ಅಗ್ನಿವೀರರಾಗಲೂ ಹಿಂದಿ, ಇಂಗ್ಲಿಷ್‌ನಲ್ಲೇ ಪರೀಕ್ಷೆ: ಕನ್ನಡಕ್ಕಿಲ್ಲ ಅವಕಾಶ..!

Published : Nov 06, 2022, 10:00 AM IST
ಅಗ್ನಿವೀರರಾಗಲೂ ಹಿಂದಿ, ಇಂಗ್ಲಿಷ್‌ನಲ್ಲೇ ಪರೀಕ್ಷೆ: ಕನ್ನಡಕ್ಕಿಲ್ಲ ಅವಕಾಶ..!

ಸಾರಾಂಶ

ಸೇನಾಪಡೆಯ ಕೆಳಹಂತದ ಹುದ್ದೆಗೂ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆಯಿಲ್ಲ, ದೇಶ ಕಾಯಬೇಕು ಅಂದರೆ ಹಿಂದಿ ಅಥವಾ ಇಂಗ್ಲಿಷ್‌ ಬರಲೇಬೇಕೆ?

ರಾಕೇಶ್‌ ಎನ್‌.ಎಸ್‌.

ಬೆಂಗಳೂರು(ನ.06):  ದೇಶ ರಕ್ಷಣೆಯ ಕೈಂಕರ್ಯದಲ್ಲಿ ತೊಡಗಿರುವ ಭೂಸೇನೆ, ವಾಯುಪಡೆ ಮತ್ತು ನೌಕಪಡೆಯಲ್ಲಿ ಲಕ್ಷಾಂತರ ಉದ್ಯೋಗಗಳಿದ್ದರೂ ಅಲ್ಲಿನ ಎಲ್ಲ ಪರೀಕ್ಷೆಗಳು ಇಂಗ್ಲಿಷ್‌ ಅಥವಾ ಹಿಂದಿಯಲ್ಲೇ ನಡೆಯುತ್ತವೆ. ಇದರಿಂದ ದೇಶವನ್ನು ಕಾಪಾಡುವ ಅದಮ್ಯ ಆಸೆ ಹೊತ್ತಿರುವ ಕನ್ನಡಿಗರಿಗೆ ಭಾಷಾ ತೊಡಕು ಅವಕಾಶವನ್ನು ನಿರಾಕರಿಸುತ್ತಿದೆ. ಇದೀಗ ‘ಅಗ್ನಿವೀರ’ರಾಗಲು ಕೂಡ ಅಂಗ್ಲ, ಹಿಂದಿಯಲ್ಲಿ ಇರುವ ಪ್ರಶ್ನೆಪತ್ರಿಕೆಗಳು ಕನ್ನಡಿಗರ ಸೇನೆ ಸೇರ್ಪಡೆಗೆ ಅಡ್ಡಿಯಾಗಿವೆ.

ಭಾರತೀಯ ಸೈನ್ಯದ ಮೂರು ಪಡೆಗಳ ಉನ್ನತ ಅಧಿಕಾರಿಯ ಸ್ಥಾನಗಳಿಗೆ ಏರಬೇಕಾದರೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಮತ್ತು ಇಂಡಿಯನ್‌ ಮಿಲಿಟರಿ ಅಕಾಡೆಮಿ (ಐಎಂಎ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೇಕು. ಎನ್‌ಡಿಎಯ ಪ್ರವೇಶ ಪರೀಕ್ಷೆ ಪದವಿ ಪೂರ್ವ ಅಥವಾ ತತ್ಸಮಾನ ವಿದ್ಯಾರ್ಹತೆಯ ಆಧಾರದಲ್ಲಿ ನಡೆದರೆ ಐಎಂಎಗೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರಬೇಕು.
ಇದು ಎರಡರ ಜೊತೆಗೆ ‘ಶಾರ್ಚ್‌ ಸರ್ವಿಸ್‌ ಕಮೀಷನ್‌’ ಮೂಲಕವು ಸೈನ್ಯ ಪ್ರವೇಶಿಸಬಹುದು. ಯಾವುದೇ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯ ಆಧಾರದಲ್ಲಿ ಸೈನ್ಯ ಪ್ರವೇಶಿಸಿ ಗರಿಷ್ಠ 14 ವರ್ಷ ಸೇವೆ ಸಲ್ಲಿಸಬಹುದು. ಕಾಯಂ ನೇಮಕಾತಿ ಬಯಸಿದರೆ ಅದಕ್ಕೂ ಅವಕಾಶ ಇದೆ. ಆದರೆ ಭಾರತದ ಸೇನೆಯಲ್ಲಿ ಸೇನಾಧಿಕಾರಿಗಳಾಗಲು ಇರುವ ಎಲ್ಲ ಅರ್ಹತಾ ಪರೀಕ್ಷೆಗಳು ಅಂಗ್ಲ ಅಥವಾ ಹಿಂದಿ ಭಾಷೆಯಲ್ಲೇ ನಡೆಯುತ್ತವೆ. ದೇಶದ ಸಂವಿಧಾನದ 8ನೇ ಪರಿಚ್ಛೇದದಲ್ಲಿರುವ ಹಿಂದಿ ಹೊರತು ಪಡಿಸಿ ಉಳಿದ 21 ಭಾಷೆಗಳ ಸೇನಾ ಉದ್ಯೋಗಾಂಕ್ಷಿಗಳಿಗೆ ತಮ್ಮ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಬರೆದು ಸೇನಾಧಿಕಾರಿಗಳಾಗಲು ಸಾಧ್ಯವಿಲ್ಲ.

ರೈಲ್ವೆ ಕೆಳಹಂತದ ಹುದ್ದೆ ಪರೀಕ್ಷೆಗಳಲ್ಲಿ ಮಾತ್ರ ಕನ್ನಡ..!

ಮದ್ರಾಸ್‌ ರೆಜಿಮೆಂಟ್‌ನಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷಿಕರೇ ಹೆಚ್ಚಿದ್ದರೂ, ಈ ರೆಜಿಮೆಂಟ್‌ನ ಯುದ್ಧ ಘೋಷಣೆ ತಮಿಳಿಲ್ಲಿದ್ದರೂ ಸಹ ಸಂವಹನ ಚಟುವಟಿಕೆಗಳೆಲ್ಲವೂ ಹಿಂದಿಯಲ್ಲೇ ನಡೆಯುತ್ತವೆ ಎಂದು ಈ ರೆಜಿಮೆಂಟ್‌ನಲ್ಲಿದ್ದು ನಿವೃತ್ತರಾಗಿರುವ ಸೇನಾಧಿಕಾರಿಯೊಬ್ಬರು ಹೇಳುತ್ತಾರೆ.

‘ಅಗ್ನಿಪಥ’ದಲ್ಲಿ ಕನ್ನಡಕ್ಕಿಲ್ಲ ಅವಕಾಶ:

ಸೈನ್ಯದಲ್ಲಿ ಕೆಳ ಹಂತದಲ್ಲಿನ ಸೈನಿಕರು, ತಾಂತ್ರಿಕ, ತಾಂತ್ರಿಕೇತರ ನೇಮಕಾತಿ ನಡೆಸಲು ‘ಅಗ್ನಿಪಥ’ ಯೋಜನೆಯನ್ನು ಜಾರಿಗೆ ತರುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದಾಗ ಪ್ರಾದೇಶಿಕ ಭಾಷೆಗಳಲ್ಲಿಯೂ ಪರೀಕ್ಷೆ ಬರೆಯುವ ಅವಕಾಶ ಸಿಗಬಹುದು. ಗ್ರಾಮೀಣ ಭಾಗದ ಅಭ್ಯರ್ಥಿಗಳು ತಮ್ಮ ತಮ್ಮ ಭಾಷೆಗಳಲ್ಲಿ ಪರೀಕ್ಷೆ ಬರೆದು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯ ಸೇರ್ಪಡೆ ಆಗಬಹುದು ಎಂಬ ನಿರೀಕ್ಷೆ ಹುಟ್ಟಿತ್ತು. ಆದರೆ ಇತ್ತೀಚೆಗೆ ನಡೆದ ಅಗ್ನಿಪಥ ಪರೀಕ್ಷೆಗಳು ಹಿಂದಿ ಮತ್ತು ಇಂಗ್ಲಿಷ್‌ನಲ್ಲೆ ನಡೆದಿವೆ.

ಹತ್ತು ಅಥವಾ ಪದವಿ ಪೂರ್ವ ವಿದ್ಯಾರ್ಹತೆಯ ಮಾನದಂಡದಲ್ಲಿ ಅಗ್ನಿಪಥ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಕನ್ನಡ ಸೇರಿದಂತೆ ಭಾಷಾ ಮಾಧ್ಯಮದಲ್ಲಿ ಅಧ್ಯಯನ ನಡೆಸಿರುವ ಅಭ್ಯರ್ಥಿಗಳಿಗೆ ಹಿಂದಿ ಅಥವಾ ಇಂಗ್ಲೀಷ್‌ನ ಹಿಡಿತ ಇರುವುದಿಲ್ಲ. ಇದರಿಂದಾಗಿ ದೈಹಿಕ ಪರೀಕ್ಷೆಯಲ್ಲಿ ಉತ್ತಿರ್ಣರಾದರೂ ಲಿಖಿತ ಪರೀಕ್ಷೆಯಲ್ಲಿ ಅನುತ್ತಿರ್ಣಗೊಳ್ಳುವ ಸಾಧ್ಯತೆಯಿದೆ.

ಅಗ್ನಿಪಥದಲ್ಲಿ ಬಹು ಆಯ್ಕೆಯ ಮಾದರಿಯಲ್ಲೇ ಪರೀಕ್ಷೆ ನಡೆಯುವುದರಿಂದ ಅಭ್ಯರ್ಥಿಗಳಿಗೆ ಸಮಸ್ಯೆ ಆಗಲಾರದು ಎಂಬುದು ಸೈನ್ಯದ ನಿಲುವು. ಆದರೆ ಬಹು ಆಯ್ಕೆಯ ಪ್ರಶ್ನೆ ಪತ್ರಿಕೆಯನ್ನು ಭಾಷಾಂತರಿಸಿ ಆಯಾ ಪ್ರಾದೇಶಿಕ ಭಾಷೆಯಲ್ಲೇ ನೀಡಬಹುದಲ್ಲವೇ ಎಂಬುದು ಕನ್ನಡಪರ ಹೋರಾಟಗಾರರ ಅಭಿಪ್ರಾಯ.

ರಕ್ಷಣಾ ಇಲಾಖೆಯ ಪ್ರಕಾರ ಸೇನೆಯ ಎಲ್ಲ ನೇಮಕಾತಿಗಳು ಇಂಗ್ಲೀಷ್‌ ಅಥವಾ ಹಿಂದಿ ಭಾಷೆಯಲ್ಲೇ ನಡೆಯುತ್ತದೆ. ಸೈನ್ಯ ಸೇರಿದ ಮೇಲೆ ವಿವಿಧ ಪರಿಸ್ಥಿತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಆ ಸಂದರ್ಭದಲ್ಲಿ ಸ್ಪಷ್ಟಸಂವಹನ ಅಗತ್ಯ. ನಮ್ಮಲ್ಲಿ ಹಿರಿಯ ಅಧಿಕಾರಿಗಳು ಇಂಗ್ಲಿಷ್‌ನಲ್ಲಿ ಮಾತನಾಡುತ್ತಾರೆ. ಸೈನಿಕರ ಜೊತೆ ಹಿಂದಿಯಲ್ಲೇ ಸಂವಹನ ನಡೆಸುತ್ತಾರೆ. ಹಾಗೆಯೇ ಬ್ಯಾಂಕಿಂಗ್‌, ರೈಲ್ವೇ ರೀತಿ ನಮ್ಮದು ಜನರೊಂದಿಗೆ ನೇರ ಸಂಪರ್ಕ ಹೊಂದಿರುವ ಸಂಸ್ಥೆಯಲ್ಲ. ಆದ್ದರಿಂದ ನಾವು ಇಂಗ್ಲಿಷ್‌ ಅಥವಾ ಹಿಂದಿಯಲ್ಲಿ ಸಂವಹನ ನಡೆಸಿದರೆ ಜನಸಾಮಾನ್ಯರಿಗೆ ತೊಂದರೆ ಆಗುವುದಿಲ್ಲ ಎಂದು ಹೇಳುತ್ತಾರೆ.

ಹಿಂದಿ, ಇಂಗ್ಲಿಷಲ್ಲಿ ಮಾತ್ರ ಎಸ್‌ಎಸ್‌ಸಿ: ಕನ್ನಡಿಗರ ವಿರೋಧ

ನಿವೃತ್ತ ಸೈನಿಕರಿಗೂ ಕೆಲಸ ಸಿಗುತ್ತಿಲ್ಲ!

ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಗೊಂಡ ಸೈನಿಕರಿಗೆ ಸೂಕ್ತ ಉದ್ಯೋಗವಕಾಶ ಒದಗಿಸಲು ‘ಆರ್ಮಿ ವೆಲ್ಪೆರ್‌ ಅಸೋಸಿಯೇಷನ್‌’ ಇರುತ್ತದೆ. ಬೆಂಗಳೂರಿನಲ್ಲಿ ಕಬ್ಬನ್‌ ರೋಡ್‌ನಲ್ಲಿ ಈ ಸಂಸ್ಥೆಯಿದ್ದು ಸೈನಿಕರು ನಿವೃತ್ತಗೊಂಡ ಬಳಿಕ ಸೂಕ್ತ ಉದ್ಯೋಗವಕಾಶಕ್ಕಾಗಿ ಇಲ್ಲಿ ನೋಂದಾಯಿಸುತ್ತಾರೆ. ಆದರೆ ಇಲ್ಲಿನ ಅನ್ಯ ಭಾಷಿಕ ಅಧಿಕಾರಿಗಳು ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ನಿವೃತ್ತ ಕನ್ನಡಿಗ ಸೈನಿಕರು ಅಳಲು ವ್ಯಕ್ತಪಡಿಸುತ್ತಾರೆ. ಉತ್ತಮ ಐಟಿಬಿಟಿ ಸಂಸ್ಥೆಗಳು ಸೇರಿದಂತೆ, ನವರತ್ನ ಸಂಸ್ಥೆಗಳಲ್ಲಿ ಲಭ್ಯ ಇರುವ ಭದ್ರತಾ ಅಧಿಕಾರಿ ಹುದ್ದೆ ಕನ್ನಡಿಗರಿಗೆ ಸಿಗುವುದೇ ಇಲ್ಲ. ಪ್ರತಿ ವರ್ಷ ಸುಮಾರು 500 ಹುದ್ದೆಗಳು ಲಭ್ಯವಾದರೆ ಅದರಲ್ಲಿ ಶೇ. 70ರಷ್ಟು ಅನ್ಯಭಾಷಿಕರ ಕೈ ಸೇರುತ್ತಿದೆ ಎಂದು ಕನ್ನಡಿಗ ಸೈನಿಕರು ನೋವು ವ್ಯಕ್ತಪಡಿಸುತ್ತಾರೆ.

ಕೋಚಿಂಗ್‌ ಸೆಂಟರ್‌ಗಳಲ್ಲಿ ಹಿಂದಿ, ಇಂಗ್ಲಿಷ್‌ ತರಬೇತಿ

ಸೈನ್ಯದ ಎನ್‌ಡಿಎ ಪರೀಕ್ಷೆಗೆ ಕೋಚಿಂಗ್‌ ನೀಡಲು ಹಲವು ಸಂಘ ಸಂಸ್ಥೆಗಳಿವೆ. ಆದರೆ ಈಗ ‘ಅಗ್ನಿಪಥ’ ಅಭ್ಯರ್ಥಿಗಳಿಗೆ ತರಬೇತಿ ನೀಡುವ ಕೋಚಿಂಗ್‌ ಸೆಂಟರ್‌ಗಳು ನಾಯಿ ಕೊಡೆಗಳಂತೆ ತಲೆ ಎತ್ತಲು ಪ್ರಾರಂಭಿಸಿವೆ. ಆನ್‌ಲೈನ್‌ ಕೋಚಿಂಗ್‌ ಸಂಸ್ಥೆಗಳು ಹುಟ್ಟಿಕೊಂಡಿವೆ. ಕೆಲ ಕೋಚಿಂಗ್‌ ಸೆಂಟರ್‌ಗಳಲ್ಲಿ ಕನ್ನಡದ ಅಭ್ಯರ್ಥಿಗಳಿಗೆ ಇಂಗ್ಲಿಷ್‌, ಹಿಂದಿಯಲ್ಲಿ ಪರೀಕ್ಷೆ ಬರೆಯುವ ತರಬೇತಿ ನೀಡಲಾಗುತ್ತಿದೆ. ಸಾವಿರಾರು ರುಪಾಯಿ ತೆತ್ತು ವಿದ್ಯಾರ್ಥಿಗಳು ಕೋಚಿಂಗ್‌ ತರಗತಿಗೆ ಸೇರುತ್ತಿದ್ದಾರೆ.
 

PREV
Read more Articles on
click me!

Recommended Stories

ಭಾರತದ ಹೊಸ 4 ಕಾರ್ಮಿಕ ಸಂಹಿತೆ ಜಾರಿಗೆ, ಕನಿಷ್ಠ ವೇತನ, 1 ವರ್ಷದದಲ್ಲಿ ಗ್ರಾಚ್ಯುಟಿ, 40 ಕೋಟಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ
ಹುಷಾರಿಲ್ಲ ಅಂದ್ರೆ MLA, MP ಕೂಡ ರಜೆ ತೆಗೆದ್ಕೊಳ್ಬೇಕಾ? ಹಿಂಗಿದೆ ರೂಲ್ಸ್