ನಿದ್ರೆ ಇಲ್ಲ ಅಂದ್ರೆ ಕಣ್ಣು ಕೆಂಪಾಗೋದು ಮಾತ್ರವಲ್ಲ ಮನಸ್ಸು ಕೂಡ ಚಡಪಡಿಸುತ್ತಿರುತ್ತೆ. ಅನೇಕ ಖಾಯಿಲೆಗಳು ನಮ್ಮನ್ನು ಮುತ್ತಿಕೊಳ್ಳುತ್ತವೆ. ರಾತ್ರಿ ಸರಿಯಾಗಿ ನಿದ್ರೆ ಬರ್ತಿಲ್ಲ, ನಿದ್ರೆ ಮಾತ್ರೆ ಮಾಮೂಲಿಯಾಗಿದೆ ಎನ್ನುವವರು ಈ ಥೆರಪಿ ಮೊರೆ ಹೋಗ್ಬಹುದು.
ನಿದ್ರೆ ನಮ್ಮ ಆರೋಗ್ಯಕ್ಕೆ ಬಹಳ ಅಗತ್ಯ. ದೇಹ ಸಂಪೂರ್ಣ ವಿಶ್ರಾಂತಿ ಪಡೆಯದೆ ಹೋದ್ರೆ ಅನಾರೋಗ್ಯ ನಮ್ಮನ್ನು ಕಾಡಲು ಶುರುವಾಗುತ್ತದೆ. ಆರೋಗ್ಯವಾಗಿರಬೇಕು, ರೋಗಗಳಿಂದ ಮುಕ್ತರಾಗಿರಬೇಕೆಂದ್ರೆ ಪ್ರತಿ ದಿನ 7 -8 ಗಂಟೆ ನಿದ್ರೆ ಮಾಡಬೇಕಾಗುತ್ತದೆ. ಈಗಿನ ದಿನಗಳಲ್ಲಿ ಜನರು ಕೆಲಸದ ಒತ್ತಡ ಹಾಗೂ ಬೇರೆ ಅನೇಕ ಕಾರಣಕ್ಕೆ ನಿದ್ರೆ ಬಿಡ್ತಾರೆ. ಒಂದೆರಡು ದಿನ ನಿದ್ರೆಯಲ್ಲಿ ವ್ಯತ್ಯಾಸವಾದ್ರೆ ಹೆಚ್ಚು ತೊಂದರೆಯಾಗದೆ ಇರಬಹುದು. ಆದ್ರೆ ಪ್ರತಿ ದಿನ ಕೇವಲ ಮೂರರಿಂದ ನಾಲ್ಕು ಗಂಟೆ ನಿದ್ರೆ ಮಾಡುವವರಿದ್ದಾರೆ. ಅವರ ಈ ಅಭ್ಯಾಸ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇನ್ನು ಕೆಲವರಿಗೆ ನಿದ್ರೆ ಮಾಡಲು ಸಮಯವಿದ್ರೂ ನಿದ್ರೆ ಬರೋದಿಲ್ಲ. ಇದು ಅವರನ್ನು ಅನಾರೋಗ್ಯಕ್ಕೆ ನೂಕುತ್ತದೆ.
ನಿದ್ರೆ (Sleep) ಯ ಕೊರತೆಯಿಂದಾಗಿ ಮಧುಮೇಹ, ಸ್ಥೂಲಕಾಯತೆ ಮತ್ತು ಹೃದಯ ಕಾಯಿಲೆ ಅಪಾಯ ಹೆಚ್ಚಾಗುತ್ತದೆ. ಕೆಲವರು ನಿದ್ರೆ ಸಮಸ್ಯೆಯಿಂದ ಆಯಾಸ, ಮಾನಸಿಕ ಕಿರಿಕಿರಿ, ಭಯ ಮತ್ತು ಆತಂಕ (Anxiety) ದಂತಹ ಸಮಸ್ಯೆಯನ್ನು ಎದುರಿಸುತ್ತಾರೆ. ರಾತ್ರಿ ಸರಿಯಾಗಿ ನಿದ್ರೆ ಬರ್ತಿಲ್ಲ ಎನ್ನುವ ಕಾರಣಕ್ಕೆ ಕೆಲವರು ನಿದ್ರೆ ಮಾತ್ರೆ ಸೇವನೆ ಮಾಡ್ತಾರೆ. ನಿದ್ರೆ ಮಾತ್ರೆ ಸೇವನೆ ಮಾಡಿದ್ರೆ ನಿದ್ರೆ ಏನೋ ಬರುತ್ತದೆ ಆದ್ರೆ ಅದು ನಮ್ಮ ಇಡೀ ದೇಹದ ಮೇಲೆ ಹಾಗೂ ಮಾನಸಿಕ ಆರೋಗ್ಯ (Health) ದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ. ರಾತ್ರಿ ಸರಿಯಾಗಿ ನಿದ್ರೆ ಬರ್ತಿಲ್ಲ, ಪದೇ ಪದೇ ಎಚ್ಚರವಾಗುತ್ತೆ ಎನ್ನುವವರು ನಿದ್ರೆ ಚಿಕಿತ್ಸೆಯ ಸಹಾಯ ಪಡೆಯಬಹುದು. ಇದ್ರಿಂದ ನೀವು ದೇಹಕ್ಕೆ ಬೇಕಾದ ಬರಪೂರ್ ನಿದ್ರೆಯನ್ನು ಪಡೆಯಬಹುದು. ಸ್ಲೀಪ್ ಥೆರಪಿ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಲು ನೆರವಾಗುತ್ತದೆ. ನಾವಿಂದು ಸ್ಲೀಪ್ ಥೆರಪಿ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೇವೆ.
undefined
ಸ್ಲೀಪ್ ಥೆರಪಿ ಎಂದರೇನು? : ಸ್ಲೀಪ್ ಥೆರಪಿ ಎನ್ನುವುದು ನಿದ್ರೆಯ ಗುಣಮಟ್ಟ ಅಥವಾ ಪ್ರಮಾಣವನ್ನು ಸುಧಾರಿಸಲು ವಿನ್ಯಾಸಗೊಳಿಸಲಾದ ಚಿಕಿತ್ಸೆಯಾಗಿದೆ. ನಿದ್ರೆಯ ಸಮಸ್ಯೆ ಇದ್ದವರು ಈ ಚಿಕಿತ್ಸೆ ತೆಗೆದುಕೊಳ್ಳಬಹುದು. ರಾತ್ರಿಯಲ್ಲಿ ಆಗಾಗ್ಗೆ ಎಚ್ಚರವಾಗ್ತಿದ್ದರೆ ಉಸಿರುಗಟ್ಟಿದ ಅನುಭವವಾಗ್ತಿದ್ದರೆ ಸ್ಲೀಪ್ ಥೆರಪಿ ಇದಕ್ಕೆ ಪರಿಹಾರ ನೀಡುತ್ತದೆ. ಸ್ಲೀಪ್ ಥೆರಪಿ ಎನ್ನುವುದು ಮಾನಸಿಕ ತಜ್ಞರು ರೋಗಿಗಳ ಜೊತೆ ಮಾತನಾಡುವ ಮೂಲಕ ಅವರ ಆತಂಕವನ್ನು ಕಡಿಮೆ ಮಾಡುವ ವಿಧಾನವಾಗಿದೆ.
ಸ್ಲೀಪ್ ಥೆರಪಿಯಿಂದ ಏನು ಪ್ರಯೋಜನ? : ಸರಿಯಾಗಿ ನಿದ್ರೆ ಬರ್ತಿಲ್ಲ ಎನ್ನುವುದಕ್ಕೆ ಅನೇಕ ಕಾರಣವಿರುತ್ತದೆ. ಜನರು ದೇಹಕ್ಕೆ ಖಾಯಿಲೆ ಬಂದ್ರೆ ವೈದ್ಯರ ಬಳಿ ಹೋಗ್ತಾರೆ. ಅದೇ ಮನಸ್ಸಿಗೆ ಖಾಯಿಲೆ ಬಂದ್ರೆ ಅದನ್ನು ಮುಚ್ಚಿಡ್ತಾರೆ. ಇದು ನಮ್ಮ ಜೀವವನ್ನೇ ಬಲಿ ಪಡೆಯುವ ಸಾಧ್ಯತೆಯಿರುತ್ತದೆ. ನಿದ್ರೆ ಬರ್ತಿಲ್ಲ ಎಂಬ ಸಂಗತಿಯನ್ನು ಪ್ರತಿಯೊಬ್ಬ ವ್ಯಕ್ತಿ ಗಂಭೀರವಾಗಿ ಪರಿಗಣಿಸಬೇಕು. ಮಾನಸಿಕ ತಜ್ಞರ ಬಳಿ ಹೋಗಿ ಸ್ಲಿಪ್ ಥೆರಪಿ ಪಡೆಯಬೇಕು.
ಈ ಸ್ಲೀಪ್ ಥೆರಪಿ ಒತ್ತಡ ಮತ್ತು ಖಿನ್ನತೆಯ ಲಕ್ಷಣಗಳನ್ನು ಕೂಡ ಇದು ಕಡಿಮೆ ಮಾಡುತ್ತದೆ. ಈ ಚಿಕಿತ್ಸೆಯಲ್ಲಿ ಮನಸ್ಸಿನಲ್ಲಿರುವ ನಕಾರಾತ್ಮಕ ಆಲೋಚನೆಗಳನ್ನು ತೆಗೆದುಹಾಕುವ ಪ್ರಯತ್ನ ನಡೆಯುತ್ತದೆ. ಇದ್ರಿಂದ ಒತ್ತಡ, ಆತಂಕ ಕಡಿಮೆಯಾಗುತ್ತದೆ. ಸ್ಲೀಫ್ ಥೆರಪಿ ನಿದ್ರೆ ಮಾತ್ರೆ ತೆಗೆದುಕೊಳ್ಳುವವರಿಗೆ ಹೆಚ್ಚು ಪ್ರಯೋಜನಕಾರಿ. ಈ ಥೆರಪಿ ನಂತ್ರ ನೀವು ನಿದ್ರೆ ಮಾತ್ರೆ ತೆಗೆದುಕೊಳ್ಳುವ ಅವಶ್ಯಕತೆ ಇರೋದಿಲ್ಲ ಎನ್ನುತ್ತಾರೆ ತಜ್ಞರು. ನಿದ್ರಾಹೀನತೆ ಹೇಗೆ ಮಾನಸಿಕ ಒತ್ತಡವನ್ನು ಉಂಟು ಮಾಡುತ್ತದೆಯೋ ಹಾಗೆ ಮಾನಸಿಕ ಒತ್ತಡದಿಂದ ನಿದ್ರೆ ಕಡಿಮೆಯಾಗುತ್ತದೆ. ಇದು ಒಂದಕ್ಕೊಂದು ಸಂಬಂಧ ಹೊಂದಿದೆ. ನೀವು ಸರಿಯಾಗಿ ನಿದ್ರೆ ಮಾಡಿದ್ರೆ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ನಿಮ್ಮ ಒತ್ತಡವನ್ನು ಇದು ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ.
ನಿದ್ರಾಹೀನತೆ, ನಿದ್ರೆಯಲ್ಲಿ ಉಸಿರುಕಟ್ಟುವುದು, ನಾರ್ಕೊಲೆಪ್ಸಿ, ರೆಸ್ಟ್ ಲೆಸ್ ಲೆಗ್ ಸಿಂಡ್ರೋಮ್‌ನಂತಹ ಯಾವುದೇ ನಿದ್ರೆಗೆ ಸಂಬಂಧಿತ ಸಮಸ್ಯೆಗೆ ಸ್ಲೀಪಿಂಗ್ ಥೆರಪಿಯಲ್ಲಿ ಚಿಕಿತ್ಸೆಯಿದೆ. ಸ್ಲೀಪ್ ಥೆರಪಿ ತೆಗೆದುಕೊಳ್ಳುವುದರಿಂದ ನಿದ್ರಾಹೀನತೆಯಿಂದ ಉಂಟಾಗುವ ಸಮಸ್ಯೆಗಳಿಂದಲೂ ನಿಮ್ಮನ್ನು ರಕ್ಷಿಸಿಕೊಳ್ಳಬಹುದು. ಅಂದ್ರೆ ಮಧುಮೇಹ, ಹೃದ್ರೋಗ ಮತ್ತು ಸ್ಥೂಲಕಾಯತೆ ಅಪಾಯದಿಂದ ನೀವು ರಕ್ಷಣೆ ಪಡೆಯಬಹುದು.