ನನ್ನ ವಿರುದ್ಧ ಮಾತನಾಡಲು ಕಾಂಗ್ರೆಸ್ಸಿಗರಿಗೆ ಯಾವುದೇ ವಿಷಯ ಇಲ್ಲ. ಯಾವ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಹೋದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಮರಳಿ ಬಿಜೆಪಿ ಸೇರಿದ್ದೂ ಆಗಿದೆ. ನಾನಂತು ಅವಕಾಶವಾದಿ ರಾಜಕಾರಣಿಯಲ್ಲ. ಪಕ್ಷಕ್ಕಾಗಿ 40 ವರ್ಷಗಳಿಂದ ದುಡಿದಿದ್ದೇನೆ. ನನ್ನ ಹಿರಿತನ ನೋಡಿ ಪಕ್ಷ ನನಗೆ ನೀಡಿದ್ದ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ.
- ಶ್ರೀಶೈಲ ಮಠದ
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸ್ಪರ್ಧೆಯಿಂದ ಬೆಳಗಾವಿ ಲೋಕಸಭಾ ಚುನಾವಣೆ ಕಣ ಇದೀಗ ಎಲ್ಲರ ಗಮನ ಸೆಳೆದಿದೆ. ಬಿಜೆಪಿ ಹಿರಿಯ ರಾಜಕಾರಣಿ ಶೆಟ್ಟರ್ ಎದುರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ, ಯುವ ನಾಯಕ ಮೃಣಾಲ್ ಹೆಬ್ಬಾಳ್ಕರ್ ಸ್ಪರ್ಧಿ. ಹುಬ್ಬಳ್ಳಿಯಿಂದ ಬಂದು ಬೆಳಗಾವಿಯಲ್ಲಿ ಚುನಾವಣಾ ಕಣಕ್ಕಿಳಿದಿರುವ ಶೆಟ್ಟರ್ ಚುನಾವಣಾ ಕಣ, ಪ್ರತಿಪಕ್ಷಗಳ ಆರೋಪಗಳ ಕುರಿತು ''ಕನ್ನಡಪ್ರಭ''ದೊಂದಿಗೆ ಮುಕ್ತವಾಗಿ ಮಾತನಾಡಿದ್ದು, ಅದರ ಪೂರ್ಣ ಪಾಠ ಇಲ್ಲಿದೆ.
undefined
ಬಿಜೆಪಿಯಲ್ಲಿ ಟಿಕೆಟ್ ಸಿಗದೆ ಶೆಟ್ಟರ್ ಕಾಂಗ್ರೆಸ್ ಸೇರಿ ಮತ್ತೆ ಬಿಜೆಪಿ ಸೇರಿದ್ದಾರೆ. ನೀವೊಬ್ಬ ಅವಕಾಶವಾದಿ ರಾಜಕಾರಣಿ ಎಂದು ಎದುರಾಳಿಗಳ ಆರೋಪಕ್ಕೆ ಏನು ಹೇಳ್ತೀರಿ?
ನನ್ನ ವಿರುದ್ಧ ಮಾತನಾಡಲು ಕಾಂಗ್ರೆಸ್ಸಿಗರಿಗೆ ಯಾವುದೇ ವಿಷಯ ಇಲ್ಲ. ಯಾವ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಹೋದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಮರಳಿ ಬಿಜೆಪಿ ಸೇರಿದ್ದೂ ಆಗಿದೆ. ನಾನಂತು ಅವಕಾಶವಾದಿ ರಾಜಕಾರಣಿಯಲ್ಲ. ಪಕ್ಷಕ್ಕಾಗಿ 40 ವರ್ಷಗಳಿಂದ ದುಡಿದಿದ್ದೇನೆ. ನನ್ನ ಹಿರಿತನ ನೋಡಿ ಪಕ್ಷ ನನಗೆ ನೀಡಿದ್ದ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ.
ಬೆಳಗಾವಿಗೆ ಶೆಟ್ಟರ್ ಅವರು ಅನ್ಯಾಯ ಮಾಡುತ್ತಲೇ ಬಂದಿದ್ದಾರೆ ಎಂದು ಎದುರಾಳಿಗಳು ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದಾರಲ್ವ?
ಉತ್ತರ: ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ಎರಡು ಬಾರಿ ಸೇವೆ ಸಲ್ಲಿಸಿದ್ದೇನೆ. ಆಗಲೇ ಅನ್ಯಾಯದ ವಿರುದ್ಧ ಹೇಳಬಹುದಿತ್ತಲ್ಲ. ಬೆಳಗಾವಿ ಅಭಿವೃದ್ಧಿ ಕುರಿತು ಅಧಿಕಾರಿಗಳ ಜತೆಗೆ ಸಭೆ ನಡೆಸಿದ್ದೇನೆ. ಆ ಸಭೆಗಳಿಗೆ ಬಿಜೆಪಿ, ಕಾಂಗ್ರೆಸ್ ಶಾಸಕರೂ ಹಾಜರಾಗಿ ಸಲಹೆ, ಸೂಚನೆ ಕೊಟ್ಟಿದ್ದಾರೆ. ಆಗ ಯಾರೂ ಟೀಕೆ ಮಾಡಿರಲಿಲ್ಲ. ಈಗ ಚುನಾವಣೆ ಕಾರಣಕ್ಕೆ ಟೀಕಿಸುತ್ತಿದ್ದಾರೆ. ನಾನು ಬೆಳಗಾವಿಗೆ ಅನ್ಯಾಯ ಮಾಡಿಲ್ಲ. ಬೆಳಗಾವಿ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಸುವರ್ಣಸೌಧ ನಿರ್ಮಿಸಲು ನನ್ನ ಕೊಡುಗೆಯೂ ಇದೆ. ನನಗೆ ಬೆಳಗಾವಿ ಬಗ್ಗೆ ಯಾವುದೇ ದ್ವೇಷ ಭಾವನೆ ಇಲ್ಲ. ಕಾಂಗ್ರೆಸ್ಸಿಗರ ಆರೋಪ ನಿರಾಧಾರ.
ನಾಯಕನ ಹೆಸರಿನಲ್ಲಿ ಅಲ್ಲ, ನನ್ನ ಕೆಲಸಕ್ಕೆ ಮತ ಕೇಳುತ್ತಿದ್ದೇನೆ: ಜೆ.ಪಿ. ಹೆಗ್ಡೆ
ರಾಜ್ಯ ರಾಜಕಾರಣದಲ್ಲಿದ್ದವರು ನೀವು. ಈಗೇಕೆ ನಿಮಗೆ ರಾಷ್ಟ್ರ ರಾಜಕಾರಣದತ್ತ ಹೋಗಬೇಕು ಅನಿಸಿತು?
ಉತ್ತರ: ರಾಜ್ಯ ರಾಜಕಾರಣದಲ್ಲಿದ್ದವರು ರಾಷ್ಟ್ರರಾಜಕಾರಣಕ್ಕೆ ಹೋಗಬಾರದೆಂಬ ನಿಯಮವೇನಿಲ್ಲ. ಶಾಸಕನಾಗಿ ಈವರೆಗೂ ರಾಜ್ಯ ರಾಜಕಾರಣದಲ್ಲಿ ಸೇವೆ ಸಲ್ಲಿಸಿದ್ದೇನೆ. ಈಗ ಲೋಕಸಭೆಯಲ್ಲಿ ಮತ್ತೊಮ್ಮೆ ಜನ ಸೇವೆಗೆ ಮುಂದಾಗಿದ್ದೇನೆ. ಇದು ಜನ ಸೇವೆಗೆ ಹೊಸ ಅವಕಾಶ.
ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿದೆ. ನೀವು ಯಾವ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೀರಿ?
ಉತ್ತರ: ಕಾಂಗ್ರೆಸ್‌ನವರು ಗ್ಯಾರಂಟಿ ಮೇಲೆ ಹೋಗುತ್ತಾರೆ. ನಾವು ರಾಷ್ಟ್ರೀಯ ವಿಚಾರಧಾರೆ ಮತ್ತು ನಾಯಕತ್ವದ ಆಧಾರದ ಮೇಲೆ ಚುನಾವಣೆ ಎದುರಿಸುತ್ತೇವೆ. ದೇಶದ, ಜನರ ಸುರಕ್ಷತೆ, ಭದ್ರತೆ ಮತ್ತು ಅಭಿವೃದ್ಧಿ, ವಿದೇಶಿ ಆರ್ಥಿಕ ನೀತಿಯಂಥ ಗಟ್ಟಿ ನಿರ್ಧಾರ ಕೈಗೊಳ್ಳುವ ನಾಯಕ ಎಂದರೆ ಅದು ಮೋದಿ. ಮೋದಿ ಮತ್ತೊಂದು ಬಾರಿ ಪ್ರಧಾನ ಮಂತ್ರಿಯಾಗಬೇಕೆಂದು ದೇಶದ ಜನತೆ ಬಯಸಿದ್ದಾರೆ. ದೇಶದ ಅಭಿವೃದ್ಧಿಗೆ ಮೋದಿಯೇ ಗ್ಯಾರಂಟಿ ಆಗಿದ್ದಾರೆ.
ಬೆಳಗಾವಿಯಲ್ಲಿ ವರಿಷ್ಠರು ನಿಮಗೆ ಟಿಕೆಟ್ ನೀಡುತ್ತಾರೆಂದಾಗ, ಸ್ಥಳೀಯ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದರು. ಈಗ ಆ ನಾಯಕರಿಂದ ಪ್ರತಿಕ್ರಿಯೆ ಹೇಗಿದೆ?
ಉತ್ತರ: ಬೆಳಗಾವಿ ಕ್ಷೇತ್ರದಿಂದ ನನ್ನ ಹೆಸರು ಕೇಳಿ ಬಂದಾಗ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದು ನಿಜ. ಆದರೆ ಟಿಕೆಟ್ ಘೋಷಣೆಯಾದ ಬಳಿಕ ಎಲ್ಲರೂ ಕೂಡಿ ಒಂದಾಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಪಕ್ಷದ ಎಲ್ಲ ಪದಾಧಿಕಾರಿಗಳು ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬಿಜೆಪಿ ನಾಯಕರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ.
ಬೆಳಗಾವಿಗಿಂತಲೂ ಮೊದಲು ಹಾವೇರಿ, ಧಾರವಾಡ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಿರಿ ಎನ್ನಲಾಗಿತ್ತು. ಅಲ್ಲಿ ಟಿಕೆಟ್ ಸಿಗದ ಮೇಲೆ ಇಲ್ಲಿಗೆ ಬಂದಿದ್ದಾರೆಂಬ ಮಾತು ಕೇಳಿಬರುತ್ತಿರುವುದಕ್ಕೆ ಏನಂತೀರಿ?
ಉತ್ತರ: ಪಕ್ಷದ ಹೈಕಮಾಂಡ್ ನನ್ನ ಹೆಸರನ್ನು ಬೆಳಗಾವಿ ಕ್ಷೇತ್ರದಿಂದ ಆಯ್ಕೆ ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗೆ ನಡೆದ ಮಾತುಕತೆ ವೇಳೆ ಯಾವುದೇ ಕ್ಷೇತ್ರದ ಕುರಿತು ಚರ್ಚೆ ಆಗರಿಲಿಲ್ಲ. ನೀವು ಈ ಬಾರಿ ಲೋಕಸಭಾ ಸದಸ್ಯರಾಗಬೇಕು ಎಂದಷ್ಟೇ ಹೇಳಿದ್ದರು. ಕೊನೆಗೆ ಪಕ್ಷದ ಸೂಚನೆಯಂತೆ ಬೆಳಗಾವಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ. ಬೆಳಗಾವಿಗೆ ನಾನೇನೂ ಹೊಸಬನಲ್ಲ. ಬೆಳಗಾವಿ ಜೊತೆಗೆ ನನಗೆ 30 ವರ್ಷಗಳ ನಂಟಿದೆ.
ನಿಮ್ಮ ಬೀಗರೇ ಸಂಸದರಾಗಿದ್ದವರು. ಅವರ ಬದಲು ಇದೀಗ ನೀವೇ ಕಣಕ್ಕಿಳಿದಿದ್ದೀರಿ. ಇದಕ್ಕೆ ಅವರ ಸಮ್ಮತಿ ಇತ್ತೇ?
ಉತ್ತರ: ಹಾಲಿ ಸಂಸದೆ ಆಗಿರುವ ಬೀಗತಿ ಮಂಗಲ ಸುರೇಶ ಅಂಗಡಿ ಅವರಿಂದ ಸಂಪೂರ್ಣ ಸಮ್ಮತಿ ಸಿಕ್ಕ ಮೇಲೆಯೇ ನಾನು ಬೆಳಗಾವಿ ಕ್ಷೇತ್ರದಿಂದ ಕಣಕ್ಕಿಳಿದಿದ್ದೇನೆ.
ಕ್ಷೇತ್ರದಲ್ಲಿ ಕೇವಲ ಮೋದಿ ಅವರ ಮುಖವನ್ನಿಟ್ಟುಕೊಂಡು, ಅವರ ಅಭಿವೃದ್ಧಿ ಕಾರ್ಯಗಳನ್ನು ಇಟ್ಟುಕೊಂಡು ಪ್ರಚಾರ ಮಾಡುತ್ತಿದ್ದೀರಿ ಎಂಬ ಆರೋಪವೂ ಇದೆಯಲ್ವಾ?
ಉತ್ತರ: ಮೋದಿ ಮತ್ತು ಕೇಂದ್ರ ಸರ್ಕಾರದ 10 ವರ್ಷಗಳ ಸಾಧನೆಗಳ ಮೇಲೆ ನಾವು ಮತಯಾಚಿಸುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಇಂಡಿಯಾ ಕೂಟದಲ್ಲಿ ಪ್ರಧಾನಿಯಾಗುವ ಅಭ್ಯರ್ಥಿ ಯಾರೆಂಬುದನ್ನು ಮೊದಲು ಹೇಳಲಿ. ಅವರಿಗೆ ಮೋದಿ, ಬಿಜೆಪಿ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ.
ನೀವು ಬೆಳಗಾವಿ ಕ್ಷೇತ್ರಕ್ಕೆ ವಲಸೆ ಬಂದವರು ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. ಏನಂತೀರಿ?
ಉತ್ತರ: ಹುಬ್ಬಳ್ಳಿ ನನ್ನ ಜನ್ಮಭೂಮಿ ಆಗಿದ್ದರೂ ಬೆಳಗಾವಿ ನನ್ನ ಕರ್ಮಭೂಮಿ. 30 ವರ್ಷಗಳಿಂದ ಈ ನೆಲದ ಜತೆ ನಂಟಿದೆ. ಕಾಂಗ್ರೆಸ್‌ನವರಿಗೆ ಯಾವುದೇ ವಿಷಯ ಇಲ್ಲದೆ ಹೊರಗಿನವನು ಎಂದು ನನ್ನ ಬಗ್ಗೆ ಆರೋಪ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಕೇರಳದ ವಯನಾಡು, ಸಚಿವ ಶಿವಾನಂದ ಪಾಟೀಲ ಪುತ್ರಿ ಬಾಗಲಕೋಟೆ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರಲ್ವಾ? ಇದರ ಬಗ್ಗೆ ಯಾಕೆ ಮಾತನಾಡಲ್ಲ.
ಕೇಂದ್ರ ಸರ್ಕಾರ ಉದ್ಯಮಿಗಳಿಂದ ಹಫ್ತಾ ವಸೂಲಿ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರಲ್ವಾ?
ಉತ್ತರ: ಮೋದಿ ಆಡಳಿತದ 10 ವರ್ಷದಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಆ ಬಗ್ಗೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಲೋಕಸಭೆಯಲ್ಲಿ ಮಾತನಾಡಿದ್ದಾರಾ? ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ್ದಾರಾ? ಸುಮ್ಮನೆ ಟೀಕೆ ಮಾಡುತ್ತಿದ್ದಾರೆ. ಅವರಿಗೆ ಮಾತನಾಡಲು ವಿಷಯಗಳಿಲ್ಲ. ಯುಪಿಎ ಸರ್ಕಾರದ ಅವಧಿಯಲ್ಲಿ ಲಕ್ಷಾಂತರ ಕೋಟಿ ರು. ಹಗರಣ ನಡೆದಿವೆ. ಆ ಕುರಿತು ತನಿಖೆ ನಡೆಯುತ್ತಿವೆ.
ಈ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ನಿಮ್ಮ ಪಕ್ಷದ ನಾಯಕರು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆಯಾಗುವ ವಿಶ್ವಾಸ ಇದೆಯಾ?
ಕಾಂಗ್ರೆಸ್‌ನಲ್ಲಿ ಒಳ ಬೇಗುದಿ ಬಹಳ ಇದ್ದು, ಯಾವುದೇ ಸಂದರ್ಭದಲ್ಲೂ ಸ್ಫೋಟವಾಗಬಹುದು. ಕಾಂಗ್ರೆಸ್‌ನ ಗುಬ್ಬಿ ಶಾಸಕರೇ ಸರ್ಕಾರ ವಿರುದ್ಧ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಶಿಷ್ಯ ಬೈರತಿ ಸುರೇಶ್ ಈ ಚುನಾವಣೆಯಲ್ಲಿ ಹೆಚ್ಚು ಸೀಟು ಬಾರದಿದ್ದರೆ ಸಿಎಂ ಅಧಿಕಾರದಿಂದ ಕೆಳಗಿಳಿಯಬೇಕಾಗುತ್ತದೆ ಎಂದಿದ್ದಾರೆ. ಡಿಸಿಎಂ ಶಿವಕುಮಾರ್ ಕೂಡ ಸಿಎಂ ಬದಲಾವಣೆ ಹೈಕಮಾಂಡ್ ತೀರ್ಮಾನಿತ್ತದೆ ಎಂದು ಹೇಳಿದ್ದಾರೆ. ಡಿ.ಕೆ.ಶಿವಕಮಾರ್ ಸಿಎಂ ಆಗಬೇಕೆಂದುಕೊಂಡಿದ್ದಾರೆ. ಆಪರೇಷನ್ ಕಮಲ ಮಾಡುವ ಅಗತ್ಯವೂ ಇಲ್ಲ. ಸರ್ಕಾರ ತಾನಾಗಿಯೇ ಪತನವಾಗುತ್ತದೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ.
ಕೇಂದ್ರ ತೆರಿಗೆ ಹಣ ಕೊಟ್ಟಿಲ್ಲ, ಬರ ಪರಿಹಾರ ಕೊಟ್ಟಿಲ್ಲ ಎಂದು ಎದುರಾಳಿಗಳು ಪ್ರಚಾರ ನಡೆಸುತ್ತಿದ್ದಾರೆ. ಅದರಿಂದ ನಿಮಗೆ ಡ್ಯಾಮೇಜ್ ಆಗಲ್ವಾ?
ತೆರಿಗೆ ಹಣ, ಬರ ಪರಿಹಾರದ ಬಗ್ಗೆ ಲೋಕಸಭೆಯಲ್ಲಿ ಏಕೆ ಚರ್ಚಿಸುವುದಿಲ್ಲ. ನೀತಿ ಆಯೋಗದಲ್ಲಿ ಮುಖ್ಯಮಂತ್ರಿಗಳು ಆರ್ಥಿಕ ಸಮಿತಿ ಸದಸ್ಯರು. ಅಲ್ಲಿ ಕೇಳದೆ ಈಗ ಚುನಾವಣೆ ಹಿನ್ನೆಲೆಯಲ್ಲಿ ರಾಜಕಾರಣಕ್ಕಾಗಿ ಕೇಂದ್ರದ ವಿರುದ್ಧ ಪ್ರಚಾರ ಮಾಡುತ್ತಿದ್ದಾರೆ. ಅವರ ಆರೋಪದಲ್ಲಿ ಯಾವುದೇ ಸತ್ಯ ಇಲ್ಲ, ಇದರಿಂದ ನಮಗೆ ಡ್ಯಾಮೇಜ್ ಆಗುವ ಪ್ರಶ್ನೆಯೇ ಇಲ್ಲ.
ಬೆಳಗಾವಿ ಕ್ಷೇತ್ರದಲ್ಲಿ ಜನರ ಪ್ರತಿಕ್ರಿಯೆ ಹೇಗಿದೆ?
ಬೆಳಗಾವಿ ಜನ ನನ್ನನ್ನು ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ, ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಜನ ಹೊರಗಿನವರಂತೆ ನೋಡುತ್ತಿಲ್ಲ. ನಮ್ಮವರೇ ಎಂಬಂತೆ ಬೆಂಬಲಿಸುತ್ತಿದ್ದಾರೆ. ನನ್ನ ಜೀವನದಲ್ಲಿ ಇಷ್ಟೊಂದು ಜನ ಬೆಂಬಲ ನೋಡಿರಲಿಲ್ಲ.
ಎಂಇಎಸ್ ಸ್ಪರ್ಧೆಯಿಂದ ಮರಾಠ ಮತಗಳ ವಿಭಜನೆಯಾಗಿ ಬಿಜೆಪಿ ಮೇಲೆ ಪರಿಣಾಮ ಬೀಳಲಿದೆಯೇ?
ಬೆಳಗಾವಿ ಜನ ಯಾವಾಗಲೂ ಜಾತಿಬೇಧ ಮರೆತು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುತ್ತಾ ಬಂದಿದ್ದಾರೆ. ಹಾಗಾಗಿ ಎಂಇಎಸ್ ಸ್ಪರ್ಧೆಯಿಂದಾಗಿ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವ ಪ್ರಶ್ನೆಯೇ ಇಲ್ಲ.
ಜೆಡಿಎಸ್ ಜತೆಗೆ ಸಖ್ಯ ಬಿಜೆಪಿಗೆ ಅನಿವಾರ್ಯವಿತ್ತಾ? ಅದು ಪಕ್ಷಕ್ಕೆ ವರವಾಗಿದೆಯಾ?
ಪಕ್ಷದ ರಾಷ್ಟ್ರೀಯ ವರಿಷ್ಠರು ಸ್ಥಳೀಯ ಶಕ್ತಿಗಳನ್ನು ಕ್ರೋಡೀಕರಣ ಮಾಡಿಕೊಂಡು ಪಕ್ಷದ ಹಿತಾಸಕ್ತಿಗಾಗಿ ಹಲವೆಡೆ ಮೈತ್ರಿ ಮಾಡಿಕೊಂಡಿದ್ದಾರೆ. ಅದರಂತೆ ರಾಜ್ಯದಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಲಾಗಿದೆ. ಸ್ಥಳೀಯ ಮಟ್ಟದಲ್ಲಿ ಜೆಡಿಎಸ್‌ನ ಶಕ್ತಿ ಚುನಾವಣೆಯಲ್ಲಿ ಪಕ್ಷಕ್ಕೆವರವಾಗಲಿದೆ.
ಅಟಲ್‌ರಂತೆ ನರೇಂದ್ರ ಮೋದಿ ಕೂಡ ಸೋಲುತ್ತಾರೆ: ಮುಖಾಮುಖಿ ಸಂದರ್ಶನದಲ್ಲಿ ಸುರ್ಜೇವಾಲಾ
ಕ್ಷೇತ್ರದಲ್ಲಿ ನಿಮ್ಮ ಎದುರಾಳಿ ಕಾಂಗ್ರೆಸ್‌ನ ಯುವಕ ಮೃಣಾಲ್ ಹೆಬ್ಬಾಳ್ಕರ್. ಅವರ ತಾಯಿ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಸಚಿವರು. ಅವರನ್ನು ಹೇಗೆ ಎದುರಿಸುತ್ತೀರಿ?
ಎದುರಾಳಿಗಳು ಬಲಿಷ್ಠರೋ, ಬಲಹೀನರೋ ಎಂಬುದರ ಬಗ್ಗೆ ನಾನು ಲೆಕ್ಕಹಾಕಲ್ಲ. ನಾನು ವಕೀಲನಾಗಿ ಕೆಲಸ ಮಾಡಿದ್ದೇನೆ. ಚುನಾವಣೆಯಲ್ಲೂ ನನ್ನ ಪರ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನ ಅನುಭವ ಖಂಡಿತವಾಗಿಯೂ ಚುನಾವಣೆಯಲ್ಲಿ ಕೆಲಸ ಮಾಡುತ್ತದೆ.