ಸಾವಿನ ಹತ್ತಿರ ಹೋಗಿ ವಾಪಸ್‌ ಬರೋ ಅನುಭವ ಹೇಗಿರುತ್ತೆ? ಹೋಗಿ ಬಂದವರು ಹೇಳೋದೇನು?

By Suvarna News  |  First Published Nov 10, 2023, 11:14 AM IST

ಸಾವಿನ ಸಮೀಪ ಹೋಗಿ ಮರಳಿ ಬದುಕಿಗೆ ಬಂದ ಅನುಭವ ಅನೇಕರಿಗೆ ಆಗಿರಬಹುದು. ಆದರೆ ಅದನ್ನು ಸರಿಯಾಗಿ ವಿವರಿಸೋಕೆ ಅವರಿಗೂ, ಅರ್ಥ ಮಾಡಿಕೊಳ್ಳೋಕೆ ನಮಗೂ ಸಾಧ್ಯವಾಗಿಲ್ಲ. ಹಾಗಿದ್ದರೆ ಅದು ಹೇಗಿರುತ್ತೆ?


ಸಾವಿನ ಸಮೀಪ ಹೋಗಿ ಮರಳಿ ಬದುಕಿಗೆ ಬಂದ ಅನುಭವ (near death experience)  ಅನೇಕರಿಗೆ ಆಗಿರಬಹುದು. ಆದರೆ ಅದನ್ನು ಸರಿಯಾಗಿ ವಿವರಿಸೋಕೆ ಅವರಿಗೂ, ಅರ್ಥ ಮಾಡಿಕೊಳ್ಳೋಕೆ ನಮಗೂ ಸಾಧ್ಯವಾಗಿಲ್ಲ. ಸಾವಿರಾರು ಜನರು ಈ ವಿಚಿತ್ರ ವಿದ್ಯಮಾನದಿಂದ ಪ್ರಭಾವಿತರಾಗಿದ್ದೇವೆಂದು ಹೇಳಿಕೊಳ್ಳುತ್ತಾರೆ. ದಶಕಗಳಿಂದ ವಿಜ್ಞಾನ ಇದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ಸಾವಿನ ಸಮೀಪ ಹೋಗುವ ಅನುಭವವು ಭಯ, ಆತಂಕ, ಒಂಟಿತನ, ಶಾಂತತೆ, ತಲ್ಲಣಗಳ ಉತ್ಕಟಾವಸ್ಥೆಯನ್ನೆಲ್ಲಾ ಒಳಗೊಂಡಿರಬಹುದು. ಹಾಗಿದ್ದರೆ ಅದು ಹೇಗಿರುತ್ತೆ?

ಇಷ್ಟಕ್ಕೂ ಸಾವಿನ ಸಮೀಪದ ಅನುಭವ (NDE) ಎಂದರೇನು? ಇದು ಸಾವಿನ ಸಮೀಪದ ಆಳವಾದ ವೈಯಕ್ತಿಕ ಅನುಭವ ಅಥವಾ ಸಾವು ಸನ್ನಿಹಿತವಾದ ಅನುಭವ. ಆಗ ವ್ಯಕ್ತಿ ಶಾಂತತೆ, ನೆಮ್ಮದಿ ಅಥವಾ ದುಃಖ, ಹತಾಶೆ, ತಲ್ಲಣಗಳನ್ನು ಅನುಭವಿಸಬಹುದು.

Latest Videos

undefined

NDE ಪ್ರಚೋದಕಗಳು: ದೇಹವು ತೀವ್ರವಾಗಿ ಗಾಯಗೊಂಡಾಗ, ಇನ್ನೇನು ಜೀವ ಹೋಗುತ್ತದೆ ಅನ್ನುವಾಗ, ಉದಾಹರಣೆಗೆ ಹೃದಯಾಘಾತ ಆದಾಗ, ಇಂಥ ಅನುಭವ ಆಗಬಹುದು. ಎತ್ತರದಿಂದ ಬಿದ್ದಾಗ, ವಾಹನ ಅಪಘಾತದಲ್ಲಿ ಆಗಬಹುದು. ಆಪರೇಟಿಂಗ್ ಟೇಬಲ್‌ನಲ್ಲಿ ಮಲಗಿ ಶಸ್ತ್ರಚಿಕಿತ್ಸೆಗೆ ಒಳಗಾದಾಗ, ಅರಿವಳಿಕೆಯಲ್ಲಿದ್ದಾಗ ಆಗಬಹುದು. ಅಂಥ ರೋಗಿಗಳು ಸಾವಿಗೆ ಸಮೀಪವಾದ ಅನುಭವ ಹೇಳಿಕೊಂಡಿದ್ದಾರೆ. ಕೋಮಾದಿಂದ ಎದ್ದವರು ತಮ್ಮದೇ ಆದ ವಿಶಿಷ್ಟ NDE ಹೊಂದುತ್ತಾರೆ.

ಹಾಗಿದ್ದರೆ ಆಗ ಏನು ನಡೆಯುತ್ತದೆ?

ದೇಹದಿಂದ ಬೇರೆಯಾಗುತ್ತಾನೆ: ಎಲ್ಲರೂ ಅನುಭವಿಸುವ ಕೆಲವು ಸಾಮಾನ್ಯ NDE ಅನುಭವಗಳಿವೆ. ಮೊದಲನೆಯದು, ವ್ಯಕ್ತಿ ದೇಹದಿಂದ ಬೇರೆಯಾಗಿ ತೇಲುವ ಅನುಭವವನ್ನು ಪಡೆಯುತ್ತಾನೆ. ಆಗ ಆತ ದೇಹದ ನೋವಿನಿಂದ ಮುಕ್ತನಾಗಿರುತ್ತಾನೆ. ಬಾಹ್ಯಾಕಾಶಕ್ಕೆ ಹಾರಿಹೋಗುವ ಸಂವೇದನೆ ಆಗುತ್ತದೆ. ಜೀವಕ್ಕೆ ಅಪಾಯಕಾರಿಯಾದ ಏಟು ಬಿದ್ದಾಗಲೂ ಮನಸ್ಸು ಸಕಾರಾತ್ಮಕ ಮತ್ತು ಆನಂದದಾಯಕ ಸಂವೇದನೆಗಳನ್ನು ನೀಡುತ್ತದೆ.

ಸುರಂಗ ಮತ್ತು ಬೆಳಕು: ಸುದೀರ್ಘವಾದ ಸುರಂಗ ಮತ್ತು ಅದರ ಕೊನೆಯಲ್ಲಿ ಪ್ರಕಾಶಮಾನವಾದ ಬೆಳಕನ್ನು ನೋಡುವುದು ಸಾಮಾನ್ಯವಾಗಿ ಕಾಣುವ ಅನುಭವ.

ಭಯಾನಕ ಅನುಭವ: ಪ್ರಜ್ಞಾಪೂರ್ವಕ ಆದರೆ ಚಲಿಸಲು ಸಾಧ್ಯವಾಗದ ಭಾವನೆ, ದೃಶ್ಯ ಅಥವಾ ಶ್ರವಣೇಂದ್ರಿಯ ಭ್ರಮೆಗಳು, ಉಸಿರುಗಟ್ಟುವಿಕೆಯ ಭಾವನೆ ಉಂಟಾಗಬಹುದು.

ಆತ್ಮಗಳ ಭೇಟಿ: ವ್ಯಕ್ತಿ ತನ್ನ ಹೆತ್ತವರನ್ನು, ಮುಖ ಸರಿಯಾಗಿ ಕಾಣದ ಆತ್ಮಗಳನ್ನು ಕಂಡಂತೆ ಭಾವಿಸಬಹುದು. ದೇವರನ್ನು ಸ್ವಚ್ಛ ಬಿಳಿಯಾದ ಸ್ವರೂಪದಲ್ಲಿ ಕಂಡಂತೆ ಕಾಣಿಸಬಹುದು. ಮಾತನಾಡಿದಂತೆಯೂ, ಆ ಮಾತಿನ ವಿವರಗಳೂ ಬಳಿಕ ನೆನಪಿರಬಹುದು.

ವೈಜ್ಞಾನಿಕ ವಿವರಣೆ (Scientific Explaination): ಮೊದಲನೆಯದು ನರವೈಜ್ಞಾನಿಕ ದೃಷ್ಟಿಕೋನ. ನರವಿಜ್ಞಾನಿಗಳ ಉತ್ತರ ನೇರ- ಸಾವಿನ ಸಮೀಪದ ಅನುಭವಗಳೆಲ್ಲ ನರಗಳಿಗೆ ಸಂಬಂಧಿಸಿದ್ದು. ಕೋಪನ್ ಹ್ಯಾಗನ್ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ, NDEಯೊಂದಿಗೆ ಸಂಬಂಧಿಸಿದ ಸಂವೇದನೆಗಳು ಕೆಲವು ನಿದ್ರಾಭಂಗಗಳ ಸಮಯದಲ್ಲಿ ಮೆದುಳಿನಲ್ಲಿ ಆಗುವ ಸಂವೇದನೆಯನ್ನು ಹೋಲುತ್ತವೆ.

ರಿಸರ್ಚ್‌ಗೇಟ್ ಅಧ್ಯಯನವು, ಪ್ರಕಾಶಮಾನವಾದ ಬಿಳಿ ಬೆಳಕು ಮತ್ತು ಆಳವಾದ ಶಾಂತಿಯ ಪ್ರಜ್ಞೆಯಂತಹ ಅನುಭವಗಳು, ಸ್ಲೀಪ್‌ ಪ್ಯಾರಾಲಿಸಿಸ್‌ ಎಂದು ಕರೆಯಲ್ಪಡುವ ವಿದ್ಯಮಾನದ ಸಮಯದಲ್ಲಿ ವ್ಯಕ್ತಿ ಅನುಭವಿಸುವ ರೋಗಲಕ್ಷಣಗಳನ್ನು ಹೋಲುತ್ತದೆ. ಸ್ಲೀಪ್ ಪ್ಯಾರಾಲಿಸಿ ಎಂದರೆ ನಿದ್ರಿಸಿದ ನಂತರ ಅಥವಾ ಎಚ್ಚರಗೊಳ್ಳುವ ಮೊದಲು ಸ್ನಾಯು ನಿಯಂತ್ರಣದ ತಾತ್ಕಾಲಿಕ ನಷ್ಟ.

ಇದು ನಿದ್ರಾಹೀನತೆಗೆ ಸಂಬಂಧಿಸಿದೆ. ಮೆಮೊರಿ ಬಲವರ್ಧನೆ, ಭಾವನಾತ್ಮಕ ಪ್ರಕ್ರಿಯೆ, ಮೆದುಳಿನ ಬೆಳವಣಿಗೆ ಮತ್ತು ಕನಸು ಕಾಣುವಲ್ಲಿ REM ನಿದ್ರೆಯು ಮಹತ್ವದ ಪಾತ್ರವನ್ನು ವಹಿಸುತ್ತದೆ. REM ನಿದ್ರೆಯಿಲ್ಲದೆ ಬಳಲುತ್ತಿರುವವರು ನಿದ್ರಾ ಪಾರ್ಶ್ವವಾಯುವಿಗೆ ಒಳಗಾಗುತ್ತಾರೆ. ಅದಕ್ಕಾಗಿಯೇ ನರವಿಜ್ಞಾನಿಗಳು NDEಗಳು ನರವೈಜ್ಞಾನಿಕ ಸಮಸ್ಯೆಯನ್ನು ಹೊಂದಿವೆ ಎಂದು ನಂಬುತ್ತಾರೆ. ನಿದ್ರಾ ಪಾರ್ಶ್ವವಾಯು ಕೆಲವು ಮಾನಸಿಕ ಆರೋಗ್ಯ ಸ್ಥಿತಿಗಳೊಂದಿಗೆ ಸಹ ಸಂಬಂಧಿಸಿದೆ.

NDEಯನ್ನು ಅನುಭವಿಸಿದವರು ಸಾಮಾನ್ಯವಾಗಿ ಹಂಚಿಕೊಳ್ಳುವ ಹೆಚ್ಚುವರಿ ಸಂವೇದನೆಗಳೆಂದರೆ ಸರಣಿಯಾಗಿ ಅವರ ಜೀವನದ ವಿಮರ್ಶೆ ಮತ್ತು ಸಮಯದ ಬದಲಾದ ಪ್ರಜ್ಞೆಯ ಭಾವನೆ. ಅವರ ಆಲೋಚನಾ ವೇಗ ಹೆಚ್ಚುತ್ತದೆ; ತೀಕ್ಷ್ಣವಾದ ದೃಷ್ಟಿ ಅಥವಾ ಶ್ರವಣ ಉಂಟಾಗುತ್ತದೆ.

ಅಮೇರಿಕಾದಲ್ಲಿ ಡೇಂಜರಸ್ ವಾಂಪೈರ್ ವೈರಸ್ ಪತ್ತೆ; ಇದ್ರಿಂದ ತಿನ್ನೋಕೆ ಆಹಾರಾನೇ ಸಿಗದಂತೆ ಆಗ್ಬೋದು!
 

ವ್ಯಕ್ತಿ ಬದಲಾಗುತ್ತಾನಾ?
ಹೌದು, ಸಾವಿನ ಸಮೀಪ ಹೋಗಿ ಬಂದ ವ್ಯಕ್ತಿಗಳು ಆಮೇಲೆ ಬದಲಾಗುವುದನ್ನು ಗಮನಿಸಲಾಗಿದೆ. ಹೆಚ್ಚಿನವರು 'ಒಳ್ಳೆಯ' ವ್ಯಕ್ತಿಗಳಾಗಿ, ಆಧ್ಯಾತ್ಮಿಕ ವ್ಯಕ್ತಿಗಳಾಗಿ ಬದಲಾಗುತ್ತಾರೆ. ಜೀವನ ಆಧ್ಯಾತ್ಮಿಕವಾಗಿ ಅರ್ಥಪೂರ್ಣವಾಗಿದೆ, ಮರಣವು ಆನಂದದಾಯಕ ಅನುಭವ, ಮರಣಾನಂತರದ ಜೀವನವು ಕಾಯುತ್ತಿದೆ ಎಂದೆಲ್ಲ ಇವರು ಹೇಳುತ್ತಾರೆ. ಸಾಯುವ ನಿರೀಕ್ಷೆಯಿಂದ ಭಯಭೀತರಾದವರಿಗೆ ಸಾಂತ್ವನ ಹೇಳುತ್ತಾರೆ. ಇವರ ವ್ಯಕ್ತಿತ್ವ ನಂತರ ಸಾಮಾನ್ಯವಾಗಿ ಹೆಚ್ಚು ಪ್ರತಿಫಲಿತ, ತಾತ್ವಿಕ ಮತ್ತು ನೈತಿಕವಾಗಿ ನೇರವಾಗಿರುತ್ತಾರೆ. ಇತರರ ಕಡೆಗೆ ಪ್ರೀತಿಯನ್ನು ತೋರುತ್ತಾರೆ, ಬೆಳೆಸುತ್ತಾರೆ.

ಅಂತಿಮವಾಗಿ, ಸಾವಿನ ಸಮೀಪದ ಅನುಭವಗಳ ಬಗ್ಗೆ ವಿಜ್ಞಾನ ಮತ್ತು ಆಧ್ಯಾತ್ಮ ಎರಡಕ್ಕೂ ಒಮ್ಮತವಿಲ್ಲ. ಕೆಲವು ಅತೀಂದ್ರಿಯ ಅನುಭವಗಳು ಕೂಡ NDE ಥರವೇ ಇರುತ್ತವೆ. ಅವುಗಳಿಗೂ ಆಧುನಿಕ ವೈದ್ಯಕೀಯ ಮತ್ತು ವಿಜ್ಞಾನ ವಿವರಣೆ ಕೊಡಲು ವಿಫಲವಾಗಿದೆ.

ಕಪ್ಪು ಬ್ರಾ ಧರಿಸೋದ್ರಿಂದ ಸ್ತನ ಕ್ಯಾನ್ಸರ್ ಬರುತ್ತಾ? ಸತ್ಯ-ಮಿಥ್ಯೆಗಳೇನು?
 

click me!