ಮಂಜು ಕವಿದ ಮೆದುಳಿಗೇನು ಮೆಡಿಸಿನ್?

By Suvarna News  |  First Published Jun 20, 2020, 4:38 PM IST

ಬ್ರೇನ್ ಫಾಗ್ ಇದ್ದರೆ, ಯಾವ ವಿಷಯವನ್ನೂ ಸ್ಪಷ್ಟವಾಗಿ ಯೋಚಿಸಲು ಸಾಧ್ಯವಿಲ್ಲ, ನೆನಪಿನ ಶಕ್ತಿ ಕುಂದುತ್ತದೆ, ತಲೆ ಭಾರವಾಗುತ್ತದೆ. ಇದರಿಂದ ಹೊರ ಬರೋದು ಹೇಗೆ?


ಕಳೆದ ಐದಾರು ವರ್ಷಗಳನ್ನು ನಾನು ಬ್ರೇನ್ ಫಾಗ್‌ನೊಂದಿಗೇ ಕಳೆದಿದ್ದೇನೆ. ಆದರೆ, ಸಮಸ್ಯೆ ಎಂದರೆ ಇಂಥದೊಂದು ಸಮಸ್ಯೆ ಇದೆ ಎಂಬುದೇ ಗೊತ್ತಿಲ್ಲದಿರುವುದು. ಮಧ್ಯಾಹ್ನವಾದರೆ ಸಾಕು, ಬಹಳ ಕೆಲಸ ಮಾಡಿ ದಣಿದಂತೆ, ಬೇರೇನು ಮಾಡಲೂ ಶಕ್ತಿ ಇಲ್ಲದಂತೆ, ಮನಸ್ಸಿಗೆ ಮಂಜು ಕವಿದಂತೆ, ಯಾವುದನ್ನೂ ಸ್ಪಷ್ಟವಾಗಿ ಯೋಚಿಸೋಕೆ ಆಗಲ್ಲ, ಈಗ ಅಂದುಕೊಂಡಿದ್ದು ಇನ್ನೊಂದು ಕ್ಷಣಕ್ಕೆ ನೆನಪಿರೋಲ್ಲ, ಚಿಂತನಮಂಥನಕ್ಕೆ ಮನಸ್ಸು ಸಿದ್ಧವೇ ಇಲ್ಲ ಎಂಬ ರೀತಿಯ ಹಿಂಸೆ ಅದು. ಜೊತೆಗೆ ಸಣ್ಣಪುಟ್ಟದ್ದಕ್ಕೂ ಕಿರಿಕಿರಿ. ಇದರಿಂದ ಬದುಕೇನು ಪೂರ್ತಿ ಕೆಟ್ಟು ಹೋಗುವುದಿಲ್ಲ, ಆದರೆ, ನಿಮ್ಮ ಸಾಮರ್ಥ್ಯ ಹಾಗೂ ಜೀವನದ ಒಂದಿಷ್ಟು ಖುಷಿಗಳನ್ನು ಕಳೆದುಕೊಳ್ಳಬೇಕಾಗುತ್ತದೆ. 

Latest Videos

undefined

ಆದರೆ, ಈ ಬಗ್ಗೆ ನಾನು ಕೆದಕುತ್ತಾ ಹೋದಂತೆಲ್ಲ ತಿಳಿದಿದ್ದು ಬ್ರೇನ್ ಫಾಗ್ ನನ್ನೊಬ್ಬಳನ್ನೇ ಅಲ್ಲ, ಹಲವರನ್ನು ಮೌನವಾಗಿ ಕಾಡುತ್ತಿರುತ್ತದೆ, ಅವರಿಗೆ ಅರಿವಿಲ್ಲದೆಯೇ ಎಂದು. ಬ್ರೇನ್ ಫಾಗ್‌ನಿಂದ ಹೊರಬರಲು ನಾನು ಜೀವನಶೈಲಿಯಲ್ಲಿ ಐದು ರೀತಿಯ ಬದಲಾವಣೆಗಳನ್ನು ತಂದುಕೊಂಡೆ. ನಿಮಗೂ ನಿಮ್ಮ ಮೆದುಳಿಗೆ ಮಂಜು ಕವಿದಂತಾಗಿದೆ ಎನಿಸಿದರೆ ನನ್ನ ಪ್ರಯೋಗಗಳನ್ನು ನೀವೂ ಟ್ರೈ ಮಾಡಿ ನೋಡಬಹುದು. 

ನಿಮ್ಮ ಮಗು ಸುಳ್ಳು ಹೇಳ್ತಿದೆಯಾ? ಹಾಗಿದ್ರೆ ಇದನ್ನೊಮ್ಮೆ ಓದಿ

ನಿದ್ರೆ
ನಾನು ಸೂಪರ್‌ಮ್ಯಾನ್ ಸಂಬಂಧಿಕಳು ಎಂದುಕೊಂಡು ಬಹಳ ವರ್ಷಗಳಿಂದ ಕೇವಲ 6 ರಿಂದ 7 ಗಂಟೆಗಳ ಕಾಲ ನಿದ್ರಿಸುತ್ತಿದ್ದೆ. ಬ್ರೇನ್ ಫಾಗ್‌ನಿಂದ ಹೊರಬರಲು ಹಟ ಹೊತ್ತು 8 ಗಂಟೆಗಳ ಕಾಲ ನಿದ್ರಿಸಲು ಆರಂಭಿಸಿದೆ. ಬ್ರೇನ್ ಫಾಗ್ ಏನು ಹೋಗದಿದ್ದರೂ ಸ್ವಲ್ಪ ಮಟ್ಟಿಗೆ ಚೆನ್ನಾಗೆನ್ನಿಸತೊಡಗಿತು. ನಿದ್ರೆಯ ಬಗ್ಗೆ ಅರಿವಾಗುತ್ತಲೇ ಮಲಗುವ ಹಾಸಿಗೆ, ಕೋಣೆಯ ಬೆಳಕು, ದಿಂಬು ಎಲ್ಲದರತ್ತ ಗಮನ ಹರಿಯಿತು. ಎಲ್ಲವೂ ಕಂಫರ್ಟ್ ಆಗುವವರೆಗೆ ಬದಲಾಯಿಸಿ ನೋಡಿದೆ. ಇದರಿಂದ ನನ್ನ ಕತ್ತು ನೋವು ಕೊಂಚ ಮಟ್ಟಿಗೆ ಕಡಿಮೆಯಾಯಿತು. ಗುಣಮಟ್ಟದ ನಿದ್ರೆಯೂ ಸಾಧ್ಯವಾಯಿತು. 

ಡಯಟ್
ನಿದ್ರೆಯ ಬಳಿಕ ಡಯಟ್‌ನತ್ತ ಗಮನ ಹರಿಸಿದೆ. ವಿವಿಧ ಡಯಟ್‌‌ಗಳನ್ನು ಟ್ರೈ ಮಾಡಿ ನೋಡಿದೆ. ನಾವು ತಿನ್ನುವ ಜಂಕ್ ಫುಡ್ ಸಿಕ್ಕಾಪಟ್ಟೆ ಬ್ರೇನ್ ಫಾಗ್ ತರಬಹುದೆಂಬ ಅರಿವಾಯಿತು. ಅವನ್ನೆಲ್ಲ ಬಿಟ್ಟು ಹೆಚ್ಚು ಹೆಚ್ಚು ಹಣ್ಣು ತರಕಾರಿಗಳನ್ನು ಡಯಟ್‌ನಲ್ಲಿ ಸೇರಿಸಿಕೊಂಡೆ. ಸಕ್ಕರೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿದೆ. ಮುಂಚೆಯೆಲ್ಲ ಸಕ್ಕರೆ ತಿಂದರೆ ಎನರ್ಜಿ ಎನಿಸಿದರೂ ನಿಧಾನವಾಗಿ ಅದೇ ನನ್ನ ಉದಾಸೀನತೆಗೆ ತಳ್ಳುತ್ತಿರುವ ಅರಿವಾಯಿತು. ಕೆಫಿನ್ ಕೂಡಾ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತಿರುವುದು ತಿಳಿಯಿತು. ತಕ್ಷಣ ಕಾಫಿ ಟೀ ಸೇವನೆ ನಿಲ್ಲಿಸಿದೆ. ಕಾರ್ಬ್ಸ್ ಹೆಚ್ಚಾಗುತ್ತಿರುವುದರಿಂದಲೂ ಸುಸ್ತೆನಿಸುವುದು ಗೊತ್ತಾಗುತ್ತಲೇ ಅದನ್ನೂ ಕಡಿಮೆ ಮಾಡಿದೆ. ಒಟ್ಟಿನಲ್ಲಿ ಡಯಟ್ ಜೊತೆ ಆಟವಾಡಿದ್ದು ಅರ್ಧ ಫಲ ಕೊಟ್ಟಿತು. ಬ್ರೇನ್ ಫಾಗ್ ಅರ್ಧದಷ್ಟು ಕಡಿಮೆಯಾದಂತೆನಿಸತೊಡಗಿತು. 

ಉದ್ಯೋಗ ಬದಲಾವಣೆ
ಇನ್ನೂ ಬ್ರೇನ್ ಫಾಗ್‌ಗೆ ಕಾರಣವಾಗುತ್ತಿರುವುದೇನು ಎಂದು ಹುಡುಕಾಡುವಾಗ ನನ್ನ ಉದ್ಯೋಗವೇ ನನಗೆ ಮುಳ್ಳಾಗಿರುವ ಅರಿವಾಯಿತು. ಕೆಲಸ ಅಥವಾ ಬಾಸ್ ಇಷ್ಟವಿಲ್ಲದಿದ್ದಲ್ಲಿ ಅದರಿಂದ ಡಿಮೋಟಿವೇಟ್ ಆಗುತ್ತದೆ. ಇದು ಸುಸ್ತು ಅಥವಾ ಬ್ರೇನ್ ಫಾಗ್‌ಗೆ ಕಾರಣವಾಗುತ್ತದೆ. ನನಗೂ ಇದು ನಿಜವೆನ್ನಿಸಿ ನನ್ನ ಉದ್ಯೋಗ ಬದಲಾಯಿಸಿದೆ. ಮೊದಲ ತಿಂಗಳಲ್ಲಿ ಇದರಿಂದ ಬಹಳಷ್ಟು ಬದಲಾದಂತೆನಿಸಿತು. ಇಷ್ಟ ಪಟ್ಟ ಕೆಲಸ ಮಾಡುವುದರಿಂದ ಮನಸ್ಸು ಚೇತೋಹಾರಿಯಾಯ್ತು. 

ವರ್ಕೌಟ್
ವರ್ಕೌಟ್ ಬ್ರೇನ್ ಫಾಗ್ ಹೋಗಿಸುತ್ತದೆ ಎಂದು ಇಂಟರ್ನೆಟ್‌ನಲ್ಲಿ ಓದಿದ ಬಳಿಕ ಅದನ್ನೂ ಆರಂಭಿಸಿದೆ. ಇದರಿಂದ ರಾತ್ರಿವರೆಗೂ ಹೆಚ್ಚು ಎನರ್ಜಿಯಿಂದ ಇರುವುದು ಅರಿವಿಗೆ ಬಂತು. ಅಷ್ಟೇ ಅಲ್ಲ, ದೇಹತೂಕ ಇಳಿದು ಮನಸ್ಸು ಹಗುರಾಯ್ತು. 

ಪಚನ ಕ್ರಿಯೆ ಉತ್ತಮಗೊಳಿಸುವ ದ್ರಾಕ್ಷಿ, ಮಲಬದ್ಧತೆಗೆ ಮದ್ದು

ನಿಂತು ಕೆಲಸ
ನನಗೆ ಹಲವು ವರ್ಷಗಳಿಂದ ಬೆನ್ನುನೋವು ಜೊತೆಯಾಗಿತ್ತು. ಇದೀಗ ಇದೂ ಬ್ರೇನ್ ಫಾಗ್‌ಗೆ ಕಾರಣವಾಗುತ್ತಿರಬಹುದೆನಿಸಿ, ಸ್ಟ್ಯಾಂಡ್ ಅಪ್ ಡೆಸ್ಕ್ ತರಿಸಿಕೊಂಡೆ.  ಕೊಂಚ ಹೊತ್ತು ಕುಳಿತು ಕೆಲಸ ಮಾಡಿದರೆ, ಕೊಂಚ ಹೊತ್ತು ನಿಂತು ಕೆಲಸ ಮಾಡುವುದು ಆರಂಭಿಸಿದೆ. ಇದರಿಂದ ಬಹಳಷ್ಟು ನೋವು ಕಡಿಮೆಯಾಯ್ತು. ನಂತರ ನನ್ನ ಕೂರು ಭಂಗಿ ಬಗ್ಗೆ ಹೆಚ್ಚು ಜಾಗರೂಕಳಾದೆ, ಆಗಾಗ ಬ್ರೇಕ್ ತೆಗೆದುಕೊಂಡೆ. 

ಈ ಐದು ಜೀವನಶೈಲಿ ಬದಲಾವಣೆಗಳೊಂದಿಗೆ ನನ್ನ ಬ್ರೇನ್ ಫಾಗ್ ಬಹುತೇಕ ಕ್ಲಿಯರ್ ಆಗಿದೆ. ಈಗ ಹೆಚ್ಚು ಸಮಯದವರೆಗೆ ಒಂದೇ ಎನರ್ಜಿಯಲ್ಲಿ ಕೆಲಸ ಮಾಡಬಲ್ಲೆ, ನೆನಪಿನ ಶಕ್ತಿಯೂ ವೃದ್ಧಿಸಿದೆ. ಯೋಚನೆಗಳು ಸ್ಪಷ್ಟವಾಗಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಕಾರಿಯಾಗಿವೆ. ನೀವು ಕೂಡಾ ಮೆದುಳಿಗೆ ಮಂಕು ಕವಿದಿದ್ದಲ್ಲಿ ಇವನ್ನು ಟ್ರೈ ಮೈಡಿ ನೋಡಿ. 

click me!