ಕೊರೋನಾ ಗೆದ್ದವರ ಮೇಲೆ ಈಗ ಡೆಡ್ಲಿ ಬ್ಲ್ಯಾಕ್ ಫಂಗಸ್ ಅಟ್ಯಾಕ್!

By Suvarna News  |  First Published May 7, 2021, 4:30 PM IST

ಕೋವಿಡ್ ವೈರಸ್‌ ಜೊತೆ ಹೋರಾಡಿ ಗೆದ್ದು ಗುಣಮುಖರಾದವರನ್ನು ಇನ್ನೊಂದು ಮಾರಕ ಕಾಯಿಲೆ ಅಟಕಾಯಿಸಿಕೊಳ್ಳುತ್ತಿದೆ. ಅದರ ಬಗ್ಗೆ ತಿಳಿಯೋಣ ಬನ್ನಿ.


ಉತ್ತರ ಭಾರತದಲ್ಲಿ ಕೋವಿಡ್ ವೈರಸ್‌ ಜೊತೆ ಹೋರಾಡಿ ಗೆದ್ದು ಗುಣಮುಖರಾದವರನ್ನು ಇನ್ನೊಂದು ಮಾರಕ ಕಾಯಿಲೆ ಅಟಕಾಯಿಸಿಕೊಳ್ಳುತ್ತಿದೆ. ಅದರ ಬಗ್ಗೆ ತಿಳಿಯೋಣ ಬನ್ನಿ.

ಇದು ಮೊದಲು ದಿಲ್ಲಿಯ ಗಂಗಾರಾಮ್ ಹಾಸ್ಪಿಟಲ್‌ನಲ್ಲಿ ಶುರುವಾಯಿತು. ಅಲ್ಲಿ ಈಗಾಗಲೇ ಒಂದು ಬಾರಿ ಕೊರೊನಾ ವೈರಸ್‌ನಿಂದ ಬಾಧಿತರಾಗಿ ಐಸಿಯುಗೆ ಅಡ್ಮಿಟ್ ಆದವರು, ಹೇಗೋ ಚೇತರಿಸಿಕೊಂಡು ಮನೆಗೆ ವಾಪಸಾದ ಕೆಲವರು ಮತ್ತೆ ಆಸ್ಪತ್ರೆಗೆ ಮರಳತೊಡಗಿದರು. ಅವರಿಗೆ ಕಣ್ಣುಗಳ ದೃಷ್ಟಿ ಹೊರಟುಹೋಗಿತ್ತು. ನಂತರ ಮೂಗು ಹಾಗೂ ಗಲ್ಲದ ಮೂಳೆಗಳಲ್ಲಿ ಸೋಂಕು ಉಂಟಾಗಿ ಅದನ್ನು ತೆಗೆಯಬೇಕಾಯಿತು. ನಂತರ ಸಾವು ಸಂಭವಿಸಿತು.

Latest Videos

undefined

ಹೀಗೆ ಇದು ಡೆಡ್ಲಿ ಸೋಂಕು ಆಗಿ ಹಲವರಲ್ಲಿ ಪರಿವರ್ತಿಸಿತು. ಕಣ್ಣುಗಳ ದೃಷ್ಟಿ ಹೊರಟುಹೋಗುವುದರಿಂದ ಇದನ್ನು ಬ್ಲ್ಯಾಕ್ ಫಂಗಸ್ ಅಂತ ಕರೆಯುತ್ತಾರೆ. ವೈದ್ಯಕೀಯ ಭಾಷೆಯಲ್ಲಿ ಇದರ ಹೆಸರು ಮ್ಯುಕೋರ್‌ಮಯೋಸಿಸ್. ಝೈಗೋಮೈಕೋಸಿಸ್ ಅಂತಲೂ ಕರೆಯುತ್ತಾರೆ.

ಕಳೆದ ವರ್ಷ ಮೊದಲನೇ ಅಲೆಯಲ್ಲಿಯೇ ಇಂಥ ಪ್ರಕರಣಗಳು ವರದಿಯಾಗಿದ್ದವು. ಅದೂ ದಿಲ್ಲಿಯಲ್ಲೇ. ಈ ವರ್ಷ ಕಳೆದೆರಡು ದಿನಗಳಲ್ಲಿ ಆರು ಮಂದಿ ಪೇಷೆಂಟ್‌ಗಳು ಈ ಸಮಸ್ಯೆಯೊಂದಿಗೆ ಬಂದಿದ್ದಾರೆ. ರೋಗ ಪ್ರತಿರೋಧ ಶಕ್ತಿ ತೀರಾ ದುರ್ಬಲ ಆಗಿರುವವರಲ್ಲಿ ಇದು ಕಾಣಿಸಿಕೊಳ್ಳುವ ಸಾಧ್ಯತೆ ಅಧಿಕ. ಇದು ಅಪರೂಪ ಮಾತ್ರವಲ್ಲ ಅಪಾಯಕಾರಿಯೂ ಹೌದು. ಇದು ಹರಡುವುದು ವಾತಾವರಣದಲ್ಲಿ ಹಾರಾಡುತ್ತಿರುವ ಒಂದು ಬಗೆಯ ಕಣಗಳಿಂದ. ಇವು ಫಂಂಗಸ್‌ ಕಣಗಳು. ಇವನ್ನು ಮ್ಯೂಕೋರ್‌ಮೈಸಿಟಿಸ್ ಎಂದು ಕರೆಯುತ್ತಾರೆ.

ಇವು ಸಹಜವಾಗಿಯೇ ವಾತಾವರಣದಲ್ಲಿದ್ದು, ವ್ಯಕ್ತಿಯ ದೇಹದ ರೋಗನಿರೋಧಕ ಶಕ್ತಿ ದುರ್ಬಲವಾಗಿದ್ದರೆ ಆತನಲ್ಲಿ ಥಟ್ಟನೆ ಪ್ರವೇಶಿಸುತ್ತದೆ. ಮೂಗಿನ ಉಸಿರಾಟದ ಮೂಲಕ ಒಳಪ್ರವೇಶಿಸಿ, ಶ್ವಾಸಕೋಶ, ಸೈನಸ್‌ಗಳನ್ನು ಬಾಧಿಸುತ್ತದೆ. ಇದು ಉಸಿರಾಟದಲ್ಲಿ ಸೇರಿಕೊಳ್ಳುವುದು ಕೆಲವು ಬಗೆಯ ಹೂವಿನ ಪರಾಗಗಳ ಮೂಲಕ. ದೇಹದಲ್ಲಿ ಯಾವುದಾದರೂ ತೆರೆದ ಗಾಯಗಳಿದ್ದರೆ, ಅದರ ಮೂಲಕವೂ ಈ ಕಣಗಳು ದೇಹವನ್ನು ಪ್ರವೇಶಿಸಬಹುದು.

ಹೆಚ್ಚಿನವರಲ್ಲಿ ಈ ಕಣಗಳು ಯಾವುದೇ ಹಾನಿ ಮಾಡುವುದಿಲ್ಲ. ರೋಗ ಪ್ರತಿರೋಧ ಶಕ್ತಿ ಚೆನ್ನಾಗಿರುವವರಲ್ಲಿ ಇದು ದುಷ್ಪ್ರಭಾವ ಬೀರುವುದಿಲ್ಲ. ಇಲ್ಲದವರಲ್ಲಿ ಇದು ಶ್ವಾಸಕೋಶದೊಂದಿಗೆ ಇತರ ಭಾಗಗಳಿಗೂ ಹಬ್ಬಿ ಸೋಂಕು ಹರಡಿ ತೊಂದರೆ ಕೊಡಲು ಆರಂಭಿಸುತ್ತದೆ. ಇದು ಸಾಂಕ್ರಾಮಿಕವಲ್ಲ. ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ. ಹಾಗೇ ಪ್ರಾಣಿಗಳಿಂದ ಮನುಷ್ಯರಿಗೆ ಬರುವುದೂ ಇಲ್ಲ. ಸೋಂಕಿನ ಆರಂಭಿಕ ಹಂತದಲ್ಲಿ ಪತ್ತೆ ಹಚ್ಚುವುದು, ಸೂಕ್ತ ಆಂಟಿಫಂಗಲ್ ಟ್ರೀಟ್‌ಮೆಂಟ್ ಕೊಡುವುದು ಇದಕ್ಕೆ ಪರಿಹಾರ. 



ಕೋವಿಡ್‌ ಪೀಡಿತರಲ್ಲೇ ಯಾಕೆ?

ಕೋವಿಡ್ ಸೋಂಕಿಗೆ ತುತ್ತಾಗಿ ಬಳಲಿದವರಲ್ಲಿ, ರೋಗ ಪ್ರತಿರೋಧ ಶಕ್ತಿ ಸಾಕಷ್ಟು ದುಡಿದು ದಣಿದಿರುತ್ತದೆ. ಹಾಗೇ ಶ್ವಾಸಕೋಶಗಳೂ ಸೋಂಕಿಗೆ ತುತ್ತಾಗಿ ದುರ್ಬಲಗೊಂಡಿರುತ್ತವೆ. ಇವರಿಗೆ ಡಯಾಬಿಟಿಸ್, ಹೃದಯರೋಗ ಮುಂತಾದ ಕೋಮಾರ್ಬಿಡಿಟಿಗಳೂ ಇರುವುದರಿಂದ ಅದರ ವಿರುದ್ಧವೂ ದೇಹ ಹೋರಾಡುತ್ತಿರಬೇಕಿದೆ. ಹೀಗಾಗಿ, ಫಂಗಸ್ ಬಲುಬೇಗನೆ ದೇಹದ ಮೇಲೆ ಹಿಡಿತ ಸಾಧಿಸುತ್ತದೆ. ಇದರಿಂದ ಸೋಂಕಿತರಾದವರಲ್ಲಿ ಹತ್ತು ಮಂದಿಯಲ್ಲಿ ಐದು ಮಂದಿ ಸಾಯುವುದು ಖಚಿತ. ಇದುವರೆಗೂ ಶೇ.50 ಮರಣಪ್ರಮಾಣ ಇದೆ. ಯಾಕೆಂದರೆ ಇದು ಈಗಾಗಲೇ ಕೋವಿಡ್‌ನಿಂದ ಅರ್ಧ ಸತ್ತವರನ್ನು ಮತ್ತೆ ಅಟಕಾಯಿಸಿಕೊಂಡು ಕೊಲ್ಲುವ ಫಂಗಸ್.
ಪತ್ತೆಹಚ್ಚುವುದು ಹೇಗೆ?

ಇದನ್ನು ಆರಂಭದಲ್ಲೇ ಗುರುತಿಸುವ ಲಕ್ಷಣಗಳೆಂದರೆ ಮೂಗು ಬ್ಲಾಕ್ ಆಗುವುದು, ಕಣ್ಣು ಅಥವಾ ಗದ್ದದಲ್ಲಿ ಬಾವು ಬರುವುದು, ಮೂಗಿನಲ್ಲಿ ಕಪ್ಪು ಬಣ್ಣದ ಒಣ ಕಲೆಗಳು ಕಾಣಿಸಿಕೊಳ್ಳುವುದು. ಈ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರಲ್ಲಿಗೆ ಹೋಗಿ ಚೆಕ್ ಮಾಡಿಸಿಕೊಳ್ಳಲೇಬೇಕು. ತಕ್ಷಣವೇ ಫಂಗಸ್ ವಿರೋಧಿ ಚಿಕಿತ್ಸೆ ಸಿಕ್ಕಿದರೆ ಬದುಕಬಹುದು. ಇಲ್ಲದಿದ್ದರೆ ಇಲ್ಲ. 

ಕಳೆದ ವರ್ಷ ಈ ಸೋಂಕು ಬೆಂಗಳೂರಿನಲ್ಲೂ ಕೆಲವರಲ್ಲಿ ಕಾಣಿಸಿಕೊಂಡಿತ್ತು. ಬೆಂಗಳೂರಿನ ನಾಲ್ಕು ಮಂದಿಯಲ್ಲಿ ಮ್ಯೂಕೋರ್‌ಮಯೋಸಿಸ್ ಕಳೆದ ವರ್ಷ ಕಾಣಿಸಿಕೊಂಡಿದ್ದು, ಅವರಲ್ಲಿ ಇಬ್ಬರು ಮೃತಪಟ್ಟಿದ್ದರು. ದೇಹದ ಇಮ್ಯುನಿಟಿ ಹೆಚ್ಚಿಸಿಕೊಳ್ಳುವುದು ಮಾತ್ರವೇ ಇದಕ್ಕೆ ಶಾಶ್ವತ ಪರಿಹಾರ.

click me!