ಸಂಜೆಯ ವೇಳೆಗೆ ಕರಿದ ತಿಂಡಿಗಳು ಬಯಕೆ ಹುಟ್ಟಿಸುತ್ತವೆ. ಅವುಗಳನ್ನು ನೋಡಿದಾಕ್ಷಣ ತಿನ್ನಬೇಕೆಂಬ ಆಸೆ ಮೂಡುವಂತೆ ಪರಿಮಳ ಬೀರುತ್ತವೆ. ಅದರಲ್ಲೂ ಒತ್ತಡದಲ್ಲಿದ್ದಾಗ ಕರಿದ ತಿಂಡಿಗಳ ಆಸೆ ಹೆಚ್ಚು ಎನ್ನುತ್ತವೆ ಅಧ್ಯಯನಗಳು.
ಕೊರೋನಾ (Corona) ಸಾಂಕ್ರಾಮಿಕದ ಮೊದಲ ಲಾಕ್ ಡೌನ್ ಆದಾಗ ಸಂಜೆಯಾಗುತ್ತಿರುವಂತೆ ಮನೆಮನೆಗಳಿಂದ ವಿವಿಧ ಪರಿಮಳಗಳು ಹೊರಸೂಸುತ್ತಿದ್ದವು. ಕರಿದ (Fried) ತಿಂಡಿಗಳು, ವಿವಿಧ ಸ್ನ್ಯಾಕ್ಸ್ (Snacks) ಗಳನ್ನು ಮಾಡಿಕೊಂಡು ತಿನ್ನುವುದು ಆ ಸಮಯದಲ್ಲಿ ಹೆಚ್ಚಾಗಿತ್ತು. ತೀರ ಆರ್ಥಿಕ ಸಮಸ್ಯೆಗೆ ಸಿಲುಕದ ಮಧ್ಯಮವರ್ಗದ ಮನೆಗಳಲ್ಲಿ ಕನಿಷ್ಠ ವಾರಕ್ಕೆ ಮೂರ್ನಾಲ್ಕು ದಿನವಾದರೂ ಕರಿದ ತಿಂಡಿಗಳನ್ನು ಮಾಡುವುದು ಸಾಮಾನ್ಯವಾಗಿತ್ತು. ದಿನವೂ ಬಾಹ್ಯ ತಿಂಡಿಗಳನ್ನು ತಿನ್ನುವವರಿಗಂತೂ ಮನೆಯಲ್ಲೇ ಏನಾದರೊಂದನ್ನು ಮಾಡಿಕೊಂಡು ತಿನ್ನುವುದು ಚಟವಾಗಿತ್ತು. ಕೊರೋನಾದಿಂದ ಉಂಟಾಗಿದ್ದ ಒಂದು ರೀತಿಯ ಒತ್ತಡ(Tension)ವೂ ಇದಕ್ಕೆ ಕಾರಣವಾಗಿತ್ತು ಎಂದರೆ ಅಚ್ಚರಿಯಾಗಬಹುದು.
ಹೌದು, ಕೊರೋನಾ ಸಮಯದಲ್ಲಿ ಹೇಳರಿಯದ ಭಯ(Fear), ಆತಂಕ (Anxiety) ಮನೆಮಾಡಿದ್ದವು. ಜಗತ್ತು ಹಿಂದೆಂದೂ ಕಂಡಿರದ ಲಾಕ್ ಡೌನ್ ಗೆ ಸಾಕ್ಷಿಯಾಗಿತ್ತು. ನ್ಯೂಸ್ ಚಾನೆಲ್ಲುಗಳಲ್ಲಿ ಭಯಂಕರ ಸುದ್ದಿಗಳಷ್ಟೇ ಪ್ರಸಾರವಾಗುತ್ತಿದ್ದವು. ಹೀಗಾಗಿ, ಜನರಲ್ಲೂ ಒಂದು ರೀತಿಯ ಉದ್ವೇಗ ಮನೆ ಮಾಡಿತ್ತು. ಪರಿಣಾಮವಾಗಿಯೇ, ಆ ಸಮಯದಲ್ಲಿ ಕರಿದ ತಿಂಡಿಗಳ ಬಯಕೆ ಎಲ್ಲರಲ್ಲೂ ಹೆಚ್ಚಾಗಿತ್ತು ಎನ್ನುತ್ತವೆ ಅಧ್ಯಯನಗಳು.
Malai Sweets: ಹಾಲಿನ ಕೆನೆಯಿಂದ ಮಾಡ್ಬೋದು ಬಾಯಲ್ಲಿಟ್ರೆ ಕರಗೋ ಸ್ವೀಟ್ಸ್
ನಿಮಗೆ ಗೊತ್ತೇ? ಒತ್ತಡ ಮತ್ತು ಉದ್ವೇಗದಲ್ಲಿರುವ ಸಮಯದಲ್ಲಿ ಸ್ನ್ಯಾಕ್ಸ್, ಸಿಹಿ ಹಾಗೂ ಗರಿಗರಿ ತಿಂಡಿಗಳನ್ನು ತಿನ್ನಬೇಕೆಂಬ ಆಸೆ ಮೂಡುತ್ತದೆ ಎಂದು ಅನೇಕ ಸಂಶೋಧನೆಗಳು ಬಹಿರಂಗಪಡಿಸಿವೆ. ವಿಚಿತ್ರವೆಂದರೆ, ನಮ್ಮ ಮಿದುಳು (Brain) ಗರಿಗರಿ ತಿಂಡಿಗಳ ಕುರಿತು ಬಹಳ ಚುರುಕಾಗಿ ಪ್ರತಿಕ್ರಿಯೆ ನೀಡುತ್ತದೆ. ಗರಿಗರಿ ತಿಂಡಿಗಳು ಏಕತಾನತೆ ಮತ್ತು ಬೇಸರ (Bore) ಹೋಗಲಾಡಿಸಿ ಖುಷಿ ನೀಡುತ್ತವೆ. ನಮಗೆ ಸಂತಸವಾದಾಗ ದೇಹದಲ್ಲಿ ಡೊಪಮೈನ್ (Dopamine) ಎನ್ನುವ ಹಾರ್ಮೋನ್ ಬಿಡುಗಡೆಯಾಗುತ್ತದೆ. ಆಗ ಇಡೀ ದೇಹದಲ್ಲಿ ಹೊಸದೊಂದು ಉತ್ಸಾಹ ಮೂಡುತ್ತದೆ. ಈ ಹಿನ್ನೆಲೆಯಲ್ಲಿಯೇ ಕರಿದ ತಿಂಡಿಗಳನ್ನು ಪದೇ ಪದೆ ತಿನ್ನಬೇಕೆಂಬ ಬಯಕೆ ಮೂಡುತ್ತದೆ. ಇದೊಂದು ರೀತಿಯ ಸೈಕಲ್ ಇದ್ದಂತೆ. ಕರಿದ ತಿಂಡಿಗಳಿಂದ ಉತ್ಸಾಹ ಮತ್ತು ಉತ್ಸಾಹಕ್ಕಾಗಿ ಕರಿದ ತಿಂಡಿ...ಹೀಗೆಯೇ ಮುಂದುವರಿದು ಕಾಲಾನುಕ್ರಮದಲ್ಲಿ ಆರೋಗ್ಯದ ಮೇಲೆ ತೀವ್ರ ಹಾನಿಯುಂಟಾಗುತ್ತದೆ.
Hot And Cold ಆಹಾರ ಜೊತೆಯಾಗಿ ಸೇವಿಸಿದ್ರೆ ಭಾರಿ ಡೇಂಜರ್
ಕರಿದ ತಿಂಡಿಗಳ ಪರಿಣಾಮ ಇಷ್ಟಕ್ಕೇ ಮುಗಿಯುವುದಿಲ್ಲ. ಅವುಗಳನ್ನು ಮಿತಿ ಮೀರಿ ತಿನ್ನುತ್ತಿದ್ದರೆ ಖಿನ್ನತೆ(Depression)ಗೆ ನಾಂದಿ ಹಾಡುತ್ತವೆ. ಖಿನ್ನತೆಯುಳ್ಳವರಿಗೆ ಕರಿದ ತಿಂಡಿಗಳ ಬಯಕೆ ಹೆಚ್ಚು, ಆದರೆ, ಅವರು ಅದನ್ನು ತಿನ್ನುವುದು ಶ್ರೇಯಸ್ಕರವಲ್ಲ.
ಹೌದು, ಕರಿದ ತಿನಿಸು ಸೇರಿದಂತೆ ಸಕ್ಕರೆಯುಕ್ತ ಸಿಹಿ (Sweet) ಹಾಗೂ ಇನ್ನಿತರ ಮೈದಾ ಬೆರೆತ ಸ್ನ್ಯಾಕ್ಸ್ ನಮ್ಮ ನಿರೀಕ್ಷೆಗೂ ಮೀರಿದ ಪರಿಣಾಮ ಉಂಟುಮಾಡಬಲ್ಲವು.
ಎಂತಹುದ್ದೇ ಎಣ್ಣೆ ಬಳಕೆ ಮಾಡಿದರೂ, ಮನೆಯಲ್ಲೇ ಕರಿದುಕೊಂಡು ತಿಂದರೂ ಅವು ಆರೋಗ್ಯಕ್ಕೆ ಹಾನಿಕರವೇ ಆಗಿವೆ. ನಿಮಗೆ ಗೊತ್ತಿರಲಿ, ಕರಿದ ತಿಂಡಿಗಳನ್ನು ಅಧಿಕ ಪ್ರಮಾಣದಲ್ಲಿ ತಿನ್ನುವುದರಿಂದ ಮುಪ್ಪು ಬಹಳ ಬೇಗ ಬರುತ್ತದೆ. ಅಲ್ಲದೆ, ಟೈಪ್ 2 ಮಧುಮೇಹ, ಹೃದ್ರೋಗ, ರಕ್ತದೊತ್ತಡ, ಬೊಜ್ಜು, ಪ್ರೊಸ್ಟೇಟ್ ಕ್ಯಾನ್ಸರ್ ಮುಂತಾದ ಸಮಸ್ಯೆಗಳು ಕಾಡಬಹುದು.
ಬಾಲ್ಯದಿಂದಲೂ ಹೆಚ್ಚು ಪ್ರಮಾಣದಲ್ಲಿ ಕರಿದ ತಿಂಡಿ ಸೇವನೆ ಮಾಡುವ ಮಕ್ಕಳು (Children) ತಮ್ಮ 20ನೇ ವಯಸ್ಸಿಗೇ ಮಧುಮೇಹಕ್ಕೆ ತುತ್ತಾಗಬಹುದು. ಮಧ್ಯವಯಸ್ಸಿನಲ್ಲಿ ಕ್ಯಾನ್ಸರ್, ಪಾರ್ಶ್ವವಾಯುವಿಗೆ ತುತ್ತಾಗಬಹುದು ಎನ್ನುವುದು ನೆನಪಿರಲಿ. ಅಷ್ಟೇ ಅಲ್ಲ, ಮಕ್ಕಳ ಕ್ರಿಯಾಶೀಲತೆಯ ಮೇಲೂ ಕರಿದ ತಿಂಡಿಗಳು ಪರಿಣಾಮ ಬೀರುತ್ತವೆ.
ನಿಯಂತ್ರಣ ಹೇಗೆ?
• ಪ್ರೊಟೀನ್‌ಯುಕ್ತ ಆಹಾರ ಸೇವನೆ ಮಾಡುವುದರಿಂದ ಕರಿದ ತಿಂಡಿಗಳ ಬಯಕೆ ಶೇ.50ರಷ್ಟು ಕಡಿಮೆಯಾಗುತ್ತದೆ.
• ಹೆಚ್ಚು ನೀರು ಕುಡಿಯಬೇಕು. ಸ್ವಯಂಪ್ರೇರಿತರಾಗಿ ಕರಿದ ತಿಂಡಿ ತಿನ್ನುವ ಬಯಕೆಯನ್ನು ಹತ್ತಿಕ್ಕಿಕೊಳ್ಳಬೇಕು.
• ಒತ್ತಡ ನಿಯಂತ್ರಣ ಮಾಡಿಕೊಳ್ಳಬೇಕು. ಜತೆಗೆ, ದೇಹಕ್ಕೆ ಅಗತ್ಯವಾದಷ್ಟು ನಿದ್ರೆ ಮಾಡಬೇಕು.
• ಪೌಷ್ಟಿಕ ಆಹಾರ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆ ಸುಧಾರಣೆಯಾಗಿ ಕರಿದ ತಿಂಡಿಗಳ ಆಸೆ ಕಡಿಮೆಯಾಗುತ್ತದೆ.
• ದುಃಖ, ಗಡಿಬಿಡಿ, ಉದ್ವೇಗದಲ್ಲಿ ಊಟ ಮಾಡಬಾರದು. ಟಿವಿ ನೋಡುತ್ತ, ಫೋನ್ ನಲ್ಲಿ ಮಾತನಾಡುತ್ತ ತಿನ್ನಬಾರದು.