆದ 24 ಗಂಟೆಯಲ್ಲಿ 12000 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ ಮತ್ತು ಸಕ್ರಿಯ ಸೋಂಕಿತರ ಸಂಖ್ಯೆ ಇದೀಗ 1.73 ಲಕ್ಷಕ್ಕೆ ಸೀಮಿತವಾಗಿದೆ. ಈ ಪೈಕಿ ಶೇ.0.46ರಷ್ಟುಜನರು ಮಾತ್ರವೇ ವೆಂಟಿಲೇಟರ್‌ನಲ್ಲಿದ್ದಾರೆ. ಶೇ.2.20ರಷ್ಟುಜನರು ಮಾತ್ರವೇ ಐಸಿಯುನಲ್ಲಿ ಮತ್ತು ಶೇ.3.02ರಷ್ಟುಜನರು ಮಾತ್ರವೇ ಕೃತಕ ಉಸಿರಾಟದ ವ್ಯವಸ್ಥೆಯಲ್ಲಿ ಇದ್ದಾರೆ’ ಎಂದರು.

ಏರಿಕೆಗೆ ಕಡಿವಾಣ:  ‘ದೇಶದ 700 ಜಿಲ್ಲೆಗಳ ಪೈಕಿ ಶೇ.20ರಷ್ಟುಜಿಲ್ಲೆಗಳಲ್ಲಿ ಕಳೆದೊಂದು ವಾರದಿಂದ ಹೊಸ ಪ್ರಕರಣ ದಾಖಲಾಗಿಲ್ಲ. 146 ಜಿಲ್ಲೆಗಳಲ್ಲಿ 7 ದಿನಗಳಿಂದ, 18 ಜಿಲ್ಲೆಗಳಲ್ಲಿ 14 ದಿನಗಳಿಂದ, 6 ಜಿಲ್ಲೆಗಳಲ್ಲಿ 21 ದಿನಗಳಿಂದ ಮತ್ತು 21 ಜಿಲ್ಲೆಗಳಲ್ಲಿ 28 ದಿನಗಳಿಂದ ಹೊಸ ಪ್ರಕರಣ ದಾಖಲಾಗಿಲ್ಲ’ ಎಂಬ ಮಾಹಿತಿಯನ್ನು ಅವರು ಹಂಚಿಕೊಂಡರು.

‘ಹಾಲಿ ದಿನಕ್ಕೆ 12 ಲಕ್ಷ ಜನರಿಗೆ ಕೊರೋನಾ ಪರೀಕ್ಷೆಯಂತೆ, ಈವರೆಗೆ ಒಟ್ಟು 19.5 ಕೋಟಿ ಜನರನ್ನು ಪರೀಕ್ಷೆಗೆ ಒಳಪಡಿಸುವ ಮೂಲಕ ಹೊಸ ಸೋಂಕಿನ ಏರಿಕೆ ಗತಿಗೆ ತಡೆ ಹಾಕುವಲ್ಲಿ ಭಾರತ ಯಶಸ್ವಿಯಾಗಿದೆ’ ಎಂದು ಅವರು ಹೇಳಿದರು.

ಸಾವು ಇಳಿಕೆ:  ಸಭೆಯಲ್ಲಿ ಮಾತನಾಡಿದ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕ ಡಾ. ಸುಜೀತ್‌ ಕೆ.ಸಿಂಗ್‌, ‘ಕಳೆದೊಂದು ವಾರದಲ್ಲಿ ದೇಶದಲ್ಲಿ ಹೊಸ ಪ್ರಕರಣಗಳ ಏರಿಕೆ ಗತಿ ಶೇ.0.90ರಷ್ಟಿದೆ. ಇದು ವಿಶ್ವದಲ್ಲೇ ಅತಿ ಕಡಿಮೆ ಗತಿಯ ಪೈಕಿ ಒಂದು. 2020ರ ಜೂನ್‌ನಲ್ಲಿ ಸೋಂಕಿತರು ಸಾವನ್ನಪ್ಪುವ ಪ್ರಮಾಣ ಶೇ.3.4ರಷ್ಟಿತ್ತು. ಇದೀಗ ಅದು ಶೇ.1.4ಕ್ಕೆ ಇಳಿದಿದೆ ಎಂದು ತಿಳಿಸಿದರು.

ನಂ.1:  ದಾದ್ರಾ ಮತ್ತು ನಗರ್‌ ಹವೇಲಿ, ದಮನ್‌ ಮತ್ತು ದಿಯುನಲ್ಲಿ ಸೋಂಕಿತರ ಚೇತರಿಕೆ ಪ್ರಮಾಣ ಶೇ.99.79ರಷ್ಟಿದೆ. ಇದು ದೇಶದಲ್ಲೇ ಅಧಿಕ. ನಂತರದ ಸ್ಥಾನದಲ್ಲಿ ಅರುಣಾಚಲಪ್ರದೇಶ (ಶೇ.99.58), ಒಡಿಶಾ (ಶೇ.99.07) ರಾಜ್ಯಗಳಿವೆ.

ಟಾಪ್‌ 5 ರಾಜ್ಯ:  ಮುಂಬೈ, ತಿರುವನಂತಪುರಂ, ಎರ್ನಾಕುಲಂ, ಕೊಟ್ಟಾಯಂ ಮತ್ತು ಕಲ್ಲಿಕೋಟೆ ಜಿಲ್ಲೆಗಳಲ್ಲಿ ಅತಿ ಹೆಚ್ಚು ಸಕ್ರಿಯ ಕೇಸು ದಾಖಲಾಗುತ್ತಿವೆ. ಇವು ದೇಶದ ಟಾಪ್‌ 5 ಹಾಟ್‌ಸ್ಪಾಟ್‌ ಜಿಲ್ಲೆಗಳಾಗಿವೆ. ಇನ್ನು ಮಹಾರಾಷ್ಟ್ರ ಮತ್ತು ಕೇರಳ ಒಟ್ಟು ಸಕ್ರಿಯ ಕೇಸುಗಳಲ್ಲಿ ಶೇ.70ರಷ್ಟುಪಾಲು ಹೊಂದಿವೆ.

ಲಸಿಕೆಯಲ್ಲಿ 6ನೇ ಸ್ಥಾನ:  ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಮಾತನಾಡಿ, ಈವರೆಗೆ ರಾಜ್ಯಗಳಿಗೆ 2.27 ಕೋಟಿ ಡೋಸ್‌ ಲಸಿಕೆ ರವಾನಿಸಲಾಗಿದೆ. ಲಸಿಕೆ ವಿತರಣೆಯಲ್ಲಿ ಭಾರತ ಇದೀಗ ವಿಶ್ವದಲ್ಲಿ 6ನೇ ಸ್ಥಾನದಲ್ಲಿದ್ದು, ಕೆಲವೇ ದಿನಗಳಲ್ಲಿ 3ನೇ ಸ್ಥಾನಕ್ಕೆ ಏರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

'ಕೊರೋನಾ ಲಸಿಕಾ ಅಭಿಯಾನ ಮುಂದುವರೆಯುತ್ತದೆ' ...

ಇನ್ನು ಇದುವರೆಗೆ 69000 ಯೋಜನಾ ವ್ಯವಸ್ಥಾಪಕರು, 2.5 ಲಕ್ಷ ಲಸಿಕೆ ನೀಡುವವರು ಮತ್ತು 4.4 ಲಕ್ಷ ಇತರೆ ತಂಡದ ಸದಸ್ಯರಿಗೆ ಲಸಿಕೆ ಯೋಜನೆ ಕುರಿತು ತರಬೇತಿ ನೀಡಲಾಗಿದೆ. 93.76 ಲಕ್ಷ ಆರೋಗ್ಯ ಕಾರ್ಯಕರ್ತರು ಮತ್ತು 53.94 ಲಕ್ಷ ಮುಂಚೂಣಿ ಕಾರ್ಯಕರ್ತರು ಕೋವಿನ್‌ ವೆಬ್‌ಸೈಟ್‌ನಲ್ಲಿ ಲಸಿಕೆ ಪಡೆಯಲು ಹೆಸರು ನೊಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದರು.

(ಅಂಕಿ ಅಂಶ))

18 ಜಿಲ್ಲೆ: 14 ದಿನಗಳಿಂದ 18 ಜಿಲ್ಲೆಗಳಲ್ಲಿ ಒಂದೂ ಕೊರೋನಾ ಕೇಸಿಲ್ಲ

6 ಜಿಲ್ಲೆ: 21 ದಿನಗಳಿಂದ 6 ಜಿಲ್ಲೆಗಳಲ್ಲಿ ಹೊಸ ಸೋಂಕು ಇಲ್ಲ

21 ಜಿಲ್ಲೆ: 28 ದಿನಗಳಿಂದ 21 ಜಿಲ್ಲೆಗಳಲ್ಲಿ ಒಂದೂ ಪ್ರಕರಣವಿಲ್ಲ

20%: 700 ಜಿಲ್ಲೆಗಳ ಪೈಕಿ ಶೇ.20ರಲ್ಲಿ ವಾರದಿಂದ ಹೊಸ ಕೇಸಿಲ್ಲ

ಶೇ.3.4: ಜೂನ್‌ 2020ರಲ್ಲಿದ್ದ ಸೋಂಕಿತರ ಸಾವಿನ ಪ್ರಮಾಣ

ಶೇ.1.4: ಜನವರಿ 2021ರಲ್ಲಿರುವ ಸೋಂಕಿತರ ಸಾವಿನ ಪ್ರಮಾಣ

19.5 ಕೋಟಿ: ಈವರೆಗೆ ದೇಶದಲ್ಲಿ ಇಷ್ಟುಜನರಿಗೆ ಕೊರೋನಾ ಪರೀಕ್ಷೆ

1.47 ಕೋಟಿ: ಇಷ್ಟುಜನರಿಂದ ಲಸಿಕೆ ಪಡೆಯಲು ಹೆಸರು ನೋಂದಣಿ

2.27 ಕೋಟಿ: ರಾಜ್ಯಗಳಿಗೆ ರವಾನಿಸಿರುವ ಲಸಿಕೆಗಳ ಒಟ್ಟು ಪ್ರಮಾಣ

click me!