
ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ. ಹೆಸರೇ ಹೇಳುವಂತೆ ಇಂದು ಯೋಗ ಮಾಡಬೇಕು. ಸದೃಢ ಮನಸ್ಸು, ದೇಹಕ್ಕಾಗಿ ಯೋಗ ಅವಶ್ಯಕ. ಇಂದು ವಿಶ್ವವೇ ಇನ್ನು ಯೋಗಕ್ಕೆ ಸಜ್ಜಾಗುತ್ತಿದೆ. ನೀವು ಮನೆಯಲ್ಲೇ ಸುಲಭವಾಗಿ ಯೋಗ ಮಾಡಿ ಆರೋಗ್ಯ ವೃದ್ಧಿಸಿಕೊಳ್ಳಬಹುದು.
ಸೂರ್ಯ ನಮಸ್ಕಾರವನ್ನು ಯೋಗಾಸನಗಳಲ್ಲೇ ಅತ್ಯಂತ ಪವರ್‌ಫುಲ್ ಎಂದು ಕರೆಯಲಾಗುತ್ತದೆ. ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ನಿಮ್ಮನ್ನು ಆರೋಗ್ಯವಂತರನ್ನಾಗಿಸುತ್ತದೆ. ಇದರಲ್ಲಿ 10 ಆಸನಗಳಿವೆ. ಈ ಸೂರ್ಯ ನಮಸ್ಕಾರ ಮಾಡುವುದು ಹೇಗೆ? ಇಲ್ಲಿದೆ ನೋಡಿ.
1. ಪ್ರಣಾಮಾಸನ: ಈ ಆಸನ ಮಾಡಲು ಎಲ್ಲಕ್ಕೂ ಮೊದಲು ಎರಡೂ ಹಸ್ತಗಳನ್ನು ಜೋಡಿಸಿ ನಿಂತುಕೊಳ್ಳಿ. ಬಳಿಕ ಎರಡೂ ಕೈಗಳನ್ನು ಭುಜದ ಸಮಾನಾಂತರದಲ್ಲಿ ಎತ್ತಿ ದೇಹದ ಭಾರವನ್ನು ಕಾಲಿನ ಮೇಲೆ ಹಾಕಿ. ಬಳಿಕ ಎರಡೂ ಕೂಗಳನ್ನು ಜೋಡಿಸಿ ನಮಸ್ಕಾರ ಮಾಡುವ ವಿಧಾನದಲ್ಲಿ ನಿಂತುಕೊಳ್ಳಿ.
2. ಹಸ್ತ ಉತ್ಥಾನಾಸನ: ಈ ಆಸನ ಮಾಡುವ ಮೊದಲು ಉಸಿರನ್ನು ದೇಹದೊಳಗೆ ತೆಗೆದುಕೊಳ್ಳಿ. ನಿಮ್ಮ ಕೈಗಳನ್ನು ತಲೆಯಿಂದ ಮೇಲಕ್ಕೆ ಎತ್ತಿ. ಎದೆಯ ಭಾಗವನ್ನು ಹಿಂದಕ್ಕೆ ಬಗ್ಗಿಸಿ. ಈ ಸಂದರ್ಭದಲ್ಲಿ ನಿಮ್ಮ ತಲೆ ಹಾಗೂ ಬೆನ್ನನ್ನು ಸಾಧ್ಯವಾದಷ್ಟುಹಿಂಭಾಗಕ್ಕೆ ಬಾಗಿಸಿ. ಈ ವೇಳೆ ಮಂಡಿಗಳನ್ನು ಬಿಗಿಯಾಗಿ ಇರಿಸಿಕೊಳ್ಳಿ. ಆದರೆ ಬೆನ್ನಿನ ಮೇಲೆ ಹೆಚ್ಚಿನ ಒತ್ತಡವನ್ನು ಹಾಕಬೇಡಿ.
3. ಹಸ್ತ ಪಾದಾಸನ: ಬೆನ್ನುಮೂಳೆಯನ್ನು ನೇರವಾಗಿಟ್ಟುಕೊಂಡು ಉಸಿರನ್ನು ಹೊರಗೆ ಬಿಡುತ್ತಾ ಸೊಂಟವನ್ನು ಮುಂದಕ್ಕೆ ಬಗ್ಗಿಸಿ. ಉಸಿರನ್ನು ಸಂಪೂರ್ಣವಾಗಿ ಹೊರಗೆ ಬಿಟ್ಟು ಕೈಗಳನ್ನು ಪಾದದ ಬಳಿ ನೆಲದ ಮೇಲಿಡಿ. ಸಾಧ್ಯವಾಗದಿದ್ದಲ್ಲಿ ಮಂಡಿಯನ್ನು ಕೊಂಚ ಬಗ್ಗಿಸಿ ಅಂಗೈಯನ್ನು ನೆಲದ ಮೇಲಿಡಲು ಪ್ರಯತ್ನಿಸಿ ಬಳಿಕ ಮಂಡಿಯನ್ನು ನೇರವಾಗಿಸಲು ಪ್ರಯತ್ನಿಸಿ.
4. ಅಶ್ವ ಸಂಚಾಲಾಸನ: ಉಸಿರನ್ನು ಒಳಗೆಳೆಯುತ್ತಾ ಬಲಗಾಲನ್ನು ಸಾಧ್ಯವಾದಷ್ಟುಹಿಂದೆ ತಳ್ಳಿ. ಬಳಿಕ ಬಲ ಮಂಡಿಯನ್ನು ನೆಲಕ್ಕೆ ತಾಗಿಸಿ ಆಕಾಶದೆಡೆ ಮುಖ ಮಾಡಿ. ಈ ವೇಳೆ ಎಡಪಾದ ಅಂಗೈಗಳ ನಡುವೆ ಇರುವಂತೆ ನೋಡಿಕೊಳ್ಳಿ.
5. ದಂಡಾಸನ: ಉಸಿರನ್ನು ನಿಧಾನವಾಗಿ ಒಳಗೆ ತೆಗೆದುಕೊಳ್ಳುತ್ತಾ ಎಡ ಕಾಲಿನ ಪಾದವನ್ನು ಹಿಂದಕ್ಕೆ ತೆಗೆದುಕೊಂಡು ಶರೀರವನ್ನುಸಂಪೂರ್ಣವಾಗಿ ನೇರವಾದ ರೇಖೆಯಲ್ಲಿರಿಸಿ ಹಾಗೂ ತೋಳುಗಳನ್ನು ನೆಲಕ್ಕೆ ಲಂಭವಾಗಿರಿಸಿ.
6. ಅಷ್ಟಾಂಗ ನಮಸ್ಕಾರ: ನಿಧಾನವಾಗಿ ಮಂಡಿಗಳನ್ನು ನೆಲಕ್ಕೆ ತಂದು ಉಸಿರು ಬಿಡಿ. ಬಳಿಕ ಪೃಷ್ಠವನ್ನು ಹಿಂದೆ ತೆಗೆದುಕೊಂಡು, ಮುಂದೆಕ್ಕೆ ಬಗ್ಗಿ ಎದೆ ಹಾಗೂ ಗಲ್ಲವನ್ನು ನೆಲಕ್ಕೆ ತಾಗುವಂತಿಡಿ. ದೇಹದ ಹಿಂದಿನ ಭಾಗವನ್ನು ಸ್ವಲ್ಪ ಮೇಲಕ್ಕೆತ್ತಿ. ಈ ವೇಳೆ ಎರಡೂ ಕೈಗಳು ಮತ್ತು ಪಾದಗಳು, ಎರಡೂ ಮಂಡಿಗಳು, ಎದೆ ಮತ್ತು ಗಲ್ಲ ಹೀಗೆ ಎಂಟು ಶರೀರದ ಭಾಗಗಳು ನೆಲಕ್ಕೆ ತಾಗಿರಬೇಕು.
7. ಭುಜಂಗಾಸನ: ಈ ಆಸನ ಮಾಡುವ ವೇಳೆ ನಿಧಾನವಾಗಿ ಉಸಿರು ಹೊರಬಿಟ್ಟು ಎದೆಯನ್ನು ಮುಂದಕ್ಕೆ ಬಾಗಿಸಿ ಕೈಗಳನ್ನು ನೆಲದ ಮೇಲೆ ನೇರವಾಗಿಡಿ. ಕತ್ತನ್ನು ಹಿಂಬದಿಗೆ ಬಾಗಿಸಿ ಮೇಲಕ್ಕೆ ನೋಡಿ.
8. ಅಧೋಮುಖಶ್ವಾನಾಸನ: ಈ ಆಸನ ಮಾಡುವ ಸಂದರ್ಭದಲ್ಲಿ ನಿಧಾನವಾಗಿ ಉಸಿರನ್ನು ಹೊರಬಿಟ್ಟು ಎರಡೂ ಕಾಲುಗಳನ್ನು ನಿಧಾನವಾಗಿ ಹಿಂದಕ್ಕೆ ತೆಗೆದುಕೊಳ್ಳಿ. ಎರಡೂ ಕೈಗಳನ್ನು ಮುಂದಿನ ಬದಿಯಲ್ಲಿ ನೆಲಕ್ಕೆ ತಾಗಿಸಿ, ಕತ್ತನ್ನು ಬಾಗಿಸಿ. ಈ ಆಸನದಲ್ಲಿ ನೀವು ವಿ ಆಕಾರದಲ್ಲಿರಬೇಕು.
9. ಅಶ್ವ ಸಂಚಾಲಾಸನ: ಉಸಿರನ್ನು ಒಳಗೆಳೆಯುತ್ತಾ ಎಡಗಾಲನ್ನು ಸಾಧ್ಯವಾದಷ್ಟುಹಿಂದೆ ತಳ್ಳಿ. ಬಳಿಕ ಬಲ ಮಂಡಿಯನ್ನು ನೆಲಕ್ಕೆ ತಾಗಿಸಿ ಆಕಾಶದೆಡೆ ಮುಖ ಮಾಡಿ. ಈ ವೇಳೆ ಎಡಪಾದ ಅಂಗೈಗಳ ನಡುವೆ ಇರುವಂತೆ ನೋಡಿಕೊಳ್ಳಿ.
10. ತಾಡಾಸನ: ಈ ಆಸನವನ್ನು ಮಾಡುವ ಸಂದರ್ಭದಲ್ಲಿ ನಿಧಾನವಾಗಿ ಉಸಿರು ಹೊರಬಿಡುತ್ತಾ ನಿಮ್ಮ ಶರೀರವನ್ನು ನೇರವಾಗಿಸಿ ನಿಂತುಕೊಳ್ಳಿ. ಹಾಗೂ ಎರಡೂ ಕೈಗಳನ್ನು ನೇರವಾಗಿರಿಸುವ ಮೂಲಕ ವಿಶ್ರಾಂತಿ ಪಡೆಯಿರಿ.
ಯೋಗದಿನವನ್ನು ಎಲ್ಲರೊಂದಿಗೆ ಸಂಭ್ರಮಿಸಿ
1. ನೀವು ಯೋಗಾಸನ ಮಾಡಿ ಇದರ ಫೋಟೋವನ್ನು ಫೇಸ್‌ಬುಕ್, ಟ್ವೀಟರ್, ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳಿ. ನಿಮ್ಮ ಸ್ನೇಹಿತರು, ಸಂಬಂಧಿಕರನ್ನೂ ಯೋಗ ಮಾಡುವಂತೆ ಉತ್ತೇಜಿಸಿ
2. ನಿಮ್ಮ ಫೇಸ್‌ಬುಕ್, ಟ್ವೀಟರ್, ವಾಟ್ಸಪ್ ಡಿಪಿ, ಪ್ರೊಫೈಲ್ ಪಿಕ್ಚರ್‌ಗಳು ಇಂದು ಯೋಗಾಸನದ ಫೋಟೋಗಳಿಗೆ ಮೀಸಲಿಡಿ.
3. ಟ್ವೀಟರ್‌ನಲ್ಲಿ ಹ್ಯಾಶ್‌ಟ್ಯಾಗ್ ಅಭಿಯಾನ ನಡೆಸಿ. ಇಲ್ಲವೆ ಈಗಾಗಲೇ ಆರಂಭಿಸಿರುವ ಅಭಿಯಾನವನ್ನು ಬೆಂಬಲಿಸಿ
4.ಯೋಗ ಮಾಡುವಂತೆ ನಿಮ್ಮ ಸ್ನೇಹಿತರು, ಸಂಬಂಧಿಕರಿಗೆ ಚಾಲೆಂಚ್ ಮಾಡಿ.
5. ಯೋಗ ಬಗ್ಗೆ ಪುಸ್ತಕ, ಸಿಡಿಗಳನ್ನು ಹಂಚುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಪ್ರಚಾರ ಮಾಡಿ
ಇಂದು ಅಂತರಾಷ್ಟ್ರೀಯ ಯೋಗದಿನ; ನೀವೇನು ಮಾಡಬಹುದು?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.