ನಾಯಕನ ಹೆಸರಿನಲ್ಲಿ ಅಲ್ಲ, ನನ್ನ ಕೆಲಸಕ್ಕೆ ಮತ ಕೇಳುತ್ತಿದ್ದೇನೆ: ಜೆ.ಪಿ. ಹೆಗ್ಡೆ

By Kannadaprabha NewsFirst Published Apr 24, 2024, 5:21 AM IST
Highlights

ನಾನು ಗೆಲ್ಲುವ ಭರವಸೆ ದುಪ್ಪಟ್ಟು ಹೆಚ್ಚಾಗಿದೆ. ಕ್ಷೇತ್ರಾದ್ಯಂತ ಓಡಾಡಿದ್ದೇನೆ, ಹೋದಲ್ಲೆಲ್ಲ ನಾನು ಹಿಂದೆ ಸಂಸದನಾಗಿ ಮಾಡಿದ ಕೆಲಸಗಳನ್ನು ಜನರು ನೆನಪಿಸಿಕೊಳ್ಳುತ್ತಿದ್ದಾರೆ. ಮತ್ತೆ ಅಂತಹ ಅಭಿವೃದ್ಧಿ ಮಾಡಲು ನಾನು ಬೇಕು ಎಂದು ಮತದಾರರಿಗೆ ಅನ್ನಿಸುತ್ತಿದ್ದು, ಇದು ನನ್ನ ವಿಶ್ವಾಸವನ್ನು ಹೆಚ್ಚಿಸಿದೆ.

- ಸುಭಾಶ್ಚಂದ್ರ ಎಸ್.ವಾಗ್ಳೆ

 ಉಡುಪಿ (ಏ.24) ವಿಧಾನಸಭೆ ಮತ್ತು ವಿಧಾನಪರಿಷತ್ ಚುನಾವಣೆಗಳಲ್ಲಿ ಎದುರಾಳಿಗಳಾಗಿದ್ದ ಕಾಂಗ್ರೆಸ್‌ನ ಕೆ.ಜಯಪ್ರಕಾಶ್ ಹೆಗ್ಡೆ ಮತ್ತು ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಈಗ ಲೋಕಸಭಾ ಚುನಾವಣೆಯಲ್ಲಿಯೂ ಮತ್ತೆ ಎದುರಾಳಿಗಳಾಗಿದ್ದಾರೆ. ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಭದ್ರಕೋಟೆ ಈಗ ಸ್ವಲ್ಪ ಶಿಥಿಲವಾಗಿದೆ. ಹಿಂದೆ ಅಲ್ಪಾವಧಿಗೆ ಈ ಕ್ಷೇತ್ರವನ್ನು ಸಂಸತ್ತಿನಲ್ಲಿ ಪ್ರತಿನಿಧಿಸಿದ್ದ ಜೆ.ಪಿ. ಹೆಗ್ಡೆ ಮತ್ತೆ ಈ ಕೋಟೆಯನ್ನು ಕೈವಶ ಮಾಡಿಕೊಳ್ಳುವ ಹುಮ್ಮಸ್ಸಿನಲ್ಲಿದ್ದಾರೆ. ಅವರು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದು, ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಉಡುಪಿ-ಚಿಕ್ಕಮಗಳೂರಿಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಘೋಷಣೆಯಾದಾಗಿನ ಸ್ಥಿತಿಗಿಂತ ಇವತ್ತಿನ ಪರಿಸ್ಥಿತಿ ಹೇಗಿದೆ?

ನಾನು ಗೆಲ್ಲುವ ಭರವಸೆ ದುಪ್ಪಟ್ಟು ಹೆಚ್ಚಾಗಿದೆ. ಕ್ಷೇತ್ರಾದ್ಯಂತ ಓಡಾಡಿದ್ದೇನೆ, ಹೋದಲ್ಲೆಲ್ಲ ನಾನು ಹಿಂದೆ ಸಂಸದನಾಗಿ ಮಾಡಿದ ಕೆಲಸಗಳನ್ನು ಜನರು ನೆನಪಿಸಿಕೊಳ್ಳುತ್ತಿದ್ದಾರೆ. ಮತ್ತೆ ಅಂತಹ ಅಭಿವೃದ್ಧಿ ಮಾಡಲು ನಾನು ಬೇಕು ಎಂದು ಮತದಾರರಿಗೆ ಅನ್ನಿಸುತ್ತಿದ್ದು, ಇದು ನನ್ನ ವಿಶ್ವಾಸವನ್ನು ಹೆಚ್ಚಿಸಿದೆ.

ರಾಜ್ಯದ 25 ದಂಡಪಿಂಡಗಳನ್ನು ಜನರು ಮನೆಗೆ ಕಳಿಸಬೇಕು: ಬಿ.ವಿ.ಶ್ರೀನಿವಾಸ್ ವಿಶೇಷ ಸಂದರ್ಶನ!

ಗೆದ್ದರೆ ಕ್ಷೇತ್ರಕ್ಕೆ ಏನೇನು ಮಾಡ್ತೀರಾ? ಯೋಜನೆಗಲು ಏನೇನಿದೆ?

ನನ್ನ ಕ್ಷೇತ್ರ ಕರಾವಳಿ, ಮಲೆನಾಡು, ಬಯಲು ಸೀಮೆ ಪ್ರದೇಶವನ್ನು ಹೊಂದಿದೆ. ಜನರ ಬೇಡಿಕೆಗಳೂ ಭಿನ್ನವಾಗಿದ್ದಿ, ಅದನ್ನೆಲ್ಲ ಪಟ್ಟಿ ಮಾಡಿ ನನ್ನದೇ ಪ್ರಣಾಳಿಕೆ ಮಾಡಿ ಜನರಿಗೆ ಕೊಟ್ಟಿದ್ದೇನೆ. ಎರಡೂ ಜಿಲ್ಲೆಗಳಿಗೆ ಅನ್ವಯವಾಗುವಂತೆ ಸರ್ಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಒಂದು ಹೈಟೆಕ್ ಆಸ್ಪತ್ರೆ, ಪ್ರತ್ಯೇಕ ಕೃಷಿ ಉದ್ಯಮ ಕಾರಿಡಾರ್, ಮೀನು ಉದ್ಯಮ ವಲಯ, ಉದ್ಯೋಗ ಪೂರಕ ಪ್ರವಾಸೋದ್ಯಮ, ಅರಣ್ಯ ಕಾಯ್ದೆಯ ಸರಳೀಕರಣ ಇತ್ಯಾದಿ ಹತ್ತಾರು ಯೋಚನೆಗಳಿವೆ.

 ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದರೆ ಈ ಯೋಚನೆಗಳು ಕಾರ್ಯರೂಪಕ್ಕೆ ತರುವುದಕ್ಕೆ ಸಾಧ್ಯವಾ?

ಕೆಲಸ ಮಾಡುವ ಮನಸ್ಸಿದ್ದವನಿಗೆ ಯಾವ ಪಕ್ಷ ಅಧಿಕಾರಕ್ಕೆ ಬರುತ್ತೆ ಎನ್ನುವುದು ಮುಖ್ಯ ಆಗುವುದಿಲ್ಲ. ಪಾರ್ಲಿಮೆಂಟ್‌ನಲ್ಲಿ ಮಾತನಾಡುವುದಕ್ಕೆ ಗೊತ್ತಿದ್ದವನಿಂದ ಕೆಲಸ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಹಿಂದೆ ಸಂಸದನಾಗಿ ಪಾರ್ಲಿಮೆಂಟ್‌ನಲ್ಲಿ ಮಾತನಾಡಿದ್ದೇನೆ, ಕೆಲಸ ಮಾಡಿದ್ದೇನೆ. ಎಲ್ಲ ಕೆಲಸಗಳು ಮಂತ್ರಿಗಳಿಂದಲೇ ಆಗುವುದಿಲ್ಲ. ಅಧಿಕಾರಿಗಳ ಮೂಲಕ ಕೆಲಸಗಳನ್ನು ಮಾಡಿಸುವುದಕ್ಕೆ ಸಾಧ್ಯವಿದೆ. ಅವರ ಜೊತೆ ಅವರ ಭಾಷೆಯಲ್ಲಿ ಮಾತನಾಡುವುದಕ್ಕೆ ಗೊತ್ತಿರಬೇಕು. ನನಗೆ ಆ ಧೈರ್ಯ, ಸಾಮರ್ಥ್ಯ, ಅನುಭವ ಇದೆ.

ಹೆಗ್ಡೆ ತಮ್ಮ ಹೆಸರಿನಲ್ಲಿಯೇ ಮತ ಕೇಳ್ತಿದ್ದಾರೆ, ನಾಯಕರ ಹೆಸರು ಹೇಳುತ್ತಿಲ್ಲ ಎನ್ನುವ ಆರೋಪ ಇದೆಯಲ್ಲ?

ಹೌದು, ನಾನು ನನ್ನ ಹೆಸರಿನಲ್ಲಿಯೇ ಮತ ಕೇಳುತ್ತಿದ್ದೇನೆ. ನಾಳೆ ಗೆದ್ದರೆ ಇಲ್ಲಿ ಕೆಲಸ ಮಾಡುವವನು ನಾನು, ಜನರಿಗೆ ಅವರ ಕೆಲಸ ಮಾಡುವವನ ಪರಿಚಯ ಆಗಬೇಕು, ಜನರು ನನಗೆ ಓಟ್ ಹಾಕಬೇಕು. ಬ್ಯಾಲೆಟ್ ಪೇಪರಲ್ಲಿ ನನ್ನ ಹೆಸರು ಇರುತ್ತದೆಯೇ ಹೊರತು ನಾಯಕನ ಹೆಸರು ಇರುವುದಿಲ್ಲ. ನಾಯಕನ ಹೆಸರಿನಲ್ಲಿ ಗೆಲ್ಲುವವರು ಕೆಲಸ ಮಾಡಬೇಕಾಗಿಲ್ಲ, ಅವರು ದೆಹಲಿಗೆ ಹೋಗಿ ಕುಳಿತುಕೊಳ್ಳುತ್ತಾರೆ. ಜನರ ಕೈಗೂ ಅವರು ಸಿಗುವುದಿಲ್ಲ. ಆದರೆ ಜನರ ಕೆಲಸ ಮಾಡುವುದಾಗಿ ಹೇಳಿ ಮತ ಗಳಿಸಿದರೆ ಜನರ ಬಳಿ ಹೋಗಲೇಬೇಕಾಗುತ್ತದೆ. ನಮ್ಮದು ಸಂಸದೀಯ ಪ್ರಜಾಪ್ರಭುತ್ವ, ಅಮೆರಿಕದಂತೆ ಅಧ್ಯಕ್ಷೀಯ ಪ್ರಜಾಪ್ರಭುತ್ವ ಅಲ್ಲ. ಆದ್ದರಿಂದ ಜನರು ಸಂಸದನಿಗೆ ಮತ ಹಾಕಬೇಕೇ ಹೊರತು ನಾಯಕನ ಹೆಸರಿಗಲ್ಲ.

ಹಾಗಿದ್ದರೆ ಪಕ್ಷದ ಬೆಂಬಲ ಬೇಡ್ವಾ?

ಖಂಡಿತಾ ಬೇಕು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ ಬಹಳ ಚೆನ್ನಾಗಿದೆ. ಗ್ಯಾರಂಟಿ ಯೋಜನೆಗಳು ಜನರಿಗೆ ನೆಮ್ಮದಿಗೆ ಕಾರಣವಾಗಿವೆ. ಸಂಸದರಿಗೆ ರಾಜ್ಯ ಸರ್ಕಾರದ ಬೆಂಬಲವೂ ಬೇಕಾಗುತ್ತದೆ. ಅದಕ್ಕೆ ನಾನು ನನ್ನ ಪ್ರಣಾಳಿಕೆಯಲ್ಲಿ ರಾಜ್ಯ ಸರ್ಕಾರದಿಂದ ನಾನು ಮಾಡಿಸಲಿಕ್ಕೆ ಸಾಧ್ಯವಿರುವ ಅರಣ್ಯ, ಕೃಷಿ, ಮೀನುಗಾರಿಕೆ ಇತ್ಯಾದಿ ಯೋಜನೆಗಳನ್ನು ಸೇರಿಸಿದ್ದೇನೆ. ನನ್ನ ಕೆಲಸಗಳ - ರಾಜ್ಯ ಸರ್ಕಾರದ ಸಾಧನೆಗಳೇ ನನ್ನ ಪ್ರಚಾರದ ವಿಷಯಗಳಾಗಿವೆ.

ನಿಮ್ಮ ಎದುರಾಳಿಗೆ ಜಾತಿ ಬಲ ಇದೆ, ಆದ್ದರಿಂದ ನಾವೇ ಗೆಲ್ಲುತ್ತೇವೆ ಎನ್ನುತ್ತಿದ್ದಾರೆ?

- ನೋಡಿ ಸಂಸದನಾದವನು ಒಂದು ಜಾತಿಗೆ ಮಾತ್ರ ಸಂಸದನಾ? ಅಲ್ಲವಲ್ಲಾ. ಆತ ಕ್ಷೇತ್ರದ ಎಲ್ಲ ಜಾತಿಗಳಿಗೂ ಪ್ರತಿನಿಧಿಯಾಗಿರುತ್ತಾನೆ. ಒಂದು ಜಾತಿಯ ಮತಗಳಿಂದಲೇ ಗೆಲ್ಲುವುದು ಸಾಧ್ಯವಾ? ಹಾಗಿದ್ದರೇ ವೀರಪ್ಪ ಮೊಯ್ಲಿ ಅವರಿಗೆ ಜಾತಿ ಬಲವೇ ಇರಲಿಲ್ಲ, ಗೆದ್ದು ಶಾಸಕ, ಮುಖ್ಯಮಂತ್ರಿ, ಸಂಸದ, ಕೇಂದ್ರ ಮಂತ್ರಿ ಆಗ್ಲಿಲ್ವಾ? ಈಗ ಚುನಾವಣೆಯಲ್ಲಿ ಜಾತಿ ತುಂಬಾ ಪ್ರಭಾವ ಬೀರುವುದಿಲ್ಲ.

ಹೆಗ್ಡೆ ಅವರು ಬಿಜೆಪಿಯಲ್ಲಿ ಎಲ್ಲ ಅಧಿಕಾರವನ್ನು ಅನುಭವಿಸಿ, ಈಗ ಕಾಂಗ್ರೆಸ್‌ಗೆ ಹೋಗಿದ್ದಾರೆ ಎನ್ನುತಿದ್ದಾರೆ!

ನಾನು ಬಿಜೆಪಿಯಲ್ಲಿ ಯಾವ ಅಧಿಕಾರವನ್ನೂ ಅನುಭವಿಸಿಲ್ಲ. ನಾನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಾದೆ, ಅದು ಪಕ್ಷಾತೀತ ಹುದ್ದೆ. ಅದೊಂದು ದೊಡ್ಡ ಜವಾಬ್ದಾರಿ ಹೊರತು ಸುಖ ಅನುಭವಿಸುವ ಹುದ್ದೆ ಅಲ್ಲ. ಅತ್ಯಂತ ಪ್ರಾಮಾಣಿಕನಾಗಿ ಅದರ ಕೆಲಸ ಮಾಡಿದ್ದೇನೆ. ಹಿಂದೆ ನಾನು ಇದೇ ಕ್ಷೇತ್ರದ ಸಂಸದನಾಗಿ ಕೆಲಸ ಮಾಡಿದ್ದೇನೆ, ಈಗ ಮತ್ತೆ ಸಂಸದನಾಗುವುದಕ್ಕೆ ಸ್ಪರ್ಧಿಸುತ್ತಿದ್ದೇನೆ.

ನಿಮ್ಮ ಬಗ್ಗೆ ಸ್ಥಳೀಯ ಕಾಂಗ್ರೆಸ್‌ನಲ್ಲಿಯೇ ಅಸಮಾಧಾನ ಇದೆಯಾ?

ಹಾಗೇನಿಲ್ಲ, ಉಡುಪಿ ಜಿಲ್ಲಾ ಕಾಂಗ್ರೆಸ್‌ನಿಂದಲೇ ನನ್ನ ಹೆಸರು, ಟಿಕೆಟ್‌ಗೆ ಶಿಫಾರಸು ಆಗಿತ್ತು. ಚಿಕ್ಕಮಗಳೂರಿನಿಂದ ಆಕಾಂಕ್ಷಿಗಳಾಗಿದ್ದ ಸುಧೀರ್ ಮರೋಳಿ, ಆರತಿ ಕೃಷ್ಣ, ಡಾ.ಅಂಶುಮಂತ್ ಅವರೆಲ್ಲ ನನ್ನ ಪರವಾಗಿಯೇ ಪ್ರಚಾರ ಮಾಡುತ್ತಿದ್ದು, ನನ್ನ ಬಗ್ಗೆ ಯಾರಿಗೂ ಯಾವ ಅಸಮಾಧಾನವೂ ಇಲ್ಲ.

ನನಗೆ ಚಿಕ್ಕಬಳ್ಳಾಪುರ ಟಿಕೆಟ್ ಕೊಡಿಸಿದ್ದು ಅಂಬಾನಿ ಅಲ್ಲ: ಮುಖಾಮುಖಿ ಸಂದರ್ಶನದಲ್ಲಿ ಡಾ.ಕೆ.ಸುಧಾಕರ್‌

 ಬಿಜೆಪಿಗೆ ಕರಾವಳಿಯಲ್ಲಿ ರಾಮಮಂದಿರ, ಹಿಂದುತ್ವದ ಬಲವಿದೆ, ಕಾಂಗ್ರೆಸ್‌ಗೆ ಅದು ಹೊಡೆತ ಆಗಲ್ವಾ?

ರಾಮಮಂದಿರಕ್ಕೆ ನಾನೂ ದೇಣಿಗೆ ನೀಡಿದ್ದೇನೆ, ನಮ್ಮ ಕುಟುಂಬದವರೂ ನೀಡಿದ್ದಾರೆ, ಊರಿನ ಅನೇಕ ದೇವಾಲಯಗಳನ್ನು ನಾವೇ ಜೀರ್ಣೋದ್ಧಾರ ಮಾಡಿಸಿದ್ದೇವೆ, ಆದರೆ ಅದೆಲ್ಲವೂ ನಮ್ಮ ಕೌಟುಂಬಿಕ, ವೈಯಕ್ತಿಕ ವಿಷಯ. ಅದನ್ನು ಹೇಳಿ ನಾನು ಓಟು ಕೇಳುವುದಿಲ್ಲ. ದೇವಾಲಯ, ಧರ್ಮ ಯಾವತ್ತೂ ರಾಜಕೀಯದ ವಿಷಯ ಆಗಬಾರದು, ಜನರ ಅಭಿವೃದ್ಧಿಯೇ ಪ್ರಚಾರದ ವಿಷಯ ಆಗಬೇಕು. ಆದರೆ ಪ್ರಚಾರ ಮಾಡುವುದಕ್ಕೆ ಅಭಿವೃದ್ಧಿಯ ವಿಷಯಗಳೇ ಇಲ್ಲದಿದ್ದಾಗ ಇಂತಹ ವಿಷಯಗಳನ್ನೇ ಪ್ರಚಾರ ಮಾಡುತಿದ್ದಾರೆ. ಇದು ಇಲ್ಲಿನ ಪ್ರಜ್ಞಾವಂತ ಜನರಿಗೂ ಗೊತ್ತಿದೆ.

click me!