ಹೊಡೆದು ಕೊಂದ ದರ್ಶನ್‌ ಗ್ಯಾಂಗ್‌ನಲ್ಲಿ ಇನ್ನೂ ನಾಲ್ವರು ನಾಪತ್ತೆ: ತೀವ್ರ ತಲಾಶ್‌

By Kannadaprabha NewsFirst Published Jun 13, 2024, 5:05 AM IST
Highlights

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೃತ್ಯದಲ್ಲಿ ನಟ ದರ್ಶನ್‌ ತೂಗುದೀಪ ಗ್ಯಾಂಗ್‌ನ 17 ಮಂದಿ ಪಾಲ್ಗೊಂಡಿದ್ದು, ತಪ್ಪಿಸಿಕೊಂಡಿರುವ ಇನ್ನೂ ನಾಲ್ವರ ಪತ್ತೆಗೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ. 

ಬೆಂಗಳೂರು (ಜೂ.13): ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೃತ್ಯದಲ್ಲಿ ನಟ ದರ್ಶನ್‌ ತೂಗುದೀಪ ಗ್ಯಾಂಗ್‌ನ 17 ಮಂದಿ ಪಾಲ್ಗೊಂಡಿದ್ದು, ತಪ್ಪಿಸಿಕೊಂಡಿರುವ ಇನ್ನೂ ನಾಲ್ವರ ಪತ್ತೆಗೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ. ಅನು, ಜಗದೀಶ್‌, ರವಿ ಹಾಗೂ ರಾಜು ತಲೆಮರೆಸಿಕೊಂಡಿದ್ದು, ಕೊಲೆ ಕೃತ್ಯ ಬೆಳಕಿಗೆ ಬಂದ ನಂತರ ನಗರ ತೊರೆದು ಈ ನಾಲ್ವರೂ ನಾಪತ್ತೆಯಾಗಿದ್ದಾರೆ. ಇನ್ನುಳಿದ ದರ್ಶನ್ ಸೇರಿ 13 ಮಂದಿಯನ್ನು ಮಂಗಳವಾರ ಪೊಲೀಸರು ಬಂಧಿಸಿದ್ದರು.

ನಟ ದರ್ಶನ್ ಪ್ರಿಯತಮೆ ಪವಿತ್ರಾಗೌಡಳಿಗೆ ಇನ್‌ಸ್ಟಾಗ್ರಾಂನಲ್ಲಿ ಅಶ್ಲೀಲ ಕಾಮೆಂಟ್‌ಗಳನ್ನು ಮಾಡುತ್ತಿದ್ದ ಕಾರಣಕ್ಕೆ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಅಪಹರಿಸಿ ತಂದು ಆರೋಪಿಗಳು ಕೊಲೆ ಮಾಡಿದ್ದರು. ಈ ಕೃತ್ಯದ ತನಿಖೆ ವೇಳೆ ದರ್ಶನ್ ಸಹ ಖುದ್ದು ಹಲ್ಲೆ ನಡೆಸಿರುವುದು ತನಿಖೆಯಲ್ಲಿ ಬಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Latest Videos

ಮದಕ್ಕೆ ಕರುಣೆ ಇಲ್ಲ.. ನಿನ್ನ ಕರ್ಮ ನಿನ್ನನ್ನು ಸುಡುತ್ತದೆ: ಪರೋಕ್ಷವಾಗಿ ದರ್ಶನ್‌ಗೆ ಪಂಚ್ ಕೊಟ್ಟ ಜಗ್ಗೇಶ್‌!

ಕೊಲೆ ಕೃತ್ಯದಲ್ಲಿ 17 ಆರೋಪಿಗಳು: ಈ ಕೊಲೆ ಕೃತ್ಯದಲ್ಲಿ ನಟ ದರ್ಶನ್‌ ತೂಗುದೀಪ ಹಾಗೂ ಅವರ ಪ್ರಿಯತಮೆ ಪವಿತ್ರಾಗೌಡ ಸೇರಿದಂತೆ 17 ಮಂದಿ ಪಾಲ್ಗೊಂಡಿದ್ದಾರೆ ಎಂದು ನಗರದ ಎಸಿಎಂಎಂ ನ್ಯಾಯಾಲಯಕ್ಕೆ ಪೊಲೀಸರು ಹೇಳಿದ್ದಾರೆ. ಈ ಕೃತ್ಯದಲ್ಲಿ ದರ್ಶನ್ ಸೇರಿ 13 ಮಂದಿ ಬಂಧಿತರಾಗಿದ್ದು, ಇನ್ನುಳಿದ ನಾಲ್ವರ ಪತ್ತೆಗೆ ತನಿಖೆ ಮುಂದುವರೆದಿದೆ. ಕೊಲೆ ಪ್ರಕರಣದಲ್ಲಿ ಹೆಚ್ಚಿನ ತನಿಖೆ ಸಲುವಾಗಿ ಬಂಧಿತರಾಗಿದ್ದ ಆರೋಪಿಗಳನ್ನು ತಮ್ಮ ವಶಕ್ಕೆ ಪಡೆಯಲು ನ್ಯಾಯಾಲಯಕ್ಕೆ ಮಂಗಳವಾರ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ರಿಮ್ಯಾಂಡ್ ಅಪ್ಲಿಕೇಷನ್‌ ಸಲ್ಲಿಸಿದ್ದರು. ಇದರಲ್ಲಿ 17 ಮಂದಿ ಆರೋಪಿಗಳ ವಿವರ ಬಹಿರಂಗಪಡಿಸಿದ್ದಾರೆ.

ಇನ್ನು ಈ ಆರೋಪಿಗಳ ಪೈಕಿ ರಾಘವೇಂದ್ರ, ಕಾರ್ತಿಕ್‌, ನಿಖಿಲ್ ನಾಯಕ್ ಹಾಗೂ ಕೇಶವಮೂರ್ತಿ ಶರಣಾಗಿದ್ದರು. ಈ ನಾಲ್ವರ ಹೇಳಿಕೆ ಆಧರಿಸಿ ರಾಜರಾಜೇಶ್ವರಿ ನಗರದ ಪ್ರವೇಶ ದ್ವಾರದ ಬಳಿ ವಿನಯ್‌, ದೀಪಕ್, ಬಿಡದಿ ಟೋಲ್‌ ಸಮೀಪ ಪವನ್‌, ನಂದೀಶ್‌, ನಾಗರಾಜ್‌, ಲಕ್ಷ್ಮಣ್‌ ಹಾಗೂ ಪ್ರದೋಶ್‌ ಪೊಲೀಸರ ಬಲೆಗೆ ಬಿದ್ದಿದ್ದರು. ಮೈಸೂರಿನಲ್ಲಿ ದರ್ಶನ್ ಹಾಗೂ ಆರ್‌.ಆರ್‌.ನಗರದ ಮನೆಯಲ್ಲಿ ಪವಿತ್ರಾಗೌಡಳನ್ನು ಪೊಲೀಸರು ಬಂಧಿಸಿದ್ದರು.

ದರ್ಶನ್​ ಬಂಧನ ಬೆನ್ನಲ್ಲೇ ಇನ್​ಸ್ಟಾದಲ್ಲಿ ಪತಿಯನ್ನು ಅನ್​ಫಾಲೋ ಮಾಡಿ ಡಿಪಿ ಡಿಲೀಟ್‌ ಮಾಡಿದ ವಿಜಯಲಕ್ಷ್ಮಿ!

ಹಗ್ಗ, ದೊಣ್ಣೆ ಹಾಗೂ ಮರದ ತುಂಡುಗಳಿಂದ ಹಲ್ಲೆ: ಪಟ್ಟಣಗೆರೆಯಲ್ಲಿರುವ ಜಯಣ್ಣ ಅವರಿಗೆ ಸೇರಿದ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ಹಗ್ಗ, ದೊಣ್ಣೆ ಹಾಗೂ ಮರದ ತುಂಡುಗಳಿಂದ ದರ್ಶನ್ ಗ್ಯಾಂಗ್ ಹಲ್ಲೆ ನಡೆಸಿತ್ತು. ಈ ಮಾರಣಾಂತಿಕ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡು ರೇಣುಕಾಸ್ವಾಮಿ ಮೃತಪಟ್ಟಿದ್ದ. ಬಳಿಕ ಸುಮನಹಳ್ಳಿ ಸಮೀಪದ ಮೋರಿಗೆ ತಂದು ಮೃತದೇಹವನ್ನು ದರ್ಶನ್ ಸಹಚರರು ಎಸೆದು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

click me!