ಎಸ್‌ಎಸ್‌ಎಲ್‌ಸಿ, ಪಿಯುಸಿ 2 ತರಗತಿ ಆರಂಭ | 6ರಿಂದ 9ನೇ ತರಗತಿಗೆ ವಿದ್ಯಾಗಮ ಕಲಿಕೆ | ತರಗತಿ ನಡೆಸಲು 75000 ಶಾಲೆ, 5000 ಕಾಲೇಜು ಸಜ್ಜು | ಹಾಜರಾತಿ ಕಡ್ಡಾಯವಿಲ್ಲ, ಹಾಜರಿಗೆ ಪೋಷಕರ ಅನುಮತಿ ಕಡ್ಡಾಯ | ವಿದ್ಯಾರ್ಥಿಗಳ ಸುರಕ್ಷತೆಗಾಗಿ ಮಾರ್ಗಸೂಚಿಗಳ ಅನುಸರಣೆ | ಕೆಲ ಶಾಲೆಗಳಲ್ಲಿ ತಳಿರು ತೋರಣಗಳ ಸಿಂಗಾರ
ಬೆಂಗಳೂರು(ಜ.01): ಮಹಾಮಾರಿ ಕೊರೋನಾ ಭೀತಿಯಿಂದ 10 ತಿಂಗಳಿನಿಂದ ಬಂದ್ ಆಗಿದ್ದ ರಾಜ್ಯದ ಎಲ್ಲ ಶಾಲೆ, ಪಿಯು ಕಾಲೇಜುಗಳು ಸರ್ಕಾರದ ಆದೇಶದಂತೆ ಹೊಸ ವರ್ಷದ ಆರಂಭದ ದಿನವಾದ ಶುಕ್ರವಾರ (ಜ.1)ದಿಂದ ಬಾಗಿಲು ತೆರೆಯಲಿವೆ. ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಸಕಲ ಸಿದ್ಧತೆ ಹಾಗೂ ಸುರಕ್ಷಾ ಕ್ರಮಗಳೊಂದಿಗೆ ಸಜ್ಜಾಗಿವೆ.
ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ-2ಗೆ ಮಾತ್ರ ಶಾಲೆಗಳಲ್ಲಿ ತರಗತಿ ಚಟುವಟಿಕೆ ಆರಂಭವಾಗಲಿವೆ. 6ರಿಂದ 9ನೇ ತರಗತಿಗೆ ‘ವಿದ್ಯಾಗಮ’ ಯೋಜನೆ ಮೂಲಕ ಕಲಿಕೆ ನಡೆಯಲಿದೆ.
undefined
ಹೊಸ ವರ್ಷ: ಕೆಲವು ಮೊಬೈಲ್‌ಗಳಲ್ಲಿ ವಾಟ್ಸಪ್ ಸ್ಥಗಿತ, ಇಂದಿನಿಂದ ಏನೇನು ಬದಲಾಗುತ್ತೆ...? ಇಲ್ಲಿ ನೋಡಿ
ಸರ್ಕಾರದ ಮಾರ್ಗಸೂಚಿಯಂತೆ ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲೆಗಳಲ್ಲೂ ಆಯಾ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು, ಶಿಕ್ಷಕರು ಹಾಗೂ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ ಶಾಲೆ, ಕಾಲೇಜುಗಳನ್ನು ಸೋಂಕು ನಿವಾರಣಾ ದ್ರಾವಣದಿಂದ ಸ್ವಚ್ಛಗೊಳಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸರತಿ ಸಾಲಿನಲ್ಲಿ ವಿದ್ಯಾರ್ಥಿಗಳು ಬರಲು 3 ಅಡಿಗೊಂದು ವೃತ್ತಗಳನ್ನು ಹಾಕಲಾಗಿದೆ. ಜಾಗೃತಿಗಾಗಿ ಶಾಲೆಯ ಪ್ರಮುಖ ಸ್ಥಳಗಳಲ್ಲಿ ಕೋವಿಡ್ ನಿಯಮಗಳನ್ನು ನೆನಪಿಸುವ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಕೆಲವೆಡೆ ವಿದ್ಯಾರ್ಥಿಗಳ ತಪಾಸಣೆಗೆ ಶಾಲೆಗಳೇ ನರ್ಸ್‌ಗಳನ್ನು ನೇಮಕ ಮಾಡಿಕೊಂಡಿವೆ. ಕೆಲ ಶಾಲೆ, ಕಾಲೇಜುಗಳು ತಳಿರು ತೋರಣಗಳ ಸಿಂಗಾರ, ಬ್ಯಾಂಡ್ ಬಾಜಾ ಮೂಲಕ ಮೂಲಕ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಕಾತರದಿಂದ ಕಾಯುತ್ತಿವೆ.
ಹೀಗೆ ಸರ್ಕಾರವೇನೋ 10 ತಿಂಗಳಿಂದ ಬಂದ್ ಆಗಿದ್ದ ಶಾಲೆ, ಕಾಲೇಜುಗಳನ್ನು ನಿಗದಿಯಂತೆ ಆರಂಭಿಸುತ್ತಿದೆ. ಆದರೆ, ಇನ್ನೂ ಪೂರ್ಣ ನಿಯಂತ್ರಣಕ್ಕೆ ಬಾರದ ಕೊರೋನಾ ಸೋಂಕು, ಇದರ ನಡುವೆಯೇ ರಾಜ್ಯಕ್ಕೆ ಕಾಲಿಟ್ಟಿರುವ ಬ್ರಿಟನ್ ರೂಪಾಂತರಿ ವೈರಸ್‌ನ ಆತಂಕದ ಮಧ್ಯೆ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಎಷ್ಟರ ಮಟ್ಟಿಗೆ ಧೈರ್ಯ ಮಾಡುತ್ತಾರೆ. ಎಷ್ಟುಪ್ರಮಾಣದಲ್ಲಿ ವಿದ್ಯಾರ್ಥಿಗಳು ಹಾಜರಾಗುತ್ತಾರೆ ಎಂಬುದು ತೀವ್ರ ಕುತೂಹಲದ ಸಂಗತಿ.
75 ಸಾವಿರ ಶಾಲೆ, 5300 ಕಾಲೇಜು:
ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳು ಆರಂಭಗೊಂಡ ಒಂದೂವರೆ ತಿಂಗಳ ಬಳಿಕ ಶಾಲೆ, ಪಿಯು ಕಾಲೇಜುಗಳು ಆರಂಭಗೊಳ್ಳುತ್ತಿವೆ. ಕೊರೋನಾ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಹತ್ತು ತಿಂಗಳಿಂದ ಬಂದ್ ಆಗಿದ್ದ ಶಾಲೆ, ಪಿಯು ಕಾಲೇಜುಗಳನ್ನು ಜ.1ರಿಂದ ಪುನಾರಂಭಿಸಿ ಮೊದಲ ಹಂತದಲ್ಲಿ ಜ.1ರಿಂದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಮಕ್ಕಳಿಗೆ ತರಗತಿ ಚಟುವಟಿಕೆಗಳು ಹಾಗೂ 6 ರಿಂದ 9ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಶಾಲಾ ಆವರಣದಲ್ಲೇ ವಿದ್ಯಾಗಮ ಕಲಿಕಾ ಕಾರ್ಯಕ್ರಮ ಪುನಾರಂಭಿಸಲು ಡಿ.19ರಂದು ಅಧಿಕೃತವಾಗಿ ಸೂಚಿಸಿತ್ತು. ಅದರಂತೆ ರಾಜ್ಯದ 53 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು, 20 ಸಾವಿರಕ್ಕೂ ಖಾಸಗಿ ಶಾಲೆಗಳು ಹಾಗೂ 5300 ಸರ್ಕಾರಿ ಹಾಗೂ ಖಾಸಗಿ ಪದವಿ ಪೂರ್ವ ಕಾಲೇಜುಗಳ ಆರಂಭಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಪೋಷಕರ ಅನುಮತಿ ಕಡ್ಡಾಯ:
ಪೋಷಕರಿಂದ ಲಿಖಿತ ಅನುಮತಿ ಪತ್ರ ನೀಡುವ ವಿದ್ಯಾರ್ಥಿಗಳಿಗೆ ಮಾತ್ರ ತರಗತಿ ಹಾಜರಾಗಿ ಹಾಗೂ ವಿದ್ಯಾಗಮದಲ್ಲಿ ಭಾಗವಹಿಸಲು ಅವಕಾಶ ದೊರೆಯಲಿದೆ. ಈ ಪತ್ರದಲ್ಲಿ ತಮ್ಮ ಮಕ್ಕಳಿಗೆ ಯಾವುದೇ ರೀತಿಯ ಕೋವಿಡ್ ಲಕ್ಷಣಗಳಿಲ್ಲ ಎಂಬುದನ್ನೂ ಪೋಷಕರು ಖಾತರಿಪಡಿಸಿರಬೇಕು.
ಶಾಲೆಗೆ ಬರುವಾಗ ಮಕ್ಕಳು, ಶಿಕ್ಷಕರು ಹಾಗೂ ಎಲ್ಲ ಸಿಬ್ಬಂದಿ ಮಾಸ್ಕ್ ಧರಿಸಿರಬೇಕು. ಶಾಲಾ ಆವರಣ, ತರಗತಿ ಕೊಠಡಿ ಎಲ್ಲೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಶಾಲೆಗಳು ಮೊದಲು ವಿದ್ಯಾರ್ಥಿಗಳಿಂದ ಕಡ್ಡಾಯವಾಗಿ ಈ ಅನುಮತಿ ಪತ್ರ ಪಡೆಯಬೇಕು. ಯಾವುದೇ ಮಕ್ಕಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಲ್ಲ ಆದರೆ, ಥರ್ಮಲ್ ಸ್ಕ್ರೀನಿಂಗ್ ಮೂಲಕ ಮಕ್ಕಳ ದೇಹದ ಉಷ್ಣಾಂಶ ತಪಾಸಣೆ ನಡೆಸಬೇಕು. ಈ ವೇಳೆ ಯಾವುದೇ ವಿದ್ಯಾರ್ಥಿಗೆ ಕೋವಿಡ್ ಲಕ್ಷಣಗಳು ಕಂಡುಬಂದರೆ ಕೂಡಲೇ ಪ್ರತ್ಯೇಕ ಕೊಠಡಿಯಲ್ಲಿ ನಿಗಾ ವಹಿಸಿ ಮುಂದಿನ ಆರೋಗ್ಯ ತಪಾಸಣೆ, ಚಿಕಿತ್ಸೆಗೆ ಕ್ರಮ ವಹಿಸಬೇಕೆಂದು ಸರ್ಕಾರ ಸೂಚಿಸಿದೆ.
ಜ.2ರಿಂದ ರಾಜ್ಯದ 5 ಜಿಲ್ಲೆಗಳಲ್ಲಿ ಕೊರೋನಾ ಲಸಿಕೆ ತಾಲೀಮು
ಶಾಲಾರಂಭದ ಬಳಿಕ ಪ್ರತಿ ದಿನವೂ ಶಾಲಾ ಕೊಠಡಿಗಳು, ಆವರಣವನ್ನು ಪ್ರತಿದಿನ ಸ್ಯಾನಿಟೈಸಿಂಗ್ ಮಾಡಬೇಕು. ಮಕ್ಕಳು, ಶಿಕ್ಷಕರು, ಇತರೆ ಸಿಬ್ಬಂದಿ ಕೋವಿಡ್ ಸುರಕ್ಷಾ ದೃಷ್ಟಿಯಿಂದ ಕೈ ತೊಳೆಯಲು ಸೋಪು, ಸ್ಯಾನಿಸೈಟಿಂಗ್ ವ್ಯವಸ್ಥೆ ಇರಬೇಕು. ಹಾಜರಾಗುವ ಪ್ರತಿ ವಿದ್ಯಾರ್ಥಿಗೂ ಥರ್ಮಲ್ ಸ್ಕಾ್ಯನರ್ ಪರೀಕ್ಷೆ, ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಈ ಹಿನ್ನೆಲೆಯಲ್ಲಿ ಒಂದು ಕೊಠಡಿಯಲ್ಲಿ ಗರಿಷ್ಠ 15 ವಿದ್ಯಾರ್ಥಿಗಳಿಗೆ ಮಾತ್ರ ತರಗತಿ ನಡೆಸುವಂತೆ ಸೂಚಿಸಲಾಗಿದೆ.
ಪೋಷಕರು-ಮಕ್ಕಳು ಗಮನಿಸಬೇಕಾದ್ದು
* ಮಕ್ಕಳಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿ ಶಾಲೆಗೆ ಕಳಿಸಿ
* ಮನೆಯಲ್ಲಿ ಯಾರಿಗಾದರೂ ಕೋವಿಡ್ ಲಕ್ಷಣಗಳಿದ್ದರೆ ಶಾಲೆಗೆ ಕಳಿಸಬೇಡಿ
* ಪ್ರತಿ ದಿನ ಮಾಸ್ಕ್ ಒಗೆದು ಒಣಗಿಸಿ
* ಬ್ಯಾಗಿನಲ್ಲಿ ಟವೆಲ್, ಕುದಿಸಿ ಆರಿಸಿದ ನೀರು ತುಂಬಿದ ಬಾಟೆಲ್ ಇಡಿ
* ಆಗಾಗ ಕೈ ತೊಳೆಯುವ ಸುರಕ್ಷಾ ಕ್ರಮ ತಿಳಿಸಿ ಕಳಿಸಿ
* ಪ್ರತಿ ವಿದ್ಯಾರ್ಥಿಯೂ ಎಲ್ಲೆಡೆ ದೈಹಿಕ ಅಂತರ ಕಾಯ್ದುಕೊಳ್ಳಬೇಕು
* ಕೆಮ್ಮು,ಸೀನು ಬಂದಾಗ ಕರವಸ್ತ್ರ ಬಳಸಬೇಕು- ಆಗಾಗ ಸೋಪಿನಿಂದ ಕೈತೊಳೆಯಬೇಕು
* ಪುಸ್ತಕ, ಪೆನ್ನು ಸೇರಿ ಯಾವ ವಸ್ತುಗಳನ್ನು ಪರಸ್ಪರ ಹಂಚಿಕೊಳ್ಳಬಾರದು
ಶಿಕ್ಷಕರು ಮಾಡಬೇಕಾದದ್ದು
* ವಿದ್ಯಾರ್ಥಿಗಳು ಕೋವಿಡ್ ಮಾರ್ಗಸೂಚಿ ಅನುಸರಿಸುವಂತೆ ನೋಡಿಕೊಳ್ಳಬೇಕು
* ಬಸ್ ಸಾಮರ್ಥ್ಯದ ಶೇ.50ರಷ್ಟುಮಕ್ಕಳನ್ನು ಮಾತ್ರ ಕರೆದೊಯ್ಯಬೇಕು
* ಶಿಕ್ಷಕರು ಎಲ್ಲ ಸಿಬ್ಬಂದಿ ಮಾಸ್ಕ್ ಧರಿಸುವುದು ಸೇರಿ ಇತರೆ ನಿಯಮ ಅನುಸರಿಸಬೇಕು
* ನಿತ್ಯ ಪ್ರತಿ ವಿದ್ಯಾರ್ಥಿಯ ಆರೋಗ್ಯದ ಮೇಲೆ ಗಮನ ಇಡಬೇಕು
* ಮಕ್ಕಳಿಗೆ ಕೋವಿಡ್ ಲಕ್ಷಣಗಳಿದ್ದರೆ ಚಿಕಿತ್ಸೆಗೆ ಕ್ರಮ ವಹಿಸಬೇಕು
* ಶಿಕ್ಷಕರು, ಸಿಬ್ಬಂದಿಗೆ ಲಕ್ಷಣಗಳಿದ್ದರೆ ರಜೆ ಕೊಟ್ಟು ಕಳಿಸಬೇಕು
* ಶಾಲಾ ಸುತ್ತಮುತ್ತ ತಿಂಡಿ ಮಾರಲು ಅವಕಾಶ ನೀಡಬಾರದು