ದೇಹ ಉಷ್ಣವಾದಾಗ ಹೇಳಲಾರದ ಕಿರಿಕಿರಿ ಆಗುತ್ತದೆ. ಹಲವರಿಗೆ ಏಕೆ ಇಂತಹ ಹಿಂಸೆ ಆಗುತ್ತಿದೆ ಎಂದು ಗುರುತಿಸುವುದು ಕಷ್ಟವಾಗಬಹುದು. ಪಿತ್ತ ದೋಷದಲ್ಲಾಗುವ ವ್ಯತ್ಯಾಸದಿಂದ ಸಾಕಷ್ಟು ಸಮಸ್ಯೆ ಉಂಟಾಗುತ್ತದೆ. “ಯಾವುದೋ ಭಾರೀ ಅನಾರೋಗ್ಯ ಉಂಟಾಗಿದೆʼ ಎನ್ನುವ ಭಾವನೆ ಕಾಡಬಹುದು. ಇದಕ್ಕೆಲ್ಲ ದೇಹ ಉಷ್ಣವಾಗುವುದೇ ಕಾರಣ.
ಕೆಲವರಿಗೆ ಪದೇ ಪದೆ ಬಾಯಿಯಲ್ಲಿ ಹುಣ್ಣು ಮತ್ತು ಗುಳ್ಳೆಗಳು ಏಳುತ್ತಿರುತ್ತವೆ. ವೈದ್ಯರ ಬಳಿ ಹೋದಾಗ ವಿಟಮಿನ್ ಬಿ ಮಾತ್ರೆಗಳನ್ನು ನೀಡುತ್ತಾರೆ. ಅದರಿಂದ ಎರಡು ದಿನದಲ್ಲಿ ಸಮಸ್ಯೆ ಸರಿ ಹೋಗುತ್ತದೆ. ಆದರೆ, ಇದು ಏಕಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ದೇಹದಲ್ಲಿ ಉಷ್ಣವಾದಾಗ ಬಹಳಷ್ಟು ಜನರಿಗೆ ಇದು ಸಾಮಾನ್ಯ. ಎಲ್ಲರಿಗೂ ಅಲ್ಲದಿದ್ದರೂ ಕೆಲವರು ದೇಹ ಉಷ್ಣವಾಗುವ ಸಮಸ್ಯೆ ಎದುರಿಸುತ್ತಾರೆ. ಎಲ್ಲರಲ್ಲೂ ಒಂದಲ್ಲ ಒಂದು ರೀತಿಯಲ್ಲಿ ದೇಹ ಉಷ್ಣವಾಗುವ ಸಮಸ್ಯೆ ಉಂಟಾಗುತ್ತದೆ. ಆ ಸಮಯದಲ್ಲಿ ಸರಿಯಾದ ನಿದ್ರೆಯೂ ಬರುವುದಿಲ್ಲ. ನಿದ್ರೆ ಮಾಡಿದರೂ ಆಳವಾದ ಸುಖವಾದ ನಿದ್ರೆ ಮಾಡಿದ ನೆಮ್ಮದಿ ಇರುವುದಿಲ್ಲ. ಆಯುರ್ವೇದ ತಜ್ಞ ವೈದ್ಯರ ಪ್ರಕಾರ, ದೇಹ ಉಷ್ಣವಾಗುವುದು ಯಾವಾಗೆಂದರೆ, ಪಿತ್ತದ ಪ್ರಕೃತಿಯಲ್ಲಿ ವ್ಯತ್ಯಾಸವಾದಾಗ. ನಿಮಗೆ ಗೊತ್ತಿರಬಹುದು. ನಮ್ಮ ದೇಹ ಮುಖ್ಯವಾಗಿ ಮೂರು ಅಂಶಗಳ ದೋಷದಿಂದ ಕೂಡಿರುತ್ತದೆ. ವಾತ, ಪಿತ್ತ, ಕಫ ಎನ್ನುವ ಈ ದೋಷಗಳ ವ್ಯತ್ಯಾಸ, ಸಮತೋಲದಿಂದಾಗಿ ನಮ್ಮ ವ್ಯಕ್ತಿತ್ವವೂ ರೂಪುಗೊಳ್ಳುತ್ತದೆ ಎನ್ನಲಾಗುತ್ತದೆ. ಇಲ್ಲಿ ಪಿತ್ತ ದೋಷವೆಂದರೆ, ತೈಲ, ಚುರುಕು, ಶಾಖವನ್ನು ಹೊಂದಿರುವಂಥದ್ದು. ಪಿತ್ತದಲ್ಲಿ ವ್ಯತ್ಯಾಸವಾದಾಗ ದೇಹದ ಶಾಖ ಹೆಚ್ಚುತ್ತದೆ.
ಪಿತ್ತದ ಪ್ರಕೃತಿ (Pitta Dosha) ದೇಹದಲ್ಲಿ ಹೆಚ್ಚಿದಾಗ ಅಥವಾ ವ್ಯತ್ಯಾಸವಾದಾಗ ಚರ್ಮ (Skin) ಸೂಕ್ಷ್ಮವಾಗುತ್ತದೆ, ಬಾಯಿಯಲ್ಲಿ ಹುಣ್ಣುಗಳು (Mouth Ulcer) ಏಳಬಹುದು. ಬೆವರು (Sweat) ಬರಬಹುದು, ದೇಹವಿಡೀ ಉರಿಯಾಗಿ, ಸೆಖೆಯಾಗಿ ಹಿಂಸೆಯಾಗಬಹುದು, ಮಲ ಉರಿಉರಿಯಾಗಿ ಲೋಳೆಯಂತೆ ಹೋಗಬಹುದು. ಆಸಿಡಿಟಿ (Acidity) ಉಂಟಾಗಬಹುದು. ಅಷ್ಟೇ ಅಲ್ಲ, ನಿಮಗೆ ಅಚ್ಚರಿಯಾಗಬಹುದು. ದೇಹ ಉಷ್ಣಕ್ಕೆ ತುತ್ತಾದಾಗ ಕೋಪ (Angry), ಕಿರಿಕಿರಿ ಹೆಚ್ಚಬಹುದು. ಪಿತ್ತ ದೋಷದ ಸಮಸ್ಯೆ ಉಳ್ಳವರು ಸ್ವಭಾವತಃ ಸ್ವಲ್ಪ ಕಿರಿಕಿರಿಯಲ್ಲೇ ಇರುವುದು ಸಹಜ.
undefined
Health Tips : ತ್ರಿದೋಷದಿಂದ ದೇಹದಲ್ಲಾಗುತ್ತೆ ಈ ಬದಲಾವಣೆ
ಪಿತ್ತ ದೋಷಕ್ಕೆ ಕಾರಣವೇನು?
ಆಯುರ್ವೇದ ತಜ್ಞೆ ಡಾ. ರೇಖಾ ರಾಧಾಮಣಿ ಎನ್ನುವವರು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಇತ್ತೀಚೆಗೆ ಹಂಚಿಕೊಂಡಿದ್ದಾರೆ. ಪಿತ್ತ ದೋಷ ಹೆಚ್ಚಲು ಪ್ರಮುಖವಾಗಿ ಮೂರು ಕಾರಣಗಳನ್ನು ಅವರು ಗುರುತಿಸಿದ್ದಾರೆ.
• ಪಿತ್ತ ಹೆಚ್ಚಿಸುವ ಆಹಾರಗಳ (Foods) ಸೇವನೆ ಮಾಡುವುದರಿಂದ ದೇಹದಲ್ಲಿ ವ್ಯತ್ಯಾಸ ಆಗುತ್ತದೆ. ಉಷ್ಣ (Heat) ಹೆಚ್ಚಿಸುವ, ಮಸಾಲೆಯುಕ್ತ (Spicy), ಹುದುಗುಬರಿಸಿದ (Fermented), ಉಪ್ಪು ಹೆಚ್ಚಿರುವ (Salty), ತೈಲದಿಂದ (Oily) ಕೂಡಿರುವ ಹಾಗೂ ಕರಿದ ತಿಂಡಿಗಳು (Fried Food) ಪಿತ್ತವನ್ನು ಹೆಚ್ಚಿಸುತ್ತವೆ. ಆಲ್ಕೋಹಾಲ್ (Alcohol) ಮತ್ತು ಕೆಫೀನ್ ಅಂಶಗಳು ಸಹ ತೀಕ್ಷ್ಣವಾಗಿದ್ದು, ದೇಹದಲ್ಲಿ ಬಿಸಿ ಉಂಟುಮಾಡುತ್ತವೆ, ಪಿತ್ತ ದೋಷ ಹೆಚ್ಚಿಸುತ್ತವೆ.
• ಸೂರ್ಯನ ಬಿಸಿಲಿಗೆ (Sun Light) ಅತಿಯಾಗಿ ಒಡ್ಡಿಕೊಳ್ಳುವುದರಿಂದಲೂ ಪಿತ್ತ ದೋಷ ಹೆಚ್ಚುತ್ತದೆ. ಆಗ ದೇಹದಲ್ಲಿ ಶಾಖ ಹೆಚ್ಚಾಗಿ ಸಮಸ್ಯೆ ಉಂಟಾಗುತ್ತದೆ.
• ಮಿತಿ ಮೀರಿದ ದೈಹಿಕ ಚಟುವಟಿಕೆಯೂ (Physical Activity) ಪಿತ್ತ ದೋಷ ಹೆಚ್ಚಿಸಬಲ್ಲದು ಎಂದರೆ ಅಚ್ಚರಿಯಾಗಬಹುದು. ಮಾಂಸಖಂಡಗಳ ಚಲನೆ, ರಕ್ತದ ಪರಿಚಲನೆಗೆ (Blood Flow) ಸಂಬಂಧವಿದೆ. ಇದು ಅಧಿಕವಾದಾಗ ದೇಹದಲ್ಲಿ ಶಾಖ ಹೆಚ್ಚುತ್ತದೆ.
Pitta Dosha: ಪಿತ್ತ ದೋಷವೇ? ಜೀವನಶೈಲಿ ಹೀಗಿದ್ರೆ ನಿಮ್ಗೆ ಒಳ್ಳೇದು
ದೇಹದ ಉಷ್ಣ ಕಡಿಮೆ ಮಾಡ್ಕೊಳಿ
ದೇಹದ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಲು ಕೆಲವು ಸರಳ ಮಾರ್ಗೋಪಾಯಗಳನ್ನು ಅನುಸರಿಸಬಹುದು. ಕೊತ್ತಂಬರಿ ಅಥವಾ ಧನಿಯಾ ಬೀಜಗಳನ್ನು ಸ್ವಲ್ಪ ಪುಡಿ ಮಾಡಿ ಅದನ್ನು 50 ಎಂಎಲ್ ನೀರಿನಲ್ಲಿ ರಾತ್ರಿ ಹಾಕಿಡಿ. ಮಾರನೆಯ ದಿನ ಬೆಳಗ್ಗೆ ಎದ್ದಾಗ ಅದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದರಿಂದ ದೇಹದ ಉಷ್ಣತೆ ಕಡಿಮೆ ಆಗುವುದು ಮಾತ್ರವಲ್ಲ, ಎದೆಯುರಿ ಸಹ ಕಡಿಮೆ ಆಗುತ್ತದೆ. ಅಧಿಕ ಬಾಯಾರಿಕೆ ನೀಗುತ್ತದೆ. ಪಿತ್ತ ದೋಷವನ್ನು ನಿಯಂತ್ರಣದಲ್ಲಿ ಇಡಲು ಈ ವಿಧಾನ ಭಾರಿ ಸಹಕಾರಿ ಆಗಿದೆ.