ಕೆಸಿಆರ್ 1996 ಪ್ಲ್ಯಾನ್: ದಕ್ಷಿಣಕ್ಕೆ ಪ್ರಧಾನಿ ಪಟ್ಟದ ಕೂಗು!

By Web DeskFirst Published May 7, 2019, 12:21 PM IST
Highlights

‘ದಕ್ಷಿಣ ಭಾರತಕ್ಕೆ ಬೇಕು ಪ್ರಧಾನಿ ಖುರ್ಚಿ’| ದಕ್ಷಿಣ ಭಾರತದ ವ್ಯಕ್ತಿ ಪ್ರಧಾನಿ ಅಭ್ಯರ್ಥಿ| ತೆಲಂಗಾಣ ಸಿಎಂ ಕೆ.ಸಿ. ಚಂದ್ರಶೇಖರ್ ರಾವ್ ಮಾಸ್ಟರ್ ಪ್ಲ್ಯಾನ್| 1996 ಪ್ಲ್ಯಾನ್ ಮೇಲೆ ಕೆಸಿಆರ್ ಕೆಲಸ ಆರಂಭ| 1996ರ ಸನ್ನಿವೇಶ ಮರುಸೃಷ್ಟಿಗೆ ಕೆಸಿಆರ್ ಯೋಜನೆ| ಪ್ರಾದೇಶಿಕ ಪಕ್ಷಗಳ ಬಲಾಬಲ ಪ್ರದರ್ಶನಕ್ಕೆ ವೇದಿಕೆ ಸಿದ್ಧಪಡಿಸಿದ ಕೆಸಿಆರ್| ಪ್ರಾದೇಶಿಕ ಪಕ್ಷಗಳು, ಎಡ ಪಕ್ಷಗಳೊಂದಿಗೆ ಮಾತುಕತೆ| 

ಹೈದರಾಬಾದ್(ಮೇ.07): ದೇಶದಲ್ಲಿ ಲೋಕಸಭೆ ಚುನಾವಣೆ ಬಂತೆಂದರೆ ಸಾಕು, ಈ ಬಾರಿ ಯಾವ ಭಾಗದ ಅಭ್ಯರ್ಥಿ ಪ್ರಧಾನಿ ಅಭ್ಯರ್ಥಿಯಾಗುತ್ತಾರೆ ಎಂಬ ಪ್ರಶ್ನೆ ಎದುರಾಗುತ್ತದೆ.

ಹಾಗೆ ನೋಡಿದರೆ ದೇಶದ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಭಾಗಗಳಲ್ಲಿ ಪ್ರಧಾನಿ ಪಟ್ಟಕ್ಕೇರುವ ಅರ್ಹತೆ ಇರುವ ನಾಯಕರಿಗೇನು ಕೊರತೆ ಇಲ್ಲ ಬಿಡಿ. ಭಾರತದ ರಾಜಕಾರಣ ದೇಶದ ಒಂದಿಲ್ಲೊಂದು ಭಾಗದಲ್ಲಿ ಅಂತಹ ನಾಯಕರನ್ನು ಸೃಷ್ಟಿಸಿಯೇ ಇರುತ್ತದೆ.

ಅದರಂತೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿಯೂ ಮುಂದಿನ ಪ್ರಧಾನಿ ಅಭ್ಯರ್ಥಿ ಯಾವ ಭಾಗದವರಾಗಬೇಕು ಎಂಬ ಚರ್ಚೆ ನಡೆಯುತ್ತಿದೆ.

ಒಂದು ಕಡೆ ಬಿಜೆಪಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲೇ ಈ ಬಾರಿಯ ಚುನಾವಣೆ ಎದುರಿಸುತ್ತಿದೆ. ಅಂದರೆ ಎನ್ ಡಿಎ ಅಧಿಕಾರಕ್ಕೆ ಬಂದರೆ ಮೋದಿಯೇ ಪ್ರಧಾನಿ ಅಭ್ಯರ್ಥಿ ಎಂಬುದು ಸೂರ್ಯನಷ್ಟೇ ಸತ್ಯ.

ಮತ್ತೊಂದು ಕಡೆ ರಾಹುಲ್ ಗಾಂಧಿ ನಾಯಕತ್ವದಲ್ಲಿ ಅಧಿಕಾರದ ಕನಸು ಕಣುತ್ತಿರುವ ಕಾಂಗ್ರೆಸ್, ರಾಹುಲ್ ಗೆ ಪ್ರಧಾನಿ ಪಟ್ಟ ಕಟ್ಟಲು ತುಡಿಯುತ್ತದೆ. ಅಂದರೆ ಕಾಂಗ್ರೆಸ್ ಅಥವಾ ಯುಪಿಎ ಮೈತ್ರಿಕೂಟದ ಸರ್ವಸಮ್ಮತ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ ಆಗುವ ಸಾಧ್ಯತೆಗಳಿವೆ.

ಈ ಮಧ್ಯೆ ಪ್ರಾದೇಶಿಕ ಪಕ್ಷಗಳೂ ಕೂಡ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದು, ಒಂದು ವೇಳೆ ಅತಂತ್ರ ಲೋಕಸಭೆ ರಚನೆಯಾಗಿ ತಮ್ಮ ಅವಶ್ಯಕತೆ ಬಿದ್ದರೆ ಪ್ರಧಾನಿ ಖುರ್ಚಿ ಮೇಲೆ ಕೂರಲು ಈ ಪಕ್ಷಗಳ ನಾಯಕರು ಕಾಯುತ್ತಿದ್ದಾರೆ.

ಅದರಂತೆ ತೆಲಂಗಾಣ ಸಿಎಂ ಕೆ.ಸಿ. ಚಂದ್ರಶೇಖರ್ ರಾವ್, ಹೊಸದೊಂದು ಮಾಸ್ಟರ್ ಪ್ಲ್ಯಾನ್ ನೊಂದಿಗೆ ಭವಿಷ್ಯದ ಸರ್ಕಾರದ ಚಹರೆ ಪರಿಚಯಿಸಿದ್ದಾರೆ.

ತೃತೀಯ ರಂಗದ ಗುಂಗಿನಲ್ಲಿರುವ ಕೆಸಿಆರ್, ಶತಾಯಗತಾಯ ಪ್ರಾದೇಶಿಕ ಪಕ್ಷಗಳನ್ನು ಒಟ್ಟುಗೂಡಿಸುವಲ್ಲಿ ನಿರತರಾಗಿದ್ದಾರೆ. ಪ್ರಮುಖವಾಗಿ ದಕ್ಷಿಣದ ಪ್ರಾದೇಶಿಕ ಪಕ್ಷಗಳನ್ನು ಒಟ್ಟುಗೂಡಿಸಿ ದಕ್ಷಿಣ ಭಾರತಕ್ಕೆ ಪ್ರಧಾನಿ ಪಟ್ಟ ಸಿಗುವಂತೆ ನೋಡಿಕೊಳ್ಳುವುದು ಕೆಸಿಆರ್ ಯೋಜನೆಯಾಗಿದೆ.

ಕೆಸಿಆರ್ 1996 ಪ್ಲ್ಯಾನ್:
1996ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ. ಆಗ ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ಪ್ರಾದೇಶಿಕ ಮತ್ತು ಎಡ ಪಕ್ಷಗಳು, ಜೆಡಿಎಸ್ ನ ಹೆಚ್.ಡಿ. ದೇವೇಗೌಡ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದವು. ಕಾಂಗ್ರೆಸ್ ಕೂಡ ಅನಿವಾರ್ಯವಾಗಿ ದೇವೇಗೌಡ ನೇತೃತ್ವದ ಸರ್ಕಾರಕ್ಕೆ ಬೆಂಬಲ ಸೂಚಿಸಬೇಕಾಯಿತು. 

ಆದರೆ ದೇವೇಗೌಡ ಸರ್ಕಾರ ಬಹಳ ಕಾಲ ಬಾಳಲಿಲ್ಲವಾದರೂ, ಪ್ರಾದೇಶಿಕ ಪಕ್ಷಗಳು ಸರ್ಕಾರ ರಚನೆ ಮತ್ತು ಪ್ರಧಾನಿ ಆಯ್ಕೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸಬಲ್ಲವು ಎಂಬುದು ಸ್ಪಷ್ಟವಾಗಿತ್ತು.

ಈ ಹಿನ್ನೆಲೆಯಲ್ಲಿ 1996ರ ಸನ್ನಿವೇಶ ಸೃಷ್ಟಿಸುವ ಯೋಜನೆಯಲ್ಲಿರುವ ಕೆಸಿಆರ್, ದಕ್ಷಿಣಕ್ಕೆ ಪ್ರಧಾನಿ ಪಟ್ಟ ಎಂಬ ಘೋಷವಾಕ್ಯದೊಂದಿಗೆ ಅಖಾಡಕ್ಕೆ ಧುಮಿಕಿದ್ದಾರೆ. ಈಗಾಗಲೇ ಪ್ರಾದೇಶಿಕ ಪಕ್ಷಗಳ ಪ್ರಮುಖ ನಾಯಕರೊಂದಿಗೆ ಕೆಸಿಆರ್ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ.

ಅಲ್ಲದೇ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ಕೆಸಿಆರ್, ತಮ್ಮ ಯೋಜನೆಗೆ ಎಡಪಕ್ಷಗಳ ಬೆಂಬಲವನ್ನೂ ಕೋರಿದ್ದಾರೆ. ಒಟ್ಟಿನಲ್ಲಿ ಪ್ರಾದೇಶಿಕ ಪಕ್ಷಗಳ ರಾಜಕಾರಣ, ಕೆಸಿಆರ್ ಯೋಜನೆ  ಮತ್ತು ದಕ್ಷಿಣಕ್ಕೆ ಪ್ರಧಾನಿ ಪಟ್ಟ ಸಿಗುವುದೇ ಎಂಬುದು ಕಾದು ನೋಡಬೇಕಿದೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!