ಲಸಿಕೆ ಹಾಕಿಸಿದ ನಂತರ ಜ್ವರ ಬಂದರೆ ನೀವು ಸ್ಟ್ರಾಂಗ್ ಅಂತೇನೂ ಅಲ್ಲ!

By Suvarna NewsFirst Published May 10, 2021, 3:10 PM IST
Highlights

ಲಸಿಕೆ ತೆಗೆದುಕೊಂಡ ಮೇಲೆ ಜ್ವರ, ಮೈಕೈನೋವು ಬಂದರೆ ನನ್ನ ಇಮ್ಯುನಿಟಿ ಚೆನ್ನಾಗಿದೆ ಎಂಬುದು ಪಕ್ಕಾ ಎಂದುಕೊಳ್ಳುತ್ತಿದ್ದೀರಾ? ಇಲ್ಲಿದೆ ಆ ಬಗ್ಗೆ ಸತ್ಯ ಸಂಗತಿ.

ನಿಮ್ಮಲ್ಲಿ ಬಹುತೇಕ ಮಂದಿ ಈಗಾಗಲೇ ಒಂದು ಬಾರಿ ಕೋವಿಡ್ ಲಸಿಕೆ ಹಾಕಿಸಿಕೊಂಡಿರಬಹುದು. ಅಥವಾ ಮೊದಲ ಲಸಿಕೆ ಡೋಸ್‌ಗಾಗಿ ಕಾಯುತ್ತಿರಬಹುದು. ಅಥವಾ ಕೆಲವರಿಗೆ ಎರಡನೇ ಡೋಸ್ ಕೂಡ ಸಿಕ್ಕಿರಬಹುದು. ಇದರ ಬಗ್ಗೆ ನೀವು ಜನ ಮಾತಾಡಿಕೊಳ್ಳುವುದನ್ನು ಕೇಳಿರಬಹುದು- ನಂಗೆ ಲಸಿಕೆ ತೆಗೆದುಕೊಂಡ ಮರುದಿನ ಜ್ವರ ಬಂತು, ಮೈ ಕೈ ನೋವಿತ್ತು. ಹೀಗಾಗಿ ನನ್ನ ಬಾಡಿಯ ಇಮ್ಯುನಿಟಿ ಚೆನ್ನಾಗಿ ಕೆಲಸ ಮಾಡ್ತಿದೆ ಎಂದರ್ಥ. ಹೀಗಾಗಿ ನಂಗೆ ಕೊರೊನಾ ಬರುವ ಭಯವಿಲ್ಲ- ಅಂತ. ಇದು ನಿಜಾನಾ?

ಬಹಳಷ್ಟು ಮಂದಿಯಲ್ಲಿ ಇಂಥದೊಂದು ತಪ್ಪು ಕಲ್ಪನೆ ಇದೆ. ಆದರೆ ಈ ಕಲ್ಪನೆಯಲ್ಲಿ ಹುರುಳಿಲ್ಲ ಅಂತಾರೆ ವೈದ್ಯರು. ಯಾಕೆ ಗೊತ್ತೆ? ಲಸಿಕೆ ಹಾಕಿಸಿದಾಗ ನಮ್ಮ ದೇಹದಲ್ಲಿ ಏನಾಗುತ್ತದೆ ಅಂತ ಮೊದಲು ತಿಳಿಯೋಣ ಬನ್ನಿ. 

ನೀವು ಯಾವುದೇ ಲಸಿಕೆ ಹಾಕಿಸುತ್ತೀರಿ ಎಂದಿಟ್ಟುಕೊಳ್ಳಿ. ಆಗ ಒಂದು ಪರಕೀಯ ಅಣು ನಿಮ್ಮ ದೇಹವನ್ನು ಪ್ರವೇಶಿಸುತ್ತದೆ. ಲಸಿಕೆಯಲ್ಲಿರುವ ದುರ್ಬಲಗೊಳಿಸಿದ ವೈರಾಣು, ಅಥವಾ ವೈರಾಣುವಿನ ಆರ್‌ಎನ್‌ಎ. ಇದು ನಮ್ಮಲ್ಲಿ ಸೋಂಕು ಹಬ್ಬಿಸುವಷ್ಟು ಸ್ಟ್ರಾಂಗ್ ಆಗಿರುವುದಿಲ್ಲ. ಆದರೆ ಸೋಂಕುಕಾರಿ ಶತ್ರುವೊಬ್ಬ ನಮ್ಮ ಕೋಟೆಯೊಳಗೆ ಪ್ರವೇಶಿಸಿದ್ದಾನೆ ಎಂಬುದು ನಮ್ಮ ದೇಶದ- ದೇಹದ ಸೈನಿಕರಿಗೆ ಗೊತ್ತಾಗಿಬಿಡುತ್ತದೆ. ಯಾರು ಈ ಸೈನಿಕರು? ಬಿಳಿ ರಕ್ತ ಕಣಗಳು. ಕೂಡಲೇ ಸೋಂಕಿನ ಕಣ ನಮ್ಮ ದೇಹಕ್ಕೆ ಪ್ರವೇಶಿಸಿದ ಜಾಗಕ್ಕೆ ಬಿಳಿ ರಕ್ತ ಕಣಗಳು ಧಾವಿಸುತ್ತವೆ. ಪರಕೀಯ ರೋಗಾಣುವಿನ ಮೇಲೆ ಯುದ್ಧ ಸಾರಿ ಅದನ್ನು ನಾಶ ಮಾಡುತ್ತವೆ. ಈ ಪ್ರಕ್ರಿಯೆಯಲ್ಲಿ ನಮ್ಮ ದೇಹಕ್ಕೆ ಮೈಕೈ ನೋವು ಶುರುವಾಗುತ್ತದೆ- ಜ್ವರ ಬರುತ್ತದೆ. ದೇಹ ಬಿಸಿಯಾಗುತ್ತದೆ. ಇಡೀ ದೇಹ ವೈರಿಯನ್ನು ಎದುರಿಸಲು ಸಿದ್ಧವಾಗುತ್ತದೆ. 



ಇದು ಕೊರೊನಾ ಲಸಿಕೆ ಎಂದಲ್ಲ, ಯಾವುದೇ ಲಸಿಕೆ ತೆಗೆದುಕೊಂಡರೂ ನಮ್ಮ ದೇಹದಲ್ಲಿ ಉಂಟಾಗುವ ಪ್ರಕ್ರಿಯೆ. ನೀವು ಜಾರಿ ಬಿದ್ದು ಏಟು ಮಾಡಿಕೊಂಡರೂ, ಗಾಯ ಉಂಟಾದ ಜಾಗದಲ್ಲಿ ವಾತಾವರಣದ, ಗಾಳಿಯ, ನೀರಿನ, ಮಣ್ಣಿನಲ್ಲಿರುವ ಪರಕೀಯ ಅಣುಗಳು ದೇಹವನ್ನು ಪ್ರವೇಶಿಸುತ್ತವೆ. ಆಗಲೂ ದೇಹದಲ್ಲಿ ಕಣಗಳ ಯುದ್ಧ ನಡೆದು ದೇಹ ಬಿಸಿಯಾಗುತ್ತದೆ. ಬಿದ್ದ ಏಟಿಗೂ ಜ್ವರ ಬರುವುದಕ್ಕೆ ಇದೇ ಕಾರಣ.

ಇದನ್ನೇ ನಮ್ಮ ದೇಹದ ಇನ್ನೇಟ್ ಇಮ್ಯೂನ್ ರೆಸ್ಪಾನ್ಸ್ ಎನ್ನುತ್ತಾರೆ. ಎಂದರೆ ಇದು ಪ್ರಾಥಮಿಕ ಪ್ರತಿರೋಧ ಪ್ರಕ್ರಿಯೆ. ಯಾವುದೇ ಪರಕೀಯ ಅಣು ಬಂದರೂ ದೇಹ ಅದನ್ನು ಹೀಗೇ ಎದುರಿಸುತ್ತದೆ.

ಆದರೆ ನಮ್ಮೊಳಗೆ ಇನ್ನೂ ಒಂದು ಬಗೆಯ ಪ್ರತಿರೋಧ ಶಕ್ತಿ ಇರುತ್ತದೆ. ಇದನ್ನು ಅಡಾಪ್ಟಿವ್ ಇಮ್ಯೂನ್ ರೆಸ್ಪಾನ್ಸ್ ಎನ್ನುತ್ತಾರೆ.  ಅಂದರೆ ಬೆಳೆಸಿಕೊಂಡ ಪ್ರತಿರೋಧ ವ್ಯವಸ್ಥೆ. ಇದು ಅತ್ಯುನ್ನತವಾಗಿ ತರಬೇತಾದ ಪ್ರತಿಕಾಯ ವ್ಯವಸ್ಥೆ. ಇವು ಟಿ ಸೆಲ್ ಅಥವಾ ಬಿ ಸೆಲ್ ಎಂದು ಕರೆಯಲ್ಪಡುವ ನೆನಪಿನ ಕೋಶಗಳ ರೂಪದಲ್ಲಿ ಇರುತ್ತವೆ. ಇವುಗಳನ್ನು ನಮ್ಮ ದೇಹದ ಬ್ಲ್ಯಾಕ್ ಕ್ಯಾಟ್ ಕಮಾಂಡೋ ಫೋರ್ಸ್ ಅನ್ನಬಹುದು. ತುಂಬಾ ವಿಶೇಷ, ಸ್ಪೆಶಲ್ ಕಾರ್ಯಾಚರಣೆಗಳಿದ್ದಾಗ ಮಾತ್ರ ಇವು ರಂಗಕ್ಕೆ ಇಳಿಯುವುದು. ಹೀಗೆ ತರಬೇತಾಗುವ ಕಮಾಂಡೋಗಳು ತಮ್ಮ ತರಬೇತಿಗೆ ಆರಂಭಿಸುವುದು ಇನ್ನೇಟ್ ಇಮ್ಯೂನ್ ವ್ಯವಸ್ಥೆಯಿಂದಲೇ. ಅಂದರೆ ಬಿಳಿ ರಕ್ತ ಕಣಗಳಿಂದಲೇ ಇವು ಪ್ರಥಮ ಪಾಠ ಕಲಿಯುತ್ತವೆ. ಆದರೆ ಒಮ್ಮೆ ಇವು ಪರಕೀಯ ಅಣುವಿನ ವಿರುದ್ಧ ಕಾದಾಡಿ ಅದನ್ನು ನೆನಪಿಟ್ಟುಕೊಂಡರೆ, ಅವುಗಳನ್ನು ಜೀವನ ಪೂರ್ತಿ ಮರೆಯುವುದೇ ಇಲ್ಲ. 



ಉದಾಹರಣೆಗೆ, ಕೊರೊನಾದ ಆರ್‌ಎನ್‌ಎಯನ್ನೇ ಇವು ಎದುರಿಸಿದರೆ, ಅವುಗಳನ್ನು ಎದುರಿಸುವ ಟಿ ಮತ್ತು ಬಿ ಸೆಲ್‌ಗಳೇ ಸೃಷ್ಟಿಯಾಗಿ, ಅವುಗಳದೇ ಒಂದು ಕಾರ್ಯಪಡೆ ಸಿದ್ಧಗೊಂಡು ನಿಮ್ಮ ದೇಹದಲ್ಲಿ ಎಲ್ಲೋ ಒಂದು ಕಡೆ ಇದ್ದುಬಿಡುತ್ತದೆ. ಮುಂದಿನ ಬಾರಿ ಕೊರೊನಾ ವೈರಸ್ ನಿಮ್ಮ ದೇಹಕ್ಕೆ ಎಲ್ಲಾದರೂ ಪ್ರವೇಶಿಸಿದರೆ, ಅದು ಒಂದು ತಿಂಗಳಾಗಿರಲಿ, ಒಂದು ವರ್ಷವಾಗಿರಲಿ, ಈ ಟಿ ಮತ್ತು ಬಿ ಸೆಲ್‌ಗಳು ಥಟ್ಟನೆ ಆ ಜಾಗಕ್ಕೆ ಧಾವಿಸಿ ಅವುಗಳ ವಿರುದ್ಧ ಹೋರಾಟದಲ್ಲೂ ತೊಡಗಿಕೊಳ್ಳುತ್ತವೆ- ಅವುಗಳಂಥದೇ ಪ್ರತಿಕಾಯಗಳನ್ನೂ ಸೃಷ್ಟಿಸಿ ಹೊಸ ಕಮಾಂಡೋಗಳನ್ನು ತಯಾರು ಮಾಡಿ ತರಬೇತು ನೀಡಿಯೂ ಬಿಡುತ್ತವೆ.


ಅಂದರೆ, ನಿಮ್ಮ ದೇಹಕ್ಕೆ ಲಸಿಕೆ ಹಾಕಿದಾಗ ಉಂಟಾಗುವ ಜ್ವರ, ನಿಮ್ಮ ಪ್ರಾಥಮಿಕ ಪ್ರತಿರೋಧ ಶಕ್ತಿ ಚೆನ್ನಾಗಿದೆ ಎಂಬುದಕ್ಕೆ ಉದಾಹರಣೆ. ಆದರೆ ದ್ವಿತೀಯ ಹಂತದ ಪ್ರತಿರೋಧ ವ್ಯವಸ್ಥೆಯೂ ಅಷ್ಟೇ ಚೆನ್ನಾಗಿದೆ ಎಂದೇನೂ ಅರ್ಥವಲ್ಲ. ದ್ವಿತೀಯ ಹಂತದ ವ್ಯವಸ್ಥೆ ಬಲಿಷ್ಠವಾಗಬೇಕಾದರೆ, ಸುಮಾರು ಎರಡು ವಾರಗಳಾದರೂ ಬೇಕು. ಲಸಿಕೆ ಮೂಲಕ ಒಳಹೋದ ಕೊರೊನಾ ವೈರಸ್‌ನ ಆರ್‌ಎನ್‌ಎಯನ್ನು ನೋಡಿ, ಪರಿಶೀಲಿಸಿ, ಅದಕ್ಕೆ ಸರಿಯಾದ ಪ್ರತಿಕಾಯಗಳನ್ನು ಸೃಷ್ಟಿಸಲು ಈ ವ್ಯವಸ್ಥೆ ಎರಡು ವಾರ ತೆಗೆದುಕೊಳ್ಳುತ್ತದೆ.

ಆದ್ದರಿಂದಲೇ ಹೇಳಿದ್ದು, ಮೊದಲ ಡೋಸ್ ತೆಗೆದುಕೊಂಡು ನಿಮ್ಮ ಬಾಡಿಗೆ ಜ್ವರ ಬಂದು ಬಿಟ್ಟ ಕೂಡಲೇ, ಆಹಾ ನಾನು ಇಮ್ಯೂನ್ ಆಗಿಬಿಟ್ಟೆ ಎಂದು ಭಾವಿಸಬೇಡಿ. ಮೈ ಮರೆಯಬೇಡಿ. ಎರಡನೇ ಡೋಸ್ ತೆಗೆದುಕೊಂಡು ಎರಡು ವಾರ ಆಗುವವರೆಗೂ ಎಲ್ಲ ಎಚ್ಚರಿಕೆ ಪಾಲಿಸಿ. ಮುಂದೆಯೂ ಪಾಲಿಸಿ. 


 

click me!