ಮೋದಿ ಅಲೆ ಎಂಬುದೆಲ್ಲ ಸುಳ್ಳು, ಬಿಜೆಪಿ ಸೃಷ್ಟಿ: ಸೌಮ್ಯಾರೆಡ್ಡಿ

By Kannadaprabha News  |  First Published Apr 11, 2024, 6:44 AM IST

ನರೇಂದ್ರ ಮೋದಿ ಅಲೆ ಎನ್ನುವುದೆಲ್ಲ ಸುಳ್ಳು. ಅದು ಬಿಜೆಪಿಯ ಸೃಷ್ಟಿಯಷ್ಟೇ. ಜನರು ಯಾವತ್ತೂ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಯ ಸಾಧನೆಯನ್ನು ಗುರುತಿಸಿ ಮತ ಚಲಾಯಿಸುತ್ತಾರೆ. ಆದರೆ, ಹಾಲಿ ಸಂಸದರ ಬಗ್ಗೆ ಜನರಿಗೆ ಈಗಾಗಲೇ ಬೇಸರ ಬಂದಿದೆ. ಅದರ ಜತೆಗೆ ಕೇಂದ್ರ ಸರ್ಕಾರ ಬರ ಪರಿಹಾರ ನೀಡದಿರುವುದು, ರಾಜ್ಯದ ತೆರಿಗೆ ಪಾಲನ್ನು ಸರಿಯಾಗಿ ಕೊಡದಿರುವುದರ ಬಗ್ಗೆ ಜನರಿಗೆ ತಿಳಿದಿದೆ. ಇವೆಲ್ಲದರಿಂದ ನರೇಂದ್ರ ಮೋದಿ ಅಲೆ ಕೊಚ್ಚಿ ಹೋಗಿದೆ.


- ಗಿರೀಶ್‌ ಗರಗ 

ಸಂದರ್ಶನ- ಸೌಮ್ಯಾರೆಡ್ಡಿ, ಬೆಂ.ದಕ್ಷಿಣ ಕಾಂಗ್ರೆಸ್‌ ಅಭ್ಯರ್ಥಿ

Tap to resize

Latest Videos

undefined

ಇಬ್ಬರು ಯುವ ನೇತಾರರ ನಡುವಿನ ಸ್ಪರ್ಧೆಯಿಂದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಈ ಬಾರಿ ಭಾರೀ ಕುತೂಹಲ ಹುಟ್ಟುಹಾಕಿದೆ. ಅದರಲ್ಲೂ ಶಾಸಕಿಯಾಗಿ ಸಮರ್ಥವಾಗಿ ಜನಸೇವೆ ನಡೆಸಿದ್ದ ಸೌಮ್ಯಾ ರೆಡ್ಡಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಅಮೆರಿಕಾದ ನ್ಯೂಯಾರ್ಕ್‌ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪರಿಸರ ತಂತ್ರಜ್ಞಾನ ಪದವೀಧರೆಯಾಗಿರುವ ಸೌಮ್ಯಾ ರೆಡ್ಡಿ ಪರಿಸರ ಸಂರಕ್ಷಣೆಯ ಕಾರ್ಯದಲ್ಲೂ ತೊಡಗಿಕೊಂಡವರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಲ್ಪಮತಗಳ ಅಂತರದಲ್ಲಿ ಸೋತ ನಂತರವೂ ಜನಸೇವೆಯಲ್ಲಿರುವ ಸೌಮ್ಯಾ ರೆಡ್ಡಿ ಕಾಂಗ್ರೆಸ್‌ ಪಕ್ಷದ ನಾಯಕರ ಸೂಚನೆ ಮೇರೆಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ತಂದೆ ಸಾರಿಗೆ ಸಚಿವ, ಕಾಂಗ್ರೆಸ್‌ನ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರ ನೆರಳಲ್ಲಿ ರಾಜಕೀಯ ಆರಂಭಿಸಿದರೂ, ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸುವ ದಿಸೆಯಲ್ಲಿ ಸಾಗಿರುವ ಅವರು, ಗೆಲುವಿಗಾಗಿ ನಡೆಸಿರುವ ತಂತ್ರಗಾರಿಕೆ, ಸಂಸದೆಯಾಗಿ ಆಯ್ಕೆಯಾದರೆ ತಮ್ಮ ಮುಂದಿನ ಗುರಿ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕೈಗೊಳ್ಳಲಿರುವ ಕಾರ್ಯಗಳ ಬಗ್ಗೆ ಮಾತನಾಡಲು ಕನ್ನಡಪ್ರಭದೊಂದಿಗೆ ಮುಖಾಮುಖಿಯಾಗಿದ್ದಾರೆ.

ಲೋಕಸಭೆಗೆ ಸ್ಪರ್ಧಿಸಲು ಮುಂದಾಗಿದ್ದು ಏಕೆ? ಅದೂ 1991ರಿಂದ ಇದುವರೆಗೂ ಕಾಂಗ್ರೆಸ್‌ ಗೆಲುವು ಸಾಧಿಸದ ಬೆಂ.ದಕ್ಷಿಣ ಕ್ಷೇತ್ರದಲ್ಲಿ?

1989ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮಾಜಿ ಸಿಎಂ ಆರ್‌.ಗುಂಡೂರಾವ್‌ ಅವರು ಗೆಲುವು ಸಾಧಿಸಿದ್ದರು. ಅದಾದ ನಂತರದಿಂದ ಕಾಂಗ್ರೆಸ್‌ ಕ್ಷೇತ್ರದಲ್ಲಿ ಗೆದ್ದಿಲ್ಲ. ಆದರೆ, ಬಿಜೆಪಿಯ ಈ ಪ್ರಾಬಲ್ಯವನ್ನು ಮಣಿಸಲೆಂದೇ ಪಕ್ಷದ ನಾಯಕರು ನನ್ನನ್ನು ಅಭ್ಯರ್ಥಿಯನ್ನಾಗಿಸಿದ್ದಾರೆ. ಪಕ್ಷದ ಕಾರ್ಯಕರ್ತರು, ನಾಯಕರು ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಬಗ್ಗೆ ಹೆಚ್ಚಿನ ಒಲವಿದೆ. ಉಳಿದ ಮೂರರಲ್ಲಿ, ಬಿಜೆಪಿ ಮುನ್ನಡೆಯಿದ್ದರೂ ಅದು ಸಮಬಲದ ಹೋರಾಟವಿದೆ. ಮತದಾರರನ್ನು ಒಲಿಸಿಕೊಳ್ಳುವ ಕೆಲಸ ಮಾಡುತ್ತಿದ್ದೇನೆ. ಕಾದು ನೋಡಿ, ಈ ಬಾರಿ ಬೆಂಗಳೂರು ದಕ್ಷಿಣದಲ್ಲಿ ಮತ್ತೊಮ್ಮೆ ಕಾಂಗ್ರೆಸ್‌ ಗೆಲ್ಲಲಿದೆ.

ಗುಜರಾತಿಗೊಂದು ನಮಗೊಂದು ನ್ಯಾಯ ಸಹಿಸಲ್ಲ: ಡಿ.ಕೆ.ಸುರೇಶ್

ಸಚಿವ ರಾಮಲಿಂಗಾರೆಡ್ಡಿ ಅವರ ಮಗಳು ಎಂಬ ಕಾರಣಕ್ಕೆ ನಿಮಗೆ ಟಿಕೆಟ್‌ ಸಿಕ್ಕಿದೆಯೇ?

ಹಾಗೇನು ಇಲ್ಲ, ಶಾಸಕಿಯಾಗಿ ನಾನು ಮಾಡಿದ ಕೆಲಸಗಳನ್ನು ಪಕ್ಷದ ನಾಯಕರು ಗುರುತಿಸಿದ್ದಾರೆ. ಅಲ್ಲದೆ, ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ನನ್ನ ತಂದೆ ರಾಮಲಿಂಗಾರೆಡ್ಡಿ ಅವರು ನನಗೆ ಟಿಕೆಟ್‌ ನೀಡುವುದು ಬೇಡ ಎಂದು ಪಕ್ಷದ ವರಿಷ್ಠರಿಗೆ ಹೇಳಿದ್ದರು. ನಾನೂ ಕೂಡ ಟಿಕೆಟ್‌ಗಾಗಿ ಯಾವುದೇ ಪ್ರಯತ್ನ ಪಟ್ಟಿರಲಿಲ್ಲ. ಆದರೆ, ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಹಾಲಿ, ಮಾಜಿ ಶಾಸಕರು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು, ಪ್ರಮುಖ ಮುಖಂಡರು ಒಮ್ಮತದಿಂದ ನನ್ನನ್ನು ಅಭ್ಯರ್ಥಿಯಾಗಿಸಲು ನಿರ್ಧರಿಸಿದ್ದರು. ಪಕ್ಷದ ತೀರ್ಮಾನದಂತೆ ಸ್ಪರ್ಧಿಸಿದ್ದೇನೆ ಅಷ್ಟೇ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರೇ ಹೆಚ್ಚಿದ್ದಾರಲ್ಲ?

ಬಿಜೆಪಿ ಶಾಸಕರು ಹೆಚ್ಚಿದ್ದರೂ ಮತದಾರರ ಒಲವು ನನ್ನ ಮೇಲೆ ಹೆಚ್ಚಿದೆ. ಪ್ರಮುಖವಾಗಿ ಬಿಟಿಎಂ ಲೇಔಟ್‌, ಜಯನಗರ, ವಿಜಯನಗರ, ಗೋವಿಂದರಾಜನಗರ, ಚಿಕ್ಕಪೇಟೆ, ಬೊಮ್ಮನಹಳ್ಳಿಯಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಲಿದೆ. ಅದೇ ಪದ್ಮನಾಭನಗರದಲ್ಲಿ ಬಿಜೆಪಿಯ ಪ್ರಮುಖ ನಾಯಕರಾಗಿದ್ದ ಎಲ್‌. ಶ್ರೀನಿವಾಸ್‌, ಪ್ರಸಾದ್ ಬಾಬು (ಕಬ್ಬಡ್ಡಿ ಬಾಬು) ಸೇರಿದಂತೆ ಮಾಜಿ ಕಾರ್ಪೋರೇಟರ್‌ಗಳು ಕಾಂಗ್ರೆಸ್‌ ಸೇರ್ಪಡೆಯಾಗಿರುವುದು ನಮ್ಮ ಬಲ ಹೆಚ್ಚಿದಂತಾಗಿದೆ. ಬಸವನಗುಡಿಯಲ್ಲಿ ಯು.ಬಿ. ವೆಂಟಕೇಶ್‌ ಉತ್ತಮ ಕೆಲಸ ಮಾಡಿದ್ದಾರೆ. ಈ ಕಾರಣದಿಂದಾಗಿ ಆ ಎರಡು ಕ್ಷೇತ್ರಗಳಲ್ಲೂ ಕಳೆದ ಬಾರಿಗಿಂತ ಹೆಚ್ಚಿನ ಮತಗಳು ನಮಗೆ ಸಿಗಲಿವೆ.

ಗ್ಯಾರಂಟಿ ಯೋಜನೆಗಳು ಚುನಾವಣೆಯಲ್ಲಿ ನಿರೀಕ್ಷಿತ ಪರಿಣಾಮ ಬೀರುವುದೇ?

ಖಂಡಿತವಾಗಿ ಲಾಭವಾಗಲಿದೆ. ಮಹಿಳೆಯರಿಗೆ ಹೆಚ್ಚು ಅನುಕೂಲವಾಗುವಂತಹ ಗ್ಯಾರಂಟಿ ಯೋಜನೆಗಳ ಬಗ್ಗೆ ಮಹಿಳೆಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಯೋಜನೆಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ನಾವು ನಡೆಸಿರುವ ಆಂತರಿಕ ಸರ್ವೇಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಮಹಿಳೆಯರುವ ಮೆಚ್ಚಿಕೊಂಡಿದ್ದಾರೆ. ಮಧ್ಯಮ, ಕೆಳ ಮಧ್ಯಮ ವರ್ಗಗಳ ಕುಟುಂಬಗಳ ಆದಾಯ ಮಾಸಿಕ ನಾಲ್ಕರಿಂದ ಐದು ಸಾವಿರ ಹೆಚ್ಚುವಂತಾಗಿದೆ. ಬೆಲೆ ಏರಿಕೆಯ ಸಂದರ್ಭದಲ್ಲಿ ಹೆಚ್ಚುವರಿ ಆದಾಯವು ಅವರಿಗೆ ನೆರವಾಗುತ್ತಿವೆ. ಇವೆಲ್ಲವೂ ಚುನಾವಣೆಯಲ್ಲಿ ಕಾಂಗ್ರೆಸ್‌ ಪರವಾದ ನಿಲುವು ತಳೆಯುವಂತಾಗಲಿದೆ.

ಗ್ಯಾರಂಟಿ ಯೋಜನೆಗಳನ್ನೇ ನಂಬಿಕೊಂಡು ಚುನಾವಣೆ ಎದುರಿಸಲು ಸಾಧ್ಯವೇ?

ಇಲ್ಲ, ಗ್ಯಾರಂಟಿ ಯೋಜನೆಗಳು ಜನರ ಪರವಾಗಿ ಕಾಂಗ್ರೆಸ್‌ ಇದೆ ಎಂಬುದನ್ನು ತೋರಿಸುತ್ತಿದೆ. ಅದರ ಜತೆಗೆ ಕಳೆದ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ನೇಮಕಾತಿ ಅಕ್ರಮ, ಬೆಲೆ ಏರಿಕೆ ಬಗ್ಗೆಯೂ ಜನರಿಗೆ ಬೇಸರವಿದೆ. ಅದರ ಜತೆಗೆ ಬಿಜೆಪಿ ಅಭ್ಯರ್ಥಿ ಗೆದ್ದರೆ ಹಿಜಾಬ್‌, ಹಲಾಲ್‌ನಂತಹ ವಿಷಯಗಳನ್ನಿಟ್ಟುಕೊಂದು ಧಾರ್ಮಿಕ ಭಾವನೆ ಕೆರಳಿಸಿ ಸಮಾಜದಲ್ಲಿ ಒಡಕು ಮೂಡುತ್ತದೆ ಎಂಬ ಭಾವನೆ ಜನರಿಗೆ ಬಂದಿದೆ. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರ ಅಭಿವೃದ್ಧಿ ಮಾಡದೆ ಸರ್ಕಾರಿ ಆಸ್ತಿಗಳನ್ನು ಮಾರುವುದರಲ್ಲೇ ನಿರತವಾಗಿದೆ. ಉದ್ಯೋಗ ಸೃಷ್ಟಿ, ಕಪ್ಪು ಹಣ ವಾಪಾಸು ತರುವುದು, ದೇಶದ ಸಾಲದ ಪ್ರಮಾಣ 134 ಲಕ್ಷ ಕೋಟಿ ರು. ಹೆಚ್ಚಳ ಹೀಗೆ ಹಲವು ವಿಚಾರಗಳು ಚುನಾವಣಾ ವಿಷಯವಾಗಿದ್ದು, ಜನರು ಬಿಜೆಪಿ ತಿರಸ್ಕರಿಸಲು ಇವೂ ಕಾರಣವಾಗಲಿದೆ.

ಪ್ರಧಾನಿ ನರೇಂದ್ರ ಮೋದಿ ಅಲೆಯನ್ನು ಹೇಗೆ ಎದುರಿಸುತ್ತೀರಿ?

ನರೇಂದ್ರ ಮೋದಿ ಅಲೆ ಎನ್ನುವುದೆಲ್ಲ ಸುಳ್ಳು. ಅದು ಬಿಜೆಪಿಯ ಸೃಷ್ಟಿಯಷ್ಟೇ. ಜನರು ಯಾವತ್ತೂ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಯ ಸಾಧನೆಯನ್ನು ಗುರುತಿಸಿ ಮತ ಚಲಾಯಿಸುತ್ತಾರೆ. ಆದರೆ, ಹಾಲಿ ಸಂಸದರ ಬಗ್ಗೆ ಜನರಿಗೆ ಈಗಾಗಲೇ ಬೇಸರ ಬಂದಿದೆ. ಅದರ ಜತೆಗೆ ಕೇಂದ್ರ ಸರ್ಕಾರ ಬರ ಪರಿಹಾರ ನೀಡದಿರುವುದು, ರಾಜ್ಯದ ತೆರಿಗೆ ಪಾಲನ್ನು ಸರಿಯಾಗಿ ಕೊಡದಿರುವುದರ ಬಗ್ಗೆ ಜನರಿಗೆ ತಿಳಿದಿದೆ. ಇವೆಲ್ಲದರಿಂದ ನರೇಂದ್ರ ಮೋದಿ ಅಲೆ ಕೊಚ್ಚಿ ಹೋಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಪುಲ್ವಾಮಾ ದಾಳಿಯನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡಿದರು. ಈ ಬಾರಿ ಶ್ರೀ ರಾಮನ ಬಗ್ಗೆ ಮಾತನಾಡುತ್ತಾ, ಜನರ ಭಾವನೆ ಕೆರಳಿಸುತ್ತಿದ್ದಾರೆ. ಆದರೆ, ಜನರಿಗೆ ಅವೆಲ್ಲವೂ ಅರ್ಥವಾಗುತ್ತಿದೆ.

ನಿಮ್ಮ ಪ್ರತಿಸ್ಪರ್ಧಿ ತೇಜಸ್ವಿ ಸೂರ್ಯ ಅವರ ಬಗ್ಗೆ...?

(ಪ್ರಶ್ನೆಯನ್ನು ತುಂಡರಿಸಿ)ಯಾರ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ. ನೋ ಕಾಮೆಂಟ್ಸ್‌.

ತಂದೆ ರಾಮಲಿಂಗಾರೆಡ್ಡಿ ವರ್ಚಸ್ಸು ಸಹಕಾರಿಯೇ?

ಖಂಡಿತಾ ನೆರವಾಗಲಿದೆ. ತಂದೆಯವರು ದಶಕಗಳಿಂದ ಜನಸಂಪರ್ಕದಲ್ಲಿರುಯವವರು. ಬಿಟಿಎಂ ಲೇಔಟ್‌, ಜಯನಗರ, ಬೊಮ್ಮನಹಳ್ಳಿ, ಪದ್ಮನಾಭನಗರ, ಚಿಕ್ಕಪೇಟೆ, ಬಸವನಗುಡಿಯಲ್ಲಿ ಅವರನ್ನು ಇಷ್ಟ ಪಡುವ ಮತ್ತು ಅವರ ಕೆಲಸವನ್ನು ಗೌರವಿಸುವ ಲಕ್ಷಾಂತರ ಜನರಿದ್ದಾರೆ. ವೈಯಕ್ತಿಕವಾಗಿ ಅವರಿಗೆ ಮತದಾರರ ಜತೆಗೆ ಸಂಪರ್ಕವಿದೆ. ಅವರೆಲ್ಲರೂ ಈ ಬಾರಿ ನನಗೆ ಬೆಂಬಲವಾಗಿ ನಿಲ್ಲಲಿದ್ದಾರೆ ಎಂಬ ವಿಶ್ವಾಸವಿದೆ.

ಅನ್ಯ ಪಕ್ಷದ ನಾಯಕರನ್ನು ಸೆಳೆಯುತ್ತಿದ್ದರಿಂತೆ?

ನಾವು ಯಾರನ್ನೂ ಸಂಪರ್ಕಿಸಿಲ್ಲ. ಬೇರೆ ಪಕ್ಷದ ನಾಯಕರನ್ನು ಕರೆತರುವ ಬದಲು, ಮತದಾರರನ್ನು ಸೆಳೆಯುವ ಕೆಲಸ ಮಾಡುತ್ತಿದ್ದೇವೆ ಅಷ್ಟೇ. ಅಲ್ಲದೆ, ಹಾಲಿ ಸಂಸದರ ಬಗ್ಗೆ ಅವರ ಪಕ್ಷದ ನಾಯಕರಲ್ಲೇ ಅಸಮಧಾನವಿದೆ. ಅವರೆಲ್ಲರೂ ನನ್ನ ಪರವಾಗಿ ಕೆಲಸ ಮಾಡುತ್ತಾರೆ.

ಕೆಲ ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಕೊರತೆ ಇದೆಯಂತೆ?

ನಮ್ಮಲ್ಲಿ ಕಾರ್ಯಕರ್ತರಿಗೆ ಯಾವುದೇ ಕೊರತೆಯಿಲ್ಲ. ಅವರು ತಮ್ಮ ಕೆಲಸವನ್ನು ಸಮರ್ಥವಾಗಿ ಮಾಡುತ್ತಿದ್ದಾರೆ. ಆದರೆ, ಬಿಜೆಪಿಯ ಸಾಂಪ್ರದಾಯಿಕ ಮತಗಳು ಕೆಲವೆಡೆ ಹೆಚ್ಚಿವೆಯಷ್ಟೇ. ಆದರೆ, ಈ ಬಾರಿ ಆ ಮತದಾರರೂ ನಮ್ಮ ಕಡೆಗೆ ಬರುತ್ತಾರೆ.

ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದ ವಿಚಾರ ಹೈಕೋರ್ಟ್‌ನಲ್ಲಿದೆ. ಒಂದು ವೇಳೆ ತೀರ್ಪು ನಿಮ್ಮ ಪರವಾಗಿ ಬಂದು, ನೀವು ಸಂಸದೆಯಾಗಿದ್ದರೆ. ಯಾವ ತೀರ್ಮಾನ ತೆಗೆದುಕೊಳ್ಳುತ್ತೀರಾ?

ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಸಂಸದರು ಹಾಗೂ ಬಿಜೆಪಿ ನಾಯಕರು ಮಾಡಿದ ಮೋಸದಿಂದ ನಾನು ಸೋತೆ ಎಂದು ಘೊಷಿಸಲಾಯಿತು. ಆದರೂ, ತೀರ್ಪು ನನ್ನ ಪರವಾಗಿಯೇ ಬರುವ ವಿಶ್ವಾಸವಿದೆ. ವಿಧಾನಸಭೆಗಿಂತ ಲೋಕಸಭಾ ಸದಸ್ಯೆಯಾಗಿ ಕೆಲಸ ಮಾಡಲು ಹೆಚ್ಚಿನ ಜವಾಬ್ದಾರಿ ಇರುತ್ತದೆ. ಕ್ಷೇತ್ರದ ವ್ಯಾಪ್ತಿ ದೊಡ್ಡದಿದ್ದು, ಜನಸೇವೆ ಮಾಡಲು ಹೆಚ್ಚಿನ ಅವಕಾಶ ಸಿಗುತ್ತದೆ ಎಂಬುದು ನನ್ನ ಭಾವನೆ. ಆದರೂ ಪಕ್ಷದ ವರಿಷ್ಠರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ಬದ್ಧನಾಗಿರುತ್ತೇನೆ.

ಸಂಸದೆಯಾದರೆ ಬೆಂಗಳೂರು ದಕ್ಷಿಣ ಕ್ಷೇತ್ರದ ಜನ ನಿಮ್ಮಿಂದ ಏನನ್ನು ನಿರೀಕ್ಷಿಸಬಹುದು?

ನಾನು ಪರಿಸರ ಸಂರಕ್ಷಣೆ ಬಗ್ಗೆ ಸದಾ ಹೋರಾಡುತ್ತಿರುತ್ತೇನೆ. ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಸಂಚಾರ ದಟ್ಟಣೆ ಮುಕ್ತ, ಮಾಲಿನ್ಯ ಮುಕ್ತವಾಗಿಸುವ ಕನಸು ನನ್ನದು ಅದಕ್ಕೆ ತಕ್ಕಂತೆ ಕೆಲಸ ಮಾಡುತ್ತೇವೆ. ಮೆಟ್ರೋ ಸೇರಿ ಸಮೂಹ ಸಾರಿಗೆ ಹೆಚ್ಚಳಕ್ಕೆ ಒತ್ತು ನೀಡುತ್ತೇನೆ. ಮೇಕೆದಾಟು ಯೋಜನೆ ಜಾರಿಗೆ ಕೇಂದ್ರ ಮಟ್ಟದಲ್ಲಿ ಹೋರಾಟ ಮಾಡಿ, ಬೆಂಗಳೂರಿನ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡುತ್ತೇನೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಚಾರ ನಿಮಗೆ ಅನುಕೂಲವಾಗಲಿದೆಯೇ?

ಎರಡು ದಿನಗಳ ಕಾಲ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಚಾರ ಮಾಡಿದರು. ಈ ವೇಳೆ ಜನರು ಅವರಿಗೆ ನೀಡುತ್ತಿದ್ದ ಪ್ರತಿಕ್ರಿಯೆ ಗಮನಿಸಿದರೆ, ಕಾಂಗ್ರೆಸ್‌ ಬಗ್ಗೆ ಜನರಿಗಿರುವ ಒಲವು ಅರ್ಥವಾಗುತ್ತದೆ. ಮುಖ್ಯಮಂತ್ರಿಗಳ ಪ್ರಚಾರ ಖಂಡಿತಾ ಅನುಕೂಲವಾಗಲಿದೆ.

ಸಂದರ್ಶನ: ಬಿಜೆಪಿ ತೊರೆದಿದ್ದರ ಬಗ್ಗೆ ಪಶ್ಚಾತ್ತಾಪವಿಲ್ಲ, ಕರೆಯದಿದ್ದರೆ ಕಾಂಗ್ರೆಸ್‌ನಲ್ಲೇ ಇರುತ್ತಿದ್ದೆ -ಜಗದೀಶ ಶೆಟ್ಟರ್

ಗೆಲುವಿಗೆ ಬೇರೆ ತಂತ್ರಗಾರಿಕೆ ಏನಾದರೂ ಇದೆಯೇ?

ತಂತ್ರಗಾರಿಕೆ ಎಂದೇನೂ ಮಾಡುತ್ತಿಲ್ಲ. ಹಾಲಿ ಸಂಸದರ ವೈಫಲ್ಯ, ಜನರಿಗೆ ಅವರ ಬಗ್ಗೆ ಇರುವ ತಿರಸ್ಕಾರ ಭಾವ. ಕಾಂಗ್ರೆಸ್‌ ಸರ್ಕಾರ ಕಾರ್ಯಕ್ರಮಗಳು, ನನ್ನ ಹಾಗೂ ನನ್ನ ತಂದೆಯವರ ಕೆಲಸಗಳು ನನಗೆ ಗೆಲುವು ತಂದುಕೊಡಲಿದೆ. ಕ್ಷೇತ್ರದಲ್ಲಿ ಒಕ್ಕಲಿಗ ಮತಗಳು ಹೆಚ್ಚಿದ್ದು, ಅವರಲ್ಲಿ ಬಹುಪಾಲು ಕಾಂಗ್ರೆಸ್‌ ಪರವಾಗಿದ್ದಾರೆ. ಜತೆಗೆ ಅಹಿಂದ, ಬ್ರಾಹ್ಮಣ ಮತಗಳೂ ನಮಗೆ ಬರಲಿವೆ. ಅದಕ್ಕೆ ಪೂರಕವಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ 4 ಲಕ್ಷ ಮತಗಳ ಅಂತರವಿತ್ತು. ಅದೇ ವಿಧಾನಸಭಾ ಚುನಾವಣೆಯಲ್ಲಿ 1 ಲಕ್ಷಕ್ಕೆ ಇಳಿದಿದೆ. ಜತೆಗೆ ಕೊರೋನಾ ಸಮಯದಲ್ಲಿ ನಾವು ಮಾಡಿದ ಜನಸೇವೆ ಹಾಗೂ ಹಾಲಿ ಸಂಸದರು ಜನರ ಕಡೆ ತಿರುಗಿಯೂ ನೋಡದೇ ಇರುವುದೂ ಜನರು ಗಮನಿಸಿದ್ದಾರೆ. ಅಲ್ಲದೆ, ಹಾಲಿ ಸಂಸದರು ಬೆಡ್‌ಬ್ಲಾಕಿಂಗ್‌ ಹಗರಣ ಎಂದು ಹೇಳಿಕೊಂಡು ಜನರನ್ನು ದಿಕ್ಕು ತಪ್ಪಿಸಿದ್ದೂ ತಿಳಿದಿದೆ. ಇವೆಲ್ಲವೂ ಜನರು ನನ್ನ ಪರವಾಗಿ ನಿಲ್ಲಲು ಕಾರಣವಾಗಲಿದೆ.

click me!