
ಪ್ರತಿಯೊಬ್ಬ ಗರ್ಭಿಣಿ ಮಹಿಳೆ ತನ್ನ ಮಗು ಹೊಂಬಣ್ಣದಲ್ಲಿ ಜನಿಸಬೇಕೆಂದು ಬಯಸುತ್ತಾಳೆ. ವಿಶೇಷವಾಗಿ ಗಾಢ ಬಣ್ಣವನ್ನು ಹೊಂದಿರುವ ದಂಪತಿಗಳು, ಮಗುವಿನ ಬಣ್ಣ ತಮ್ಮ ಬಣ್ಣದ ಹಾಗೆ ಇರಬಾರದು, ಮಗುವಿನ ಬಣ್ಣ ಬಿಳಿಯಾಗಿರಬೇಕು ಎಂದು ಭಾವಿಸುತ್ತಾರೆ. ಅದಕ್ಕಾಗಿಯೇ, ಅನೇಕ ಮಹಿಳೆಯರು ಗರ್ಭಾವಸ್ಥೆಯಲ್ಲಿ ಮಗುವಿನ ಬಣ್ಣವನ್ನು ಬಿಳಿಯಾಗಿಸುತ್ತೆ ಎಂದು ಹೇಳುವಅನೇಕ ಆಹಾರಗಳನ್ನು ಸೇವಿಸಲು ಪ್ರಾರಂಭಿಸುತ್ತಾರೆ. 'ಹೆಲ್ತಿ ಪ್ರೆಗ್ನೆನ್ಸಿ' (healthy pregnancy)ಎಂಬ ಯೂಟ್ಯೂಬ್ನಲ್ಲಿ ಪ್ರಕಟವಾದ ವೀಡಿಯೊದಲ್ಲಿ ಇದೇ ರೀತಿಯ ಒಂದು ಹೇಳಿಕೆಯನ್ನು ನೀಡುತ್ತಿದ್ದು, ಅದು ಹೇಳುತ್ತಿರುವ ಮಾಹಿತಿ ಸತ್ಯವೋ? ಸುಳ್ಳೋ ಅನ್ನೋದನ್ನು ತಿಳಿಯೋಣ.
ಯೂಟ್ಯೂಬ್ ನಲ್ಲಿ ತೋರಿಸಲಾದ ವೀಡಿಯೊದಲ್ಲಿ, ಭ್ರೂಣದ ಬಣ್ಣವನ್ನು ಬಿಳಿಯಾಗಿಸಲು (fair baby) ಗರ್ಭಿಣಿಯರಿಗೆ ತೆಂಗಿನಕಾಯಿ ತಿನ್ನಲು ಸೂಚಿಸಲಾಗಿದೆ. ಯೂಟ್ಯೂಬ್ ಪ್ರಕಾರ, ಗರ್ಭಧಾರಣೆಯ ಮೊದಲ ಮೂರರಿಂದ ನಾಲ್ಕು ತಿಂಗಳು ಎಳನೀರು ಕುಡಿಯಬೇಕು. ಈ ರೀತಿ ಎಳನೀರು ಕುಡೀಯೋದರಿಂದ ಮಗು ಆರೋಗ್ಯಕರವಾಗಿ ಹಾಗೂ ಬಿಳಿ ಬಣ್ಣದಿಂದ ಜನಿಸುತ್ತಿದೆ ಎಂದಿದೆ ಆ ಯೂಟ್ಯೂಬ್ ವಾಹಿನಿ.
ಈ ಹೇಳಿಕೆಯ ಸತ್ಯವೋ? ಸುಳ್ಳೋ?
ಎಳನೀರು ಕುಡಿಯುವುದರಿಂದ ಮಗು ಬಿಳಿಯಾಗುತ್ತದೆ ಎಂಬ ಹೇಳಿಕೆಯ ಬಗ್ಗೆ ನುರಿತ ಆರೋಗ್ಯ ತಜ್ಞರು ಹೇಳುವಂತೆ ಇದು ಆಧಾರ ರಹಿತವಾದುದು. ಯಾಕಂದ್ರೆ ಮಗುವಿನ ಚರ್ಮದ ಬಣ್ಣವು ಪೋಷಕರ ಜೀನ್ ಗಳನ್ನು (parents gene) ಅವಲಂಬಿಸಿರುತ್ತದೆ. ಮಗುವಿನ ಬಿಳಿ ಬಣ್ಣಕ್ಕೂ ಎಳನೀರಿಗೂ ಯಾವುದೇ ಸಂಬಂಧವಿಲ್ಲ. ಪೋಷಕಾಂಶಗಳು ಭ್ರೂಣದ ಚರ್ಮದ ಬಣ್ಣದ ಮೇಲೆ ಪರಿಣಾಮ ಬೀರುತ್ತವೆ ಎಂದು ದೃಢೀಕರಿಸುವ ಯಾವುದೇ ಪುರಾವೆಗಳಿಲ್ಲ.
ವೈದ್ಯರ ಸಲಹೆ?
ಮಗುವಿನ ಆರೋಗ್ಯಕ್ಕೆ ಆರೋಗ್ಯಕರ ಆಹಾರವು ಬಹಳ ಮುಖ್ಯ, ಆದರೆ ಯಾವುದೇ ಆಹಾರವು ಮಗುವಿನ ಬಣ್ಣದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರುವುದಿಲ್ಲ. ವೈದ್ಯರ ಪ್ರಕಾರ, ಎಳನೀರು (tender coconut) ಕ್ಯಾಲ್ಸಿಯಂ ಮತ್ತು ಎಲೆಕ್ಟ್ರೋಲೈಟ್ಗಳಿಂದ ಸಮೃದ್ಧವಾಗಿದೆ ಮತ್ತು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಆದಾಗ್ಯೂ, ಗರ್ಭಾವಸ್ಥೆಯಲ್ಲಿ, ಇದನ್ನು ವೈದ್ಯರ ಸಲಹೆಯ ಮೇರೆಗೆ ಮಾತ್ರ ಸೇವಿಸಬೇಕು. ಏಕೆಂದರೆ ಇದರಲ್ಲಿರುವ ಪೊಟ್ಯಾಸಿಯಮ್ ಮತ್ತು ಸಕ್ಕರೆಯ ಪ್ರಮಾಣವು ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಹೊಂದಿರುವ ಮಹಿಳೆಯರ ಮುಂದೆ ಸಮಸ್ಯೆಗಳನ್ನು ಉಂಟುಮಾಡಬಹುದು.
ತೀರ್ಮಾನವೇನು?
ಫ್ಯಾಕ್ಟ್ ಚೆಕ್ನಲ್ಲಿ ಎಳನೀರು ಕುಡಿಯುವುದರಿಂದ ಬಿಳಿ ಮಗುವಿನ ಜನನವಾಗುತ್ತೆ ಎಂದು ಹೇಳಲಾಗುತ್ತಿರುವ ವೀಡಿಯೊ ಯೂಟ್ಯೂಬ್ನಲ್ಲಿ ವೈರಲ್ ಆಗಿದೆ ಎಂದು ತಿಳಿದುಬಂದಿದೆ. ಇದರಲ್ಲಿ ಯಾವುದೇ ಸತ್ಯವಿಲ್ಲ. ಗರ್ಭಾವಸ್ಥೆಯಲ್ಲಿ ಎಳನೀರು ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ, ಆದರೆ ಇದು ಭ್ರೂಣದ ಬಣ್ಣದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಅಂತಹ ಪೋಸ್ಟ್ಗಳ ಬಗ್ಗೆ ಜಾಗರೂಕರಾಗಿರಲು ಸೂಚಿಸಲಾಗಿದೆ. ಸರಿಯಾದ ಮಾಹಿತಿಗಾಗಿ ವೈದ್ಯರಿಂದ ಮಾಹಿತಿ ಪಡೆಯಿರಿ ಎನ್ನಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.