ಗಲ್ಲಿ ಕ್ರಿಕೆಟ್ ವೇಳೆ ಔಟ್ ಮಾಡಿದ್ದಕ್ಕೆ 14 ವರ್ಷದ ಬಾಲಕನ ಹೊಡೆದು ಕೊಂದ17 ವರ್ಷದ ತರುಣ

By Anusha Kb  |  First Published Jun 21, 2023, 1:21 PM IST

ಗಲ್ಲಿ ಕ್ರಿಕೆಟ್ ವೇಳೆ ಆರಂಭವಾದ ಗಲಾಟೆಯೊಂದು ಕೊಲೆಯಲ್ಲಿ ಅಂತ್ಯವಾಗಿದೆ.  ಬ್ಯಾಟಿಂಗ್ ಮಾಡುತ್ತಿದ್ದ 17 ವರ್ಷದ ತರುಣನನ್ನು ಬೌಲಿಂಗ್ ಮಾಡುತ್ತಿದ್ದವ ಔಟ್ ಮಾಡಿದ ಎಂಬ ಕಾರಣಕ್ಕೆ ಈ ಗಲಾಟೆ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ.


ಕಾನ್ಪುರ: ಗಲ್ಲಿ ಕ್ರಿಕೆಟ್ ವೇಳೆ ಆರಂಭವಾದ ಗಲಾಟೆಯೊಂದು ಕೊಲೆಯಲ್ಲಿ ಅಂತ್ಯವಾಗಿದೆ.  ಬ್ಯಾಟಿಂಗ್ ಮಾಡುತ್ತಿದ್ದ 17 ವರ್ಷದ ತರುಣನನ್ನು ಬೌಲಿಂಗ್ ಮಾಡುತ್ತಿದ್ದವ ಔಟ್ ಮಾಡಿದ ಎಂಬ ಕಾರಣಕ್ಕೆ ಈ ಗಲಾಟೆ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ. ಉತ್ತರಪ್ರದೇಶದ ಕಾನ್ಪುರ ಜಿಲ್ಲೆಯ ಘಟಂಪುರ ಪ್ರದೇಶದ ರಹ್ತಿ ದೇರಾ ಗ್ರಾಮದ ತೆರೆದ ಮೈದಾನವೊಂದರಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಕೊಲೆ ಮಾಡಿದ ತರುಣ ಹಾಗೂ ಆತನ ಸಹೋದರ ಘಟನೆಯ ಬಳಿಕ ಪರಾರಿಯಾಗಿದ್ದಾರೆ. 

14 ವರ್ಷದ ಬಾಲಕ 17 ವರ್ಷದ ತರುಣನನ್ನು ಕ್ಲೀನ್ ಬೌಲ್ಡ್‌ (Clean Bowled) ಮಾಡಿದ್ದಾನೆ. ಆದರೆ ಇದನ್ನು ಒಪ್ಪಿಕೊಳ್ಳಲು ಸಿದ್ಧನಿಲ್ಲದ ಆತ ಮೈದಾನ ಬಿಟ್ಟು ಹೋಗಲು ಸಿದ್ಧನಿರಲಿಲ್ಲ,  ಇದು ಮಾತಿನ ಚಕಮಕಿಗೆ ಕಾರಣವಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ಜೋರಾಗಿದ್ದು, ಆರೋಪಿ ತನ್ನ ಸಹೋದರನನ್ನು ಮೈದಾನಕ್ಕೆ ಕರೆಸಿದ್ದಾನೆ. ನಂತರ ಆತ ಬಂದ ಮೇಲೆ ಇಬ್ಬರು ಸೇರಿಕೊಂಡು 14 ವರ್ಷದ ಬಾಲಕನನ್ನು ನೆಲಕ್ಕೆ ಕೆಡವಿ ಹಿಗ್ಗಾಮುಗ್ಗಾ ಥಳಿಸಿದ್ದು, ಬಳಿಕ ಕುತ್ತಿಗೆ ಹಿಸುಕಿದ್ದಾರೆ ಇದರಿಂದ ಬಾಲಕ ಪಿಚ್‌ನಲ್ಲೇ ಪ್ರಾಣ ಬಿಟ್ಟಿದ್ದಾನೆ. 

Latest Videos

undefined

Bengaluru Crime: ಕುದುರೆ ಮೇಲೆ ಕೂರಿಸಲಿಲ್ಲವೆಂದು ಅಪ್ರಾಪ್ತ ಬಾಲಕನ ಕೊಲೆ!

ಈ ವೇಳೆ ಮೈದಾನದಲ್ಲೇ ಇದ್ದ ಇತರ ಬಾಲಕರು 14 ವರ್ಷದ ಸಂತ್ರಸ್ತ ಬಾಲಕನ (Victim Boy) ಪೋಷಕರಿಗೆ ವಿಷಯ ತಿಳಿಸಿದ್ದು, ಕೂಡಲೇ ಸ್ಥಳಕ್ಕೆ ಬಂದ ಅವರು ಮಗನನ್ನು ಸಮೀಪದ ಘಟಂಪುರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ. ನಂತರ ಕುಟುಂಬಸ್ಥರು ಬಾಲಕನ ಶವವನ್ನು ಮನೆಗೆ ತೆಗೆದುಕೊಂಡು ಬಂದಿದ್ದಾರೆ.

ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸ್ ಠಾಣೆ ಇನ್ಚಾರ್ಜ್ ವಿಕ್ರಂ ಸಿಂಗ್ (vikram Singh) ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಮೃತ ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸುವಂತೆ ಕೇಳಿದ್ದಾರೆ.  ಆದರೆ ಮೃತ ಬಾಲಕನ ಪೋಷಕರು (Parents) ಬಾಲಕನ ಮರಣೋತ್ತರ ಪರೀಕ್ಷೆಗೆ ಒಪ್ಪದೇ ಪೊಲೀಸರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಥವಾ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಅಲ್ಲದೇ ಆರೋಪಿಗಳ ಬಂಧನ ಆಗುವವರೆಗೂ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. 

ಕೇವಲ 5 ರೂ.ಗೆ ಬಾಲಕನ ಕೊಲೆ ಮಾಡಿದ ಆರೋಪಿ: ತಲೆ ಮೇಲೆ ಕಲ್ಲು ಎತ್ತಿಹಾಕಿ ಭೀಕರ ಹತ್ಯೆ

ನಂತರ ಸುಮಾರು 4 ಗಂಟೆಗಳ ಕಾಲ ಪೊಲೀಸರು ಸಂತ್ರಸ್ತ ಬಾಲಕನ ಕುಟುಂಬದವರ ಮನವೊಲಿಸುವ ಪ್ರಯತ್ನ ಮಾಡಿದ್ದು, ಬಳಿಕ ಪೋಷಕರು ಬಾಲಕನ ಮರಣೋತ್ತರ ಪರೀಕ್ಷೆಗೆ ಒಪ್ಪಿದ್ದಾರೆ. ನಂತರ ಬಾಲಕನ ಪೋಷಕರು ಘಟಂಪುರ ಪೊಲೀಸ್ ಠಾಣೆಯಲ್ಲಿ ಆರೋಪಿ ತರುಣನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸಂಬಂಧಿತ ಐಪಿಸಿ ಸೆಕ್ಷನ್‌ಗಳಡಿ ಆರೋಪಿ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ. ಆರೋಪಿ ಹಾಗೂ ಆತನ ಸಹೋದರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಘಟಂಪುರ ಎಸಿಪಿ ದಿನೇಶ್ ಶುಕ್ಲಾ (Dinesh Shukla) ಹೇಳಿದ್ದಾರೆ.

ಮೃತ ಬಾಲಕನ ತಂದೆ ಸಣ್ಣ ರೈತರಾಗಿದ್ದು, ಬಾಲಕನಿಗೆ ನಾಲ್ವರು ಸಹೋದರಿಯರು ಇಬ್ಬರು ಸಹೋದರರು ಇದ್ದಾರೆ. ಮೂರು ವರ್ಷಗಳ ಹಿಂದೆ ಈ ಬಾಲಕನ ಅತ್ತೆಯನ್ನು ಇದೇ ಆರೋಪಿಗಳ ಕುಟುಂಬ ಹೊಡೆದು ಕೊಲೆ ಮಾಡಿತ್ತು ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. 

click me!