ಫ್ಲವರ್ ಗಾರ್ಡನ್ ನಿವಾಸಿ ಶಿವ ಅಲಿಯಾಸ್ ಶರತ್ ಕೊಲೆಯಾದ ದುರ್ದೈವಿ. ಹತ್ಯೆ ಸಂಬಂಧ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು(ಮಾ.10): ಹಳೆಯ ದ್ವೇಷದ ಹಿನ್ನೆಲೆಯಲ್ಲಿ ರೌಡಿಯೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆಗೈದು ಮೃತನ ಎದುರಾಳಿಗಳು ಪರಾರಿ ಆಗಿರುವ ಘಟನೆ ಕಾಟನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ. ಫ್ಲವರ್ ಗಾರ್ಡನ್ ನಿವಾಸಿ ಶಿವ ಅಲಿಯಾಸ್ ಶರತ್ (34) ಕೊಲೆಯಾದ ದುರ್ದೈವಿ. ಹತ್ಯೆ ಸಂಬಂಧ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತನ್ನ ಪತ್ನಿ ಹಾಗೂ ಇಬ್ಬರ ಮಕ್ಕಳ ಜತೆ ಫ್ಲವರ್ ಗಾರ್ಡನ್‌ನಲ್ಲಿ ನೆಲೆಸಿದ್ದ ಶರತ್ ಹಲವು ವರ್ಷಗಳಿಂದ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿದ್ದು, ಈತನ ಮೇಲೆ ಕೊಲೆ ಮತ್ತು ಹಲ್ಲೆ ಸೇರಿದಂತೆ ಐದಾರು ಪ್ರಕರಣಗಳು ದಾಖಲಾಗಿದ್ದವು. ಈ ಕ್ರಿಮಿನಲ್ ಚರಿತ್ರೆ ಹಿನ್ನೆಲೆಯಲ್ಲಿ ಆತನ ಮೇಲೆ ಕಾಟನ್‌ಪೇಟೆ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿತ್ತು. 2020ರಲ್ಲಿ ರೌಡಿ ಸಕ್ಕರೆ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ನಂತರ ಜಾಮೀನು ಪಡೆದು ಹೊರಬಂದಿದ್ದ ಎಂದು ಪೊಲೀಸರು ಹೇಳಿದ್ದಾರೆ.
undefined
ಫ್ಲೆಕ್ಸ್ ವಿಚಾರಕ್ಕೆ ಗಲಾಟೆ, ಮೈಸೂರಿನಲ್ಲಿ ಮುಸ್ಲಿಂ ಧರ್ಮಗುರು ಬರ್ಬರ ಹತ್ಯೆ!
ಶುಕ್ರವಾರ ರಾತ್ರಿ ತನ್ನ ಗೆಳೆಯನ ಜತೆ ಮದ್ಯ ಸೇವಿಸಿ ಮನೆಗೆ 9.30ರ ಸುಮಾರಿಗೆ ಶರತ್ ಮರಳುತ್ತಿದ್ದ. ಬೈಕ್‌ನಲ್ಲಿ ಶರತ್‌ನನ್ನು ಆತನ ಗೆಳೆಯ ಮನೆ ಬಳಿ ಡ್ರಾಪ್ ಮಾಡಿ ತೆರಳುತ್ತಿದ್ದಂತೆ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಠಾತ್ ದಾಳಿ ನಡೆಸಿದ್ದಾರೆ. ಈ ಅನಿರೀಕ್ಷಿತ ದಾಳಿಯಿಂದ ಹೆದರಿ ಪ್ರಾಣ ಉಳಿಸಿಕೊಳ್ಳಲು ಗಲ್ಲಿಗೆ ಶರತ್ ನುಗ್ಗಿದ್ದಾನೆ. ಆಗಲೂ ಆತನ ಬೆನ್ನತ್ತಿ ಹೋಗಿ ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದಾರೆ. ಘಟನೆಯಲ್ಲಿ ತೀವ್ರ ರಕ್ತಸ್ರಾವದಿಂದ ಆತ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.