ಬೆಂಗಳೂರು ಹೊರವಲಯದ ಆನೇಕಲ್‌ನ ವೀವರ್ಸ್ ಕಾಲೋನಿಯಲ್ಲಿ ಫೆಬ್ರವರಿ 23 ರಂದು ನಡೆದಿದ್ದ ರೌಡಿ ಶೀಟರ್ ಮೆಂಟಲ್ ಮಂಜ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಬೆಂಗಳೂರು (ಮಾ.1): ಬೆಂಗಳೂರು ಹೊರವಲಯದ ಆನೇಕಲ್‌ನ ವೀವರ್ಸ್ ಕಾಲೋನಿಯಲ್ಲಿ ಫೆಬ್ರವರಿ 23 ರಂದು ನಡೆದಿದ್ದ ರೌಡಿ ಶೀಟರ್ ಮೆಂಟಲ್ ಮಂಜ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಆರೋಪಿಗಳನ್ನು ವಿಜಯ್ ಅಲಿಯಾಸ್ ಟ್ಯಾಟೂ ವಿಜಿ, ಶೇಖರ್, ಗೌತಮ್, ಮಧು, ಕಿರಣ್ ಹಾಗೂ ಅಕ್ಷಯ್ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ 25 ರಿಂದ 30 ವರ್ಷ ವಯಸ್ಸಿನ ಆನೇಕಲ್ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಗುತ್ತಿಗೆ ಆಧಾರದ ಮೇಲೆ ಶಾಲಾ ಬಸ್ ಚಾಲಕನಾಗಿ ಮೆಂಟಲ್ ಮಂಜ ಕೆಲಸ ಮಾಡುತ್ತಿದ್ದ. 6 ತಿಂಗಳ ಹಿಂದೆ ವಿಜಯ್ ಅಲಿಯಾಸ್ ಟ್ಯಾಟೂ ವಿಜಿಗೆ ಪರಿಚಯವಿದ್ದ ಮಹಿಳೆಯೊಬ್ಬರು ಮೆಂಟಸ್ ಮಂಜ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಟ್ಯಾಟೂ ವಿಜಿ ಸಾಕ್ಷಿಯಾಗಿದ್ದ. ಹೀಗಾಗಿ ವಿಜಿಗೆ ಕರೆ ಮಾಡಿದ್ದ ಮಂಜ ಸಾಕ್ಷಿಯಾಗಿ ನ್ಯಾಯಾಲಯಕ್ಕೆ ಹಾಜರಾಗದಂತೆ ಬೆದರಿಕೆ ಹಾಕಿದ್ದ. ಈ ವೇಳೆ ಮಂಜ ಹಾಗೂ ವಿಜಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಬಳಿಕ ಮಂಜ ಹಾಗೂ ಆತನ ಸಹಚರರು ವಿಜಿಯನ್ನು ಎದುರಿಸಲು ಆತನ ಮನೆಗೆ ತೆರಳಿದ್ದರು. ಬಳಿಕ ವಿಜಿ ಮೇಲೆ ಹಲ್ಲೆ ನಡೆಸಿದ್ದರು. ಇದರಿಂದ ಕುಪಿತಗೊಂಡ ವಿಜಿ ಸ್ನೇಹಿತರು, ಮಂಜನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದರು.