ಬೆಂ. ದಕ್ಷಿಣದಲ್ಲಿ ‘ತೇಜಸು’ ‘ಹರಿ’ಯುವುದೇ?

By Web DeskFirst Published Apr 16, 2019, 4:29 PM IST
Highlights

ಬಿಜೆಪಿಯ ತೇಜಸ್ವಿ ಸೂರ್ಯ-ಕಾಂಗ್ರೆಸ್‌ನ ಹರಿಪ್ರಸಾದ್ ನಡುವೆ ಹೋರಾಟ | ಅನಂತ್ ಅನುಪಸ್ಥಿತಿಯ ಮೊದಲ ಚುನಾವಣೆ ಟಿಕೆಟ್ ತಪ್ಪಿದ್ರೂ ತೇಜಸ್ವಿ ಪರ ಅನಂತ್ ಪತ್ನಿ ತೇಜಸ್ವಿನಿ ಪ್ರಚಾರ | ರಾಜ್ಯ ಸರ್ಕಾರದ ಸಾಧನೆ, ಕೇಂದ್ರದ ವೈಫಲ್ಯಗಳು ಹರಿ ಅಸ್ತ್ರ

ವಿಜಯ್ ಮಲಗಿಹಾಳ, ಕನ್ನಡಪ್ರಭ 

ಕ್ಷೇತ್ರ ಸಮೀಕ್ಷೆ: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ

ಬೆಂಗಳೂರು[ಏ.16]: ಶಿಕ್ಷಿತರು ಹೆಚ್ಚಾಗಿರುವ ಹಾಗೂ ಬಿಜೆಪಿಯ ಭದ್ರಕೋಟೆಗಳಲ್ಲಿ ಒಂದಾಗಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕೋಟೆಯ ಕಲ್ಲು ಅಲುಗಾಡಿಸುವ ಪ್ರಯತ್ನ ಕಾಂಗ್ರೆಸ್‌ನಿಂದ ಜೋರಾಗಿಯೇ ನಡೆದಿದ್ದರೂ ಅದು ಯಶಸ್ಸು ಕೊಡುತ್ತಾ ಎನ್ನುವುದು ಕುತೂಹಲಕರವಾಗಿದೆ.

ಬಿಜೆಪಿಯಿಂದ ಹೊಸ ಮುಖ ತೇಜಸ್ವಿ ಸೂರ್ಯ ಅವರನ್ನು ಕಣಕ್ಕಿಳಿಸಲಾಗಿದ್ದು, ಕಾಂಗ್ರೆಸ್‌ನಿಂದ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ಅವರು ಸ್ಪರ್ಧಿಸಿದ್ದಾರೆ. ಹಾಗೆ ನೋಡಿದರೆ ಇಬ್ಬರೂ ಅಚ್ಚರಿಯ ಅಭ್ಯರ್ಥಿಗಳೇ ಸರಿ. ಕೊನೆಯ ಕ್ಷಣದಲ್ಲೇ ಇವರಿ ಬ್ಬರ ಹೆಸರುಗಳೂ ಅಂತಿಮ ಗೊಂಡು ಅಭ್ಯರ್ಥಿಗಳಾಗಿದ್ದಾರೆ. ಇಬ್ಬರೂ ಅಭ್ಯರ್ಥಿಗಳು ತಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತ ರೊಂದಿಗೆ ಭರದ ಪ್ರಚಾರ ನಡೆಸಿದ್ದಾರೆ. ತೇಜಸ್ವಿ ಸೂರ್ಯ ಅವರಿಗೆ ಮೋದಿ ಎಂಬ ಹೆಸರೇ ಪರಮ ಅಸ್ತ್ರ. ಹರಿಪ್ರಸಾದ್ ಅವರಿಗೆ ರಾಜ್ಯದ ಸಮ್ಮಿಶ್ರ ಸರ್ಕಾರದ ಸಾಧನೆಗಳು ಹಾಗೂ ಕೇಂದ್ರದ ಬಿಜೆಪಿ ಸರ್ಕಾರದ ವೈಫಲ್ಯಗಳೇ ಅಸ್ತ್ರಗಳು

ಕ್ಷೇತ್ರದಲ್ಲಿ ಬ್ರಾಹ್ಮಣ ಮತ್ತು ಒಕ್ಕಲಿಗ ಸಮುದಾಯದ ಮತದಾರರೇ ನಿರ್ಣಾಯಕರು. ಬ್ರಾಹ್ಮಣ ಸಮುದಾಯದ ಮತಗಳು ಅಭ್ಯರ್ಥಿಯ ಕಾರಣಕ್ಕಾಗಿ ಹಲವು ದಶಕಗಳಿಂ ದಲೂ ಬಿಜೆಪಿಗೇ ಹರಿದು ಬಂದಿವೆ. ಜೊತೆಗೆ ಒಕ್ಕಲಿಗರ ಮತಗಳನ್ನೂ ಸಂಸದರಾಗಿದ್ದ ಅನಂತ ಕುಮಾರ್ ಪಡೆದು ಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದರು. ಈ ಬಾರಿ ಅನಂತ ಕುಮಾರ್ ಇಲ್ಲದಿರುವುದರಿಂದ, ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿರುವುದರಿಂದ ಒಕ್ಕಲಿಗರ ಮತಗಳನ್ನು ಸೆಳೆಯಲು ಬಿಜೆಪಿಗೆ ಸಾಧ್ಯವಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕು. ಉಳಿದಂತೆ ಹಿಂದುಳಿದ ವರ್ಗದ ಮತದಾರರೂ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಇತರ ಹಿಂದುಳಿದ ವರ್ಗಕ್ಕೆ ಸೇರಿದ ಕಾಂಗ್ರೆಸ್ಸಿನ ಹರಿಪ್ರಸಾದ್ ಆ ಮತಗಳನ್ನು ಸೆಳೆಯಲು ಪ್ರಯತ್ನ ನಡೆಸಿದ್ದಾರೆ. ಅನಂತ ಕುಮಾರ್ ಅವರಿಲ್ಲದ ಚುನಾವಣೆ ಇದಾಗಿರುವುದರಿಂದ ಕಾಂಗ್ರೆಸ್‌ನಲ್ಲೂ ಎಲ್ಲಿಲ್ಲದ ಉತ್ಸಾಹ ಕಂಡು ಬರುತ್ತಿದೆ.

ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ಪ್ರಧಾನಿ ಮೋದಿ ಅವರ ಆಯ್ಕೆ ಎಂಬ ಕಾರಣಕ್ಕಾಗಿ ಬಿಜೆಪಿಗೆ ಈ ಚುನಾವಣೆ ಸವಾಲಾಗಿಯೇ ಪರಿಣಮಿಸಿದೆ. ಬಿಜೆಪಿ ಹಿರಿಯ ನಾಯಕ ಆರ್.ಅಶೋಕ್ ಅವರಿಗೆ ತಮ್ಮ ನಾಯಕತ್ವ ಸಾಬೀತುಪಡಿಸಲು ಇಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಅನಿವಾರ‌್ಯ ಎದುರಾಗಿದೆ.

ಹೊಂದಾಣಿಕೆ ರಾಜಕಾರಣಕ್ಕೆ ಬ್ರೇಕ್?

ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಗೋವಿಂದರಾಜನಗರ, ವಿಜಯನಗರ, ಚಿಕ್ಕಪೇಟೆ, ಬಸವನಗುಡಿ, ಪದ್ಮನಾಭನಗರ, ಬಿಟಿಎಂ ಲೇಔಟ್, ಜಯನಗರ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ ಐದರಲ್ಲಿ ಬಿಜೆಪಿ ಮತ್ತು ಮೂರರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಈ ಹಿಂದೆ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹೊಂದಾಣಿಕೆ ರಾಜಕಾರಣದ ಮಾತು ಆಗಾಗ ಕೇಳಿಬರುತ್ತಿತ್ತು. ವಿಧಾನಸಭೆಗೆ ನಿಮಗೆ ಬೆಂಬಲ, ಲೋಕಸಭೆಗೆ ನಮಗೆ ಬೆಂಬಲ ಎಂಬ ರೀತಿಯ ತೆರೆಮರೆಯ ಹೊಂದಾಣಿಕೆಗಳು ನಡೆಯುತ್ತಿದ್ದವು. ಅನಂತಕುಮಾರ್ ಅವರ ಗೆಲುವಿಗೆ ಈ ಅಂಶವೂ ಪೂರಕವಾಗಿರುತ್ತಿತ್ತು. ಆದರೆ, ಈ ಬಾರಿ ಅಂಥ ಹೊಂದಾಣಿಕೆ ರಾಜಕಾರಣಕ್ಕೆ ಬ್ರೇಕ್ ಬಿದ್ದಂತಾಗಿದೆ.

ಬಿಜೆಪಿ ಬುನಾದಿ ಗಟ್ಟಿ

ಮೇಲ್ನೋಟಕ್ಕೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹೋಲಿಸಿದರೆ ಬಿಜೆಪಿ ಬಲ ಹೆಚ್ಚಾಗಿಯೇ ಇದೆ. ಶಾಸಕರ ಜೊತೆ, ಪಕ್ಷದ ಕಾರ್ಯಕರ್ತರ ದೊಡ್ಡ ಪಡೆಯೇ ಇದೆ. ಮೇಲಾಗಿ ಸಂಘ ಪರಿವಾರದ ಪ್ರಭಾವವೂ ಇದೆ. ಅನಂತಕುಮಾರ್ ಅವರು ಸತತ 6 ಬಾರಿ ಗೆದ್ದು ಪಕ್ಷಕ್ಕೆ ಭದ್ರ ಬುನಾದಿ ಹಾಕಿದ್ದಾರೆ. ಎಷ್ಟರ ಮಟ್ಟಿಗೆ ಗಟ್ಟಿಯಿದೆ ಎಂದರೆ, ಕೊನೇ ಕ್ಷಣದಲ್ಲಿ ಅನಂತಕುಮಾರ್ ಪತ್ನಿಗೆ ಟಿಕೆಟ್ ನಿರಾಕರಿಸಿ ಹೊಸ ಮುಖ ತೇಜಸ್ವಿ ಸೂರ್ಯ ಅವರಿಗೆ ಅವಕಾಶ ಕಲ್ಪಿಸಿದರೂ ಗೆಲ್ಲುವ ವಿಶ್ವಾಸ ಪಕ್ಷದ ನಾಯಕರಲ್ಲಿದೆ. ತೇಜಸ್ವಿ ಸೂರ್ಯಗೆ ಟಿಕೆಟ್ ನೀಡಿರುವ ಬಗ್ಗೆ ಬೇಸರವಿದ್ದರೂ ಮತ್ತೊಮ್ಮೆ ಮೋದಿ ಪ್ರಧಾನಿಯನ್ನಾಗಿ ಮಾಡಲು ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾ

ಟಿಕೆಟ್ ತಪ್ಪಿದರೂ ತೇಜಸ್ವಿನಿ ಪ್ರಚಾರ

ಅನಂತಕುಮಾರ್ ಅವರ ಅಕಾಲಿಕ ನಿಧನದ ನಂತರ ಅವರ ಪತ್ನಿ ತೇಜಸ್ವಿನಿ ಅವರಿಗೇ ಟಿಕೆಟ್ ನಿಶ್ಚಿತ ಎಂಬಂತಾಗಿತ್ತು. ಆ ಕ್ಷೇತ್ರದಿಂದ ಬೇರೊಂದು ಹೆಸರು ಪಕ್ಷದ ಕೇಂದ್ರ ಘಟಕಕ್ಕೆ ಶಿಫಾರಸು ಮಾಡಿರಲಿಲ್ಲ. ಆದರೆ, ವಂಶವಾದಕ್ಕೆ ತಡೆ ಹಾಕಬೇಕು ಎಂಬ ಕಾರಣ ನೀಡಿ ತೇಜಸ್ವಿನಿ ಅವರಿಗೆ ಟಿಕೆಟ್ ನಿರಾಕರಿಸುವ ಮೂಲಕ ಬಿಜೆಪಿ ರಾಜ್ಯದಲ್ಲಿ ಹೊಸ ರಾಜಕೀಯ ಪರ್ವಕ್ಕೆ ನಾಂದಿ ಹಾಡಿತು. ಕೆಲದಿನಗಳ ಕಾಲ ಬೇಸರಗೊಂಡಿದ್ದ ತೇಜಸ್ವಿನಿ ಅವರಿಗೆ ಪಕ್ಷದ ವರಿಷ್ಠರು ರಾಜ್ಯ ಉಪಾಧ್ಯಕ್ಷ ಸ್ಥಾನದ ಜವಾಬ್ದಾರಿ ಕೊಟ್ಟಿದ್ದಾರೆ. ಈ ನಡುವೆ ತೇಜಸ್ವಿನಿ ತಮ್ಮ ಬೇಸರ ಬದಿಗಿಟ್ಟು ಕ್ಷೇತ್ರದಾದ್ಯಂತ ಪ್ರಚಾರ ಕೈಗೊಂಡಿದ್ದಾರೆ. ಇದು ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

ಕಾಂಗ್ರೆಸ್‌ನಲ್ಲಿ ಎಲ್ಲಿಲ್ಲದ ಒಗ್ಗಟ್ಟು

ಈ ಕ್ಷೇತ್ರದಲ್ಲಿ ಟಿಕೆಟ್ ನೀಡುವ ಬಗ್ಗೆ ಕಾಂಗ್ರೆಸ್‌ನಲ್ಲಿ ಸಾಕಷ್ಟು ಗೊಂದಲವಿತ್ತು. ಬಿಜೆಪಿಯಿಂದ ಅನಂತಕುಮಾರ್ ಪತ್ನಿ ತೇಜಸ್ವಿನಿ ಅವರೇ ಅಭ್ಯರ್ಥಿಯಾಗುವುದರಿಂದ ಅನುಕಂಪದ ಅಲೆ ವಿರುದ್ಧ ಹೋರಾಡಲು ಹಲವರು ಟಿಕೆಟ್‌ಗೆ ಹಿಂದೇಟು ಹಾಕಿದರು. ಮಾಜಿ ಶಾಸಕ ಪ್ರಿಯಕೃಷ್ಣ, ಶಾಸಕ ರಾಮಲಿಂಗಾ ರೆಡ್ಡಿ ಮತ್ತಿತರು ಹೆಸರುಗಳು ಪ್ರಸ್ತಾಪವಾಗಿದ್ದವ

ಯಾವಾಗ ತೇಜಸ್ವಿನಿ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿ ತೊ ಆಗ ಪ್ರಧಾನಿ ಮೋದಿ ಅಥವಾ ಪ್ರಭಾವಿ ನಾಯಕರೊ ಬ್ಬರು ಕಣಕ್ಕಿಳಿಯುತ್ತಾರೆ ಎಂಬ ವದಂತಿ ಹಬ್ಬಿತೊ ಆಗ ಕಾಂಗ್ರೆಸ್ ಲೆಕ್ಕಾಚಾರ ಬದಲಾಯಿತು. ಅಂತಿಮವಾಗಿ ಹಿಂದೊಮ್ಮೆ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದ ಬಿ. ಕೆ.ಹರಿಪ್ರಸಾದ್ ಅವರನ್ನು ಅಭ್ಯರ್ಥಿಯನ್ನಾಗಿಸಿತು.

ಅನಂತಕುಮಾರ್ ಇಲ್ಲದ ಚುನಾವಣೆ

ಹಲವು ದಶಕಗಳಿಂದ ಬೆಂಗಳೂರು ದಕ್ಷಿಣ ಕ್ಷೇತ್ರ ಎಂದಾಕ್ಷಣ ಮೊದಲಿಗೆ ನೆನಪಿಗೆ ಬರುವುದೇ ಅನಂತಕುಮಾರ್. ೧೯೯೬ರಿಂದ ಸತತವಾಗಿ ಆರು ಬಾರಿ ಸಂಸದರಾಗಿ ಚುನಾಯಿತರಾಗಿದ್ದ ಅನಂತಕುಮಾರ್ ಅವರು ಈ ಕ್ಷೇತ್ರದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಇಲ್ಲಿ ಬಿಜೆಪಿಯ ಹಾಗೂ ಸಂಘ ಪರಿವಾರದ ಬೇರುಗಳು ಭದ್ರವಾಗಿ ಬೇರೂರಿರುವುದು ಅನಂತಕುಮಾರ್ ಅವರಿಗೆ ಸೋಲಿನ ಭಯವನ್ನೇ ತಂದಿರಲಿಲ್ಲ. ಕೆಲವೊಮ್ಮೆ ಗೆಲುವಿನ ಮತಗಳ ಅಂತರ ಕಡಮೆಯಾಗಿದ್ದರೂ ಸೋಲಿನ ಭೀತಿ ಮಾತ್ರ ಆವರಿಸಿರಲಿಲ್ಲ. ಕರ್ನಾಟಕದ ಮಟ್ಟಿಗೆ ಕಳೆದ ಹಲವು ಲೋಕಸಭಾ ಚುನಾವಣೆಗಳಲ್ಲಿ ಆರಂಭದಲೇ ಅತ್ಯಂತ ವಿಶ್ವಾಸದಿಂದ ಗೆಲ್ಲಬಹುದು ಎಂದು ಬಿಜೆಪಿ ಮುಖಂಡರು ಹೇಳಿಕೊಳ್ಳಬಹುದಾಗಿದ್ದ ಕ್ಷೇತ್ರ ಬೆಂಗಳೂರು ದಕ್ಷಿಣವೇ ಆಗಿತ್ತು. ಅಲ್ಲಿ ಯಾವತ್ತೂ ಅನಂತಕುಮಾರ್ ಅವರನ್ನು ಬದಲಾಯಿಸಿ ಬೇರೊಬ್ಬರನ್ನು ಕಣಕ್ಕಿಳಿಸಬೇಕು ಎಂಬ ಯೋಚನೆಯೂ ವರಿಷ್ಠರಲ್ಲಿ ಬಂದಿರಲಿಲ್ಲ. ಇದೀಗ ಅನಂತಕುಮಾರ್ ಇಲ್ಲದ ನೋವಿನೊಂದಿಗೇ ಬಿಜೆಪಿ ಚುನಾವಣೆ ಎದುರಿಸುತ್ತಿದೆ.

ಕಳೆದ ಬಾರಿಯ ಫಲಿತಾಂಶ:

ಅನಂತ್ ಕುಮಾರ್[ಬಿಜೆಪಿ]: 6,33,816

ನಂದನ್ ನಿಲೇಕಣಿ[ಕಾಂಗ್ರೆಸ್]: 4,05,241

ಗೆಲುವಿನ ಅಂತರ: 2,28,575

25 ಮಂದಿ ಕಣದಲ್ಲಿ

ಕಾಂಗ್ರೆಸ್‌ನಿಂದ ಬಿ.ಕೆ.ಹರಿಪ್ರಸಾದ್, ಬಿಜೆಪಿಯಿಂದ ತೇಜಸ್ವಿ ಸೂರ್ಯ, ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ವಾಟಾಳ್ ನಾಗರಾಜ್, ಬಿಎಸ್‌ಪಿಯಿಂದ ಎ.ರಾಜು, ಉತ್ತಮ ಪ್ರಜಾಕೀಯ ಪಕ್ಷದಿಂದ ಅಹೋರಾತ್ರ ನಟೇಶ್ ಪೋಲಪಲ್ಲಿ ಸೇರಿದಂತೆ ಒಟ್ಟು 25 ಮಂದಿ ಕಣದಲ್ಲಿದ್ದಾರೆ.

ಮತದಾರರು: 21,51,977 | ಪುರುಷ: :11,21,558 | ಮಹಿಳೆ: :10,30,082 | ಇತರೆ: 337

 

click me!