ಬಿರಾದಾರ್ ಅಲಿಯಾಸ್ ವೈಜನಾಥ್ ಬಿರಾದಾರ್... ಈ ಹೆಸರನ್ನು ಪರಿಚಯಿಸುವ ಅಗತ್ಯವಿಲ್ಲ. ಯಾಕೆಂದರೆ ಈ ಹೆಸರಿಗಿಂತ ಹೆಚ್ಚಾಗಿ ಈ ಹೆಸರಿನ ವ್ಯಕ್ತಿ ಇಡೀ ಕರ್ನಾಟಕಕ್ಕೆ ಗೊತ್ತು. ಹಳ್ಳಿಯಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿದ್ದ ಈ ಮನುಷ್ಯ ಮುಂದೊಂದು ದಿನ ಬಾಲಿವುಡ್‌ನ ಬಿಗ್‌ಬಿ ಅಮಿತಾಭ್ ಬಚ್ಚನ್‌ಗೆ ಸ್ಪರ್ಧೆ ನೀಡುತ್ತಾರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದುಕೊಳ್ಳುತ್ತಾರೆಂಬ ಅಂದಾಜು ಸ್ವತಃ ಬಿರಾದಾರ್ ಅವರಿಗೇ ಇರಲ್ಲ! ಭಿಕ್ಷುಕನ ಪಾತ್ರಕ್ಕೂ ಸ್ಟಾರ್‌ಗಿರಿ ತಂದುಕೊಟ್ಟಇವರು ಈಗ 500 ಚಿತ್ರಗಳ ಸರದಾರ.
ಆರ್ ಕೇಶವಮೂರ್ತಿ
ನೀವು 500 ಚಿತ್ರಗಳಲ್ಲಿ ನಟಿಸಿರುವ ನಟ ಗೊತ್ತಾ?
undefined
ಏನೋ ಸರ್. ನಾನು ಮಾಡಿರುವ ಚಿತ್ರಗಳ ಲೆಕ್ಕಕ್ಕಿಂತ ಬದುಕಿನ ಲೆಕ್ಕಾಚಾರಗಳನ್ನೇ ಹಾಕಿಕೊಂಡು ಬಂದವನು. ಒಂದು ಹೊತ್ತಿನ ಊಟಕ್ಕೂ ಪರದಾಡಿದವನು. ಈಗ 500 ಚಿತ್ರಗಳಲ್ಲಿ ನಟಿಸಿದ್ದೇನೆ ಎಂದರೆ ನನಗೇ ಅಚ್ಚರಿ ಆಗುತ್ತದೆ. ಈ ಲೆಕ್ಕವನ್ನು ನೆನಪಿಸಿದ್ದು ಕೂಡ ನಮ್ಮ ಚಿತ್ರೀಕರಣದ ಸೆಟ್‌ನಲ್ಲೇ.
ಎಂದೂ ಹುಟ್ಟುಹಬ್ಬ ಆಚರಿಸದ ಹಿರಿಯ ನಟನಿಂದ ಕೇಕ್ ಕಟ್ ಮಾಡಿಸಿದ ಪ್ರಥಮ್!
ಚಿತ್ರರಂಗಕ್ಕೆ ಬರುವ ಮುನ್ನ ಏನಾಗಿದ್ರಿ ನೀವು?
ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ಬೇಗಂಪುರ್ ಹಳ್ಳಿ ನಮ್ಮದು. ತೀರಾ ಬಡತನ ಕುಟುಂಬದ. ಅಪ್ಪ ಬಸಪ್ಪ ರೈತ. ಅಮ್ಮ ನಾಗಮ್ಮ. ನಾನು ನಮ್ಮ ಊರಿನಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿದ್ದೆ. ಓದಿದ್ದು ಮೂರೂವರೆ ತರಗತಿ ಮಾತ್ರ. ಚಿಕ್ಕ ವಯಸ್ಸಿನಲ್ಲಿ ಅಪ್ಪ ತೀರಿಕೊಂಡರು. ಉಳಿದಂತೆ ದೊಡ್ಡದಾಗಿ ಹೇಳಿಕೊಳ್ಳುವಂತದ್ದೇನು ಇಲ್ಲ.
ನಟ ಆಗಬೇಕು ಅನಿಸಿದ್ದು ಯಾವಾಗ?
ನಮ್ಮ ಕಡೆ ಕೋಲಾಟ, ದೊಡ್ಡಾಟಗಳು ಜೋರಾಗಿರುತ್ತವೆ. ನಾನು ಚಿಕ್ಕಂದಿನಿಂದಲೂ ಇದರಲ್ಲಿ ಹೆಚ್ಚು ಪಾಲ್ಗೊಳ್ಳುತ್ತಿದ್ದೆ. ಜತೆಗೆ ಏಕಪಾತ್ರ ಅಭಿನಯ ಕಲಿತಿದ್ದೆ. ನನ್ನ ಈ ಕಲೆಯ ಮೇಲಿನ ಆಸಕ್ತಿ ನೋಡಿ ರಂಗಭೂಮಿಗೆ ಹೋಗು ಅಂತ ಕೆಲವರು ಹೇಳುತ್ತಿದ್ದರು. ಹಾಗೆ ನನ್ನಲ್ಲಿ ನಟನಾಗುವ ಕನಸು ಹುಟ್ಟಿಕೊಂಡಿತು.
ನಟ ಆಗುತ್ತೇನೆ ಎಂದಾಗ ನಿಮ್ಮೂರಿನವರು ಪ್ರತಿಕ್ರಿಯೆ ಹೇಗಿತ್ತು?
ಓದಿಲ್ಲ. ನೆಟ್ಟಗೆ ಬೆಂಗಳೂರ್ ಭಾಷೆ ಬರಲ್ಲ. ಕೈಯಲ್ಲಿ ಕಾಸಿನಲ್ಲ. ನೋಡಕ್ಕೂ ಚೆನ್ನಾಗಿಲ್ಲ. ಕಪ್ಪುಗಿರೋ ನಿನ್ನ ಯಾರೋ ನಟನನ್ನಾಗಿ ಮಾಡುತ್ತಾರೆ ಅಂತ ಎಲ್ಲರು ನಿರಾಶೆ ಮಾತುಗಳನ್ನು ಹೇಳಿ ಹಂಗಿಸಿದ್ದರು. ಅವರ ಮಾತುಗಳೂ ಕೂಡ ನಿಜ ಅಂದುಕೊಂಡು ನಾನೂ ಕೂಡ ಸುಮ್ಮನಾದೆ.
ಮದ್ರಾಸಿನ ಆ 30 ರೂ., ಜೀವನವನ್ನೇ ಬದಲಾಯಿಸಿದ ಉಪ್ಪಿ-ಬಿರಾದಾರ್ ಒಪ್ಪಂದ!
ಇಲ್ಲಿವರೆಗೂ ನಿಮ್ಮನ್ನು ಕರೆದುಕೊಂಡು ಬಂದಿದ್ದು ಯಾರು?
ಸಿನಿಮಾ ಮ್ಯಾಗಜೀನ್. ವಿಜಯಚಿತ್ರ, ಪ್ರಜಾಮತ ಪತ್ರಿಕೆಗಳನ್ನು ಓದುತ್ತಿದ್ದೆ. ಒಮ್ಮೆ ವಿಜಯಚಿತ್ರ ಪತ್ರಿಕೆಯಲ್ಲಿ ಡಾ ರಾಜ್‌ಕುಮಾರ್ ಅವರ ಕುರಿತು ಒಂದು ಲೇಖನ ಓದಿದೆ. ಅದರಲ್ಲಿ ರಾಜ್‌ಕುಮಾರ್ ಅವರು ಓದಿದ್ದು 4ನೇ ತರಗತಿ ಅಂತ ಮಾತ್ರ ಇತ್ತು. ಅಣ್ಣಾವ್ರು ನಾಲ್ಕನೇ ತರಗತಿ ಓದಿದ್ದರೂ ಇಡೀ ರಾಜ್ಯಕ್ಕೆ ರಾಜಕುಮಾರ ಆಗಿದ್ದಾರೆ ನಾನು ಯಾಕೆ ಪ್ರಯತ್ನಿಸಬಾರದು ಅಂತ ನನ್ನ ತಾಯಿ ಬಳಿ ನಟನಾಗುವ ಆಸೆ ಹೇಳಿಕೊಂಡೆ. ನಿನಗೆ ಏನು ಇಷ್ಟವೂ ಅದು ಮಾಡು ಅಂದ್ರು. ಡಾ ರಾಜ್‌ಕುಮಾರ್ ಅವರ ಲೇಖನ ಕೈಯಲ್ಲಿಡಿದುಕೊಂಡು 1980ರಲ್ಲಿ ಬೆಂಗಳೂರಿಗೆ ಬಂದೆ.
ಇಲ್ಲಿಗೆ ಬಂದ ಆ ದಿನಗಳ ನಿಮ್ಮ ಹೋರಾಟ ಹೇಗಿತ್ತು?
ನಾನು ಯಾವ ಸಿನಿಮಾ ಮ್ಯಾಗಜೀನ್‌ಗಳನ್ನು ಓದುತಿದ್ನೋ ಅದೇ ಪತ್ರಿಕೆಯಲ್ಲಿ ಡಾ ರಾಜ್‌ಕುಮಾರ್, ವಿಷ್ಣುವರ್ಧನ್ ಹಾಗೂ ರಜನಿಕಾಂತ್ ಅವರ ಮನೆಗಳ ವಿಳಾಸ ಇತ್ತು. ಬೆಂಗಳೂರಿಗೆ ಬಂದಾಗ ಮೊದಲು ನಾನು ಹೋಗಿದ್ದು ಹನುಮಂತ ನಗರದಲ್ಲಿದ್ದ ರಜನಿಕಾಂತ್ ಅವರ ಮನೆಗೆ. ನನಗೆ ಮರಾಠಿ ಭಾಷೆ ಬರುತ್ತಿತ್ತು. ಮನೆಗೆ ಹೋದಾಗ ರಜನಿಕಾಂತ್ ಇರಲಿಲ್ಲ. ಅಲ್ಲಿಂದ ಜಯನಗರದಲ್ಲಿರುವ ವಿಷ್ಣುವರ್ಧನ್ ಅವರ ಮನಗೆ ಬಂದೆ. ಅಲ್ಲೂ ವಿಷ್ಣು ಸರ್ ಸಿಗಲಿಲ್ಲ. ಕೊನೆಯ ಪ್ರಯತ್ನವಾಗಿ ಒಂದಿಷ್ಟುಹಣ ಕೂಡಿಸಿಕೊಂಡು ಮದ್ರಾಸ್‌ಗೆ ಹೋಗಿ ಡಾ ರಾಜ್‌ಕುಮಾರ್ ಅವರ ಮನೆ ಮುಂದೆ ನಿಂತುಕೊಂಡೆ. ಅವರು ಶೂಟಿಂಗ್ ಹೋಗಿದ್ದಾರೆ, ಸಂಜೆ ಬರುತ್ತಾರೆ ಅಂದರು. ಸಂಜೆ ವರೆಗೂ ಕಾದು ಕೂತವನಿಗೆ ಅಣ್ಣಾವ್ರು ಕಾರಿನಲ್ಲಿ ಹೋಗುತ್ತಿದ್ದು ಕಂಡು ಅಣ್ಣಾ ಅಂತ ಗೇಟಿನವರೆಗೂ ಕೂಗಿಕೊಂಡು ಹೋದೆ. ನನ್ನ ಕೂಗು ನೋಡಿ ಅವರು ಕಾರಿಳಿದು ಬಂದ ಮನೆ ಒಳಗೆ ಕರೆದು ಮಾತನಾಡಿಸಿದರು. ಆಗ ನಾನು ರಾಜ್ ಅವರನ್ನು ‘ಅಣ್ಣಾ...’ ಅಂತ ಕೂಗಿದ್ದಕ್ಕೋ ಏನೋ ಮುಂದೆ ತೆರೆ ಮೇಲೆ ಅಣ್ಣಾ... ಅಮ್ಮ... ಅಂತ ಕೂಗುವ ಪಾತ್ರಗಳೇ ಹೆಚ್ಚು ಮಿಂಚಿದೆ.
ನೀವು ರಾಜ್‌ಕುಮಾರ್ ಅವರನ್ನು ಭೇಟಿ ಮಾಡಿ ಆಗ ಏನು ಕೇಳಿದ್ರಿ?
ನನಗೆ ಏನಾದರೂ ಕೆಲಸ ಕೊಡಿ. ನಾನು ಕಲಾವಿದ ಆಗಬೇಕು ಅಂದುಕೊಂಡಿದ್ದೇನೆ. ನಿಮ್ಮ ಮನೆಯಲ್ಲಿ ಇದ್ದು ಕೆಲಸ ಮಾಡುತ್ತೇನೆ ಎಂದೆ. ನೀವು ಕಲಾವಿದರು ಆಗಕ್ಕೆ ಬಂದವರು. ಮನೆ ಕೆಲಸ ಮಾಡಬಾರದು. ನನ್ನಿಂದ ಆದಷ್ಟುಸಹಾಯ ಮಾಡುತ್ತೇನೆ ಎಂದು ಹೇಳಿದ್ರು.
ಮೊದಲು ಬಣ್ಣ ಹಚ್ಚಿದ್ದು ಯಾವ ಚಿತ್ರಕ್ಕೆ?
ಎಂಎಸ್ ಸತ್ಯು ಅವರ ‘ಬರ’ ನನ್ನ ಮೊದಲ ಸಿನಿಮಾ. 1972ರಲ್ಲಿ ಬರಗಾಲ ಬಂತಲ್ಲ, ಅದನ್ನು ಆಧರಿಸಿ ಪುಸ್ತಕ ಬರೆದಿದ್ದರು. ಅದೇ ಕತೆಯನ್ನು ಸತ್ಯು ಅವರು ಸಿನಿಮಾ ಮಾಡಿದಾಗ ನನಗೆ ಅಲ್ಲೊಂದು ಪಾತ್ರ ಸಿಕ್ಕಿತು. ಈ ಚಿತ್ರದಿಂದ ನಾನು ಸಿನಿಮಾ ನಟನಾದೆ. ನಾನು ಚಿತ್ರರಂಗಕ್ಕೆ ಬರುವ ಮುನ್ನ ರಂಗಭೂಮಿಯಲ್ಲೂ ತೊಡಗಿಸಿಕೊಂಡಿದ್ದೆ.
ನಿಮ್ಮ ರಂಗಭೂಮಿಯ ದಿನಗಳು ಹೇಗಿದ್ದವು?
ನಮ್ಮ ಕಡೆ ಪ್ರತಿ ವರ್ಷ ಜಾತ್ರೆ ನಡೆಯುತ್ತದೆ. ಅಲ್ಲಿಗೆ ಆಗ ನಾಟಕ ಕಂಪನಿಗಳು ಬರುತ್ತಿದ್ದವು. ಕಾಡಿ ಬೇಡಿ ಆ ನಾಟಕ ಕಂಪನಿಗಳ ಜತೆ ಗುರುತಿಸಿಕೊಂಡೆ. ಅಷ್ಟೊತ್ತಿಗೆ ನಾನು ಏಕಪಾತ್ರ ಅಭಿನಯದಲ್ಲಿ ಸ್ಥಳೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರಿಂದ ನನಗೆ ನಾಟಕ ಕಂಪನಿ ಸೇರಲು ಸುಲಭ ಆಯ್ತು. 10 ಸಾವಿರ ನಾಟಕಗಳಲ್ಲಿ ನಟನೆ, ಒಂದು ಸಾವಿರ ಏಕಪಾತ್ರ ಅಭಿನಯ ಮಾಡಿದ್ದೇನೆ. ‘ಬರ’ ಚಿತ್ರದ ನಂತರ ನಾನು ‘ಶಂಕನಾದ’ ಚಿತ್ರದಲ್ಲಿ ಕಾಣಿಸಿಕೊಂಡೆ. ಅಲ್ಲಿಂದ ಹಿಂತಿರುಗಿ ನೋಡಲಿಲ್ಲ.
ಆರಂಭದ ದಿನಗಳಲ್ಲಿ ನಿಮ್ಮನ್ನು ದೊಡ್ಡ ಪರಿಚಯಿಸಿದ ಚಿತ್ರಗಳು ಯಾವುವು?
ಲವ್ ಟ್ರೈನಿಂಗ್ ಹಾಗೂ ಅಜಗಜಾಂತರ ಚಿತ್ರಗಳು. ಈ ಚಿತ್ರಗಳ ನಂತರ ನನಗೆ ಯಾವುದೂ ನೆನಪಿನಲ್ಲ. ಯಾಕೆಂದರೆ ಅಷ್ಟುಚಿತ್ರಗಳಲ್ಲಿ ನಟಿಸುತ್ತಾ ಬಂದಿದ್ದೇನೆ. 500 ಚಿತ್ರಗಳಲ್ಲಿ ಯಾವ ಚಿತ್ರ ಅಂತ ಹೇಳಲಿ. ಎಲ್ಲ ಚಿತ್ರಗಳೂ ನನ್ನ ಸಾಕಿವೆ. ಆ ಎಲ್ಲ ಚಿತ್ರಗಳನ್ನು ನೋಡಿದ ಪ್ರೇಕ್ಷಕರೂ ಅವರ ಮನೆ ಮಗನಂತೆ ನನ್ನ ಬೆಳೆಸಿದ್ದಾರೆ.
ಬಿರಾದಾರ್ ಅಂದರೆ ಭಿಕ್ಷುಕನ ಪಾತ್ರ ನೆನಪಾಗುತ್ತದೆ. ನಿಮಗೆ ಯಾವಾತ್ತಾದರೂ ಈ ಪಾತ್ರಗಳ ಬಗ್ಗೆ ಬೇಸರ ಇತ್ತಾ?
ಖಂಡಿತ ಇರಲ್ಲ. ಆದರೆ, ನನ್ನ ಸ್ನೇಹಿತರು ಆ ಬಗ್ಗೆ ಕೇಳುತ್ತಿದ್ದರು. ‘ಯಾವ ಚಿತ್ರ ನೋಡಿದರೂ ಭಿಕ್ಷೆ ಬೇಡುತ್ತಿರುತ್ತಿಯಾ, ನೀನು ಯಾವಾಗೋ ಬೇರೆಯವರಿಗೆ ಭಿಕ್ಷೆ ಹಾಕೋ ಪಾತ್ರ ಮಾಡ್ತಿಯಾ’ ಎಂದು ಕಾಳೆಲೆಯುತ್ತಿದ್ದರು. ಪಾಪ ಅವರಿಗೆ ಏನು ಗೊತ್ತು, ತೆರೆ ಮೇಲಿನ ಆ ಭಿಕ್ಷೆ ಬೇಡುವ ಪಾತ್ರವೇ ನನ್ನ ಬದುಕಿನ ಅಕ್ಷಯ ಪಾತ್ರೆ ಆಗಿದೆ ಅಂತ!
ಗಿರೀಶ್ ಕಾಸರವಳ್ಳಿ ಚಿತ್ರಕ್ಕೆ ಅವಕಾಶ ಸಿಕ್ಕಾಗ ಏನನಿಸಿತು?
ಕಾಸರವಳ್ಳಿ ಅವರು ಫೋನ್ ಮಾಡಿದಾಗ ನನಗೆ ಭಯ ಆಯ್ತು. ಅವರು ಯಾಕ್ರಿ ಭಯ ಬೀಳ್ತಿದ್ದೀರಿ, ನಾನು ಗಿರೀಶ್ ಕಾಸರವಳ್ಳಿ ಮಾತಾಡಿ ಅಂದ್ರು. ಯಾರೋ ಗೊತ್ತಿರುವವರು ತಮಾಷೆ ಮಾಡುತ್ತಿದ್ದಾರೆ ಅಂದುಕೊಂಡೆ. ನಾನು ಭಿಕ್ಷುಕನ ಪಾತ್ರ ಮಾಡುವ ಬಿರಾದಾರ್ ಎಂದೆ. ಹೌದು ಗೊತ್ತು, ನೀವು ನನ್ನ ಚಿತ್ರದಲ್ಲಿ ನಟಿಸುತ್ತೀರಾ ಎಂದಾಗ ಮಾತೇ ಹೊರಡಲಿಲ್ಲ. ಅವರ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಬದುಕಿನ ದೊಡ್ಡ ಪವಾಡ- ಸಂಭ್ರಮ. ಅದನ್ನ ಮಾತುಗಳಲ್ಲಿ ಹೇಳಲಾಗದು.
500 ಚಿತ್ರಗಳ ಹೆಜ್ಜೆಗಳನ್ನು ಹಿಂತಿರುಗಿ ನೋಡಿದಾಗ...?
ಹಳ್ಳಿಯಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿದ್ದೆ. ಯಾವುದೋ ಕನಸು, ಆಕರ್ಷಣೆ ಇಲ್ಲಿಗೆ ಕರೆದುಕೊಂಡು ಬಂತು. ಮೂವರೆ ತರಗತಿ ಓದಿದ, ಬಡ ರೈತನ ಮಗ. ‘ಕನಸೆಂಬೋ ಕುದರೆಯನ್ನೇರಿ’ ಚಿತ್ರದ ಮೂಲಕ ಬಾಲಿವುಡ್‌ನ ಅಮಿತಾಭ್ ಬಚ್ಚನ್‌ಗೆ ರಾಷ್ಟ್ರ ಪ್ರಶಸ್ತಿಯಲ್ಲಿ ಸ್ಪರ್ಧೆ ನೀಡಿದ್ದು, ಅತ್ಯುತ್ತಮ ನಟನೆಗಾಗಿ ನನ್ನ ಮತ್ತು ಅವರ ಚಿತ್ರವೇ ಸ್ಪರ್ಧಿಸಿದ್ದು, ಪ್ರಶಸ್ತಿ ಬರದೆ ಹೋಗಿದ್ದು, ಬೇರೆ ಅಂತಾರಾಷ್ಟ್ರೀಯ ಅವಾರ್ಡ್ ಬಂದಿದ್ದು, ನನ್ನ ಭಿಕ್ಷುಕ ಪಾತ್ರಧಾರಿ ಎನ್ನುತ್ತಿದ್ದಾಗಲೆಲ್ಲ ನನ್ನ ಹಾಗೆ ಶಿವ ಕೂಡ ಭಿಕ್ಷುಕನಲ್ಲವೇ ಎಂದು ನನಗೆ ನಾನೇ ಸಮಾಧಾನ ಹೇಳಿಕೊಳ್ಳುತ್ತಿದ್ದು, ನಾನು ಊರು ಬಿಟ್ಟು ಬಂದಾಗ ಶಿವಲಿಂಗನ ಮೇಲೆ 111 ಬಿಂದಿಗೆ ನೀರು ಹಾಕಿ ಬಂದಿದ್ದು... ಎಲ್ಲವೂ ನೆನಪಾತ್ತವೆ. ಊಟ, ಮಲಗಕ್ಕೆ ಜಾಗ ಸಿಗುತ್ತದೆ ಅಂತ ಹೋಟೆಲ್‌ನಲ್ಲಿ ಕೆಲಸ ಮಾಡಿದವನು.
ಈಗ ನಿಮ್ಮ ಕುಟುಂಬದಲ್ಲಿ ಯಾರೆಲ್ಲ ಇದ್ದೀರಿ?
ನಾನು ಬೆಂಗಳೂರಿನ ಮಂಜುನಾಥ ನಗರದಲ್ಲಿ ಇದ್ದೀನಿ. ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಗಂಡು ಮಗ ಇದ್ದಾನೆ. ಹೆಣ್ಣು ಮಕ್ಕಳ ಪೈಕಿ ಒಬ್ಬ ಮಗಳು ಬಿಕಾಂ ಓದುತ್ತಿದ್ದಾಳೆ, ಮತ್ತೊಬ್ಬಳು ಪಿಯುಸಿ ಮಾಡುತ್ತಿದ್ದಾಳೆ. ಮಗ 9ನೇ ತರಗತಿ ಓದುತ್ತಿದ್ದಾನೆ. ನನ್ನ ಸಿನಿಮಾಗಳನ್ನು ನೋಡಿ ನಗುತ್ತಾರೆ, ಮೆಚ್ಚುಗೆ ಸೂಚಿಸುತ್ತಾರೆ. ಅದೇ ನನಗೆ ಸಂಭ್ರಮ.