ದೀಪಾವಳಿ ವಿಶೇಷ "ಹೊಂಡೆಯಾಟ": ಉತ್ತರಕನ್ನಡದಲ್ಲಿ ಗ್ರಾಮೀಣ ಕ್ರೀಡೆ ಇಂದಿಗೂ ಜೀವಂತ..!

By Girish GoudarFirst Published Nov 15, 2023, 2:00 AM IST
Highlights

ಉತ್ತರಕನ್ನಡ ಜಿಲ್ಲೆಯಲ್ಲಿ ಮಾತ್ರ ಸಾಂಪ್ರದಾಯಿಕ ಹಳೆಯ ಗ್ರಾಮೀಣ ಕ್ರೀಡೆಗಳನ್ನು ಇಂದಿಗೂ ಜೀವಂತವಿರಿಸಲಾಗಿದೆ. ಇದಕ್ಕೆ ಉದಾಹರಣೆ ದೀಪಾವಳಿ ಸಂದರ್ಭದಲ್ಲಿ ಆಡೋ ಹೊಂಡೆಯಾಟ. ಶೌರ್ಯದ ಪ್ರತೀಕವಾಗಿರುವ ಈ ಆಟವನ್ನು ಹಬ್ಬದ ಸಂದರ್ಭ ಊರಿನ ಜನರೆಲ್ಲರೂ ಒಗ್ಗೂಡಿ ಆಟವಾಡಿ ಸಂತೋಷ ಪಡುತ್ತಾರೆ. 

ಭರತ್ ರಾಜ್ ಕಲ್ಲಡ್ಕ

ಉತ್ತರಕನ್ನಡ(ನ.15): ಜನರು ಇಂದು ಆಧುನಿಕತೆಗೆ ಒಗ್ಗಿಕೊಳ್ಳುತ್ತಿರುವುದರಿಂದ ನಮ್ಮ ಸಂಸ್ಕೃತಿ ಮಾತ್ರವಲ್ಲದೇ, ನಮ್ಮ ಗ್ರಾಮೀಣ ಕ್ರೀಡೆಗಳು ಕೂಡಾ ಮರೆಯಾಗುತ್ತಿವೆ. ಆದರೆ, ಉತ್ತರಕನ್ನಡ ಜಿಲ್ಲೆಯಲ್ಲಿ ಮಾತ್ರ ಸಾಂಪ್ರದಾಯಿಕ ಹಳೆಯ ಗ್ರಾಮೀಣ ಕ್ರೀಡೆಗಳನ್ನು ಇಂದಿಗೂ ಜೀವಂತವಿರಿಸಲಾಗಿದೆ. ಇದಕ್ಕೆ ಉದಾಹರಣೆ ದೀಪಾವಳಿ ಸಂದರ್ಭದಲ್ಲಿ ಆಡೋ ಹೊಂಡೆಯಾಟ. ಶೌರ್ಯದ ಪ್ರತೀಕವಾಗಿರುವ ಈ ಆಟವನ್ನು ಹಬ್ಬದ ಸಂದರ್ಭ ಊರಿನ ಜನರೆಲ್ಲರೂ ಒಗ್ಗೂಡಿ ಆಟವಾಡಿ ಸಂತೋಷ ಪಡುತ್ತಾರೆ.‌ ಅಲ್ಲದೇ, ಈ ವೇಳೆ ದೇಶಪ್ರೇಮವನ್ನು ಕೂಡ ಮೆರೆಯುತ್ತಾರೆ. ಈ‌ ಕುರಿತ ಒಂದು ಸ್ಟೋರಿ ಇಲ್ಲಿದೆ.. 

ಹೌದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಗ್ರಾಮೀಣ ಕ್ರೀಡೆಗಳು ಇಂದಿಗೂ ಜೀವಂತವಾಗಿವೆ. ಹಬ್ಬದ ಸಂದರ್ಭದಲ್ಲಿ ಸಂಪ್ರದಾಯದ ರೂಪದಲ್ಲಿ ಈ ಹಳೇಯ ಆಟಗಳನ್ನು ಪ್ರದರ್ಶಿಸುವ ಮೂಲಕ ಜನರೇ ಈ ಆಟಗಳನ್ನು ಜೀವಂತವಾಗಿರಿಸಿದ್ದಾರೆ. ಇಂತಹ ಆಟಗಳ ಪೈಕಿ ಹೊಂಡೆಯಾಟ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾ, ಕುಮಟಾದಲ್ಲಿ ದೀಪಾವಳಿ ಸಂದರ್ಭದಲ್ಲಿ ವಿವಿಧ ಸಮಾಜದ ನಾಗರಿಕರು ಶಾಂತಿ ಸೌಹಾರ್ದತೆಯಿಂದ ಭಾಗವಹಿಸಿ ಈ ಆಟವನ್ನು ಪ್ರದರ್ಶಿಸುತ್ತಾರೆ. ಹಿಂದೆ ರಾಜರ ಕಾಲದಲ್ಲಿ ಹಿರಿಯರು ಕವಣೆಯಲ್ಲಿ ದೊಡ್ಡ ಕಲ್ಲನ್ನು ಇಟ್ಟು, ಅದಕ್ಕೆ ಕಂಬಳಿಯನ್ನು ಅಡ್ಡವನ್ನಾಗಿರಿಸಿ ಈ ಆಟವನ್ನಾಡುತ್ತಿದ್ದರು. ಆದರೆ, ಪ್ರಸ್ತುತ, ಆಟವಾಡುವವರಿಗೆ ಜೀವಕ್ಕೆ ಅಪಾಯವಾಗಬಹುದು ಎಂಬ ಉದ್ದೇಶದಿಂದ ಕೈಗೆ ಬಟ್ಟೆಯನ್ನು ದಪ್ಪವಾಗಿ ಸುತ್ತಿ ಅದರ ಮೇಲೆ ಕಂಬಳಿಯನ್ನು ಹಾಕಲಾಗುತ್ತದೆ‌. ನಂತರ ಕವಣೆಯಲ್ಲಿ ಕಲ್ಲಿನ ಬದಲು ಪಪ್ಪಾಯಿ ಕಾಯಿ ಅಥವಾ ಹಿಂಡ್ಲೆ‌ ಕಾಯಿಯನ್ನಿಟ್ಟು ಒಬ್ಬರ ಮೇಲೊಬ್ಬರು ಎಸೆದು ಒಡೆಯಲಾಗುತ್ತದೆ. ವಿವಿಧ ಸಮಾಜದ ಜನರು ಅಂದು ನಾಡಿನ ರಕ್ಷಣೆಗೆ ಯುದ್ಧದಲ್ಲಿ ತೋರಿದ ಸಾಹಸದ ಸಂಕೇತವಾಗಿ ಇಂದು ಪಪ್ಪಾಯಿ ಅಥವಾ ಹಿಂಡ್ಲೆಕಾಯಿಂದ ಪರಸ್ಪರ ಹೊಡೆದಾಡುವ ಮೂಲಕ ತಮ್ಮ ಸಂಪ್ರದಾಯವನ್ನು ಅನಾವರಣಗೊಳಿಸ್ತಾರೆ. ಈ ಆಟದಲ್ಲಿ ಭೀಕರತೆ ಕಂಡರೂ ಅದು ಸಮಾಜಗಳ ಪೌರುಷದ ಹಾಗೂ ಸೌಹಾರ್ದತೆಯ ಸಂಕೇತ ಅಂತಾರೆ ಇಲ್ಲಿನ ಜನರು. 
ಅಂದಹಾಗೆ, ವಿಶೇಷವಾಗಿ ದೀಪಾವಳಿಯ ಬಲಿ ಪಾಡ್ಯಮಿಯ ದಿನದಂದು ನಾಮಧಾರಿ ಸಮಾಜ, ಮಡಿವಾಳ ಸಮಾಜ, ಕ್ಷತ್ರಿಯ ಕೋಮಾರಪಂಥ ಸಮಾಜ, ಗೌಡ ಸಮಾಜ ಮುಂತಾದ ಸಮಾಜದ ಜನರಿಂದ‌ ಐತಿಹಾಸಿಕವಾಗಿ ನಡೆದುಕೊಂಡು ಬಂದಿರುವ ಈ ರೋಮಾಂಚನಕಾರಿ ಆಟವನ್ನು ಆಡಲಾಗುತ್ತದೆ. 

ಉತ್ತರಕನ್ನಡದಲ್ಲಿ ಬಲಿ ಚಕ್ರವರ್ತಿಯ ವಿಶಿಷ್ಟ ಆರಾಧನೆ: ಪ್ರಾದೇಶಿಕವಾಗಿ ಭಿನ್ನವಾಗಿ ಬೆಳಕಿನ ಹಬ್ಬ ಆಚರಣೆ

ಹಿಂದಿನಿಂದಲೂ ಇದು ಹೊಂಡೆ ಹಬ್ಬವೆಂದೇ ಜನಜನಿತದಲ್ಲಿದ್ದು, ಎಲ್ಲಾ ಸಮಾಜದ ಜನರು ಒಗ್ಗಟ್ಟಾಗಿ ಪರಸ್ಪರ ಪ್ರೀತಿಯಿಂದಲೇ ಇದನ್ನು ಆಡಿಕೊಂಡು ಬಂದಿದ್ದಾರೆ. ಎರಡು ದಿನಗಳ ಕಾಲ ನಡೆಯುವ ಆಟದ ಮುಕ್ತಾಯ ಹಂತದಲ್ಲಿ ಕ್ಷತ್ರಿಯ ಕೋಮಾರಪಂಥ ಸಮಾಜದಿಂದ ನಿರ್ಮಿಸಲಾದ ಕೃತಕ ಆನೆಯ ಮೇಲೆ ಭಾರತ ಮಾತೆ ಹಾಗೂ ರಾಷ್ಟ್ರಧ್ಚಜವನ್ನಿಟ್ಟು ವಿಜಯೋತ್ಸವ ಎಂದು ಆಚರಿಸಲಾಗುತ್ತದೆ. ಅಲ್ಲದೇ, ಹೊಂಡೆಯಾಡುತ್ತಾ ಕುಮಟಾ ನಗರದಾದ್ಯಂತ ಮೆರವಣಿಗೆ ಮಾಡಲಾಗುತ್ತದೆ. 

ಅಂಕೋಲಾದಲ್ಲೂ ಈ ಆಟವನ್ನಾಡಲಾಗುತ್ತಿದ್ದು, ಕೋಮಾರಪಂಥ ಸಮಾಜದ ಲಕ್ಷ್ಮೇಶ್ವರ ಹಾಗೂ ಹೊನ್ನೇಕೇರಿಯ ಊರಿನ ಎರಡು ತಂಡಗಳು ಪಾಲ್ಗೊಳ್ಳುತ್ತದೆ. ಕುಂಬಾರಕೇರಿಯ ಕಳಸದೇವಸ್ಥಾನದಿಂದ ಹೊರಟ ಲಕ್ಷ್ಮೇಶ್ವರ ತಂಡವು ವೀರಾವೇಶದಿಂದ "ಹೊಂಡೆ ಹೊಂಡೆ" ಎನ್ನುತ್ತಾ ಎದುರಾಳಿಯನ್ನು ಎದುರಿಸಲು ಆಗಮಿಸುತ್ತದೆ. ಅಂಕೋಲಾ ನಗರದ ಶ್ರೀ ಶಾಂತಾದುರ್ಗ ದೇವಸ್ಥಾನದ ಎದುರಿನಲ್ಲಿ  ಹೊನ್ನೇಕೇರಿ  ತಂಡದ ನಡುವೆ ಪರಸ್ಪರ ಎದುರಾಗಿ  ಎರಡು ಗ್ರಾಮದ ಹಿರಿಯರಿಂದ ಹೊಂಡೆ ಆಟಕ್ಕೆ ಚಾಲನೆ ನೀಡಲಾಗುತ್ತದೆ. ಇಲ್ಲಿ ಹಿಂಡ್ಲೆ ಕಾಯಿಯನ್ನು ಬಳಸಲಾಗುತ್ತಿದ್ದು, ಎರಡು ತಂಡದಲ್ಲಿ ಯಾರು ಸಮರ ವೀರರು ಎನ್ನುವುದನ್ನು ಇಲ್ಲಿನ ನಿರ್ಣಾಯಕರು ನಿರ್ಧರಿಸ್ತಾರೆ. ಹೊಂಡೆ ಹಬ್ಬದಲ್ಲಿ ಸೆಣಸಾಡಿದ ತಂಡಕ್ಕೆ ಸಾಂಪ್ರದಾಯವಾಗಿ ಮೊಗ್ಗೆಕಾಯಿಯನ್ನು ನೀಡಲಾಗುತ್ತದೆ. 

ಒಟ್ಟಿನಲ್ಲಿ ಸಾಂಪ್ರದಾಯಿಕ ಆಚರಣೆಗಳು, ಶೌರ್ಯ ಹೋರಾಟ ಮೆಲುಕುಗಳು ಇನ್ನೂ ಜೀವಂತವಾಗಿದೆ ಅನ್ನೋದಕ್ಕೆ ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ನಡೆಯುವ ಈ ಆಟಗಳೇ ಸಾಕ್ಷಿಯಾಗಿವೆ.

click me!