ಹುಬ್ಬಳ್ಳಿ: ಚಿನ್ನಾಭರಣ ಪ್ರಕರಣ; ಇನ್‌ಸ್ಪೆಕ್ಟರ್‌ ವಿರುದ್ಧವೇ ದೂರು

By Kannadaprabha NewsFirst Published Nov 16, 2020, 10:54 AM IST
Highlights

ಓಂಕಾರಗೌಡ ಕುಟುಂಬದವರಿಗೆ ಸೇರಿದ ಬಂಗಾರದ ಆಭರಣಗಳನ್ನು ಜೀವಭಯ ಹುಟ್ಟಿಸಿ ಕಿತ್ತುಕೊಂಡಿದ್ದ ಇನ್‌ಸ್ಪೆಕ್ಟರ್‌ ಪ್ರಭು ಸೂರಿನ್‌ ಸೇರಿ ಮತ್ತಿತರರು| ಕೋರ್ಟ್‌ ಸೂಚನೆ ಮೇರೆಗೆ ಇನ್‌ಸ್ಪೆಕ್ಟರ್‌ ಪ್ರಭು ಸೂರಿನ್‌ ಮೇಲೆ ದೂರು ದಾಖಲಿಸಿಕೊಂಡ ನವನಗರ ಪಿಎಸ್‌ಐ ಎಸ್‌.ಎಸ್‌. ಜಕ್ಕನಗೌಡರ|

ಹುಬ್ಬಳ್ಳಿ(ನ.16): ಬರೋಬ್ಬರಿ 1 ಕೋಟಿ ಮೌಲ್ಯದ 2 ಕೆಜಿ ಚಿನ್ನಾಭರಣವನ್ನು ಕಿತ್ತುಕೊಂಡ ಪ್ರಕರಣದಲ್ಲಿ ನವನಗರ ಠಾಣೆ ಇನ್‌ಸ್ಪೆಕ್ಟರ್‌ ಪ್ರಭು ಸೂರಿನ್‌ ಮೇಲೆ ಅವರದೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಇನ್‌ಸ್ಪೆಕ್ಟರ್‌ ಮೂರನೇ ಆರೋಪಿಯಾಗಿದ್ದು, ಓಂಕಾರ ಗೌಡ ಗದಿಗೆಪ್ಪಗೌಡರ ಪಾಟೀಲ ಎಂಬುವವರು ದೂರು ನೀಡಿದ್ದಾರೆ.

ಓಂಕಾರಗೌಡ ಅವರ ಸೊಸೆ ಬೆಂಗಳೂರಿನ ಶಿವಲೀಲಾ ಪಾಟೀಲ್‌ ಮತ್ತು ಅವಳ ಸಹೋದರ ಸಂತೋಷಕುಮಾರ ಗುಡ್ಡಾಪುರಮಠ ಮೊದಲ ಎರಡು ಆರೋಪಿಗಳು. ಇವರೆಲ್ಲ ಸೇರಿ ಓಂಕಾರಗೌಡ ಅವರ ಕುಟುಂಬದವರಿಗೆ ಸೇರಿದ ಬಂಗಾರದ ಆಭರಣಗಳನ್ನು ಜೀವಭಯ ಹುಟ್ಟಿಸಿ ಕಿತ್ತುಕೊಂಡಿದ್ದಾರೆ ಎಂದು ದೂರಲ್ಲಿ ದಾಖಲಾಗಿದೆ.

ಧಾರವಾಡದಲ್ಲಿ ಜೂಜಾಡುತ್ತಿದ್ದ ಬಿಜೆಪಿ, ಕಾಂಗ್ರೆಸ್‌ ನಾಯಕರು ಅರೆಸ್ಟ್‌

ಲಂಡನ್‌ನಲ್ಲಿದ್ದ ಓಂಕಾರಗೌಡ ಪುತ್ರ ಗದಿಗೆಪ್ಪಗೌಡ ಕೆಲವು ತಿಂಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದರು. ಬಳಿಕ ಅವರ ಪತ್ನಿ (ಓಂಕಾರಗೌಡ ಸೊಸೆ) ಶಿವಲೀಲಾ ನವನಗರಕ್ಕೆ ಬಂದು ಪತಿಗೆ ಸಂಬಂಧಿಸಿದ ಬ್ಯಾಂಕ್‌ ಲಾಕರ್‌ನಲ್ಲಿ ಇಟ್ಟಿರುವ ಬಂಗಾರದ ಆಭರಣಗಳನ್ನು ಬಿಡಿಸಿಕೊಂಡು ಹೋಗಿದ್ದಾರೆ. ಆದರೆ ಚಿನ್ನಾಭರಣ ತಮಗೆ ಸೇರಬೇಕು. ತನಿಖೆ ಸರಿಯಾಗಿ ನಡೆದಿಲ್ಲ. ನನಗೆ ಧಮಕಿ ಹಾಕಿದ್ದಾರೆ, ಜೀವ ಬೆದರಿಕೆ ಹಾಕಿದ್ದಾರೆ ಎಂಬುದು ಓಂಕಾರ ಗೌಡ ದೂರು. ಈ ಕುರಿತು ಅವರು 3ನೇ ಜೆಎಂಎಫ್‌ಸಿ ನ್ಯಾಯಾಲಯದ ಮೊರೆ ಹೋದ ಬಳಿಕ ಕೋರ್ಟ್‌ ಸೂಚನೆ ಮೇರೆಗೆ ನ. 13ರಂದು ನವನಗರ ಪಿಎಸ್‌ಐ ಎಸ್‌.ಎಸ್‌. ಜಕ್ಕನಗೌಡರ ದೂರು ದಾಖಲಿಸಿಕೊಂಡಿದ್ದಾರೆ.

ಪೊಲೀಸ್‌ ಇನ್ಸಪೆಕ್ಟರ್‌ ಪ್ರಭು ಸೂರಿನ್‌ ಪ್ರತಿಕ್ರಿಯಿಸಿ, ಬ್ಯಾಂಕ್‌ ಲಾಕರ್‌ನಲ್ಲಿ ಸೀಲ್‌ ಆಗಿದ್ದ ಚಿನ್ನಾಭರಣವನ್ನು ಓಂಕಾರಗೌಡ, ಶಿವಲೀಲಾ ಸಮಕ್ಷಮದಲ್ಲಿ ತೆರೆದು ಒಪ್ಪಿಗೆ ಮೇರೆಗೆ ಬಂಗಾರವನ್ನು ಶಿವಲೀಲಾ ಅವರು ಪಡೆದಿದ್ದಾರೆ. ಓಂಕಾರಗೌಡ ಅವರಿಗೆ ಮಾನಸಿಕ ಸಮಸ್ಯೆ ಇದ್ದು, ಅವರ ದೂರಿನಲ್ಲಿ ನನ್ನ ಹೆಸರನ್ನೂ ಸೇರ್ಪಡೆ ಮಾಡಿದ್ದಾರೆ. ಆಭರಣಗಳನ್ನು ಕಿತ್ತುಕೊಂಡಿದ್ದೇನೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ ಎಂದರು. ನ್ಯಾಯಾಲಯ ತನಿಖೆ ನಡೆಸಿ ವರದಿ ನೀಡುವಂತೆ ತಿಳಿಸಿದ್ದು, ಅದರಂತೆ ಕರ್ತವ್ಯ ನಿರ್ವಹಿಸಲಿದ್ದೇವೆ ಎಂದರು.
 

click me!