
ನಾವು ಮನುಷ್ಯರೇ ಹಾಗೆ, ಭಾವನೆಗಳು ತುಂಬಿದ ಮಾಂಸದ ಮೂಟೆಗಳು. ಒಳ್ಳೆಯ ವಿಷಯಗಳು ಘಟಿಸಿದಾಗ ಖುಷಿಯಾಗುತ್ತೇವೆ, ನಾವಂದುಕೊಂಡಂತೆ ಆಗದಿದ್ದಾಗ ಕೋಪಗೊಳ್ಳುತ್ತೇವೆ, ಕೆಟ್ಟದಾದಾಗ ಅಳುತ್ತೇವೆ. ಕೆಲವೊಮ್ಮೆ ಎಕ್ಸೈಟ್‌ಮೆಂಟ್ ಹೆಚ್ಚಿದಾಗ ಹಾರಿ ಕುಣಿಯುತ್ತೇವೆ. ಈ ವಿವಿಧ ಎಮೋಶನ್‌ಗಳು ಹಾಗೂ ಅವನ್ನು ಅನುಭವಿಸಬಲ್ಲ ನಮ್ಮ ಸಾಮರ್ಥ್ಯವೇ ನಮ್ಮನ್ನು ಮನುಷ್ಯರನ್ನಾಗಿಸುವುದು. ಆದರೆ, ಒಬ್ಬೊಬ್ಬರ ಸೆನ್ಸಿಟಿವಿಟಿ ಮಟ್ಟ ಹಾಗೂ ಭಾವನೆಗಳನ್ನು ವ್ಯಕ್ತಪಡಿಸುವ ರೀತಿ ಬೇರೆಯಿರಬಹುದು. ಹಾಗಾಗಿಯೇ ಕೆಲವರು ಸಿಕ್ಕಾಪಟ್ಟೆ ಎಮೋಶನಲ್ ಆಗಿದ್ದರೆ ಮತ್ತೆ ಕೆಲವರು ತಾನು ಹೆಚ್ಚು ಪ್ರಾಕ್ಟಿಕಲ್ ಎಂದು ಓಡಾಡುತ್ತಿರುತ್ತಾರೆ.
ನಿಮಗೆ ಕೂಡಾ ನಾನೇಕೆ ಇಷ್ಟೊಂದು ಭಾವಜೀವಿ, ಸಣ್ಣಪುಟ್ಟದ್ದಕ್ಕೂ ನನಗೆ ಅಳು ಅಥವಾ ಕೋಪ ಬರುವುದೇಕೆ, ನಾನೇಕೆ ಎಲ್ಲದಕ್ಕೂ ಅತಿಯಾಗಿ ಪ್ರತಿಕ್ರಿಯೆಸುತ್ತೇನೆ ಎಂಬ ಪ್ರಶ್ನೆಗಳು ಯಾವಾಗಾದರೂ ಕಾಡಿದ್ದರೆ ಅದಕ್ಕೆ ಇಲ್ಲಿದೆ ಉತ್ತರ.
ಮನುಷ್ಯ ಸಹಜ ಗುಣ
ಯಾರಾದರೂ ಪ್ರೀತಿಪಾತ್ರರು ಹೋದಾಗ ಅಥವಾ ನಿಮಗೆ ಅತಿ ಮುಖ್ಯವಾದದ್ದನ್ನು ಕಳೆದುಕೊಂಡರೆ ಭಾವುಕರಾಗುವುದು ಸಹಜವೇ. ಇಂಥ ಸಂದರ್ಭದಲ್ಲಿ ಇತರರಿಗಿಂತ ಹೆಚ್ಚು ಶೋಕಿಸುತ್ತಿದ್ದೀರಿ, ಹೆಚ್ಚು ಕಾಲ ಶೋಕಿಸುತ್ತಿದ್ದೀರಿ ಎಂದರೂ ಅದರರ್ಥ ನೀವು ಅತಿಯಾಗಿ ಪ್ರತಿಕ್ರಿಯಿಸುತ್ತಿದ್ದೀರಿ ಎಂದಲ್ಲ. ಇತರರು ನಿಮ್ಮಷ್ಟು ದುಃಖ ತೋರಿಸಿಕೊಳ್ಳುತ್ತಿಲ್ಲ ಎಂದ ಮಾತ್ರಕ್ಕೆ ಅವರಿಗೆ ದುಃಖವಾಗಿಲ್ಲ ಎಂದೂ ಅಲ್ಲ. ನಾವು ಮನುಷ್ಯರು ಪ್ರತಿಯೊಬ್ಬರೂ ವಿಭಿನ್ನವೇ. ಅದನ್ನು ನೆನಪಲ್ಲಿಟ್ಟುಕೊಂಡರೆ ಸಾಕು. ನಿಮ್ಮ ಭಾವುಕತೆ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿಲ್ಲವೆಂದರೆ ನೀವು ಇತರರಿಗಿಂತ ಹೆಚ್ಚು ಸೆನ್ಸಿಟಿವ್ ಆಗಿದ್ದೀರಷ್ಟೇ. ಆ ಸಮಯದಲ್ಲಿ ನಿದ್ರಾಹೀನತೆ ಅಥವಾ ಒತ್ತಡದ ಕಾರಣದಿಂದ ಎಮೋಶನ್ಸ್ ಹೆಚ್ಚಿರುವ ಸಾಧ್ಯತೆಯೂ ಇದೆ.
ಜೀನ್ಸ್
ನೀವು ಇತರರಿಗಿಂತಾ ತುಂಬಾ ಭಾವುಕರಾಗಿದ್ದೀರಿ ಎಂದು ವೈಯಕ್ತಿಕವಾಗಿ ಅನಿಸುತ್ತಿದ್ದರೆ, ಅದು ನಿಮ್ಮ ಆನುವಂಶಿಕ ಘಟಕಗಳ ಪರಿಣಾಮವಾಗಿರಬಹುದು. ಜೀನ್ಸ್‌ನಲ್ಲಿ ಆಗುವ ವ್ಯತ್ಯಾಸಗಳು ಮೆದುಳನ್ನು ಭಾವನೆಗಳಿಗೆ ಹೆಚ್ಚು ಸಂವೇದನಾಶೀಲವಾಗಿಸಬಲ್ಲದು ಎಂಬುದನ್ನು ಕೆಲ ಅಧ್ಯಯನಗಳು ಸಾಬೀತುಪಡಿಸಿವೆ. ಸೆರಟೋನಿನ್ ಟ್ರಾನ್ಸ್‌ಪೋರ್ಟರ್, ಡೋಪಮೈನ್ ಹಾಗೂ ಕೆಲ ಜೀನ್‌ಗಳು ಮೆದುಳಿನ ಕೆಲ ಭಾಗಗಳಲ್ಲಿ ಚಟುವಟಿಕೆ ಹೆಚ್ಚಿಸುತ್ತವೆ. ಆ ಮೂಲಕ ನಿಮ್ಮ ಎಮೋಷನಲ್ ಪ್ರತಿಕ್ರಿಯೆ ಹೆಚ್ಚಲು ಕಾರಣವಾಗುತ್ತವೆ. ಇನ್ನು ನಿಮ್ಮ ಕುಟುಂಬದಲ್ಲಿ ಯಾರಾದರೂ ಆತಂಕ, ಖಿನ್ನತೆಯಂಥ ಮಾನಸಿಕ ಸಮಸ್ಯೆಗಳನ್ನು ಹೊಂದಿದ್ದರೆ ನೀವು ಕೂಡಾ ಅಂಥ ಸಮಸ್ಯೆಗಳನ್ನು ಹೊಂದುವ ಸಾಧ್ಯತೆಗಳಿರುತ್ತವೆ.
ವಿಶ್ರಾಂತಿ ಕೊರತೆ
ನಿದ್ರೆಯ ಕೊರತೆಯಾದರೆ ಬೇಗ ದುಃಖದ ಕಟ್ಟೆಯೊಡೆಯುವುದು ಸಾಮಾನ್ಯ. ಅರ್ಧ ರಾತ್ರಿಯವರೆಗೆ ಕೆಲಸ ಮಾಡಿ ಹಾಸಿಗೆಗೆ ತಲೆ ಇಟ್ಟಿರುತ್ತೀರಿ. ಮೂರೇ ಗಂಟೆಗಳಲ್ಲಿ ಅಲಾರಾಂ ಬಡಿದು ಮತ್ತೆ ಕೆಲಸ ಆರಂಭಿಸು ಎಂದರೆ ಅದರ ತಲೆಗೆ ಬಡಿಯೋಣ ಎನಿಸುವಂಥ ಸಿಟ್ಟು ಬಂದೇ ಬರುತ್ತದೆ. ಹೀಗೆ ನಿದ್ದೆಯಿಲ್ಲದೆ ಕೆಲಸ ಮಾಡುವಾಗ ಸಣ್ಣ ಸಣ್ಣ ವಿಷಯಗಳಿಗೂ ಕಿರಿಕಿರಿಯಾಗುತ್ತಾ ಅದು ಕೊನೆಗೆ ಕೆಲ ದಿನಗಳಲ್ಲಿ ನಿಮ್ಮ ಏಕಾಗ್ರತೆ ಮೇಲೆ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ, ಆತಂಕ, ಖಿನ್ನತೆ ಮುಂತಾದ ಮಾನಸಿಕ ಸಮಸ್ಯೆಗಳನ್ನು ಹೊತ್ತು ತರುತ್ತದೆ. ಆಗ ಸಣ್ಣಪುಟ್ಟದ್ದಕ್ಕೂ ಅಳು, ಕೋಪ ಬರುವುದು ಸಾಮಾನ್ಯವೇ. ಹಾಗಾಗಿ ಚೆನ್ನಾಗಿ ನಿದ್ರಿಸುವುದರಿಂದ ಭಾವನೆಗಳ ಮೇಲೆ ಹಿಡಿತ ಸಾಧಿಸಬಹುದು.
ಏಕಾಂಗಿತನ
ಜನರಿಂದ ದೂರವಿರುವುದು, ಸದಾ ನಿಮ್ಮಷ್ಟಕ್ಕೆ ನೀವಿರುವುದು ಕೂಡಾ ನಿಮ್ಮನ್ನು ಭಾವುಕತೆಗೆ ತಳ್ಳುತ್ತದೆ. ಕೆಲವೊಮ್ಮೆ ಈ ಏಕಾಂತ ಬೇಕಾಗುತ್ತದೆ. ಆದರೆ ಇದು ಹೆಚ್ಚಾದರೆ ಜೀವನೋತ್ಸಾಹ ಬತ್ತುತ್ತದೆ. ಸದಾ ಚಿಂತೆಗಳು ಸುತ್ತುವರೆದು ನಿಮ್ಮನ್ನು ಅಳು, ನೋವಿನ ಕೂಪಕ್ಕೆ ತಳ್ಳುತ್ತವೆ. ಆದರೆ, ನಿಮ್ಮ ಸುತ್ತಮುತ್ತ ಜನರಿಂದ ತುಂಬಿದ್ದಾಗ ಉತ್ಸಾಹಿತರಾಗಿರುತ್ತೀರಿ. ಆಗ ನಿಮ್ಮ ಮನಸ್ಸು ಚಿಂತೆ, ಸಮಸ್ಯೆಗಳಿಂದ ದೂರಾಗಿರುತ್ತದೆ. ಹೆಚ್ಚು ಜನರೊಡನೆ ಇದ್ದಂತೆಲ್ಲ ಯಾವೆಲ್ಲ ರೀತಿಯ ಜನರಿದ್ದಾರೆ ಎಂಬುದು ಅರಿವಾಗುತ್ತದೆ. ಇದು ಅರಿವಾದಾಗ ನೆಗೆಟಿವ್ ಜನರಿಗೆ ಹೆಚ್ಚು ಪ್ರತಿಕ್ರಿಯಿಸುವುದು ಬಿಟ್ಟುಬಿಡಲು ಸಾಧ್ಯವಾಗುತ್ತದೆ.
ಆಹಾರ
ಮುಂದಿನ ಬಾರಿ ನಾನೇಕೆ ಅಷ್ಟೊಂದು ಎಮೋಶನಲ್ ಎಂಬ ಪ್ರಶ್ನೆ ಎದ್ದಾಗ, ನಿಮ್ಮ ಡಯಟ್ ಬಗ್ಗೆ ಗಮನ ಹರಿಸಿ. ನೀವು ಸೇವಿಸುವ ಆಹಾರಕ್ಕೂ ನಿಮ್ಮ ಭಾವನೆಗಳಿಗೂ ನೇರ ಸಂಬಂಧವಿದೆ. ಜಂಕ್ ಆಹಾರ ಸೇವಿಸಿದಾಗ ಅದರಲ್ಲಿರುವ ಶುಗರ್‌ನಿಂದಾಗಿ ತಕ್ಷಣಕ್ಕೆ ಖುಷಿಯಾಗಬಹುದು. ಆದರೆ, ಈ ಖುಷಿ ಹೆಚ್ಚು ಕಾಲ ಇರುವುದಿಲ್ಲ. ನಂತರದಲ್ಲಿ ಸಣ್ಣ ಪುಟ್ಟ ಬೇಜಾರಿನ ಸಂಗತಿ ಕೇಳಿದರೂ ದೊಡ್ಡ ಮಟ್ಟದಲ್ಲಿ ಬೇಜಾರಾಗಬಹುದು. ಆದರೆ ಹಣ್ಣು, ತರಕಾರಿಯಂಥ ಉತ್ತಮ ಆಹಾರಗಳನ್ನು ಸೇವಿಸುತ್ತಿದ್ದಾಗ ಅದು ಸಮಚಿತ್ತ ಸಾಧನೆಗೆ ಸಹಕರಿಸುತ್ತದೆ.
ಜೀವನದ ದೊಡ್ಡ ಬದಲಾವಣೆ
ಬದುಕಿನಲ್ಲಿ ಅನಿರಿಕ್ಷಿತವಾಗಿ ದೊಡ್ಡ ಬದಲಾವಣೆಗಳಾದಾಗ ಅದು ನಿಮ್ಮ ಭಾವನೆಗಳನ್ನು ಅನಿಯಂತ್ರಿತವಾಗಿಸಬಲ್ಲದು. ಮೊದಲ ಬಾರಿ ಮನೆ ಬಿಟ್ಟು ಹೊರಗಿರಬೇಕಾಗಿ ಬಂದಾಗ, ಉದ್ಯೋಗ ಸ್ಥಳದಲ್ಲಿ ಹೊಂದಿಕೊಳ್ಳಲು ಕಷ್ಟವಾಗುತ್ತಿರುವಾಗ ಇತ್ಯಾದಿ ಸಂದರ್ಭಗಳಲ್ಲಿ ಖುಷಿಯ ವಿಚಾರ ಕೇಳಿದರೆ ಅಗತ್ಯಕ್ಕಿಂತ ಹೆಚ್ಚು ಖುಷಿಯಾಗುತ್ತದೆ, ದುಃಖದ ವಿಚಾರ ಹೆಚ್ಚಿನ ದುಃಖಕ್ಕೆ ಕಾರಣವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.