ಕೊರೊನಾದ ಜೊತೆಗೆ ಇನ್ನೊಂದು ಸೈಲೆಂಟ್‌ ಕಿಲ್ಲರ್‌ ಹ್ಯಾಪಿ ಹೈಪಾಕ್ಸಿಯಾ!

By Suvarna NewsFirst Published May 19, 2021, 5:02 PM IST
Highlights

ಗೊತ್ತೇ ಆಗದಂತೆ ಕೋವಿಡ್ ಪೀಡಿತ ಯುವಜನತೆಯನ್ನು ಬಲಿ ಪಡೆಯುತ್ತಿದೆ ಹ್ಯಾಪಿ ಹೈಪಾಕ್ಸಿಯಾ!  

ಕೊರೊನಾದ ಜೊತೆಗೆ ಇನ್ನೂ ಏನೇನೆಲ್ಲ ನೋಡಬೇಕೋ, ತಜ್ಞರಿಗೂ ಬಗೆಹರಿಯದಂತಾಗಿದೆ. ಎರಡನೇ ಅಲೆಯ ಕೋವಿಡ್‌ನಲ್ಲಿ ವೈದ್ಯರಿಗೆ. ಆರೋಗ್ಯ ಪರಿಣತರಿಗೆ ತಲೆ ತುಂಬಾ ಕಾಡಿದ ಒಂದು ಸಮಸ್ಯೆ ಎಂದರೆ, ಇಷ್ಟೊಂದು ಮಂದಿ ಯುವಜನತೆ ಯಾಕೆ ಹೀಗೆ ಬಲಿಯಾಗ್ತಿದಾರೆ? ಕೆಲವು ಪ್ರಕರಣಗಳಂತೂ ವೈದ್ಯರನ್ನು ಧೃತಿಗೆಡಿಸಿವೆ. ಎಲ್ಲ ರೀತಿಯಿಂದಲೂ ಆರೋಗ್ಯಕರವಾಗಿದ್ದ, ಯಾವುದೇ ದುಶ್ಚಟಗಳಿಲ್ಲದ, ಮಧುಮೇಹ- ಬಿಪಿ ಇತ್ಯಾದಿ ಇಲ್ಲದ ಯುವಕರು ಇದ್ದಕ್ಕಿದ್ದಂತೆ ಆಕ್ಸಿಜನ್ ಲೆವೆಲ್ ಪಾತಾಳಕ್ಕೆ ಕುಸಿದು, ಆಸ್ಪತ್ರೆಗೆ ಅಡ್ಮಿಟ್ ಆದ ಒಂದೆರಡೇ ದಿನಗಳಲ್ಲಿ ಮೃತಪಡ್ತಿದ್ದಾರೆ. ನಿನ್ನೆ ಹ್ಯಾಪಿಯಾಗಿದ್ದ ವ್ಯಕ್ತಿ ಇಂದು ಇಲ್ಲ. ಯಾಕೆ ಹೀಗೆ?
ಹುಡುಕಾಡಿದಾಗ ಅದಕ್ಕೆ ಒಂದು ಉತ್ತರ ಸಿಕ್ಕಿದ್ದು- ಹ್ಯಾಪಿ ಹೈಪಾಕ್ಸಿಯಾ. ಏನಿದು ಹ್ಯಾಪಿ ಹೈಪಾಕ್ಸಿಯಾ?



ಹೈಪಾಕ್ಸಿಯಾ ಅಂದರೆ ಆಮ್ಲಜನಕದ ಕೊರತೆ. ನಾರ್ಮಲ್ ವ್ಯಕ್ತಿಯ ದೇಹದ ರಕ್ತದಲ್ಲಿ ೯೫%ಗಿಂತ ಅಧಿಕ ಆಮ್ಲಜನಕದ ಅಂಶ ಇರುತ್ತದೆ. ಆದರೆ ಕೋವಿಡ್‌ ರೋಗಿಯಲ್ಲಿ ಅದು ಅತ್ಯಂತ ಅಪಾಯಕಾರಿ ಮಟ್ಟವಾದ ಶೇ.40ಕ್ಕೆಲ್ಲ ಇಳಿದುಬಿಡುತ್ತದೆ. ಈ ಹೈಪಾಕ್ಸಿಯಾ ಕೋವಿಡ್‌ ರೋಗಿಗಳಲ್ಲಿ ಒಂದು ಎಚ್ಚರಿಕೆಯ ಸಂದೇಶ. ಇದನ್ನು ಕಡೆಗಣಿಸಿದರೆ ಉಸಿರಾಟದ ತೊಂದರೆ ಜೋರಾಗುತ್ತದೆ; ಬಹುಮುಖ್ಯ ಅಂಗಗಳಾದ ಕಿಡ್ನಿ, ಹೃದಯ, ಶ್ವಾಸಕೋಶ ಮುಂತಾದವುಗಳ ವೈಫಲ್ಯ ಸಂಭವಿಸುತ್ತದೆ. ಹೈಪಾಕ್ಸಿಯಾದಲ್ಲಿ ರಕ್ತದಲ್ಲಿ ಆಕ್ಸಿಜನ್‌ ಕುಸಿತ ಆರಂಭವಾಗುತ್ತಿದ್ದಂತೆ ರೋಗಿಯಲ್ಲಿ ಉಸಿರಾಟದ ಉಲ್ಬಣತೆ ಕಾಣಿಸುತ್ತದೆ. ಆದರೆ ಹ್ಯಾಪಿ ಹೈಪಾಕ್ಸಿಯಾದಲ್ಲಿ, ರೋಗಿಯ ರಕ್ತದಲ್ಲಿ ಆಮ್ಲಜನಕ ಕುಸಿಯುತ್ತಾ ಇದ್ದರೂ, ಅದು ದೇಹದಲ್ಲಿ ಯಾವುದೇ ಸೂಚನೆಗಳನ್ನು ತೋರಿಸುವುದಿಲ್ಲ. ಹೀಗಾಗಿ ಈ ರೋಗಿ, ರೋಗದ ಯಾವ ಲಕ್ಷಣಗಳನ್ನೂ ತೋರಿಸದೆ ಖುಷಿಯಾಗಿ, 'ಹ್ಯಾಪಿ'ಯಾಗಿ ಕಾಣಿಸುತ್ತಾನೆ. ಆದರೆ ಒಳಗಿಂದ ಒಳಗೇ ಆಕ್ಸಿಜನ್ ಮಟ್ಟ ಕುಸಿಯುತ್ತಾ ಇರುತ್ತದೆ. ತನಗೇನೂ ಆಗಿಲ್ಲ ಎಂಬ ಭಾವದಲ್ಲಿ ವ್ಯಕ್ತಿ ಚಟುವಟಿಕೆಗಳನ್ನು ನಡೆಸುತ್ತಿರುತ್ತಾನೆ. ಇದೂ ಇನ್ನಷ್ಟು ದಣಿವಿಗೆ ಕಾರಣವಾಗುತ್ತದೆ. ಗೊತ್ತಾಗುವ ಹೊತ್ತಿಗೆ ಕಾಲ ಮಿಂಚಿರುತ್ತದೆ. ಶ್ವಾಸಕೋಶದ ಮೇಲೆ ಆಕ್ರಮಣ ಮಾಡಿರುವ ಕೋವಿಡ್‌ ವೈರಸ್‌ಗಳು, ಆತನನ್ನು ಬಲಿ ಹಾಕಿರುತ್ತವೆ.

Latest Videos



ಇದು ಆಗುವುದು ಹೇಗೆ?
ವೈದ್ಯರು ಇನ್ನೂ ಇದರ ಬಗ್ಗೆ ತಿಳಿಯಲು ಹೆಣಗಾಡುತ್ತಿದ್ದಾರೆ. ಕೆಲವು ಕೋವಿಡ್ ಸೋಂಕಿತರಲ್ಲಿ ಆರಂಭದಲ್ಲಿ ಜ್ವರ ಹಾಗೂ ಭೇದಿ ಕಾಣಿಸಿಕೊಳ್ಳಬಹುದು. ಇದರಿಂದಾಗಿ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ದೇಹ ಪಡೆಯುವ ಆಮ್ಲಜನಕವೆಲ್ಲವೂ ಈ ಆಕ್ಸಿಜನ್ ಪ್ರಮಾಣವನ್ನು ಸರಿದೂಗಿಸಲು ಬಳಕೆಯಾಗುತ್ತದೆ. ನಿಧಾನವಾಗಿ ವ್ಯಕ್ತಿ ಉಸಿರಾಟದ ಗತಿ ವೇಗಗೊಳ್ಳುತ್ತದೆ. ಇದು ವ್ಯಕ್ತಿಗೆ ತಿಳಿಯುವುದೇ ಇಲ್ಲ. ಈ ನಡುವೆ ದೇಹ ಕೂಡ ಅದೇ ಪ್ರಮಾಣದ ಆಕ್ಸಿಜನ್‌ಗೆ ಹೊಂದಿಕೊಂಡು ಬಿಟ್ಟಿರುತ್ತದೆ. ಯುವಜನ ಸಾಮಾನ್ಯವಾಗಿ ಸಣ್ಣಪುಟ್ಟ ಆರೋಗ್ಯ ತೊಂದರೆಗಳನ್ನು ಕಡೆಗಣಿಸುವುದೇ ಹೆಚ್ಚು. ದೇಶದಲ್ಲಿ ಇಂದು ಕೋವಿಡ್‌ನಿಂದ ಆಸ್ಪತ್ರೆ ಸೇರಿಕೊಳ್ಳುತ್ತಿರುವ ರೋಗಿಗಳಲ್ಲಿ ಶೇ.೩೦ ಮಂದಿ ಈ ಹ್ಯಾಪಿ ಹೈಪಾಕ್ಸಿಯಾದಿಂದ ಬಳಲಿದವರು ಎಂದು ವೈದ್ಯರ ಹೇಳುತ್ತಾರೆ. 


ಗುರುತಿಸುವುದು ಹೇಗೆ?
ಹಾಗಿದ್ದರೆ, ಗುರುತೇ ಆಗದೆ ದಾಳಿ ಮಾಡುವ ಈ ಹ್ಯಾಪಿ ಹೈಪಾಕ್ಸಿಯಾ ಅನ್ನು ಗುರುತಿಸುವುದು ಹೇಗೆ? ಇಂಥವರಲ್ಲಿ ತುಟಿಗಳ ಬಣ್ಣ ಸಹಜತೆಯಿಂದ ನೀಲಿ ಬಣ್ಣಕ್ಕೆ ತಿರುಗಬಹುದು; ಚರ್ಮದ ಬಣ್ಣ ಕೆಂಪು ಅಥವಾ ನೇರಳೆಯಾಗಿ ತಿರುಗಬಹುದು; ಯಾವುದೇ ದೊಡ್ಡ ದಣಿವಾಗುವ ಕೆಲಸ ಮಾಡದಿದ್ದರೂ ಸಣ್ಣಪುಟ್ಟ ಕೆಲಸಗಳಿಗೇ ಮೈಯೆಲ್ಲ ಬೆವರಬಹುದು. 
ಹಾಗಿದ್ದರೆ ಇದರಿಂದ ಪಾರಾಗುವ ಬಗೆ ಹೇಗೆ? ಮೇಲೆ ಹೇಳಿದ ಲಕ್ಷಣಗಳು ಕಾಣಿಸಿಕೊಳ್ಳುವವರೆಗೂ ಕಾಯಬೇಡಿ. ಬದಲಾಗಿ, ಕೋವಿಡ್ ಪಾಸಿಟಿವ್‌ ಎಂದು ತಿಳಿದಿದ್ದು, ಯಾವುದೇ ಪ್ರಮುಖ ರೋಗಲಕ್ಷಣಗಳು ಇಲ್ಲದಿದ್ಯಾಗ್ಯೂ, ಆಗಾಗ ರಕ್ತದ ಆಕ್ಸಿಜನ್‌ ಮಟ್ಟವನ್ನು ಪಲ್ಸ್ ಆಕ್ಸಿಮೀಟರ್‌ ಮೂಲಕ ಚೆಕ್ ಮಾಡಿಕೊಳ್ಳುತ್ತಾ ಇರಿ. 94ಕ್ಕಿಂತಲೂ ಕೆಳಗೆ ಇಳಿದಾಗ ಜಾಗರೂಕರಾಗಿ, ವೈದ್ಯರ ಸಲಹೆ ಪಡೆಯಿರಿ.   


 

  

click me!