ಪಂದ್ಯಗಳ ಪ್ರಸಾರ, ಮೈದಾನ ಗುಣಮಟ್ಟದ ಬಗ್ಗೆ ಅಪಸ್ವರ
ಸೀಮಿತ ಬಜೆಟ್‌ನಲ್ಲೇ ಅಂತಾರಾಷ್ಟ್ರೀಯ ಟೂರ್ನಿ ಆಯೋಜನೆ
ಮಳೆಯಿಂದಾಗಿ ಸಮಸ್ಯೆ ಉಲ್ಬಣ
- ಸ್ಪಂದನ್ ಕಣಿಯಾರ್/ನಾಸಿರ್ ಸಜಿಪ, ಕನ್ನಡಪ್ರಭ
ಬೆಂಗಳೂರು(ಜೂ.23): ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಶನ್(ಸ್ಯಾಫ್)ನ 14ನೇ ಆವೃತ್ತಿಯ ಟೂರ್ನಿಯ ಆತಿಥ್ಯ ಬೆಂಗಳೂರಿಗೆ ಸಿಕ್ಕಾಗ ಸಂಭ್ರಮಿಸಿದ್ದ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ(ಕೆಎಸ್ಎಫ್) ಇದೀಗ ಟೂರ್ನಿಯನ್ನು ಯಶಸ್ವಿಯಾಗಿ ನಡೆಸಲು ಹರಸಾಹಸ ಪಡುತ್ತಿದೆ. ಹತ್ತಾರು ಸಮಸ್ಯೆ, ಅವ್ಯವಸ್ಥೆಯ ನಡುವೆಯೇ ನಡೆಯುತ್ತಿರುವ ಟೂರ್ನಿ ರಾಜ್ಯ ರಾಜಧಾನಿಯ ಅಭಿಮಾನಿಗಳ ಮನ ಸೆಳೆಯುತ್ತಿದ್ದರೂ, ಅಂ.ರಾ. ಮಟ್ಟದ ಟೂರ್ನಿ ಆಯೋಜನೆಗೆ ಬೇಕಿರುವ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್(ಎಐಎಫ್ಎಫ್) ಬೆಂಬಲ, ಆರ್ಥಿಕ ಬಲ, ಸಿದ್ಧತೆಯ ಕೊರತೆ ಎದ್ದು ಕಾಣಿಸುತ್ತಿದೆ. ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸ್ಯಾಫ್ ಕಪ್‌ನಲ್ಲಿ ಕಂಡು ಬರುತ್ತಿರುವ ಅವ್ಯವಸ್ಥೆಗಳನ್ನು ‘ಕನ್ನಡಪ್ರಭ’ ಪಟ್ಟಿಮಾಡಿದೆ.
undefined
ಮೈದಾನ ಗುಣಮಟ್ಟ ಕಳಪೆ!
ಕಂಠೀರವ ಕ್ರೀಡಾಂಗಣವು ಪ್ರಧಾನವಾಗಿ ಅಥ್ಲೆಟಿಕ್ಸ್ಗೆ ಬಳಕೆಯಾಗುವ ಕ್ರೀಡಾಂಗಣ. ಆಸನ ಸಾಮರ್ಥ್ಯ ಹೆಚ್ಚಿರುವ ಕಾರಣಕ್ಕೆ ಇಲ್ಲಿ ಫುಟ್ಬಾಲ್ ಪಂದ್ಯಗಳನ್ನು ನಡೆಸಲಾಗುತ್ತದೆ. ಮೈದಾನದಲ್ಲಿ ಹೈಜಂಪ್, ಡಿಸ್ಕಸ್ ಥ್ರೋ, ಹ್ಯಾಮರ್ ಥ್ರೋ, ಪೋಲ್ ವಾಲ್ಟ್ ಸೇರಿ ಇನ್ನೂ ಕೆಲ ಕ್ರೀಡೆಗಳ ಅಥ್ಲೀಟ್‌ಗಳು ಅಭ್ಯಾಸ ನಡೆಸುವ ಕಾರಣ ಸಹಜವಾಗಿಯೇ ಅಲ್ಲಲ್ಲಿ ಹುಲ್ಲು ಹಾಸು ಹಾಳಾಗಿರಲಿದೆ. ಅದೇ ಮೈದಾನದಲ್ಲಿ ಫುಟ್ಬಾಲ್ ನಡೆಯುತ್ತಿರುವ ಕಾರಣ, ಕಾರ್ನರ್‌ಗಳಲ್ಲಿ ಹುಲ್ಲು ಕಿತ್ತು ಹೋಗಿರುವ ಕಾರಣ ಚೆಂಡನ್ನು ಪಾಸ್ ಮಾಡಲು ಕಷ್ಟವಾಗುತ್ತಿದೆ ಎಂದು ಕೆಲ ತಂಡಗಳು ದೂರುತ್ತಿರುವುದಾಗಿ ತಿಳಿದುಬಂದಿದೆ.
ಮಳೆಗಾಲದಲ್ಲಿ ಆಯೋಜನೆ!
ಬೆಂಗಳೂರಲ್ಲಿ ಐಎಸ್‌ಎಲ್ ಪಂದ್ಯಗಳು ದೊಡ್ಡ ಹಿಟ್ ಆಗಿವೆ. 25000 ಸಾಮರ್ಥ್ಯವಿರುವ ಕ್ರೀಡಾಂಗಣ ಬಹುತೇಕ ಭರ್ತಿಯಾಗಲಿದೆ. ಆದರೆ ಐಎಸ್‌ಎಲ್ ನಡೆಯುವುದು ಅಕ್ಟೋಬರ್ನಿಂದ ಫ್ರೆಬ್ರವರಿ-ಮಾಚ್‌ರ್ ವರೆಗೂ. ಮಳೆ ಬೆಂಗಳೂರಿಗೆ ತಂಪೆರೆಯುತ್ತಿದ್ದರೂ, ಆಯೋಜಕರಿಗೆ ತಲೆಬಿಸಿ ತಂದಿದೆ.
'ಸುನಿಲ್ ಚೆಟ್ರಿ ಭಾರತ ಫುಟ್ಬಾಲ್ ತಂಡದ ವಿರಾಟ್ ಕೊಹ್ಲಿ': ನೆಟ್ಟಿಗರ ಬಣ್ಣನೆ
ಟಿಕೆಟ್ ಪರಿಶೀಲನೆಯಲ್ಲೂ ಎಡವಟ್ಟು!
ಬುಧವಾರ ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ 22860 ಪ್ರೇಕ್ಷಕರು ನೆರೆದಿದ್ದರು. ಪಂದ್ಯಕ್ಕಾಗಿ ಆನ್‌ಲೈನ್ ಹಾಗೂ ಕ್ರೀಡಾಂಗಣದ ಕೌಂಟರ್‌ನಲ್ಲಿ ಟಿಕೆಟ್ ಮಾರಾಟ ಮಾಡಲಾಗಿತ್ತು. ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಿದವರು ಪಿಡಿಎಫ್ ಮಾದರಿಯಲ್ಲಿದ್ದ ಟಿಕೆಟ್ ಜೊತೆ ಫೋಟೋ ಇರುವ ಗುರುತಿನ ಚೀಟಿ(ಉದಾ: ಆಧಾರ್, ಡಿಎಲ್) ತೋರಿಸಿ ಕ್ರೀಡಾಂಗಣಕ್ಕೆ ಪ್ರವೇಶಿಸಬೇಕಿತ್ತು. ಆದರೆ ಕ್ರೀಡಾಂಗಣದ ಗೇಟ್‌ಗಳ ಬಳಿ ಯಾವುದೇ ಪರಿಶೀಲನೆ ನಡೆಯುತ್ತಿದ್ದಂತೆ ಕಾಣಲಿಲ್ಲ. ಒಂದೇ ಪಿಡಿಎಫ್ ಟಿಕೆಟ್‌ಗಳನ್ನು ಹಲವರು ತಮ್ಮ ತಮ್ಮ ಮೊಬೈಲ್‌ಗಳಲ್ಲಿ ತೋರಿಸಿ ಒಳ ಪ್ರವೇಶಿಸಿದ್ದರೆ ಅಚ್ಚರಿಯಿಲ್ಲ. ಜೊತೆಗೆ ಪ್ರೇಕ್ಷಕರನ್ನು ಕ್ರೀಡಾಂಗಣದ ಒಳಕ್ಕೆ ಬಿಡುವುದರಲ್ಲೂ ಗೊಂದಲಗಳು ಆಗಿದ್ದಂತೆ ಕಂಡು ಬಂತು.
ನೇರ ಪ್ರಸಾರದ ಬಗ್ಗೆ ಗೊಂದಲ!
ಟೂರ್ನಿಯ ನೇರ ಪ್ರಸಾರದ ಬಗ್ಗೆ ಆಯೋಜಕರಿಗೇ ಸ್ಯಾಫ್ ಸರಿಯಾದ ಮಾಹಿತಿ ನೀಡಿರಲಿಲ್ಲ. ಉದ್ಘಾಟನಾ ಪಂದ್ಯಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದಾಗದಷ್ಟೇ ಡಿಡಿ ಸ್ಪೋಟ್ಸ್‌ರ್‍ನಲ್ಲಿ ಪಂದ್ಯಗಳು ಪ್ರಸಾರವಾಗುವ ಬಗ್ಗೆ ಮಾಹಿತಿಯನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳಲಾಯಿತು. ಇನ್ನು ವೀಕ್ಷಕ ವಿವರಣೆಯ ಗುಣಮಟ್ಟದ ಬಗ್ಗೆಯೂ ಸಾಮಾಜಿಕ ತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ. ಕ್ರೀಡಾಂಗಣದಲ್ಲಿ ದೊಡ್ಡ ಪರದೆಯಲ್ಲಿ ಆಟದ ಪ್ರಸಾರವೂ ಆಗುತ್ತಿಲ್ಲ. ಪ್ರೇಕ್ಷಕರು ಒಂದೇ ಒಂದು ಕ್ಷಣ ಅತ್ತಿತ್ತ ತಿರುಗಿದರೂ ಏನಾಯಿತು ಎಂದು ರೀಪ್ಲೇ ನೋಡಲು ಸಹ ಆಗುವುದಿಲ್ಲ.
ಮಾಧ್ಯಮ ನಿರ್ವಹಣೆಯಲ್ಲಿ ಪ್ರಮಾದ!
ಅಂ.ರಾ. ಟೂರ್ನಿಯ ವರದಿಗಾಗಿ ದೊಡ್ಡ ಸಂಖ್ಯೆಯಲ್ಲಿ ಮಾಧ್ಯಮ ಪ್ರತಿನಿಧಿಗಳು ಆಗಮಿಸುವ ನಿರೀಕ್ಷೆ ಇದ್ದರೂ ಆಯೋಜಕರು ಸರಿಯಾದ ವ್ಯವಸ್ಥೆ ಮಾಡಿಲ್ಲ. ತೆರೆದ ಸ್ಥಳದಲ್ಲಿ ಬೆರಳೆಣಿಕೆಯಷ್ಟುಕುರ್ಚಿ, ಟೇಬಲ್‌ಗಳನ್ನು ಹಾಕಲಾಗಿದೆ. ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯದ ವರದಿಗಾಗಿ ವಿವಿಧ ರಾಜ್ಯ, ದೇಶಗಳ 50ಕ್ಕೂ ಹೆಚ್ಚು ಪತ್ರಕರ್ತರು ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಆದರೆ ಅಲ್ಲಿದ್ದಿದ್ದು 10-15 ಕುರ್ಚಿಗಳಷ್ಟೇ. ಮಳೆಯಿಂದಾಗಿ ನಿಗದಿತ ಸ್ಥಳದಲ್ಲಿ ಕೂರಲಾಗದೆ, ಸಿಕ್ಕ ಸಿಕ್ಕ ಕಡೆಗಳಲ್ಲಿ ನಿಂತು, ಕೂತು ಸುದ್ದಿ ಬರೆಯಬೇಕಾದ ಪರಿಸ್ಥಿತಿ ಎದುರಾಯಿತು. ಆಯೋಜಕರನ್ನು ಈ ಬಗ್ಗೆ ಕೇಳಿದಾಗ ‘ಮಳೆ ಬರಬಹುದು ಎಂದುಕೊಂಡಿರಲಿಲ್ಲ’ ಎನ್ನುವ ಉತ್ತರ ಸಿಕ್ಕಿತು.
ರಾಜ್ಯ ಸಂಸ್ಥೆ ಅಸಹಾಯಕತೆ!
ಟೂರ್ನಿಯ ಆಯೋಜನೆಯ ಅವ್ಯವಸ್ಥೆಯ ಬಗ್ಗೆ ರಾಜ್ಯ ಫುಟ್ಬಾಲ್ ಸಂಸ್ಥೆಯ ಪದಾಧಿಕಾರಿಯೊಬ್ಬರನ್ನು ‘ಕನ್ನಡಪ್ರಭ’ ಪ್ರಶ್ನಿಸಿದಾಗ ಅವರು ಅಸಹಾಯಕತೆ ವ್ಯಕ್ತಪಡಿಸಿದರು. ‘ಬೆಂಗಳೂರಿಗೆ ಅಂ.ರಾ. ಟೂರ್ನಿ ಆತಿಥ್ಯ ಸಿಕ್ಕಿರುವುದೇ ಅಪರೂಪ. ಆದರೆ ಸರ್ಕಾರದಿಂದ ಅಗತ್ಯ ಬೆಂಬಲ ಸಿಗುತ್ತಿಲ್ಲ. ಹಣಕಾಸಿನ ಕೊರತೆ ನಡುವೆಯೂ ನಮ್ಮೆಲ್ಲಾ ಶಕ್ತಿ ಮೀರಿ ಟೂರ್ನಿಯ ಯಶಸ್ಸಿಗೆ ಸಹಕರಿಸುತ್ತಿದ್ದೇವೆ. ಟೂರ್ನಿ ಆರಂಭಕ್ಕೆ ಕೆಲವೇ ದಿನಗಳಿದ್ದಾಗಷ್ಟೇ ಮೈದಾನ ಬಿಟ್ಟುಕೊಡಲಾಯಿತು. ದೊಡ್ಡ ಸ್ಕ್ರೀನ್ ಅಳವಡಿಸಲು ಅಥವಾ ಬೇರೆ ವ್ಯವಸ್ಥೆ ಮಾಡಲು ಬಜೆಟ್ ಇಲ್ಲ’ ಎಂದರು.