ಅತ್ತರೂ ಕಣ್ಣೀರು ಒರೆಸುವವರಿಲ್ಲ, ತಮಗೆ ತಾವು ಸಮಾಧಾನ ಮಾಡಿಕೊಳ್ಳುವಂತಹ ಸ್ಥಿತಿ, ಕಣ್ಮುಂದೆ ಹತ್ತಾರು ಜನರಿದ್ದರೂ ಎಲ್ಲರದ್ದೂ ಅದೇ ಸ್ಥಿತಿ. ಸ್ಮಶಾನ ಮೌನ ಅರ್ಥ ಕಳೆದುಕೊಂಡು ದಿನವಿಡೀ ಗೋಳಾಟ, ಆಕ್ರಂದನದ ರೋಧನೆ ಕೇಳಿ ಬರುತ್ತಿದೆ.
ನಗರದಲ್ಲಿ ಕೊರೋನಾ ಸೋಂಕಿನಿಂದ ಸಾವಿಗೀಡಾಗುವರ ಸಂಖ್ಯೆ ಒಂದೇ ಸಮನೇ ಏರಿಕೆಯಾಗುತ್ತಿದ್ದಂತೆ ಚಿತಾಗಾರಗಳ ಮುಂದೆ ಸೂರ್ಯೋದದಿಂದ ಹಿಡಿದು ರಾತ್ರಿವರೆಗೆ ಇಂತಹ ದೃಶ್ಯಗಳು ಈಗ ಸಾಮಾನ್ಯವಾಗಿದೆ.
ಸಾವಿಗೀಡಾಗುವವರು ಹೆಚ್ಚಾಗುತ್ತಿದ್ದಂತೆ ಪ್ರತಿದಿನ ಮೃತದೇಹಗಳ ಹೊತ್ತ ಆ್ಯಂಬುಲೆನ್ಸ್‌ಗಳು ಅಂತ್ಯಸಂಸ್ಕಾರಕ್ಕೆ ಸರತಿ ಸಾಲಿನಲ್ಲಿ ತಾಸುಗಟ್ಟಲೇ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
undefined
ನಗರದ ಯಾವುದೇ ಸ್ಮಶಾನದ ಆವರಣ ನೋಡಿದರೂ ಅಂತ್ಯಕ್ರಿಯೆಗೆ ಸಿದ್ಧಗೊಂಡಿರುವ ಸಾಲು ಸಾಲು ಶವಗಳು ಕಾಣಸಿಗುತ್ತವೆ. ಮತ್ತೊಂದೆಡೆ ಮೃತ ಸಂಬಂಧಿಕರ ಆಕ್ರಂದನ, ರೋದನ, ಕಣ್ಣೀರಿನ ಗೋಳಾಟ ನೋಡುಗರ ಕರುಳು ಕಿವುಚುತ್ತಿದೆ. ಎರಡನೇ ಎಲೆಯ ಮಹಾಮಾರಿ ಶುರುವಾದಾಗಿನಿಂದ ಸ್ಮಶಾನಗಳ ಚಿತ್ರಣ ಬದಲಾಗಿದೆ.
3ನೇ ಅಲೆ ತಡೆಗೆ ಈಗಲೇ ಪ್ಲಾನ್: ಸಿಬ್ಬಂದಿ ಕೊರತೆ ನೀಗಿಸಲೂ ಮಹತ್ವದ ಹೆಜ್ಜೆ!
ಸಾವಿಗೀಡಾದ ವ್ಯಕ್ತಿಯನ್ನು ತಮ್ಮ ಆಚಾರ, ಸಂಪ್ರದಾಯ, ಪದ್ಧತಿ ಪ್ರಕಾರ ಅಂತ್ಯ ಸಂಸ್ಕಾರ ಮಾಡಬೇಕೆಂಬ ಮನಸ್ಥಿತಿ ಬದಲಾಗಿದೆ. ಇಷ್ಟುವರ್ಷಗಳ ಕಾಲ ತನ್ನ ಕುಟುಂಬಕ್ಕಾಗಿ ಜೀವ ಸವೆಸಿದ ವ್ಯಕ್ತಿಗೆ ಅಂತಿಮ ಗೌರವ, ನಮನ ಸಲ್ಲಿಸದೇ ಕೊರಗುವಂತಹ ಸ್ಥಿತಿ ಬಂದಿದೆ.
ಚಿತಾಗಾರದ ಸಿಬ್ಬಂದಿ ವಿಶ್ರಾಂತಿ ಇಲ್ಲದೇ ತಡರಾತ್ರಿವರೆಗೂ ಶವಗಳ ಅಂತ್ಯಕ್ರಿಯೆಯಲ್ಲಿ ತೊಡಗಿದ್ದಾರೆ. ಬೆಳಕಾಗುವ ಹೊತ್ತಿಗೆ ಚಿತಾಗಾರಗಳ ಎದುರು ಆ್ಯಂಬುಲೆನ್ಸ್‌ಗಳು ಸಾಲುಗಟ್ಟಿನಿಲ್ಲುತ್ತಿವೆ. ಹೀಗಾಗಿ ಚಿತಾಗಾರಗಳ ಬೆಂಕಿ ಆರುತ್ತಿಲ್ಲ. ಪ್ರತಿ ಚಿತಾಗಾರಗಳ ಬಳಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಪ್ರತಿ ದಿನ ಸಂಬಂಧಿಕರು ತಮ್ಮ ಪ್ರೀತಿ ಪಾತ್ರರ ಮೃತದೇಹಗಳ ಅಂತಿಮದರ್ಶನಕ್ಕೆ ಚಿತಾಗಾರಗಳ ಬಳಿ ಬರುತ್ತಿದ್ದಾರೆ. ವಾರಸುದಾರರು ಇಲ್ಲದ ಎಷ್ಟೋ ಮೃತದೇಹಗಳಿಗೆ ಚಿತಾಗಾರದ ಸಿಬ್ಬಂದಿಯೇ ಮುಂದೆ ನಿಂತು ಅಂತ್ಯಕ್ರಿಯೆ ನೆರವೇರಿಸುತ್ತಿರುವ ಮನಕಲಕುವ ಘಟನೆಗಳು ಜರುಗುತ್ತಿವೆ.
ಕಾಲಾಯಾ ತಸ್ಮೈ ನಮಃ
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona