ಹುಳಿ ಸಿಹಿಯ ವಿಟಮಿನ್ ಸಿ ಹೇರಳವಾಗಿರುವ ಸ್ಟ್ರಾಬೆರಿ ಮಕ್ಕಳ ಫೇವರೆಟ್. ಈ ಹಣ್ಣಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಆದರೆ ಉತ್ತರ ಭಾರತದ ಈ ಬೆಳೆ ಕರ್ನಾಟಕಕ್ಕೆ ಅಪರಿಚಿತ. ಕಲಘಟಗಿಯ ಶಶಿಧರ ಗೊರವರ ಎಂಬ ಜಾಣ ರೈತ ಈ ಬೆಳೆಯನ್ನು ಉತ್ತರ ಕರ್ನಾಟಕದ ಕಲಘಟಗಿಯಂಥಾ ಜಾಗದಲ್ಲಿ ಬೆಳೆದು ಯಶಸ್ವಿಯಾಗಿದ್ದಾರೆ.
ಶಿವಾನಂದ ಗೊಂಬಿ
ಇವರು ಅಂದು ಗುತ್ತಿಗೆದಾರ. ಈಗ ಪ್ರಗತಿ ಪರ ರೈತ. ರಾಜ್ಯದಲ್ಲಿ ಯಾವ ರೈತನೂ ಬೆಳೆಯದ ಸ್ಟ್ರಾಬೆರಿ ಬೆಳೆದು ಲಾಭವನ್ನು ಗಳಿಸುತ್ತಿದ್ದಾರೆ. 44 ವರ್ಷದ ಶಶಿಧರ ಗೊರವರ ಮೂಲತಃ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೊಟ್ಟೆಬೆನ್ನೂರು ಗ್ರಾಮದವರು. ಓದಿದ್ದು ಎಸ್ಸೆಸ್ಸೆಲ್ಸಿವರೆಗೆ. ಉದ್ಯೋಗ ಅರಸಿ 20 ವರ್ಷದ ಹಿಂದೆ ಮಹಾರಾಷ್ಟ್ರದ ಮಹಾಬಲೇಶ್ವರಕ್ಕೆ ತೆರಳಿದ್ದರು. ಅಲ್ಲಿ ಸಿವಿಲ್ ಗುತ್ತಿಗೆದಾರರೊಬ್ಬರ ಬಳಿ ಕೆಲಸ ಮಾಡುತ್ತಾ ಕೆಲಸ ಕಲಿತು ಕ್ಲಾಸ್ ಒನ್ ಗುತ್ತಿಗೆದಾರರಾದರು. ಆಗಲೇ ಕೃಷಿಯಲ್ಲಿ ಬದುಕು ಕಟ್ಟುವ ಆಸೆ ಚಿಗುರಿದೆ.
undefined
ಮಹಾಬಲೇಶ್ವರದಲ್ಲಿ ಹೆಚ್ಚಾಗಿ ಬೆಳೆಯುವ ಸ್ಟ್ರಾಬೇರಿ ರೈತರಿಂದ ಕೊಂಚ ಮಾಹಿತಿ ಪಡೆದಿದ್ದಾರೆ. ಮಹಾಬಲೇಶ್ವರದಲ್ಲಿ ಸ್ವಲ್ಪ ಜಮೀನನ್ನು 1 ವರ್ಷಕ್ಕೆ ಬಾಡಿಗೆ ಪಡೆದು ಅಲ್ಲಿ ಸ್ಟ್ರಾಬೆರಿ ಬೆಳೆದು ಯಶಸ್ವಿಯಾಗಿದ್ದಾರೆ.
ಒಂದೆಕರೆ ಜಮೀನಿನಲ್ಲಿ ನಳನಳಿಸುವ ಸ್ಟ್ರಾಬೆರಿ
ಮಹಾಬಳೇಶ್ವರದ ಬದುಕು ಸಾಕು, ಮತ್ತೆ ತನ್ನ ರಾಜ್ಯ ಕರ್ನಾಟಕಕ್ಕೆ ಹೋಗಿ ಈ ಕೃಷಿ ಮಾಡಿ ಬದುಕು ಕಂಡುಕೊಂಡರಾಯಿತೆಂದುಕೊಂಡರು. ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಹುಲ್ಲಂಬಿಯಲ್ಲಿ 6 ಎಕರೆ ಜಮೀನು ಖರೀದಿಸಿದರು. 1 ಎಕರೆಯಲ್ಲಿ ಸ್ಟ್ರಾಬೇರಿ ಬೆಳೆಯಲು ನಿರ್ಧರಿಸಿದರು. ಇದನ್ನು ನೋಡಿ ಅಕ್ಕಪಕ್ಕದವರು ಮೊದಲಿಗೆ ನಕ್ಕಿದ್ದಾರೆ. ಇಡೀ ರಾಜ್ಯದಲ್ಲಿ ಎಲ್ಲಿಯೂ ತೋಟದ ರೂಪದಲ್ಲಿ ಸ್ಟ್ರಾಬೆರಿ ಬೆಳೆದಿಲ್ಲ. ಇನ್ನು ಇವರೇನು ಯಶಸ್ಸು ಸಾಧಿಸುತ್ತಾರೆ ಎಂದು ಮಾತಾಡಿಕೊಂಡಿದ್ದಾರೆ. ತಾವು ಖರೀದಿಸಿದ ಭೂಮಿಯ ಮಣ್ಣಿನ ಪರೀಕ್ಷೆ ನಡೆಸಿದರು. ಆಗ ಅದರಲ್ಲಿ ಕ್ಯಾಲ್ಸಿಯಂ ಕಡಿಮೆಯಿರುವುದು ಗೊತ್ತಾಗಿದೆ. ತಜ್ಞರ ನೆರವಿನೊಂದಿಗೆ ಕ್ಯಾಲ್ಸಿಯಂ ಹೆಚ್ಚಳಕ್ಕೆ ಕ್ರಮ ಕೈಗೊಂಡಿದ್ದಾರೆ.
ಕ್ಯಾರ್ಲಿಪೋರ್ನಿಯಾದ ಸಸಿ
45ರು.ಗಳಿಗೆ ಒಂದರಂತೆ ಕ್ಯಾಲಿಪೋರ್ನಿಯಾದಿಂದ ಸ್ಟ್ರಾಬೆರಿಯ 700 ಸಸಿಗಳನ್ನು ತರಿಸಿದ್ದಾರೆ. ಬಳಿಕ ಈ ಗಿಡಗಳ ನರ್ಸರಿ ಮಾಡಿದ್ದಾರೆ. ಹೀಗೆ ಬರೋಬ್ಬರಿ 35 ಸಾವಿರ ಸಸಿಗಳನ್ನು ತಯಾರಿಸಿದ್ದಾರೆ. ಅವುಗಳಲ್ಲಿ 10 ಸಾವಿರಕ್ಕೂ ಅಧಿಕ ಸಸಿಗಳು ಮಳೆಯಿಂದಾಗಿ ಹಾಳಾಗಿವೆ. ಉಳಿದ 25 ಸಾವಿರ ಸಸಿಗಳನ್ನು ತಮ್ಮ 6 ಎಕರೆ ಪ್ರದೇಶದ ಪೈಕಿ ಒಂದು ಎಕರೆ ಪ್ರದೇಶದಲ್ಲಿ ನೆಟ್ಟಿದ್ದಾರೆ. ಕಳೆದ 2019 ರ ಸೆಪ್ಟೆಂಬರ್‌ನಲ್ಲಿ ನೆಟ್ಟಿರುವ ಸಸಿಗಳಿಗ ಫಸಲು ನೀಡುತ್ತಿವೆ. ಇಸ್ರೇಲ್ ಮಾದರಿಯ ಹನಿ ನೀರಾವರಿ, ಸಾವಯವ ಗೊಬ್ಬರ ಬಳಕೆಯಿಂದಾಗಿ ಇಂದು ಸ್ಟ್ರಾಬೆರಿ ಇಳುವರಿ ಬರುತ್ತಿದೆ. ಪ್ರತಿನಿತ್ಯ 50-60 ಕೆಜಿ ಸ್ಟ್ರಾಬೆರಿ ಹಣ್ಣುಗಳ ಇಳುವರಿ ಬರುತ್ತಿದೆ.
ಬೆಂಗಳೂರಿಗೆ ರವಾನೆ
ತಮ್ಮ ಹೊಲದ ಸ್ಟ್ರಾಬೆರಿ ಹಣ್ಣುಗಳನ್ನು ಚಿಕ್ಕಚಿಕ್ಕ ಪ್ಲಾಸ್ಟಿಕ್ ಬಾಕ್ಸ್‌ನಲ್ಲಿಟ್ಟು, ರಟ್ಟಿನ ಬಾಕ್ಸ್‌ನಲ್ಲಿ ಪ್ಯಾಕ್ ಮಾಡಿ ಬೆಂಗಳೂರಿನ ಕೆ.ಆರ್.ಮಾರುಕಟ್ಟೆಗೆ ರವಾನಿಸಲಾಗುತ್ತಿದೆ. ಕೆಜಿಗೆ 200-250 ರೂ.ನಂತೆ ದಲ್ಲಾಳಿಗಳು ಇವರಿಂದ ಸ್ಟ್ರಾಬೆರಿ ಖರೀದಿಸುತ್ತಿದ್ದಾರೆ. ‘ಅಕ್ಟೋಬರ್ ಅಂತ್ಯದಿಂದ ಇಳುವರಿ ಬರಲು ಪ್ರಾರಂಭಿಸಿದ್ದು, ಅದನ್ನು ಬೆಂಗಳೂರಿಗೆ ಸಾಗಿಸಿದ್ದೇವೆ. ಒಂದು ಸಲ 150-200 ಕೆಜಿಯಂತೆ ಸಾಗಿಸುತ್ತೇವೆ. ಇದೀಗ ಮೋರ್ ಹೈಪರ್ ಮಾರುಕಟ್ಟೆಯವರು ಕಳುಹಿಸುವಂತೆ ಹೇಳಿದ್ದು, ಅಲ್ಲಿಗೆ ರವಾನಿಸುತ್ತಿದ್ದೇವೆ’ ಎಂದು ತಿಳಿಸುತ್ತಾರೆ ಶಶಿಧರ.
ಅತ್ಯಂತ ಕಡಿಮೆ ನೀರು ಬಳಸಿ ಬಂಪರ್ ಭತ್ತ ಪಡೆದ ಮೈಸೂರು ರೈತ!
ಜಾಮ್ ತಯಾರಿಸುವ ಯೋಚನೆ
ಸ್ಟ್ರಾಬೆರಿ ಜಾಮ್ ಸೇರಿದಂತೆ ಸ್ಟ್ರಾಬೆರಿಯಿಂದ ಬಗೆ ಬಗೆಯ ಆಹಾರ ಪದಾರ್ಥ ಮಾಡುವ ಯೋಚನೆ ಇವರದ್ದು. ಸದ್ಯ ಒಂದು ಎಕರೆಯಲ್ಲಿ ಮಾಡಿದ್ದು, ಇದನ್ನು ಮುಂಬರುವ ದಿನಗಳಲ್ಲಿ 6 ಎಕರೆಯಲ್ಲೂ ಬೆಳೆಯುವ ಹಾಗೂ ಇನ್ನಷ್ಟು ಜಮೀನು ಖರೀದಿಸಲು ಮಾತುಕತೆ ನಡೆದಿದೆ. ಅಲ್ಲೂ ಇದೇ ರೀತಿ ಸ್ಟ್ರಾಬೇರಿ ಅಥವಾ ಮತ್ತೆ ಬೇರೆ ಯಾವುದಾದರೂ ಕೃಷಿ ಮಾಡುವ ಯೋಚನೆಯಿದೆ ಎಂದು ವಿವರಿಸುತ್ತಾರೆ.
ಖರ್ಚು ಎಷ್ಟಾಗುತ್ತೆ
ಸ್ಟ್ರಾಬೆರಿ ಸಸಿ ನೆಟ್ಟ ಮೇಲೆ ಸರಿಯಾಗಿ ಅಗತ್ಯಕ್ಕೆ ತಕ್ಕಷ್ಟು ಗೊಬ್ಬರ, ನೀರು ಉಣಿಸಿದರೆ 45 ದಿನಕ್ಕೆ ಇಳುವರಿ ಬರಲು ಶುರುವಾಗುತ್ತದೆ. ಇದು ಹೆಚ್ಚಾಗಿ ಚಳಿಗಾಲದ ಬೆಳೆ. 6 ತಿಂಗಳ ಕಾಲ ನಿರಂತರ ಇಳುವರಿ ನೀಡುತ್ತಲೇ ಇರುತ್ತದೆ. ‘ಒಂದು ಎಕರೆಗೆ ಕನಿಷ್ಠವೆಂದರೂ 4 ಲಕ್ಷ ರೂ.ವರೆಗೂ ಖರ್ಚಾಗುತ್ತದೆ. ಸರಿಯಾಗಿ ಮಾಡಿದರೆ ಇಳುವರಿ ಇದ್ದಾಗ ಒಂದು ಎಕರೆಯಲ್ಲಿ 10 ಲಕ್ಷ ರು.ವರೆಗೂ ದುಡಿಯಬಹುದು. ಒಂದು ಗಿಡಕ್ಕೆ ದಿನಕ್ಕೆ 1/4 ಲೀಟರ್ ನೀರನ್ನು ಹನಿ ನೀರಾವರಿ ಮೂಲಕ ಉಣಿಸಿದರೆ ಸಾಕು. ಆದರೆ ಎರೆಹುಳು ಗೊಬ್ಬರ ಸೇರಿದಂತೆ ಸಾವಯವ ಗೊಬ್ಬರ ಬಳಕೆ ಉತ್ತಮ’ ಎನ್ನುತ್ತಾರೆ ಶಶಿಧರ.
ಹೊರರಾಜ್ಯದ ಆಡು ಸಾಕಿದರೆ ಲಕ್ಷಾಂತರ ರು. ಆದಾಯ ಪಡೆಯಬಹುದು!