ರೌಡಿಶೀಟರ್‌ ಹತ್ಯೆಗೆ ಸಂಚು: 11 ಮಂದಿ ಬಂಧನ

By Kannadaprabha NewsFirst Published Apr 9, 2021, 8:47 AM IST
Highlights

ಸಿಸಿಬಿ ಪೊಲೀಸರ ಕಾರ್ಯಾಚರಣೆ| ಪಿಸ್ತೂಲ್‌, ಬುಲೆಟ್‌, ಮಾರಕಾಸ್ತ್ರ ವಶ| ಪಿಎಸ್‌ಐ ಹತ್ಯೆ ಮಾಡಿದ್ದ ಆರೋಪಿ| ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು|

ಬೆಂಗಳೂರು(ಏ.09): ರೌಡಿಯೊಬ್ಬನನ್ನು ಹತ್ಯೆ ಮಾಡಲು ಹೊಂಚು ಹಾಕಿ ಕುಳಿತಿದ್ದ 11 ಮಂದಿಯ ತಂಡವನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕಾಡುಬೀಸನಹಳ್ಳಿಯ ರೋಹಿತ್‌ (29), ಅಮರ್‌ನಾಥ್‌ (27), ಮುನಿರಾಜು (27), ವಿಘ್ನೇಶ್‌ (25), ಕಾಂತರಾಜು (30), ಹರೀಶ್‌ (30), ಹರೀಶ್‌ (26), ಪ್ರಶಾಂತ್‌ಕುಮಾರ್‌ (29), ಜಮೀರ್‌ (28), ಚಂದನ್‌ (29), ಗಂಗರಾಜು (26), ಮಂಜುನಾಥ್‌ (24) ಬಂಧಿತರು. ಆರೋಪಿಗಳಿಂದ ಒಂದು ಪಿಸ್ತೂಲ್‌, ಮೂರು ಜೀವಂತ ಗುಂಡು, ಮಾರಕಾಸ್ತ್ರ, ಫಾರ್ಚೂನರ್‌ ಕಾರನ್ನು ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಆರೋಪಿ ರೋಹಿತ್‌ ವೈಟ್‌ಫೀಲ್ಡ್‌ ಠಾಣಾ ವ್ಯಾಪ್ತಿಯ ರೌಡಿಶೀಟರ್‌ ಆಗಿದ್ದು, ಈತನ ಮೇಲೆ ಎರಡು ಕೊಲೆ, ದರೋಡೆ ಪ್ರಕರಣಗಳಿವೆ. ರೋಹಿತ್‌ ಹಾಗೂ ಕಾಡುಬೀಸನಹಳ್ಳಿಯ ಸೋಮ ಎಂಬುವರ ತಂಡದ ನಡುವೆ ಕಳೆದ ಹಲವು ವರ್ಷಗಳಿಂದ ದ್ವೇಷ ಇದೆ. ಹನ್ನೆರಡು ವರ್ಷಗಳ ಹಿಂದೆ ರೋಹಿತ್‌ನ ಅಣ್ಣ ದಿನೇಶ್‌ನನ್ನು ಸೋಮನ ಕಡೆಯವರು ಹತ್ಯೆ ಮಾಡಿದ್ದರು. ಬಳಿಕ ವಿರೋಧಿ ತಂಡ ಸೋಮನ ಸಹೋದರನನ್ನು ಎರಡು ವರ್ಷಗಳ ಹಿಂದೆ ಹತ್ಯೆ ಮಾಡಿತ್ತು. ಎರಡು ಗ್ಯಾಂಗ್‌ನ ನಡುವೆ ಹೀಗೆ ದ್ವೇಷ ಮುಂದುವರೆದಿತ್ತು.

ಫೇಸ್‌ಬುಕ್‌ನಲ್ಲಿ ಫೋಟೋ ಹಾಕಿ ಬಾಲಕಿಯರಿಗೆ ಗಾಳ..!

ಸೋಮ ಹಾಗೂ ಆತನ ತಂಡ ರೋಹಿತ್‌ನನ್ನು ಹತ್ಯೆ ಮಾಡಲು ಸಂಚು ರೂಪಿಸುತ್ತಲೇ ಇತ್ತು. ಇದಕ್ಕೆ ಪ್ರತಿಯಾಗಿ ಸೋಮನನ್ನು ಹತ್ಯೆ ಮಾಡಿ, ಆತನ ಬಳಿ ಇರುವ ಚಿನ್ನಾಭರಣವನ್ನು ಕಳವು ಮಾಡಲು ರೋಹಿತ್‌ ಮುಂದಾಗಿದ್ದ.
ಏ.4ರಂದು ರೋಹಿತ್‌ ಹಾಗೂ ಆತನ ಸಹಚರರು ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಬಾಲಗುಂಟೆ ಠಾಣಾ ವ್ಯಾಪ್ತಿಯ ಮುನ್ನೇಶ್ವರ ದೇವಸ್ಥಾನ ಸಮೀಪದ ರಸ್ತೆಯಲ್ಲಿ ಹೋಗುವ ರೋಹಿತ್‌ನನ್ನು ಹತ್ಯೆ ಮಾಡಲು ಕಾದು ಕುಳಿತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಿಎಸ್‌ಐ ಹತ್ಯೆ ಮಾಡಿದ್ದ ಆರೋಪಿ

ಮಹದೇವಪುರ ಠಾಣೆ ರೌಡಿಪಟ್ಟಿಯಲ್ಲಿ ಅಮರ್‌ನಾಥ್‌ ಹೆಸರಿದೆ. ಅಮರ್‌ನಾಥ್‌ ತನ್ನ ಸಹಚರನೊಬ್ಬನ ಜತೆ ತಮಿಳುನಾಡಿನ ಹೊಸೂರಿನಲ್ಲಿ ಸರಕಳ್ಳತನ ಮಾಡಿದ್ದ. ಹೊಸೂರು ಠಾಣೆ ಪಿಎಸ್‌ಐ ಬಂಧಿಸಲು ಮುಂದಾದ ವೇಳೆ ಅಮರ್‌ನಾಥ್‌ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಸಬ್‌ ಇನ್ಸ್‌ಪೆಕ್ಟರ್‌ ಮೃತಪಟ್ಟಿದ್ದರು. ಉಳಿದ ಆರೋಪಿಗಳೆಲ್ಲರೂ ಅಪರಾಧ ಹಿನ್ನೆಲೆಯುಳ್ಳವರು ಎಂದು ಸಿಸಿಬಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
 

click me!