India@75: ಸ್ವತಂತ್ರ್ಯ ಹೋರಾಟಗಾರರ ಅಡ್ಡೆ ರಾಯಚೂರು ರಾಮಶಾಲೆ

By Suvarna News  |  First Published Jul 29, 2022, 6:10 PM IST

- ಹೋರಾಟಗಾರರ ಅಡ್ಡೆ ರಾಯಚೂರು ರಾಮಶಾಲೆ

- ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ರೂಪರೇಷೆ ಸಿದ್ಧವಾಗುತ್ತಿದ್ದುದು ಇಲ್ಲೇ

ಬ್ರಿಟಿಷ್‌, ನಿಜಾಮರ ವಿರುದ್ಧ ತೀವ್ರ ಚಳವಳಿ


ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಯಚೂರು ನಗರದ ರಾಮಶಾಲೆ ತನ್ನದೇ ಆದ ನೆನಪುಗಳನ್ನು ಒಡಲಲ್ಲಿ ಬಚ್ಚಿಟ್ಟುಕೊಂಡಿದೆ.

ಬ್ರಿಟಿಷರ, ಹೈದರಾಬಾದ್‌ ನಿಜಾಮರ ಆಡಳಿತದ ವಿರುದ್ಧ ನಡೆದ ಹತ್ತು ಹಲವು ಚಳವಳಿ, ಸತ್ಯಾಗ್ರಹಗಳು, ಧರಣಿ, ಪ್ರತಿಭಟನಾ ಮೆರವಣಿಗೆಗಳಿಗೆ ಇದೇ ಶಾಲೆ ಚಾಲನಾ ಸ್ಥಳವಾಗಿತ್ತು. ಮಾತ್ರವಲ್ಲದೆ ಹೋರಾಟದ ರೂಪರೇಷೆ ತಯಾರಿಸಲು, ಸಮಾಲೋಚನೆ ನಡೆಸುವ ಸಲುವಾಗಿ ಈ ಶಾಲೆಯ ಆವರಣದಲ್ಲೇ ಒಟ್ಟುಗೂಡುತ್ತಿದ್ದರು. ಈಗ ಈ ಶಾಲೆಯನ್ನು ಶಾರದಾ ಸ್ಕೂಲ್‌ ಎಂದು ಕರೆಯುತ್ತಾರೆ.

Latest Videos

undefined

ಭಾರತಕ್ಕೆ ಚಾರ್ಲಸ್‌ ಮಾಂಟಿಗೋ ಸುಧಾರಣೆಗಳು ಕಾಲಿಟ್ಟಾಗ ಸ್ಥಳೀಯ ಆಡಳಿತಗಾರರಿಗೆ ನುಂಗಲಾರದ ತುತ್ತಾಗಿತ್ತು. ಈ ಸಮಯದಲ್ಲಿ ಬುದ್ಧಿಜೀವಿಗಳು, ವಕೀಲರು, ಸಮಾಜ ಸೇವಕರು, ಹೋರಾಟದ ಕಿಚ್ಚನ್ನು ಹಚ್ಚಿಕೊಂಡಿದ್ದ ಯುವಕರು ಲೇಜಿಸ್ಲೇಟಿವ್‌ ಕೌನ್ಸಿಲ್ಲನ್ನು ವಿರೋಧಿಸುವುದಕ್ಕಾಗಿ ಸಂಘ-ಸಂಸ್ಥೆಗಳನ್ನು ಕಟ್ಟಿಕೊಂಡು ರಾಮಶಾಲಾ ಆವರಣದಲ್ಲಿ ಸೇರಿ ಬ್ರಿಟಿಷರ ವಿರುದ್ಧ ದಂಧೆ ಎದ್ದಿದ್ದರು.

India@75: ಸ್ವತಂತ್ರ್ಯ ಹೋರಾಟಗಾರರ ಜನ್ಮಭೂಮಿ ವಿಜಯಪುರದ ಚಡಚಣ

ಕ್ವಿಟ್‌ ಇಂಡಿಯಾ ತೀವ್ರ:

1942ರಲ್ಲಿ ಪರಕೀಯರ ರೆಸಿಡೆಂಟ್‌ ಆಡಳಿತದ ಮೇಲೆ ಬೇಸತ್ತಿದ್ದ ರಾಯಚೂರಿನ ಜನ ನಿರಂತರವಾಗಿ ಚಳವಳಿಗಳನ್ನು ನಡೆಸುತ್ತಿದ್ದರು. ಇಡೀ ದೇಶದಲ್ಲಿ ಕ್ವಿಟ್‌ ಇಂಡಿಯಾ ಚಳವಳಿಯನ್ನು ಕಟ್ಟಲು ಕಾಂಗ್ರೆಸ್‌ ಅಧೀನದಲ್ಲಿ ಮಹಾತ್ಮ ಗಾಂಧೀಜಿ ಕರೆಕೊಟ್ಟಾಗ ರಾಮಶಾಲಾ ಬಯಲಿನಿಂದಲೇ ತ್ರಿವರ್ಣಧ್ವಜವನ್ನು ಹಿಡಿದು ಪ್ರಮುಖ ಬೀದಿಗಳಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ಮಾಡಲಾಯಿತು.

ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ನಾರಾಯಣಪ್ಪ ಗಾಣಧಾಳ, ಡಾ.ಭಗೀರಥರಾವ್‌, ಅಡವಿರಾವ್‌ ಫಡ್ನಿವೀಸ್‌, ಮಾಣಿಕರಾವ್‌, ಜಿ.ವೆಂಕೋಬರಾವ್‌, ರುಕ್ಮಾಜಿ, ಮಾಧವರಾವ್‌, ಶ್ರೀನಿವಾಸ ರಾವ್‌, ಪಲ್ಲಕ್ಕಿ ನರಸಣ್ಣ, ನರಸಪ್ಪ ಶೆಟ್ಟಿ, ಶಿವ ಮಾಣಿಕಪ್ಪ, ರಾಮಾಚಾರಿ ಸೇರಿದಂತೆ 17 ಮಂದಿ ಈ ಚಳವಳಿಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ರಾಮಶಾಲಾ ಬಯಲಿನಿಂದ ಆರಂಭಗೊಂಡಿದ್ದ ಮೆರವಣಿಗೆಯಲ್ಲಿ ಕೆಲವರು ಮಾತ್ರ ಇದ್ದರು. ಆದರೆ ರಸ್ತೆಯುದ್ದಕ್ಕೂ ಮೆರವಣಿಗೆ ಸಾಗಿದಂತೆಲ್ಲಾ ಬೃಹತ್‌ ಸಂಖ್ಯೆಯ ಜನ ಸೇರ್ಪಡೆಗೊಂಡು ಬ್ರಿಟಿಷ್‌ ಅಧಿಕಾರಿಗಳು ಹಾಗೂ ಪೊಲೀಸರನ್ನು ದಂಗಾಗುವಂತೆ ಮಾಡಿದ್ದರು.

ಬ್ರಿಟೀಷ್‌ ರೆಸಿಡೆಂಟನ್ನು ಕಿತ್ತೊಗೆಯಬೇಕು, ಆಂಗ್ಲರು ದೌರ್ಜನ್ಯದ ಆಡಳಿತವನ್ನು ನಿಲ್ಲಿಸಿ ದೇಶದಿಂದ ಹೊಡೆದೋಡಿಸಬೇಕು ಎನ್ನುವ ಘೋಷಣೆಗಳು ಜನಸಾಮಾನ್ಯರಲ್ಲಿ ಪ್ರೇರಣೆಯನ್ನುಟ್ಟು ಮಾಡಿತ್ತು. ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟದಿಂದಾಗಿ ರಾಯಚೂರು ನಗರದ ಗೋಲ್‌ಠಾಣಾದಲ್ಲಿ ಚಳವಳಿಗಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಸತ್ಯಾಗ್ರಹದ ಮುಂಚೂಣಿಯಲ್ಲಿದ್ದ 17 ಜನರನ್ನು ಬಂಧಿಸಿ ಸಮೀಪದ ಸದರಬಜಾರ್‌ ಠಾಣೆಗೆ ಎಳೆದುಕೊಂಡು ಹೋಗಿದ್ದರು. ಸತ್ಯಾಗ್ರಹದ ಮುಗಿದ ಕೆಲ ದಿನಗಳ ಬಳಿಕ ಹತ್ತು ಜನರನ್ನು ಬಿಡುಗಡೆ ಮಾಡಿದ ಪೊಲೀಸರು, ಚಳವಳಿಯ ನೇತೃತ್ವ ವಹಿಸಿದ್ದ ಹೋರಾಟಗಾರರನ್ನು ಬಂಧಿಸಿ ಎರಡ್ಮೂರು ತಿಂಗಳ ನಂತರ ಬಿಡುಗಡೆ ಮಾಡಿದರು.

India@75:ಹರ್ ಘರ್ ತಿರಂಗಾಕ್ಕೆ 7 ತಿಂಗಳು ಮೊದಲೇ ಸಲಹೆ ಕೊಟ್ಟಿದ್ದ ಕನ್ನಡಿಗ!

ತಲುಪುವುದು ಹೇಗೆ?

ರಾಯಚೂರು ನಗರದಲ್ಲಿಯೇ ಇರುವ ರಾಮಶಾಲೆಯನ್ನು ಈಗ ಶಾರದಾ ಸ್ಕೂಲ್‌ ಎಂದು ಕರೆಯುತ್ತಾರೆ. ರಾಯಚೂರು ರೈಲ್ವೆ ನಿಲ್ದಾಣ ಹಾಗೂ ಕೇಂದ್ರ ಬಸ್‌ ನಿಲ್ದಾಣದಿಂದ 1 ಕಿ.ಮೀ. ದೂರದಲ್ಲಿದೆ. ವಾಸವಿ ನಗರಕ್ಕೆ ಹೋಗುವ ಮಾರ್ಗದಲ್ಲಿರುವ ವಾಸವಿ ವೃತ್ತದ ಬಳಿಯೇ ಶಾಲೆ ಇದೆ.

- ರಾಮಕೃಷ್ಣ ದಾಸರಿ

click me!