ಇಂಗ್ಲೆಂಡ್ ವಿರುದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಘಾತಕಾರಿ ಸೋಲು ಕಂಡಿರುವ ಟೀಂ ಇಂಡಿಯಾ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಈ 5 ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕಾದ ಒತ್ತಡಕ್ಕೆ ಸಿಲುಕಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಚೆನ್ನೈ(ಫೆ.11): ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಹೀನಾಯ ಸೋಲು ಅನುಭವಿಸಿದ ಭಾರತ ತಂಡ 2ನೇ ಟೆಸ್ಟ್‌ಗೂ ಮುನ್ನ 5 ಪ್ರಮುಖ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿಸಬೇಕಿದ್ದರೆ ಭಾರತ, ಸರಣಿಯಲ್ಲಿ ಬಾಕಿ ಇರುವ 3 ಟೆಸ್ಟ್‌ಗಳಲ್ಲಿ ಕನಿಷ್ಠ 2ರಲ್ಲಿ ಗೆಲ್ಲಲೇಬೇಕಿದೆ ಮತ್ತು ಒಂದರಲ್ಲೂ ಸೋಲುವಂತಿಲ್ಲ. ಹೀಗಾಗಿ, ಮುಂದಿನ ಮೂರೂ ಪಂದ್ಯಗಳು ಟೀಂ ಇಂಡಿಯಾಗೆ ಮಹತ್ವದ್ದೇ ಆಗಿವೆ. ಕೊಹ್ಲಿ ಪಡೆಗೆ ಎದುರಾಗಿರುವ ಸಮಸ್ಯೆಗಳು ಯಾವ್ಯಾವ ಎನ್ನುವುದನ್ನು ಈ ಕೆಳಗೆ ವಿವರಿಸಲಾಗಿದೆ.
1. ಪಿಚ್ ಹೇಗೇ ಇದ್ದರೂ ಕಷ್ಟ!
undefined
ಮೊದಲ ಟೆಸ್ಟ್‌ಗೆ ಚೆಪಾಕ್ ಕ್ರೀಡಾಂಗಣದ ಕ್ಯುರೇಟರ್ ಸಿದ್ಧಪಡಿಸಿದ್ದ ಪಿಚ್ ಮೊದಲೆರಡು ದಿನ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ನೆರವು ನೀಡಿತು. ಕೊನೆ ದಿನ ಸ್ಪಿನ್ನರ್‌ಗಳು ಸಹಕಾರ ಪಡೆದರು. ಟಾಸ್ ಗೆದ್ದಿದ್ದು ಇಂಗ್ಲೆಂಡ್‌ಗೆ ದೊಡ್ಡ ಮಟ್ಟದಲ್ಲಿ ಲಾಭವಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ 578 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ತವರಿನಲ್ಲಿ ಕೊಹ್ಲಿ ಟಾಸ್ ಗೆದ್ದಾಗ ಭಾರತ ಟೆಸ್ಟ್ ಸೋತಿಲ್ಲ. 15 ಪಂದ್ಯಗಳಲ್ಲಿ 13ರಲ್ಲಿ ಗೆದ್ದರೆ 2 ಪಂದ್ಯಗಳು ಡ್ರಾ ಆಗಿವೆ. ಭಾರತ 2ನೇ ಟೆಸ್ಟ್‌ನಲ್ಲಿ ಟಾಸ್ ಗೆಲ್ಲುವುದು ಬಹಳ ಮುಖ್ಯ. ಏಕೆಂದರೆ ಭಾರತಕ್ಕೆ ಅನುಕೂಲವಾಗುವಂತಹ ಪಿಚ್ ಸಿದ್ಧಪಡಿಸಿದರೆ ಅದು ಇಂಗ್ಲೆಂಡ್‌ಗೂ ನೆರವಾಗಲಿದೆ.
ಕೊಹ್ಲಿ ಕೆಳಗಿಳಿಸಿ, ರಹಾನೆಗೆ ನಾಯಕತ್ವ ಪಟ್ಟ ಕಟ್ಟಿ; ನೆಟ್ಟಿಗರ ಆಗ್ರಹ
ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿ ಭಾರತ ಟಾಸ್ ಸೋತರೆ ಇಂಗ್ಲೆಂಡ್ ಮತ್ತೆ ದೊಡ್ಡ ಮೊತ್ತ ಕಲೆಹಾಕಲಿದೆ. ಮೊದಲ ದಿನದಿಂದಲೇ ಚೆಂಡು ಸ್ಪಿನ್ ಆಗುವ ಪಿಚ್ ಸಿದ್ಧಪಡಿಸಿದರೆ ಜ್ಯಾಕ್ ಲೀಚ್, ಡಾಮ್ ಬೆಸ್ ಕಾಡಲಿದ್ದಾರೆ. ಪಿಚ್‌ನಲ್ಲಿ ಹೆಚ್ಚು ಹುಲ್ಲು ಬಿಟ್ಟರೆ ಆ್ಯಂಡರ್‌ಸನ್, ಬ್ರಾಡ್, ಆರ್ಚರ್‌ರಂತಹ ವಿಶ್ವ ಶ್ರೇಷ್ಠ ವೇಗಿಗಳು ಭಾರತವನ್ನು 150ರೊಳಗೆ ಆಲೌಟ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಮೊದಲ ಪಂದ್ಯಕ್ಕಿದ್ದ ರೀತಿಯಲ್ಲೇ 2ನೇ ಟೆಸ್ಟ್‌ಗೂ ಪಿಚ್ ಸಿದ್ಧಪಡಿಸಿದರೆ ಟಾಸ್ ಗೆದ್ದವರು ಪಂದ್ಯ ಗೆಲ್ಲುವುದು ಬಹುತೇಕ ಖಚಿತವಾಗಲಿದೆ.
2. ಅಜಿಂಕ್ಯ ರಹಾನೆಗೆ ಲಯದ ಸಮಸ್ಯೆ
ಉಪನಾಯಕ ಅಜಿಂಕ್ಯ ರಹಾನೆ ಆಸ್ಪ್ರೇಲಿಯಾ ವಿರುದ್ಧ ಮೆಲ್ಬರ್ನ್ ಟೆಸ್ಟ್‌ನಲ್ಲಿ ಶತಕ ಬಾರಿಸಿ ಭಾರತ ಗೆಲ್ಲುವಲ್ಲಿ ನೆರವಾಗಿದ್ದರು. ಆ ಬಳಿಕ ತಂಡವನ್ನು ಐತಿಹಾಸಿಕ ಸರಣಿ ಗೆಲುವಿನತ್ತ ಮುನ್ನಡೆಸಿದರು. ಆದರೆ ಮೆಲ್ಬರ್ನ್ ಶತಕವನ್ನು ಹೊರತುಪಡಿಸಿ 2020ರಿಂದ ಈ ವರೆಗೂ ರಹಾನೆ 13 ಇನ್ನಿಂಗ್ಸ್‌ಗಳಲ್ಲಿ ಕೇವಲ 20.67ರ ಸರಾಸರಿಯಲ್ಲಿ 248 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 46. 5+1+5 ಸಂಯೋಜನೆ (5 ಬ್ಯಾಟ್ಸ್‌ಮನ್, 1 ಕೀಪರ್, 5 ಬೌಲರ್)ಯೊಂದಿಗೆ ಆಡುವಾಗ 5ನೇ ಕ್ರಮಾಂಕದ ಬ್ಯಾಟ್ಸ್‌ಮನ್‌ನಿಂದ ತಂಡ ಸಹಜವಾಗಿಯೇ ಸ್ಥಿರ ಪ್ರದರ್ಶನ ನಿರೀಕ್ಷಿಸಲಿದೆ.
3. ಜಡೇಜಾ ಸ್ಥಾನ ತುಂಬದ ನದೀಂ
ತವರಿನಲ್ಲಿ ಭಾರತ ಸತತ 12 ಟೆಸ್ಟ್ ಗೆಲ್ಲುವಲ್ಲಿ ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಕೊಡುಗೆ ಅಪಾರವಾದದ್ದು. ತವರಿನಲ್ಲಿ ಜಡೇಜಾರ ಎಕಾನಮಿ ರೇಟ್ ಅಸಾಧಾರಣ 2.24ರಷ್ಟಿದೆ. ಚೆನ್ನೈ ಪಿಚ್‌ನಲ್ಲಿ ಜಡೇಜಾ ಅತ್ಯಂತ ಪರಿಣಾಮಕಾರಿಯಾಗುತ್ತಿದ್ದರು ಎನ್ನುವುದು ತಜ್ಞರ ಅಭಿಪ್ರಾಯ. ಅವರ ಬದಲಿಗೆ ಕಣಕ್ಕಿಳಿದ ಶಾಬಾಜ್ ನದೀಂ ಪರಿಣಾಮಕಾರಿ ದಾಳಿ ನಡೆಸಲಿಲ್ಲ. ಮೊದಲ ಇನ್ನಿಂಗ್ಸಲ್ಲಿ 44 ಓವರ್ ಬೌಲ್ ಮಾಡಿ 167 ರನ್ ಬಿಟ್ಟುಕೊಟ್ಟರು. ಜಡೇಜಾ ಸ್ಥಾನ ತುಂಬಲು ನದೀಂ ಕೈಯಲ್ಲಿ ಸಾಧ್ಯವಾಗುತ್ತಿಲ್ಲ.
4. ಐದನೇ ಬೌಲರ್ ಕೊರತೆ
ಮೊದಲ ಟೆಸ್ಟ್‌ನಲ್ಲಿ 5ನೇ ಬೌಲರ್ ಆಗಿ ಆಡಿದ ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದರು. ಆದರೆ ಅವರ ಬೌಲಿಂಗ್ ಪ್ರದರ್ಶನ ಕಳಪೆಯಾಗಿತ್ತು. ಪಂದ್ಯದ ಮೊದಲ ದಿನವೇ 12 ಓವರಲ್ಲಿ 4.58ರ ಎಕಾನಮಿ ರೇಟ್‌ನಲ್ಲಿ 55 ರನ್ ಚಚ್ಚಿಸಿಕೊಂಡರು. ವಾಷಿಂಗ್ಟನ್ ಮೇಲೆ ವಿಶ್ವಾಸ ಕಳೆದುಕೊಂಡ ನಾಯಕ ಕೊಹ್ಲಿ, 2ನೇ ಇನ್ನಿಂಗ್ಸ್‌ನಲ್ಲಿ ಕೇವಲ 1 ಓವರ್ ನೀಡಿದರು. 2ನೇ ಟೆಸ್ಟ್‌ಗೂ ಮುನ್ನ 5ನೇ ಬೌಲರ್ ಸಮಸ್ಯೆಗೆ ಭಾರತ ಪರಿಹಾರ ಕಂಡುಕೊಳ್ಳಬೇಕಿದೆ.
5. ತಂಡದ ಸಂಯೋಜನೆ ಬಗ್ಗೆ ಗೊಂದಲ
ಭಾರತ ಕಳೆದ ಕೆಲ ವರ್ಷಗಳಿಂದ ಐವರು ಬೌಲರ್‌ಗಳ ಸೂತ್ರವನ್ನು ಅಳವಡಿಸಿಕೊಂಡಿದೆ. ಈ ಸೂತ್ರ ತಂಡಕ್ಕೆ ಯಶಸ್ಸು ದೊರಕಿಸಿಕೊಟ್ಟಿದೆ. ಆದರೆ ಜಡೇಜಾ ಅನುಪಸ್ಥಿತಿ ತಂಡವನ್ನು ಬಲವಾಗಿ ಕಾಡುತ್ತಿದೆ. 2ನೇ ಟೆಸ್ಟ್‌ನಲ್ಲಿ ಭಾರತ 6 ಬ್ಯಾಟ್ಸ್‌ಮನ್, ಒಬ್ಬ ಕೀಪರ್(ಪಂತ್) ಹಾಗೂ ನಾಲ್ವರು ಬೌಲರ್‌ಗಳೊಂದಿಗೆ ಆಡಬಹುದು. ನದೀಂ ಬದಲಿಗೆ ಕುಲ್ದೀಪ್ ಯಾದವ್ ಆಡುವ ಸಾಧ್ಯತೆ ಹೆಚ್ಚು. ಮಯಾಂಕ್ ಇಲ್ಲವೇ ರಾಹುಲ್‌ರನ್ನು ಕಣಕ್ಕಿಳಿಸಿ ಬ್ಯಾಟಿಂಗ್ ಬಲಪಡಿಸುವ ಜೊತೆಗೆ ವಾಷಿಂಗ್ಟನ್ ಬದಲಿಗೆ ಮೊಹಮ್ಮದ್ ಸಿರಾಜ್‌ಗೆ ಅವಕಾಶ ಕೊಟ್ಟರೂ ಅಚ್ಚರಿಯಿಲ್ಲ.