ನಿಸರ್ಗದ ಯಾವ ಕ್ರಿಯೆಯಲ್ಲೂ ಸ್ವಾರ್ಥವಿಲ್ಲ, ಲಾಭಕೋರತನವಿಲ್ಲ. ಇದು ಕಂಡುಬರುವುದು ಮನುಷ್ಯನಲ್ಲಿ ಮಾತ್ರ. ಅಷ್ಟಕ್ಕೂ ಸ್ವಾರ್ಥದಿಂದ ನೆಮ್ಮದಿ ಲಭಿಸದು. ಲಾಭಕೋರತನದಿಂದ ಒತ್ತಡ ಹೆಚ್ಚುವುದು. ಹೀಗಾಗಿ, ಈ ಭಾವನೆಗಳು ನಮ್ಮನ್ನು ಆವರಿಸದಂತೆ ನೋಡಿಕೊಳ್ಳುವುದು ಮುಖ್ಯ.
ಬೆಳಬೆಳಗ್ಗೆ ಮನೆಯಿಂದ ಸ್ವಲ್ಪ ಹೊರಗೆ ಬನ್ನಿ, ನಗರಗಳಲ್ಲಾದರೆ ಪಾರ್ಕುಗಳಿಗೆ ಹೋಗಿ, ಹೊರವಲಯಗಳಲ್ಲಿ ರಸ್ತೆಯೂ ಆದೀತು, ಹಳ್ಳಿಗಳಲ್ಲಾದರೆ ನಿಸರ್ಗದ ಮಡಿಲಲ್ಲಿ ಸ್ವಲ್ಪ ಹೊತ್ತು ವಿಹರಿಸಿ. ಏನೆಲ್ಲ ಗೋಚರಿಸಬಹುದು? ಬೆಳಗೆದ್ದಾಗ ಮೊದಲ ಕಿವಿಗೆ ಬೀಳುವುದೇ ಹಕ್ಕಿಗಳ ಕಲರವ. ನಿಮ್ಮ ಮನೆಯ ಬಳಿ ಮರವಿದ್ದರೆ ಸಾಕು, ಅಲ್ಲೇ ಹಕ್ಕಿಗಳು ತಮ್ಮ ಗಾನ ನಡೆಸಿರುತ್ತವೆ. ಮುಂಜಾನೆಯ ಮಂಜು ಹೃದಯಕ್ಕೆ ತಂಪನ್ನೀಯುತ್ತದೆ. ಸೂರ್ಯನ ಬೆಳಕು ದೇಹಕ್ಕೆ ಶಕ್ತಿ, ಆರೋಗ್ಯ ನೀಡುತ್ತದೆ. ಅರಳಿರುವ ಹೂವುಗಳು ಮನಸ್ಸಿಗೆ ಮುದ ಕೊಡುತ್ತವೆ. ಅವುಗಳ ಬಣ್ಣ ಎದೆಯನ್ನು ತುಂಬುತ್ತದೆ. ಮುಟ್ಟಿದರೆ ನಲುಗಿ ಹೋಗುವ ಎಲೆಯ ಚಿಗುರೊಂದು ಬೆರಗುಗೊಳಿಸದೇ ಇರದು. ಇದೆಲ್ಲ ಯಾರಿಗಾಗಿ? ಯಾವ ಲಾಭಕ್ಕಾಗಿ? ತೀರ ವೈಜ್ಞಾನಿಕವಾಗಿ ನೋಡಿದರೆ ಇದೆಲ್ಲ ಒಂದು ವೈಜ್ಞಾನಿಕ ವ್ಯವಸ್ಥೆಯಂತೆ ಕಾಣಬಲ್ಲದು. ಆದರೆ, ಇದು ನಿಸರ್ಗದ ಸಹಜ ನಿಯಮ. ಹೂವರಳುವುದು, ಕಾಯಾಗುವುದು, ಹಣ್ಣಾಗುವುದು ಮತ್ತೆ ಮಣ್ಣಿಗೆ ಸೇರುವುದು, ಪ್ರಕೃತಿಯ ಸೌಂದರ್ಯ, ಸೊಬಗು ಯಾವುದೇ ಲಾಭಕ್ಕೂ ಅಲ್ಲ. ಇಂತಹ ಲಾಭದ ಧೋರಣೆ ಇರುವುದು ಮನುಷ್ಯನಲ್ಲಿ ಮಾತ್ರ. ಅಲ್ಲವೇ? ಮನುಷ್ಯನ ಯೋಚನೆಗಳೆಲ್ಲವೂ ಲಾಭದ ಸುತ್ತ ಸುತ್ತುವುದೇ ಹೆಚ್ಚು. ಆದರೆ, ಖಂಡಿತವಾಗಿ ನಿಸರ್ಗದಲ್ಲಿ ಲಾಭಕ್ಕೆ ಆಸ್ಪದವಿಲ್ಲ.
Chanakya Niti : ಸಾವಿಗಿಂತ ಹೆಚ್ಚು ನೋವು ಕೊಡುತ್ತೆ ಮನುಷ್ಯನ ಈ ಸ್ಥಿತಿ!
undefined
ಸ್ವಾರ್ಥದಿಂದ (Selfishness) ನೆಮ್ಮದಿ ದೂರ
ಅದೇನೋ, ಮನುಷ್ಯನ (Human) ಸ್ವಭಾವವೇ ವಿಚಿತ್ರ. ನೆಮ್ಮದಿಯಾಗಿ ಒಂದೆಡೆ ಇರಲೊಲ್ಲ. ಇರುವುದೆಲ್ಲವ ಬಿಟ್ಟು ಇರದುದರ ಹುಡುಕಾಟ ಆತನಲ್ಲಿ ಸದಾ ಇರುತ್ತದೆ. ಹೊಸತರ ಆವಿಷ್ಕಾರ, ಹೊಸ ಲೋಕದ ಅನುಭವ ಎಲ್ಲವೂ ಅವನಿಗೆ ಬೇಕು. ಇರುವುದಲ್ಲಿ ತೃಪ್ತಿ (satisfaction) ಪಟ್ಟುಕೊಳ್ಳುವುದು, “ಕರ್ಮಣ್ಯೇವಾಧಿಕಾರಸ್ಥೇ, ಮಾ ಫಲೇಷು ಕದಾಚನʼ ಎನ್ನುವುದು ಬರೀ ಬಾಯಿ ಮಾತಿಗೆ. ಅದಕ್ಕೆ ತಕ್ಕಂತೆ ನಡೆಯುವುದು ಅವನಿಗೆ ಬೇಕಾಗಿಲ್ಲ. ಅವನಿಂದ ಸಾಧ್ಯವೂ ಇಲ್ಲ. ಪ್ರಕೃತಿಯಲ್ಲಿ ಎಲ್ಲವೂ ಅವುಗಳ ಪಾಡಿಗೆ ಸಾಗುತ್ತಿದ್ದರೆ ಮನುಷ್ಯನ ಅಸ್ತಿತ್ವಕ್ಕೇನು ಬೆಲೆ? ಹೀಗಾಗಿಯೇ ಇರಬೇಕು, ಪ್ರಕೃತಿಯ ಆಗುಹೋಗುಗಳಲ್ಲೂ ತಲೆ ತೂರಿಸುತ್ತಾನೆ ಮನುಷ್ಯ. ಆದರೆ, ಇದರಲ್ಲಿ ಅತಿಯಾದ ಸ್ವಾರ್ಥ, ಲಾಭಕೋರತನ ಮಾತ್ರ ಇರುತ್ತದೆ ಎನ್ನುವುದು ವಿಷಾದನೀಯ. ಆದರೆ, ಈ ಗುಣ ಅವನಿಗೆ ನೆಮ್ಮದಿ ನೀಡಿಲ್ಲ.
ಜನರಲ್ಲಿರುವ ಅತಿಯಾದ ಮಹತ್ವಾಕಾಂಕ್ಷೆಗಳೇ ಅವರಲ್ಲಿ ಅತಿಯಾದ ಒತ್ತಡ (Stress) ತ್ತದೆ. ಖಿನ್ನತೆಯುಂಟು (Depression) ಮಾಡುತ್ತದೆ. ನೋವನ್ನು ನೀಡುತ್ತದೆ. ಲಾಭದ ನಿರೀಕ್ಷೆಯಿಲ್ಲದೆ ಏನನ್ನೂ ಮಾಡಲು ಜನರಿಂದ ಸಾಧ್ಯವಿಲ್ಲ. ಆದರೆ, ಇದೇ ಧೋರಣೆ (Attitude) ಅವರಿಗೆ ಅಪಾರ ನೋವನ್ನು ನೀಡುತ್ತದೆ. ಏಕೆಂದರೆ, ಈ ಜಗತ್ತು (World) ಸ್ವಾರ್ಥಕ್ಕಾಗಿ ನಿರ್ಮಾಣವಾಗಿಲ್ಲ. ಎಲ್ಲಿ ಸ್ವಾರ್ಥ ತುಂಬಿರುತ್ತದೆಯೋ ಅಲ್ಲೇ ಪ್ರಗತಿ ಕುಂಠಿತವಾಗುತ್ತದೆ. ಬಾಹ್ಯ ಜಗತ್ತಿನಲ್ಲಿ ಕೆಲವೊಮ್ಮೆ ಸಾಧನೆ ಮಾಡಬಹುದು, ಹಣ (Money) ಗಳಿಸಬಹುದು. ಆದರೆ, ನೆಮ್ಮದಿ ಮಾತ್ರ ಸಿಗುವುದಿಲ್ಲ. ಒತ್ತಡ, ಖಿನ್ನತೆಗಳು ಜತೆಯಾಗುತ್ತದೆ.
ಅಡಲ್ಟ್ ಕಂಟೆಂಟ್ ನೋಡಿದ್ರೆ ಮೆದುಳ ಮೇಲೆ ಬೀರೋ ಪರಿಣಾಮ ಅಷ್ಟಿಷ್ಟಲ್ಲ!
ಒಳ್ಳೆಯ ಸ್ವಾರ್ಥ ಎಲ್ಲರಲ್ಲೂ ಇರಲಿ
ಸ್ವಾರ್ಥದಲ್ಲೂ ಎರಡು ರೀತಿ. ಸ್ವಾರ್ಥ ಕೆಟ್ಟ ರೀತಿಯಲ್ಲಿದ್ದಾಗ ಸಮಾಜಘಾತುಕತನ ಹೆಚ್ಚುತ್ತದೆ. ಸಮಾಜದೊಂದಿಗೆ (Society) ಹೊಂದಾಣಿಕೆ ಕಡಿಮೆಯಾಗುತ್ತದೆ, ಸಂಕುಚಿತ (Small) ಮನೋಭಾವ ಹೆಚ್ಚುತ್ತದೆ. ಸ್ವಾರ್ಥದ ಮೇಲೆ ನಿಯಂತ್ರಣ (Control) ತಪ್ಪಿದರೆ ಜೀವನದ ಸಂತೋಷ, ಖುಷಿಗಳಿಂದ ವಂಚಿತರಾಗುತ್ತೇವೆ. ಮಕ್ಕಳಿಂದ ಹಿಡಿದು ಎಲ್ಲರೂ ಸ್ವಾರ್ಥಿಗಳೇ. ಈ ಗುಣ ದೊಡ್ಡವರಾಗುತ್ತ ಬೇರೆಯದೇ ಆದ ದುರ್ಮಾರ್ಗ ಹಿಡಿಯದಂತೆ ನೋಡಿಕೊಳ್ಳಬೇಕು. ಸ್ವಾರ್ಥದಲ್ಲೂ ಒಳ್ಳೆಯ ಸ್ವಾರ್ಥ ಇರಬಲ್ಲದೇ ಎನ್ನುವ ಅಚ್ಚರಿ ಬೇಡ. ನಮ್ಮ ಒಳಿತಿನ ಜತೆಗೇ ಇತರರ ಹಾಗೂ ಇಡೀ ಜಗತ್ತಿನ ಒಳಿತಿನ ಬಗ್ಗೆ ಯೋಚಿಸಿದರೆ ಅದು ಒಳ್ಳೆಯ ಸ್ವಾರ್ಥ. ನನ್ನ ಜನ, ನನ್ನ ಬಂಧು, ನಮ್ಮ ಸಮಾಜ, ನಮ್ಮ ದೇಶ, ನಮ್ಮ ಜಗತ್ತು …ಹೀಗೆ ಚಿಂತನೆ ಮಾಡುವುದರಿಂದ ವಿಶಾಲ ಧೋರಣೆ ಬೆಳೆಸಿಕೊಳ್ಳಲು ಸಾಧ್ಯ. ಪ್ರಕೃತಿಯೊಂದಿಗೆ ಖುಷಿಯಾಗಿ ಬಾಳಬೇಕು ಎಂದರೆ ಸಂಕುಚಿತ ಸ್ವಾರ್ಥ ಮತ್ತು ಲಾಭಕೋರನದಿಂದ ದೂರವುಳಿಯುವುದು ಕ್ಷೇಮ.